ಹೈದ್ರಾಬಾದ್ : ಪ್ರಜಾ ಗಾಯಕ ಬಲ್ಲಾದೀರ್ ಗದ್ದರ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣದಿಂದ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 6 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಗುಮ್ಮಡಿ ವಿಠ್ಠಲ ರಾವ್ ಅವರ ನಿಜವಾದ ಹೆಸರಿಗಿಂತ ಹೆಚ್ಚಾಗಿ ಗದ್ದರ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದರು. 1949 ರಲ್ಲಿ ಜನಸಿದ್ದ ಅವರು ಕ್ರಾಂತಿಗೀತೆ, ಲಾವಣಿ, ಜನಪದ ಗೀತೆಗಳ ಮೂಲಕ ಹೆಸರುವಾಸಿಯಾಗಿದ್ದರು. ಜನ ನಾಟ್ಯ ಮಂಡಳಿಯ ಸ್ಥಾಪಕರಾಗಿದ್ದರು.
ತೆಲಂಗಾಣ ಚಳವಳಿಯ ಪುನರುತ್ಥಾನದೊಂದಿಗೆ, ಗದ್ದರ್ ಪ್ರತ್ಯೇಕ ತೆಲಂಗಾಣ ರಾಜ್ಯದ ಉದ್ದೇಶವನ್ನು ಬೆಂಬಲಿಸಿದರು. ಅವರು 2010 ರಲ್ಲಿ ಮಾವೋವಾದಿ ಚಳುವಳಿಯನ್ನು ತೊರೆದು ತೆಲಂಗಾಣ ಚಳವಳಿಗೆ ಸೇರ್ಪಡೆಗೊಂಡರು. ತೆಲಂಗಾಣದಲ್ಲಿ ಹಿಂದುಳಿದ ಜಾತಿಗಳು ಮತ್ತು ದಲಿತರ ಹಕ್ಕುಗಳಿಗಾಗಿ ಗದ್ದರ್ ಹೋರಾಟ ಮಾಡಿದ್ದರು. ತಮ್ಮ ಹಾಡುಗಳ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದು, ಹೆಚ್ಚಿನ ಜನಮನ್ನಣೆ ಗಳಿಸಿದ್ದರು.
2017 ರಲ್ಲಿ, ಮಾವೋವಾದಿಗಳೊಂದಿಗಿನ ಸಂಬಂಧವನ್ನು ಕಡಿದುಕೊಂಡರು, ಅಲ್ಲಿಯವರೆಗೆ ಮತದಾನ ವ್ಯರ್ಥ ಎಂದು ನಂಬಿದ್ದ ಗದ್ದರ್ 2018 ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು.
ಕಳೆದ ತಿಂಗಳು, ಅವರು ಗದ್ದರ್ ಪ್ರಜಾ ಪಕ್ಷ ಎಂದು ಕರೆಯಲ್ಪಡುವ ಹೊಸ ರಾಜಕೀಯ ಪಕ್ಷವನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದರು. ಗದ್ದರ್ ನಿಧನಕ್ಕೆ ಹಲವು ಸಂಘಟನೆಗಳು, ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ.