ಧರ್ಮಸಿಂಗ್ : ಜವಾರಿ ನೆನಪಿನ ಬುತ್ತಿ

 ಮಲ್ಲಿಕಾರ್ಜುನ ಕಡಕೋಳ

ಹಾಗೆ ನೋಡಿದರೆ ಧರ್ಮಸಿಂಗ್ ಅವರೊಂದಿಗೆ ನನ್ನದು ನಿರಂತರ ಒಡನಾಟವೇನಲ್ಲ. ಅವರೊಂದಿಗಿನ ನನ್ನ ಕೆಲವೇ ಕೆಲವು ನೆನಪುಗಳಾದರೂ ಧರ್ಮಸಿಂಗ್ ಅವರ ನೆನಪನ್ನು ಚಿರಂತನಗೊಳಿಸಿವೆ. ಅಂತೆಯೇ ಇಂತಹ ಜವಾರಿತನದ ಕೆಲವೇ ನೆನಪುಗಳು ನನ್ನೊಳಗೆ ನಿತಾಂತವಾಗಿ ಕಾಪಿಟ್ಟು ಕೊಂಡಿವೆ.

ಧರ್ಮಸಿಂಗ್ ಅವರನ್ನು ಮೊಟ್ಟ ಮೊದಲ ಬಾರಿ ನಾನು ಅತ್ಯಂತ ಹತ್ತಿರದಿಂದ ನೋಡಿದ್ದು 1972ರಲ್ಲಿ. ಆಗ ನಾನು ಹೈಸ್ಕೂಲ್ ಫಸ್ಟ್ ಈಯರ್ ವಿದ್ಯಾರ್ಥಿ. ಧರ್ಮಸಿಂಗ್ ಅದೇ ಮೊದಲ ಬಾರಿಗೆ ನಮ್ಮೂರು ಕಡಕೋಳಕ್ಕೆ ಬಂದಿದ್ದರು. ಅದು ಜೇವರ್ಗಿ ವಿಧಾನಸಭೆ ಮತಕ್ಷೇತ್ರದ ಅವರ ಪ್ರಥಮ ಚುನಾವಣೆ ಪ್ರಚಾರ. ಆಗಿನ್ನೂ ಅವರು ಮುವತ್ತಾರರ ಹರೆಯದ ತೆಳ್ಳನೆಯ ತರುಣ. ಬಿಳಿ ಪೈಜಾಮ ಮತ್ತು ಬಿಳಿ ಶ್ಲ್ಯಾಗ್ ಉಡುಪಿನಲ್ಲಿದ್ದ ನೆನಪು. ಅವರೊಂದಿಗೆ ಬಂದಿದ್ದ ನಾಕೈದು ಮಂದಿ, ಹಳ್ಳದಾಚೆಯ ವಾರಿಯ ಮೇಲೆ ‘ಜೀಪ್’ ನಿಲ್ಲಿಸಿ ಬಂದಿದ್ದರು.

ಏಕೆಂದರೆ ನಮ್ಮೂರ ಹಿರೇಹಳ್ಳಕ್ಕೆ ಆಗಿನ್ನೂ ಪೂಲ್ ಕಟ್ಟಿರಲಿಲ್ಲ. ಹಾಗಾಗಿ ಊರೊಳಕ್ಕೆ ಜೀಪ್ ಬರುತ್ತಿರಲಿಲ್ಲ. ಹಾಗೆ ನಡಕೊಂಡು ಬಂದ ಧರ್ಮಸಿಂಗ್ ಸತತವಾಗಿ ನಾಲ್ಕು ಸಾರಿ ಶಾಸಕರಾಗಿ ಆರಿಸಿ ಬಂದು ಅವರು ಲೋಕೋಪಯೋಗಿ ಸಚಿವರಾದ ಮೇಲೆ ನಮ್ಮೂರ ಹಿರೇಹಳ್ಳಕ್ಕೆ ಪೂಲ್ (ಸೇತುವೆ) ಕಟ್ಟಿಸುತ್ತಾರೆ. ಆದರೆ ಮೊದಲ ಬಾರಿ ಹಿರೇಹಳ್ಳ ದಾಟಿ ಬರುವಾಗ ಧರ್ಮಸಿಂಗ್ ತಮ್ಮ ಪಾದರಕ್ಷೆಗಳನ್ನು ಕೈಯಲ್ಲಿ ಹಿಡಕೊಂಡು ಹಿರೇಹಳ್ಳ ದಾಟಿ ಊರೊಳಕ್ಕೆ ನಡೆದು ಬಂದ ನೆನಪು ನನ್ನಲ್ಲಿನ್ನೂ ಹಚ್ಚ ಹಸಿರಾಗಿ ಕಣ್ಣಿಗೆ ಕಟ್ಟಿದಂತಿದೆ.

