ತುಮಕೂರು: ಸೂತಕವು ದೇವರಿಗೆ ಆಗಲ್ಲ ಎಂದು ಬಾಣಂತಿ,ಹಸುಗೂಸನ್ನು ಊರಿನ ಹೊರಗೆ ಗುಡಿಸಲಿನಲ್ಲೇ ಬಿಟ್ಟಿದ್ದರಿಂದ ಚಳಿಗೆ ಹಸುಗೂಸು ಮೃತಪಟ್ಟಿದ್ದ ಪ್ರಕರಣದಲ್ಲಿ ಕೊನೆಗೂ ತಾಯಿಯನ್ನು ಮನೆಗೆ ಸೇರಿಸಲಾಗಿದೆ. 21ನೇ ಶತಮಾನದಲ್ಲಿದ್ದರೂ ಮೌಢ್ಯಚರಣೆ ಒಂದು ಶಿಶುವನ್ನು ಬಲಿ ಪಡೆಯುವ ಮೂಲಕ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದ್ದ ಈ ಪ್ರಕರಣದಲ್ಲಿ ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಕೊನೆಗೂ ಬಾಣಂತಿಗೆ ಮನೆಯಲ್ಲಿಯೇ ವಾಸಕ್ಕೆ ಸೂಕ್ತ ವ್ಯವಸ್ಥೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ಮೊದಲು ರಾಜಿ ನಡೆಸಿದರೂ ಒಪ್ಪಿ ಸುಮ್ಮನಾಗಿದ್ದ ಕುಟುಂಬಕ್ಕೆ ಗುರುವಾರ ಬಲವಂತವಾಗಿ ತಾಕೀತು ಮಾಡಿ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಇದನ್ನೂ ಓದಿ:ಬಲವಂತದ ಭೂ ಸ್ವಾಧೀನಕ್ಕೆ ತುಮಕೂರು ರೈತನ ಬಲಿ – ರೈತ ಸಂಘ ಆಕ್ರೋಶ
ಊರಿಗೆ ಕೇಡು ಬರುವ ಭೀತಿಯಲ್ಲಿ ನಮ್ಮ ದೇವರಿಗೆ ಸೂತಕ ಆಗಲ್ಲ. ಹಾಗಾಗಿ ನಾವು ಬಾಣಂತಿ ಊರಿಗೆ ಬಂದರೆ ಕೇಡು ಆಗುತ್ತದೆ ಎಂಬುದು ಈ ಊರಿನವರ ನಂಬಿಕೆ. ಕಾಡುಗೊಲ್ಲರ ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗಲ್ಲ. ಹಿಂದಿನಿಂದಲೂ. ಮಳೆ,ಗಾಳಿ ಎನೇ ಬರಲಿ,ಅವರು ಇದ್ದರೂ,ಸತ್ತರೂ ಊರಿಂದ ಆಚೆಯೇ ಇರಬೇಕು. ಮನೆಯೊಳಗೆ ಬಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಊರಿನವರ ಉತ್ತರವಾಗಿತ್ತು. ಈ ಹಿನ್ನೆಲೆಯಲ್ಲಿ ತುಮಕೂರು ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ ಬಳಲಿ ಮೃತಪಟ್ಟಿತ್ತು.
ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಜು-26ರಂದು ಪ್ರಾಣಬಿಟ್ಟಿತ್ತು. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿರುವುದೇ ಈ ಕಂದಮ್ಮನ ಜೀವ ಹೋಗಲು ಕಾರಣವಾಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಬಾಣಂತಿಯನ್ನು ಕರೆದುಕೊಂಡು ಬಂದು ಮನೆಯೊಳಗೆ ಬಿಟ್ಟುಕೊಳ್ಳುವಂತೆ ಸಿದ್ದೇಶ್ ಕುಟುಂಬಸ್ಥರಿಗೆ ಸೂಚಿಸಿದರು. ಆದರೆ, ಇದಕ್ಕೆ ಕುಟುಂಬದವರು ಮೊದಲು ಸೊಪ್ಪು ಹಾಕಲಿಲ್ಲ. ಕಾನೂನು ಕ್ರಮದ ಹಾಗೂ ಮೌಢ್ಯದ ಬಗ್ಗೆ ಸಾಕಷ್ಟು ಹೇಳಿದ ಮೇಲೆ ಪೂಜೆ,ಪುನಸ್ಕಾರಗಳನ್ನು ಮಾಡಿ ಆಕೆಯನ್ನು ಮನೆಯೊಳಗೆ ಸೇರಿಸಿಕೊಳ್ಳುತ್ತೇವೆ ಎಂದು ಪತಿರಾಯ ಹೇಳಿಕೆ ನೀಡಿದ್ದ. ಇದನ್ನು ನಂಬಿದ ಅಧಿಕಾರಿಗಳು ಸ್ಥಳದಿಂದ ತೆರಳಿದ್ದರು.
ಪುನಃ ಇಂದು (ಜುಲೈ-27) ರಂದು ಬಂದು ನೋಡಿದರೆ ಬಾಣಂತಿ ಇನ್ನೂ ಗುಡಿಸಲಿನಲ್ಲಿಯೇ ಇದ್ದಳು. ಹೀಗಾಗಿ ಪುನಃ ಬಂದು ವಿಚಾರಿಸಿದಾಗ ಮತ್ತದೇ ಮೌಢ್ಯಾಚರಣೆಯ ಕಥೆ ಹೇಳಿದ್ದಾರೆ. ಪುನಃ ಮನೆಯವರನ್ನು ವಿಶ್ವಾಸಕ್ಕೆ ಪಡೆದ ಅಧಿಕಾರಿಗಳು ಅವರ ಮನವೊಲಿಸಿ ಬಾಣಂತಿ ವಸಂತಾಳನ್ನು ಕೊನೆಗೂ ಮನೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾದರೂ. ಗೊಲ್ಲ ಸಂಪ್ರದಾಯದಂತೆ ಇನ್ನೂ ಒಂದು ತಿಂಗಳು ಬಾಣಂತಿ ಊರ ಹೊರಗೆ ಇರಬೇಕಿತ್ತು. ಸದ್ಯಕ್ಕೆ ಈಗ ಆಕೆ ಸುರಕ್ಷಿತವಾಗಿ ಉಳಿಯುವಂತಾಗಿದೆ.