ಉಡುಪಿ: ನಗರದ ಪ್ಯಾರಾ ಮೆಡಿಕಲ್ ಕಾಲೇಜಿನ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ತಮ್ಮ ಹಿಂದೂ ಸಹಪಾಠಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎನ್ನಲಾದ ಘಟನೆಗೆ ಯಾವುದೆ ಪುರಾವೆಗಳಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚೀಂದ್ರ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. “ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ, ತಪ್ಪು ಸಂದೇಶಗಳು ಹರಿದಾಡುತ್ತಿವೆ. ಇಲ್ಲಿ ಯಾವುದೇ ರಹಸ್ಯ ಕ್ಯಾಮೆರಾ ಇಟ್ಟಿರುವುದು, ವಿಡಿಯೋವನ್ನು ಹಂಚಿ ಬ್ಲಾಕ್ಮೇಲ್ ಮಾಡಿ ತೊಂದರೆ ಕೊಟ್ಟಿರುವ ವಿಚಾರ ಇಲಾಖೆಯ ಗಮನಕ್ಕೆ ಬಂದಿಲ್ಲ” ಎಂದು ಅವರು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಷಯ್ ಮಚೀಂದ್ರ, “ವಿದ್ಯಾರ್ಥಿಗಳಿಂದ ವಶಪಡಿಸಿಕೊಳ್ಳಲಾದ ಮೊಬೈಲ್ ಆಡಳಿತ ಮಂಡಳಿ ಮೂಲಕ ನಮಗೆ ಹಸ್ತಾಂತರ ಮಾಡಲಾಗಿದೆ. ಅದನ್ನು ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿಯೂ ಯಾವುದೇ ವಿಡಿಯೋ ಸಿಕ್ಕಿಲ್ಲ. ಪೊಲೀಸ್ ಇಲಾಖೆಯಿಂದಲೂ ಸಾಮಾಜಿಕ ಜಾಲತಾಣಗಳ ಬಗ್ಗೆ ನಿಗಾ ಇಟ್ಟಿದ್ದು, ಅಲ್ಲಿಯೂ ನಮಗೆ ಈ ಸಂಬಂಧ ಯಾವುದೇ ವಿಡಿಯೋ ವೈರಲ್ ಆಗಿರುವುದು ಕಂಡುಬಂದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: “ನೇತ್ರಾವತಿಯಲ್ಲಿ ನೆತ್ತರು” ಕರಾವಳಿಯ ಕರಾಳತೆಯ ಅನಾವರಣ
“ಬೇರೆ ಕಡೆ ಬೇರೆ ಯಾವುದೋ ಸನ್ನಿವೇಶಗಳಲ್ಲಿ ತೆಗೆದ ವಿಡಿಯೋಗಳನ್ನು ಇದಕ್ಕೆ ಲಿಂಕ್ ಮಾಡಲಾಗುತ್ತಿದೆ. ಈ ವಿಡಿಯೋಗಳಿಗೂ ಕಾಲೇಜಿನ ಘಟನೆಗೂ ಯಾವುದೇ ಸಂಬಂಧ ಇಲ್ಲ. ಬೇರೆ ಕಡೆ ಮಾಡಿರುವ ವಿಡಿಯೋಗೆ ವಾಯ್ಸ್ ಎಡಿಟ್ ಮಾಡಲಾಗಿದೆ. ಈ ಬಗ್ಗೆ ಸಂತ್ರಸ್ತ ವಿದ್ಯಾರ್ಥಿ ಅಥವಾ ಕಾಲೇಜಿನ ಆಡಳಿತ ಮಂಡಳಿಯವರು ಪೊಲೀಸ್ ದೂರು ಕೊಟ್ಟಿಲ್ಲ” ಎಂದು ಮಚೀಂದ್ರ ಹೇಳಿದ್ದಾರೆ.
“ನಾವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಕೂಡಾ ನಮಗೆ ಯಾವುದೇ ವಿಡಿಯೋ ಕೂಡ ಸಿಕ್ಕಿಲ್ಲ. ಕೆಲವು ಸಂದರ್ಭದಲ್ಲಿ ಸಮಾಜದ ಹಿತಾಸಕ್ತಿಯಿಂದ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುತ್ತದೆ. ಯಾರಿಗಾದರೂ ವಿಡಿಯೋ ಸಿಕ್ಕಿದರೆ ನಮಗೆ ಕೊಡಿ, ನಾವು ಕ್ರಮ ತೆಗೆದು ಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಈಗಾಗಲೇ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಕಾಲೇಜಿನ ನಿಯಮ ಪ್ರಕಾರ ಆ ಪ್ರಕರಣವನ್ನು ನಿಭಾಯಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿ ತನ್ನ ತಾಯಿ ಸಮಕ್ಷಮದಲ್ಲಿ ಲಿಖಿತವಾಗಿ “ನಾವೆಲ್ಲ ಒಟ್ಟಿಗೆ ಇರುತ್ತೇವೆ. ಮೋಜಿಗಾಗಿ ಈ ರೀತಿ ವಿಡಿಯೋ ಮಾಡಿದ್ದಾರೆ. ನಂತರ ನನಗೆ ತೋರಿಸಿದ ಕೂಡಲೇ ಡಿಲೀಟ್ ಮಾಡಿದ್ದಾರೆ” ಎಂದು ಆಡಳಿತ ಮಂಡಳಿಗೆ ಬರೆದುಕೊಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ ಎಂದು ವಾರ್ತಾಭಾರತಿ ವರದಿ ಮಾಡಿದೆ.
ಇದನ್ನೂ ಓದಿ: ಕರಾವಳಿ ಜಿಲ್ಲೆಗಳಲ್ಲಿ ಮಳೆ ಹಾನಿ ಅಧಿಕಾರಿಗಳ ಜೊತೆ ಸಿಎಂ ಚರ್ಚೆ: ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಗೆ ಸೂಚನೆ
ರಶ್ಮಿ ಸಾವಂತ್ ಎಂಬ ಹೆಸರಿನ ಟ್ವೀಟ್ ವಿಚಾರವಾಗಿ ಪ್ರತಿಕ್ರಿಯಿಸಿರುವ ಅವರು, ಟ್ವಿಟ್ಟರ್ ಖಾತೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೊಲೀಸರು ಬಯಸಿದ್ದರು ಬಿಟ್ಟರೆ ಬೇರೆ ಯಾವ ಉದ್ದೇಶವೂ ಇರಲಿಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಪರಿಶೀಲಿಸದ ವಿಷಯಗಳನ್ನು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳದಂತೆ ಎಸ್ಪಿ ಸಾರ್ವಜನಿಕರಿಗೆ ವಿನಂತಿಸಿದ್ದಾರೆ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತರುವಂತೆ ಅವರು ಮನವಿ ಮಾಡಿದ್ದಾರೆ.
ವಿಡಿಯೊ ನೋಡಿ: ಉದ್ಯೋಗ ಭದ್ರತೆ – ಕಾಯಂಗೆ ಆಗ್ರಹಿಸಿ ಅತಿಥಿ ಶಿಕ್ಷಕರ ಧರಣಿ Janashakthi Media