ಅಂದು ಹಾಗೆ ಬಂದವರೆ ಮೊದಲು ಮಠಕ್ಕೆ ಭೆಟ್ಟಿಕೊಟ್ಟು ಮಡಿವಾಳಪ್ಪನ ಕರ್ತೃ ಗದ್ದುಗೆಗೆ ನಮಸ್ಕರಿಸಿದರು. ಅಂದಿನ ಹಿರಿಯ ಗುರುಗಳಾದ ಶ್ರೀವೀರೇಶ್ವರ ದೇವರ ಆಶೀರ್ವಾದ ಪಡೆದರು. ಊರ ಹಿರಿಯರಾದ ಮಾಲಿ ಸಿದ್ರಾಮಪ್ಪಗೌಡ, ಹುಡೇದ ಚಂದ್ರಾಮ, ಕವಲ್ದಾರ ತಿಪ್ಪಣ್ಣ, ಕುಲಕರ್ಣಿ ಮನೋಹರರಾವ್, ದೊರೆಗಳ ರಾಜಶೇಖರಪ್ಪ, ಶಿವಪ್ಪ ಸಾಹುಕಾರರು ಹೀಗೆ ಊರ ಮುಖಂಡರ ಗುಂಪು ಸೇರಿತು. ಧರ್ಮಸಿಂಗ್ ಅವರು ಮತ ಯಾಚಿಸುವ ಮೊದಲೇ “ನಮ್ಮ ಓಟು ನಿಮಗೇ – ಅರ್ಥಾತ್ ಇಂದ್ರಾಗಾಂಧಿಗೇ ” ಎಂದು ಊರ ಹಿರಿಯರೆಲ್ಲರೂ ವಚನ ಕೊಟ್ಟೇ ಬಿಟ್ಟರು.

“ಹರಿಚಂದ್ರಾಯನ ಗಾಳಿ ಬೀಸ್ಯಾದ ನಿನ್ನ ಗೆಲುವು ಗ್ಯಾರಂಟಿ” ಎಂದು ಮಠದ ಹಿರಿಯ ಗುರುಗಳು ಶಕುನ ನುಡಿದಂತೆ ಆಶೀರ್ವಾದ ಮಾಡಿದರು. ಗುರುಗಳಿಗೆ ಧರ್ಮಸಿಂಗ್ ಸಾಷ್ಟಾಂಗ ಹಾಕಿದರು. ಹೌದು ಹಿರಿಯ ಗುರುಗಳು ಅಂದದ್ದು ಎಂದೂ ಹುಸಿಯಾಗಿಲ್ಲ. ಹೀಗೆಂದು ಗುರುಗಳ ದಿಟದ ಮಾತಿಗೆ ಹುಡೇದ ಚಂದ್ರಾಮ ಅಂದು ಸಾಕ್ಷ್ಯ ನುಡಿದಿದ್ದರು. ಹೌದು ಹಿರಿಯ ಗುರುಗಳ ದಿಟದ ಮಾತುಗಳು ಗುರುಗಳು ಬದುಕಿದ್ದ ಕಾಲದುದ್ದಕ್ಕೂ ಘಟಿಸಿದ್ದು ಮಾತ್ರ ಖರೇವಂದ್ರ ದಿಟವೇ ಆಗಿತ್ತು.

