ಸುಧಾ ಮೂರ್ತಿ ಬ್ರಾಹ್ಮಣ್ಯ-ಬಂಡವಾಳಶಾಹಿ ಸಮಾಜದಿಂದ ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ ಎಂದು ಚೇತನ್ ಹೇಳಿದ್ದಾರೆ
ಬೆಂಗಳೂರು: ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಮಾಂಸಾಹಾರವನ್ನು ಅಸಹ್ಯಪಟ್ಟ ವಿಚಾರವಾಗಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಚಿತ್ರನಟ, ಹೋರಾಟಗಾರ ಚೇತನ್ ಅಹಿಂಸಾ ಅವರು ಇದೀಗ ಸುಧಾ ಮೂರ್ತಿ ಅವರ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದು, “ಅವರ ಆಸ್ತಿ ಜಗದಗಲ — ತಿಳುವಳಿಕೆ ಚಮಚದಗಲ” ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸುಧಾ ಮೂರ್ತಿ, ತಾವೊಬ್ಬ ಶುದ್ಧ ಸಸ್ಯಾಹಾರಿಯಾಗಿದ್ದು ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆಗೆ ಒಂದೇ ಚಮಚ (ಸೌಟು) ಬಳಕೆ ಮಾಡುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಅವರ ಹೇಳಿಕೆಗೆ ಭಾರಿ ಟೀಕೆ ಕೂಡಾ ವ್ಯಕ್ತವಾಗಿತ್ತು.
ಇದನ್ನೂ ಓದಿ: ನಾಡಿಗೆ ಬೆಳಕು ನೀಡುವ ಕಾಯಕ ಮಾಡುವ ಚೇತನ್ ಕುಮಾರ್
ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೇತನ್, “ನಮ್ಮ ಬ್ರಾಹ್ಮಣ್ಯ-ಬಂಡವಾಳಶಾಹಿ ಸಮಾಜದಿಂದ ಅತಿಯಾದ ಬಿಲ್ಡಪ್ನಿಂದ ಗುರುತಿಸಲ್ಪಟ್ಟ ಸುಧಾ ಮೂರ್ತಿಯವರು ಅನರ್ಹವಾಗಿ ಗೌರವಿಸಲ್ಪಟ್ಟ ಸಾರ್ವಜನಿಕ ವ್ಯಕ್ತಿ” ಎಂದು ಹೇಳಿದ್ದಾರೆ.
“ಅವರು ತನ್ನ ಸೀಮಿತ ಮಡಿವಂತಿಕೆಯ ಚಿಂತನೆಯನ್ನು ಬಹಿರಂಗಪಡಿಸುವ ಹೇಳಿಕೆಗಳನ್ನು ನಿರಂತರವಾಗಿ ಮಾಡುತ್ತಾರೆ. ಸುಧಾ ಮೂರ್ತಿಯವರು ಹೆಚ್ಚು ಮಾತನಾಡಬೇಕು. ‘ಅವರ ಆಸ್ತಿ ಜಗದಗಲ — ತಿಳುವಳಿಕೆ ಚಮಚದಗಲ’ ” ಎಂದು ಚೇತನ್ ವ್ಯಂಗ್ಯವಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುಧಾ ಮೂರ್ತಿ “ನಾನೊಬ್ಬಳು ಶುದ್ಧ ಸಸ್ಯಹಾರಿಯಾಗಿದ್ದು, ಮೊಟ್ಟೆ ಸಹಿತ ಯಾವುದೇ ಮಾಂಸಾಹಾರ ತಿನ್ನುವುದಿಲ್ಲ. ಬೆಳ್ಳುಳ್ಳಿಯನ್ನು ಕೂಡಾ ಸೇವಿಸುವುದಿಲ್ಲ. ಸಸ್ಯಾಹಾರ–ಮಾಂಸಾಹಾರಗಳಿಗೆ ಒಂದೇ ಚಮಚ ಬಳಸುತ್ತಾರೆಯೇ ಎಂಬ ಆತಂಕ ನನ್ನ ಮನಸ್ಸನ್ನು ತುಂಬಾ ಕಾಡುತ್ತದೆ. ವಿದೇಶಕ್ಕೆ ಹೋದರೂ ಅಲ್ಲಿನ ಸಸ್ಯಾಹಾರಿ ರೆಸ್ಟೋರೆಂಟ್ಗಳನ್ನು ಹುಡುಕುತ್ತೇನೆ. ಮನೆ ಊಟವನ್ನು ಹೆಚ್ಚಾಗಿ ಇಷ್ಟಪಡುತ್ತೇನೆ ಹಾಗೂ ಪ್ರಯಾಣ ಮಾಡುವಾಗ ಮನೆಯಲ್ಲೇ ತಯಾರಿಸಿದ ಆಹಾರವನ್ನು ಕೊಂಡೊಯ್ಯುತ್ತೇನೆ” ಎಂದು ಹೇಳಿದ್ದರು.
ವಿಡಿಯೊ ನೋಡಿ: ಶವ ಹೂಳಲು ಜಾಗವಿಲ್ಲದೆ ಮನೆಯ ಮುಂದೆಯೇ ಶವಸಂಸ್ಕಾರಕ್ಕೆ ಯತ್ನ Janashakthi Media