ನವದೆಹಲಿ : ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-6 (NFHS-6 )ರ ಸೂಚಕಗಳಿಂದ ರಕ್ತಹೀನತೆಯನ್ನು ತೆಗೆದುಹಾಕುವ ನಿರ್ಧಾರವನ್ನು ಬಿಜೆಪಿ ಸರಕಾರ ಕೈಗೊಂಡಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘ (AIDWA) ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ.
ರಕ್ತಹೀನತೆಯ ಬಗ್ಗೆ ದತ್ತಾಂಶಗಳು ಬಹಳ ಮಹತ್ವದ್ದಾಗಿವೆ. ಹಿಂದಿನ NFHS -5 ಸಮೀಕ್ಷೆಯು ನಮ್ಮ ದೇಶದಲ್ಲಿ 57% ಕ್ಕಿಂತ ಹೆಚ್ಚು ಮಹಿಳೆಯರು ಮತ್ತು 67% ಕ್ಕಿಂತ ಹೆಚ್ಚು ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ಬಹಿರಂಗಪಡಿಸಿದೆ. ಅಂತಹ ಮಟ್ಟಿಗೆ ರಕ್ತಹೀನತೆ ಕಂಡುಬಂದಿರುವುದು ಒಂದು ಗಂಭೀರ ಸಮಸ್ಯೆಯೇನಲ್ಲ ಅಥವಾ ಅದೊಂದು ಅಪರೂಪದ ಸಂಗತಿ ಎಂದು ತಳ್ಳಿಹಾಕಲಾಗುವುದಿಲ್ಲ. ತಾಯಿ ಮತ್ತು ಮಕ್ಕಳ ಮರಣಕ್ಕೆ ಇದು ಒಂದು ಪ್ರಮುಖ ಕಾರಣವಾಗಿದೆ ಎಂದು ವೈದ್ಯಕೀಯ ತಜ್ಞರು ಗಮನಸೆಳೆದಿದ್ದಾರೆ. ಇದು ಮಕ್ಕಳಲ್ಲಿ ಬೆಳವಣಿಗೆಯನ್ನು ತಡೆಯುತ್ತದೆ, ಅವರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ದೀರ್ಘಕಾಲೀನ ಪರಿಣಾಮಗಳಿಗೆ ಕಾರಣವಾಗುತ್ತದೆ. ರಕ್ತಹೀನತೆಯು ಮಹಿಳೆಯರು ಮತ್ತು ಮಕ್ಕಳಲ್ಲಿ ಸೋಂಕುಗಳಿಗೆ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಹದಿಹರೆಯದ ಹೆಣ್ಣುಮಕ್ಕಳು ಮತ್ತು ಗರ್ಭಿಣಿಯರ ಮೇಲೆ ಇದರ ಪರಿಣಾಮ ಬೀರುವುದು ತೀವ್ರ ಕಳವಳಕಾರಿ ವಿಷಯವಾಗಿದೆ ಎಂದು ಸಾರ್ಚಜನಿಕ ಆರೋಗ್ಯ ತಜ್ಞರು ಹೇಳುತ್ತಾರೆ.
ಹೀಗಿರುವಾಗ ಸರ್ಕಾರವು ತನ್ನ ಸಮೀಕ್ಷೆಯಿಂದ ಈ ದತ್ತಾಂಶವನ್ನು ಹೊರಗಿಡುವ ನಿರ್ಧಾರ ಪ್ರಶ್ನಾರ್ಹ. ರಕ್ತಹೀನತೆಯ ಅಂದಾಜುಗಳು ವಿಶ್ವಾಸಾರ್ಹವಾಗಿಲ್ಲ ಎಂಬುದು ಸರಕಾರ ಕೊಡುವ ಕಾರಣ. ಆದರೆ ಸಾರ್ವಜನಿಕ ಆರೋಗ್ಯ ತಜ್ಞರು ಹಾಗೆ ಭಾವಿಸುತ್ತಿಲ್ಲ. ಏಕೆಂದರೆ ಹಿಂದಿನ ದತ್ತಾಂಶಗಳನ್ನು ಅದೇ ಆಧಾರದಲ್ಲಿ ಸಂಗ್ರಹಿಸಿರುವುದರಿಂದ ಅವನ್ನು ಪರಸ್ಪರ ಹೋಲಿಸಿ, ಆ ಮೂಲಕ ಸಮಸ್ಯೆಯನ್ನು ಎದುರಿಸಬಹುದಾಗಿದೆ ಎಂದು ಅವರು ಹೇಳುತ್ತಾರೆ.
ಹಲವಾರು ಪ್ರಾದೇಶಿಕ ವ್ಯತ್ಯಾಸಗಳನ್ನು ಹೊಂದಿರುವ ನಮ್ಮ ದೇಶದಲ್ಲಿ, ರಕ್ತಹೀನತೆಯ ಪ್ರಮಾಣವು ರಾಜ್ಯಗಳು ಮತ್ತು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಭಿನ್ನವಾಗಿರುತ್ತದೆ. NFHS ಜಿಲ್ಲಾ ಮಟ್ಟದಲ್ಲಿ ಈ ಮೌಲ್ಯಯುತ ಮಾಹಿತಿಯನ್ನು ಒಳಗೊಂಡಿರುವ ದತ್ತಾಂಶಗಳನ್ನು ಒದಗಿಸುವ ಏಕೈಕ ಸಮೀಕ್ಷೆ. ಇಂತಹ ದತ್ತಾಂಶಗಳಿಲ್ಲದೆ, ಎಲ್ಲಿ ಸರಕಾರದ ಮಧ್ಯಪ್ರವೇಶದ ಅಗತ್ಯವಿದೆ ಎಂದು ವೈಜ್ಞಾನಿಕವಾಗಿ ನಿರ್ಣಯಿಸಲು ಯಾವುದೇ ಮಾರ್ಗವಿರುವುದಿಲ್ಲ.
