ಹರಿಯಾಣದ ಮೇವಾತ್ ಪ್ರದೇಶದಲ್ಲಿ ಕೋಮು ದಳ್ಳುರಿ ನೂಹ್ನಿಂದ ಪ್ರಾರಂಭವಾಗಿ ಈಗ ಗುರುಗ್ರಾಮ್ಗೆ ಹರಡಿ, ಐದು ಜನರ ಸಾವು ಮತ್ತು ಅಗ್ನಿಕಾಂಡದ ಘಟನೆಗಳಿಗೆ ಕಾರಣವಾಗಿದೆ. ರಾಜ್ಯ ಸರ್ಕಾರವು ತನ್ನ ಕೆಲಸ ನಿಭಾಯಿಸುವಲ್ಲಿನ ಲೋಪ-ದೋಷಗಳಿಂದಾಗಿ ಇದಕ್ಕೆ ಸಂಪೂರ್ಣ ಹೊಣೆಯಾಗಿದೆ ಮತ್ತು ಈ ಬೆಳವಣಿಗೆಗಳಲ್ಲಿ ಶಾಮೀಲಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ.
ಬ್ರಜ್ ಮಂಡಲ್ ಯಾತ್ರೆಯನ್ನು ನಡೆಸುವ ನೆಪದಲ್ಲಿ ಹಿಂದುತ್ವ ಶಕ್ತಿಗಳಾದ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಾಮಾಜಿಕ ಮಾಧ್ಯಮಗಳಲ್ಲಿ ಅತ್ಯಂತ ಪ್ರಚೋದನಕಾರಿ ಪ್ರಚಾರವನ್ನು ಹರಿಯ ಬಿಟ್ಟವು. ನಾಸಿರ್ ಮತ್ತು ಜುನೈದ್ರನ್ನು ಹೊಡೆದು ಸಾಯಿಸಿದ ಪ್ರಕರಣದಲ್ಲಿ ಹೆಸರಿಸಲಾದ ಕುಖ್ಯಾತ ವ್ಯಕ್ತಿ ಮೋನು ಮಾನೇಸರ್ ತನ್ನ ಬೆಂಬಲಿಗರಿಗೆ ಯಾತ್ರೆಯಲ್ಲಿ ಸೇರಲು ಬಹಿರಂಗ ಕರೆ ನೀಡಿದರು.
ಇದನ್ನೂ ಓದಿ:ಕಾಂಗ್ರೆಸ್ ಸರ್ಕಾರದ ಕ್ಷೀರಭಾಗ್ಯ ಯೋಜನೆ 10 ವರ್ಷ ಪೂರೈಕೆ ನನಗಿದು ಹೆಮ್ಮೆ: ಸಿಎಂ ಸಿದ್ದರಾಮಯ್ಯ
ನೂಹ್ನ ಜವಾಬ್ದಾರಿಯುತ ನಾಗರಿಕರ ಮನವಿಗೆ ಕಿವಿಗೊಡದ ರಾಜ್ಯ ಸರ್ಕಾರವು ಮೋನು ಮಾನೇಸರ್ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಯಾವುದೇ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳದೆ, ಅಥವಾ ಅಹಿತಕರ ಘಟನೆಗಳನ್ನು ತಡೆಯಲು ಸಿದ್ಧತೆಗಳನ್ನೂ ಮಾಡಿಕೊಳ್ಳದೆ ಯಾತ್ರೆಗೆ ಅನುಮತಿ ನೀಡಿತು.
ಇದು ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಏಕೈಕ ಉದ್ದೇಶದಿಂದ ನಡೆಸಿರುವ ಸಂಘಟಿತ ಪ್ರಯತ್ನ ಎಂದು ನಿಸ್ಸಂದಿಗ್ಧವಾಗಿ ಖಂಡಿಸುವುದಾಗಿ ಸಿಪಿಐ(ಎಂ) ಪೊಲಿಟ್ ಬ್ಯೂರೋ ಹೇಳಿದೆ.