ಚಿತ್ರದುರ್ಗ: ಕವಾಡಿಗರಹಟ್ಟಿಯ ಕಲುಷಿತ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಆರ್.ಗಿರಡ್ಡಿ, ಕಿರಿಯ ಎಂಜಿನಿಯರ್ ಎಸ್.ಆರ್.ಕಿರಣ್ ಕುಮಾರ್ ಎಂಬುವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಕಲುಷಿತ ನೀರು ಸೇವಿಸಿ ಸಾವು ಸಂಭವಿಸಿರುವ ಹಾಗೂ ಸಾರ್ವಜನಿಕರು ಅಸ್ವಸ್ಥರಾಗಿರುವ ಘಟನೆಯಲ್ಲಿ ಇಬ್ಬರು ಎಂಜಿನಿಯರುಗಳು ಕರ್ತವ್ಯ ಲೋಪ,ನಿರ್ಲಕ್ಷ್ಯತೆ ಹಾಗೂ ಬೇಜವಾಬ್ದಾರಿ ವರ್ತನೆ ತೋರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇಬ್ಬರ ವಿರುದ್ದ ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತ್ತುಗೊಳಿಸಲಾಗಿದೆ. ಅಮಾನತ್ತಿನ ಅವಧೀಯಲ್ಲಿ ಕೇಂದ್ರ ಸ್ಥಾನ ಬಿಡಬಾರದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ: ಕಲುಷಿತ ನೀರು ಕುಡಿದು ಮಹಿಳೆ ಸಾವು: ತನಿಖೆಗೆ ಸಿಎಂ ಸೂಚನೆ
ಮಂಜುನಾಥ ಗಿರಡ್ಡಿ ಅವರನ್ನು ನಿಪ್ಪಾಣಿ ನಗರಸಭೆಗೆ ಹಾಗೂ ಕಿರಣ್ಕುಮಾರ್ ಅವರನ್ನು ಅರಸೀಕೆರೆ ನಗರಸಭೆಯ ಖಾಲಿ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ನೀರು ಹಂಚಿಕೆಯ ಹೊಣೆ ನಿಭಾಯಿಸುತ್ತಿದ್ದ ನಗರಸಭೆಯ ಡಿ ಗ್ರೂಪ್ ನೌಕರ ಸಿ.ಹೆಚ್.ಪ್ರಕಾಶ ಬಾಬು ಎಂಬುರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾಧಿಕಾರಿ ಗುರುವಾರ ಆದೇಶಿಸಿದ್ದರು, ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಗೊಂಡಿದ್ದ ಇಬ್ಬರು ನೀರುಗಂಟಿಗಳನ್ನು ಕೆಲಸದಿಂದ ವಜಾಗೊಳಿಸಿದ್ದರು. ಎಂಜಿನಿಯರುಗಳ ಅಮಾನತ್ತಿಗೆ ನಗರಾಭಿವೃದ್ಧಿ ಇಲಾಖೆಗೆ ಶಿಫಾರಸು ಮಾಡಿದ್ದರು.
ನಗರಸಭೆಯ 17ನೇ ವಾರ್ಡ್ನ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗೆ ಆ.2ರಂದು ಸೂಚನೆ ನೀಡಿದ್ದರು.