ಸೌಜನ್ಯ ಪ್ರಕರಣವನ್ನು ನ್ಯಾಯ ಬದ್ಧ ಮೂಲ ತನಿಖೆಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಆಗ್ರಹ

ಮೈಸೂರು: ಬಹಳ ಮುಖ್ಯವಾಗಿ ಕಳೆದ 11 ವರ್ಷಗಳ ಹಿಂದೆ ಧರ್ಮಸ್ಥಳದಲ್ಲ ಅತ್ಯಾಚಾರಕ್ಕೀಡಾಗಿ ಕೊಲೆಯಾಗಲ್ಪಟ್ಟ ಅಪ್ರಾಪ್ತ ಬಾಲಕಿ ಸೌಜನ್ಯಳ ಪ್ರಕರಣದಲ್ಲಿ ಆರೋಪಿ ಎಂದು ಬಿಂಬಿಸಲ್ಪಟ್ಟದ್ದ ಸಂತೋಷ್‌ರಾವ್ ಎಂಬ ಯುವಕ ನಿರ್ದೋಷಿ ಎಂದು ಮಾನ್ಯ ಸಿಬಿಐ ನ್ಯಾಯಾಲಯ ತೀರ್ಪು ನೀಡಿರುವುದು ಸ್ವಾಗತರ್ಹವಾದ್ದುದೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಅಭಿಪ್ರಾಯ ಪಟ್ಟಿದೆ. ಆದರೆ, ಅದರ ಬೆನ್ನಲೆ ನಿಜವಾದ ಆರೋಪಿಗಳು ಯಾರು ಎಂಬ ಪ್ರಶ್ನೆಯು ಎದ್ದಿರುವುದಲ್ಲದೆ ಸಂತ್ರಸ್ತ ಮಗುವಿಗೆ ಹಾಗೂ ಆಕೆಯ ಮನೆಯವರಿಗೆ ನ್ಯಾಯ ದೊರಕಿಸಿ ಕೊಡುವ ನಿಟ್ಟಿನಲ್ಲಿ  ಪ್ರತಿಯೊಬ್ಬರ ಜವಾಬ್ದಾರಿಯು ಎದ್ದು ಕಾಣುತ್ತಿದೆ ಎಂದು ತಿಳಿದಿದ್ದೇವೆ. ಆದುದರಿಂದ ಮುಂದಿನ ದಿನಗಳಲ್ಲಿ ನಿಜವಾದ ಆರೋಪಿಗಳನ್ನು ಕಾನೂನಿನ ಚೌಕಟ್ಟಿಗೆ ತರುವ ನಿಟ್ಟಿನಲ್ಲಿ ತುರ್ತಾಗಿ ಆಗಬೇಕಾಗಿರುವ ಕಾನೂನಾತ್ಮಕ ಹಾಗೂ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಒಕ್ಕೂಟವು ಗೆಲುವು ಲಭಿಸುವವರೆಗೂ ಹೋರಾಡಲು ತೀರ್ಮಾನಿಸಿದೆ ಎಂದರು.

ಈ ನಿಟ್ಟಿನಲ್ಲಿ ಯಾವುದೇ ಜಾತಿ, ಧರ್ಮ, ರಾಜಕೀಯ ಪ್ರವೇಶಗಳಲ್ಲದೆ ಕೇವಲ ನ್ಯಾಯ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಹೋರಾಟವನ್ನು ಮುನ್ನಡೆಸಲು ಪ್ರಗತಿಪರ ಒಕ್ಕೂಟವು ನಿರ್ಣಯಿಸಿರುತ್ತದೆ, ಈಗಾಗಲೇ ದಿನಾಂಕ 13/07/2023ರ ಗುರುವಾರ ಒಡನಾಡಿ ಸಂಸ್ಥೆಯ ಆವರಣದಲ್ಲಿ ಮೈಸೂರು, ಮಂಡ್ಯ, ಬೆಂಗಳೂರು, ಚಿತ್ರದುರ್ಗ, ಪಿರಿಯಾಪಟ್ಟಣ, ಬೆಳ್ತಂಗಡಿ, ಮಂಗಳೂರು, ಚಾಮರಾಜನಗರ ಮೊದಲಾದ ಕಡೆಗಳಿಂದ ಆಗಮಿಸಿದ ಪದಾಧಿಕಾರಿಗಳು ಸೌಜನ್ಯಾಳದ ಪ್ರಕರಣಕ್ಕೆ ನ್ಯಾಯ ಸಿಗುವವರೆಗೂ ಹೋರಾಡಲು ಇರಾದೆಯನ್ನು ವ್ಯಕ್ತಪಡಿಸಿರುತ್ತಾರೆ. ಹಾಗೆಯೇ ಸಂತೋಷ್ ರಾವ್ ನ ಮಾನವ ಹಕ್ಕುಗಳ ಉಲ್ಲಂಘನೆಗೂ ಸಂಬಂಧಪಟ್ಟಂತೆ ಧ್ವನಿಗೂಡಿಸಲು ಒಮ್ಮತದ ಅಭಿಪ್ರಾಯ ಬರೆಲಾಯಿತು ಎಂದು ಹೇಳಿದರು.