ಹಾಗೆ ವರ್ಷದಲ್ಲಿ ಮೂರ್ನಾಲ್ಕು ಬಾರಿ ನಮ್ಮೂರಿಗೆ ಬರುತ್ತಿದ್ದರು. ಚುನಾವಣೆಯ ಸಂದರ್ಭದಲ್ಲಿ ಕಡ್ಡಾಯವೆಂಬಂತೆ ಬರುತ್ತಿದ್ದರು. ಅಂತೆಯೇ ಇವತ್ತಿಗೂ ಕಾಂಗ್ರೆಸ್ ಮತ್ತು ಧರ್ಮಸಿಂಗ್ ಅವರಿಗೆ ನಮ್ಮೂರ ಮತಗಳ ಮೊದಲ ಆದ್ಯತೆ. ಅಷ್ಟೇಯಾಕೆ ಮೊನ್ನೆಯ ಚುನಾವಣೆಯಲ್ಲಿ ಅವರ ಮಗ ಡಾ. ಅಜಯಸಿಂಗ್ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಲೂ ನಮ್ಮೂರು ಮೊದಲ ಆದ್ಯತೆಯ ಅಧಿಕ ಮತಗಳನ್ನು ನೀಡಿದ ನಿದರ್ಶನ.

ಇದನ್ನೂ ಓದಿ:ಚೆಗುವೆರಾನ ಜನ್ಮದಿನವಿಂದು;ಅಪಾರ ಓದು-ತಿರುಗಾಟದ ಹಸಿವಿದ್ದ ಚೆಗುವೆರ.

ಅವರು ಮುಖ್ಯಮಂತ್ರಿಯಾದಾಗ ಅವರಿಗಿಂತ ಅಧಿಕ ಪ್ರಮಾಣದಲ್ಲಿ ಖುಷಿಪಟ್ಟವರು ಜೇವರ್ಗಿ ಮತಕ್ಷೇತ್ರದ ನಮ್ಮ ಜನರು. ಅವರನ್ನು ಎಂಟು ಬಾರಿ ಆರಿಸಿ ಕಳಿಸಿದ ನಿರಂತರ ಪ್ರೀತಿಗೆ ಶೃಂಗಪ್ರಾಯದಂತೆ ಅವರು ಮುಖ್ಯಮಂತ್ರಿ ಆದಾಗ ಜೇವರ್ಗಿ ಕ್ಷೇತ್ರಕ್ಕೆ ರಾಜಕೀಯ ನಕಾಶೆಯಲ್ಲಿ ಅನನ್ಯತೆಯ ಸ್ಥಾನಮಾನ.

ಮುಂದೆ ಎಂದಾದರೂ ಜೇವರ್ಗಿ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ಅವಕಾಶ ದೊರಕುತ್ತದೋ ಇಲ್ಲೋ ಗೊತ್ತಿಲ್ಲ. ಅಂತಹದ್ದೊಂದು ಅಪರೂಪದ ಮತ್ತು ಅಪೂರ್ವ ಅವಕಾಶಕ್ಕೆ ಕಾರಣರಾದ ತಮಗೆ ನಾವೆಲ್ಲ ಋಣಿ. ಆದರೆ ನಿಮ್ಮ ಅಧಿಕಾರದ ಅವಧಿಯಲ್ಲಿ ಜೇವರ್ಗಿ ಕ್ಷೇತ್ರವನ್ನು “ನಂದನವನ” ಮಾಡಬಹುದಿತ್ತು. ಯಾಕೆ ಮಾಡಲಿಲ್ಲ ಎಂದು ನಿಮ್ಮನ್ನು ಕೇಳದಷ್ಟು ಮೊಗಲಾಯಿ ಮಂದಿ ನಾವು. ಬೆಂಗಳೂರಿನ ಕೆಲವು ಜಾಣ ಪತ್ರಕರ್ತರು ಆಫ್ ದಿ ರೆಕಾರ್ಡ್ ಧರ್ಮಸಿಂಗ್ ಕತೆಗಳ ಹುಡುಕಾಟಕ್ಕೆ ಹಾತೊರೆಯುತ್ತಿದ್ದರು. ಅವರ ಬದುಕು ಯಾವತ್ತೂ ಆನ್ ದಿ ರೆಕಾರ್ಡ್ ಕತೆಗಳ ಮಹಾ ಗುಚ್ಛವೇ ಆಗಿತ್ತು.