ಬಹುಶಃ ಸರಕಾರ ಈ ಮೊದಲು ರಕ್ತಹೀನತೆಯ ಈ ಪ್ರಶ್ನೆಯನ್ನು ನಿಭಾಯಿಸುವಲ್ಲಿ ವಿಫಲಗೊಂಡಿದ್ದು, ಭವಿಷ್ಯದಲ್ಲಿಯೂ ಅಗತ್ಯಕ್ರಮಗಳನ್ನು ಕೈಗೊಳ್ಳುವ ಇಚ್ಛೆ ಅದಕ್ಕಿಲ್ಲವಾದ್ದರಿಂದ, ಆ ಬಗ್ಗೆ ದತ್ತಾಂಶವೇ ಇಲ್ಲದಿದ್ದರೆ ರಕ್ತಹೀನತೆಯ ಸಮಸ್ಯೆಯೇ ಕಾಣುವುದಿಲ್ಲ ಎಂದು ಅದು ಭಾವಿಸಿದಂತಿದೆ ಎಂದಿರುವ ಎಐಡಿಡಬ್ಲ್ಯುಎ, ಸಾರ್ವಜನಿಕ ಆರೋಗ್ಯ ನಿರ್ವಹಣೆಯ ಬದಲು ಅದು ಸಾರ್ವಜನಿಕ ಸಂಪರ್ಕ ನಿರ್ವಹಣೆಯ ದಾರಿ ಹಿಡಿದಿದೆ ಎಂದು ವ್ಯಂಗ್ಯ ಮಾಡಿದೆ.
ಇದನ್ನೂಓದಿ:ಆಧುನಿಕ ನಾಗರಿಕತೆಯೂ ಉಳ್ಳವರ ಬೌದ್ಧಿಕ ಕೌರ್ಯವೂ
ಹೀಗೆ ಒಂದೆಡೆಯಲ್ಲಿ ರಕ್ತಹೀನತೆಯ ದತ್ತಾಂಶವನ್ನು ತೊಡೆದುಹಾಕಲು ಪ್ರಯತ್ನಿಸುತ್ತಿರುವ ಸರಕಾರ, ಅದೇ ಸಮಯದಲ್ಲಿ ರಾಷ್ಟ್ರವ್ಯಾಪಿಯಾಗಿ ಕಬ್ಬಿಣಾಂಶಗಳಿಂದ ಬಲವರ್ಧಿತವಾಗಿದೆ ಎನ್ನುವ ಅಕ್ಕಿಯನ್ನು, ಇದರ ಪೌಷ್ಟಿಕತೆ ಇನ್ನೂ ಸಾಬೀತಾಗಿರದಿದ್ದರೂ, ವಿತರಿಸಲು ಸಿದ್ಧವಾಗಿದೆ. ಈ ಸರಕಾರಕ್ಕೆ ರಕ್ತಹೀನತೆಯ ಮತ್ತು ಅಪೌಷ್ಟಿಕತೆಯ ಪ್ರಶ್ನೆಗಳನ್ನು ನಿಭಾಯಿಸುವುದಕ್ಕಿಂತ ಉದ್ದಿಮೆಗಳಿಗೆ ಬೆಂಬಲ ನೀಡುವ ಕಾತುರವೇ ಹೆಚ್ಚಿದೆ ಎಂಧು ಹೇಳಬೇಕಾಗುತ್ತದೆ ಎಂದು ಎಐಡಿಡಬ್ಲ್ಯುಎ ಖೇದ ವ್ಯಕ್ತಪಡಿಸಿದೆ.
ಆದ್ದರಿಂದ, NFHS -6 ಸಮೀಕ್ಷೆಯಿಂದ ರಕ್ತಹೀನತೆಯನ್ನು ಹೊರಗಿಡುವ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಮತ್ತು ಅದರ ಮಾಪನವನ್ನು ಯಾವುದೇ ವಿಳಂಬವಿಲ್ಲದೆ ಮರುಸ್ಥಾಪಿಸಬೇಕು ಎಂದು ಒತ್ತಾಯಿಸುತ್ತ , ಎಐಡಿಡಬ್ಲ್ಯುಎ, ಸರಕಾರ ಆಹಾರ ಭದ್ರತೆಯ ಕಾರ್ಯತಂತ್ರಗಳಲ್ಲಿ ಇಷ್ಟೊಂದು ಅನಪೇಕ್ಷಿತ ತರಾತುರಿಯಲ್ಲಿ ಕಬ್ಬಿಣಾಂಶ ಬಲವರ್ಧಿತ ಅಕ್ಕಿಯ ವಿತರಣೆಯನ್ನು ಆರಂಭಿಸಬಾರದು, ಬದಲಿಗೆ, ನಮ್ಮ ಬಹಳಷ್ಟು ಜನವಿಭಾಗಗಳನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು ಬಾಧಿಸುತ್ತಿರುವ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಲು ಸಮಗ್ರ ಕ್ರಮಗಳನ್ನು ಕೈಗೊಳ್ಳಬೇಕು, ಇದರಲ್ಲಿ ಅಗತ್ಯ ವಸ್ತುಗಳ ಗಗನಕ್ಕೇರುತ್ತಿರುವ ಬೆಲೆಗಳನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸುವ ಕ್ರಮಗಳೂ ಸೇರಿರಬೇಕು ಎಂದು ಆಗ್ರಹಿಸಿದೆ.