ಇದನ್ನೂ ಓದಿ:ಸೌಜನ್ಯ ಪ್ರಕರಣ: ರಾವ್ ಅಪರಾಧಿ ಅಲ್ಲ ನಿಜ, ಹಾಗಾದರೆ ಅಪರಾಧಿಗಳು ಯಾರು?

“ಸೌಜನ್ಯ ಸಂವಾದ” ದ ಮಾತುಕತೆಯ ಮೂಲಕ ಹಾಗೂ ನೊಂದ ಪೋಷಕರ ಹೋರಾಟಗಾರರ ಹಾಗೂ ಇತ್ತೀಚಿನ ಸಿಬಿಐ ನ್ಯಾಯಾಲಯದ ತೀರ್ಪಿನ ಅವಲೋಕನದ ಮೂಲಕ ಮೂಲ ತನಿಖೆ ನಡೆಸಿದ ಅಧಿಕಾರಿಗಳು, ವೈದ್ಯಾಧಿಕಾರಿಗಳು ಕೂಡ ಆರೋಪಿಗಳಾಗಿ ಎದ್ದು ಕಾಣುತ್ತಿದ್ದಾರೆ. ಇವರುಗಳ ವಿರುದ್ಧ ದೂರು ದಾಖಲಿಸಿ ತನಿಖೆ ಕೈಗೊಳ್ಳುವಂತೆ ಒಕ್ಕೂಟ ಹಾಗೂ ಒಡನಾಡಿ ಸಂಸ್ಥೆ ಸರ್ಕಾರವನ್ನು ಆಗ್ರಹಿಸುತ್ತದೆ ಎಂದರು. ಅಲ್ಲದೆ, ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಹಾದಿಯಾಗಿ ‘ಧರ್ಮಸ್ಥಳ ಛಲೋ’ ಜಾಥಾದವರೆಗೂ ಅನಾಭಿಪ್ರಾಯ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸಭೆ ತೀರ್ಮಾನಿಸಿದೆ ಎಂದು ತಿಳಿಸಿದರು.

ನ್ಯಾಯಾಲಯದ ತೀರ್ಪಿನಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಬೇಕೆಂದು ಸ್ಪಷ್ಟವಾಗಿ ಆದೇಶಿಸಿರುವುದರಿಂದ ತೀರ್ಪಿನ ಈ ಅಂಶವನ್ನು ಆದಷ್ಟು ಬೇಗನೆ ಅನುಷ್ಠಾನಕ್ಕೆ ತರಲು ಸಭೆಯು ಆಗ್ರಹಿಸುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಮನೆಮನೆಗೂ ಸತ್ಯಾಂಶಗಳನ್ನು ತಿಳಿಸುವ ಅರಿವಿನ ಜಾಥಾ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚರ್ಚೆಗಳು ನಡೆಯುವುದು ಅಲ್ಲದೆ ಕಾನೂನಾತ್ಮಕ ಹೋರಾಟಕ್ಕೆ ಒಡನಾಡಿ ಸಂಸ್ಥೆ ಹಾಗೂ ಪ್ರಗತಿಪರ ಒಕ್ಕೂಟ ಸಜ್ಜುಗೊಳ್ಳುತ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿಯೂ ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ವೀರೇಂದ್ರ ಹೆಗ್ಡೆಯವರು ಸಂತ್ರಸ್ತ ಬಾಲಕಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವ ನೈತಿಕ ಜವಾಬ್ದಾರಿ ಹೊರಬೇಕು ಎಂದರು.