ದಿನಾಂಕ ೨೫.07.2017 ರಂದು ಬೆಂಗಳೂರಿನ ಸದಾಶಿವ ನಗರದ ಅವರ ಮನೆಯಲ್ಲಿ ಅವರ ನನ್ನ ಕೊನೆಯ ಭೆಟ್ಟಿ. ಅಂದು ನಮ್ಮೂರ ಶ್ರೀಮಠದ ಡಾ‌. ರುದ್ರಮುನಿ ಶಿವಾಚಾರ್ಯರು ಧರ್ಮಸಿಂಗ್ ಅವರ ಆರೋಗ್ಯ ಕುಶಲೋಪರಿ ವಿಚಾರಿಸಲೆಂದು ಬಂದಿದ್ದರು. ಅವತ್ತು ಎಂ. ಎಲ್. ಸಿ. ವಿಜಯಸಿಂಗ್ (ಅವರ ಹಿರಿಯ ಮಗ) ಜತೆಗಿದ್ದರು. ಧರ್ಮಸಿಂಗ್ ಅವರ ಊರು ನೆಲೋಗಿ ಹತ್ತಿರದ ನ್ಯಾವನೂರಿನ ಹಿರಿಯ ನಾಗರಿಕರೊಬ್ಬರು ಧರ್ಮಸಿಂಗ್ ಅವರ ಭೆಟ್ಟಿಗೆ ಬಂದಿದ್ದರು. ನನಗೆ ನೆನಪಿರುವಂತೆ ಅವರ ಹೆಸರು ಇಮಾಮಸಾಬ. ಧರ್ಮಸಿಂಗ್ ಆತನ ಹೆಸರು ಹಿಡಿದೇ ಕರೆದು ನಿನ್ನ ವಯಸ್ಸೆಷ್ಟು.? ಕೇಳಿದರು. ಆತ ಎಪ್ಪತ್ತೈದು ಎಂದರು. ನನಗಿಂತ ಆರ್ವರ್ಷ ಸಣ್ಣಾಂವಿದ್ದೀದಿ. ಕೈಯ್ಯಾಗ ಕೋಲ ಬಂದಾದ ಎಷ್ಟ ಮುದುಕಾಗಿದಿ.

ಹಾಗೆಂದ ಧರ್ಮಸಿಂಗ್ ಆತನ ಊರಿನ ಹತ್ತಾರು ಮಂದಿ ಹಿರೀಕರ ಹೆಸರು ಹಿಡಿದು ಉಭಯ ಕುಶಲೋಪರಿ ವಿಚಾರಿಸಿದರು. ಈ ಸಲ ಅವರ ಊರಿನ ಧರ್ಮರಾಯನ ಹೇಳಿಕೆ ಕಾರ್ಣಿಕ ಏನಾಯ್ತು.? ಹೀಗೆ ವಿವರವಾಗಿ ಅಗ್ದಿ ಆಸಕ್ತಿದಾಯಕ ದಖನಿ ಉರ್ದುವಿನಲ್ಲೇ ಅವರ ಜವಾರಿ ಮಾತುಕತೆ ಜರುಗಿತು. ನಾನು, ರುದ್ರಮುನಿ ಶಿವಾಚಾರ್ಯರು ಮತ್ತು ವಿಜಯಸಿಂಗ್ ಮೂಕವಿಸ್ಮಿತರಾಗಿ ಅವರ ಮಾತುಕತೆಗಳನ್ನು ಕೇಳುತ್ತಾ ಕುಳಿತೆವು. ಅದಾದ ಎರಡೇ ದಿನಕ್ಕೆ (27.07.2017) ಧರ್ಮಸಿಂಗ್‌ ನಿಧನರಾದರು. ಇಂದು ಅವರ ಆರನೇ ವರ್ಷದ ಪುಣ್ಯಸ್ಮರಣೆ.

Donate Janashakthi Media

Leave a Reply

Your email address will not be published. Required fields are marked *