ಕರ್ನಾಟಕ ಸರ್ಕಾರ ಪ್ರಕರಣಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ದೂರು ದಾಖಲಿಸಿಕೊಂಡು ನಿಜವಾದ ಆರೋಪಿಗಳನ್ನು ಹಾಗೂ ತಪ್ಪಿತಸ್ಥ ಅಧಿಕಾರಿಗಳನ್ನು ಕಾನೂನಿನ ಚೌಕಟ್ಟಿಗೆ ತಂದು ಜನರಿಗೆ ಸಂವಿಧಾನದ ಬಗ್ಗೆ ಹಾಗೂ ಕಾನೂನಿನ ಸುವ್ಯವಸ್ಥೆ ಬಗ್ಗೆ ಇರುವ ನಂಚಿಕೆಯನ್ನು ಗಟ್ಟಿ ಮಾಡಬೇಕೆಂದು ಆಗ್ರಹಿಸುತ್ತಿದ್ದೇವೆ ಎಂದರು. ಅದೇ ರೀತಿ ಈ ಪ್ರಕರಣದ ಮುಖೇನ ಧರ್ಮಸ್ಥಳದಲ್ಲಿ ಇದುವರೆಗೂ ನಡೆದಿರುವ 462 ಅಸಹಜ ಸಾವಿನ ಪ್ರಕರಣಗಳಲ್ಲಿ 90 ಪ್ರಕರಣಗಳು ಮಕ್ಕಳು ಮತ್ತು ಮಹಿಳೆಯರದೇ ಆಗಿರುವುದರಿಂದ ಮಕ್ಕಳ ಹಕ್ಕುಗಳ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶಿಸಲು ಆಗ್ರಹಿಸುತ್ತದೆ. ಇದನ್ನೆಲ್ಲಾ ಗಮನಿಸಬೇಕಾದ ಶಾಸನಬದ್ಧ ಆಯೋಗಗಳು ತಕ್ಷಣ ಕಾರ್ಯ ಪ್ರವೃತ್ತಿಗೆ ಇಳಿಯಬೇಕು ಎಂಬುದು ಹಕ್ಕೋತ್ತಾಯವಾಗಿದೆ ಎಂದಿದ್ದಾರೆ.

ಇದೊಂದು ತಾಯಿಯೊಬ್ಬಳ ನ್ಯಾಯದ ಅಂಗಲಾಚುವಿಕೆ ಜನರ ಬಳಿಯಿದೆ. ಹಾಗಾಗಿ ಜಿಲ್ಲಾವಾರು ಕಾರ್ಯಕ್ರಮಗಳು ಘಟಿಸುತ್ತಾ ಹೋಗುತ್ತದೆ ಎಂದು ಒಕ್ಕೂಟದ ಎಲ್ಲರೂ ಸರ್ವ-ಸಮ್ಮತವಾದಂತಹ ಅಭಿಪ್ರಾಯಕ್ಕೆ ಬಂದರು. ಅಲ್ಲದೆ ಈ ಹೋರಾಟವನ್ನು ಪ್ರಾರಂಭ ಮಾಡಿದ ಮಹೇಶ್‌ಶೆಟ್ಟಿ ಹಾಗೂ ಸುಮಿತ್ರರವರಿಗೆ ಬಲ ಮತ್ತು ಬೆಂಬಲವನ್ನು ಸೂಚಿಸುವುದರೊಡನೆ ಅವರ ಬೆನ್ನೆಲುಬಾಗಿ ನಿಲ್ಲುವುದು ಆಶಯಗಳಲ್ಲಿ ಬಹಳ ಮುಖ್ಯವಾಗಿತ್ತು. ಈ ನಿಟ್ಟಿನಲ್ಲ ಕರ್ನಾಟಕದ ಎಲ್ಲಾ ನಾಗರಿಕರು ನೈತಿಕ ಬೆಂಬಲವನ್ನು ಕ್ರೂಢೀಕರಿಸಿ ಹೋರಾಟವನ್ನು ಮುಂದುವರೆಸಲಿದ್ದೇವೆ, ಜನಾಭಿಪ್ರಾಯ ಸೃಷ್ಟಿ ಮಾಡುವುದರಲ್ಲಿ ಮಾಧ್ಯಮಗಳ ಪಾತ್ರ ಹಿರಿದ್ದಾಗಿರುವುದರಿಂದ ಈ ಮಾನವೀಯ ಕಾರ್ಯದಲ್ಲಿ ತಾವು ನಮ್ಮ ಹೋರಾಟದಲ್ಲಿ ಕೈ ಜೋಡಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ ಎಂದರು.

ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಒಡನಾಡಿ ಸೇವಾ ಸಂಸ್ಥೆ, ವಕೀಲರ ಸಂಘ, ಜನಜಾಗೃತಿ ವೇದಿಕೆ, ಜನಾಂದೋಲನಗಳ ಮಹಾ ಮೈತ್ರಿ, ಕಾರ್ಮಿಕ ಸಂಘಟನೆಗಳು, ಸಿ.ಪಿ.ಎಂ., ಸಿ.ಪಿ.ಐ, ಸಿ.ಪಿ.ಐ.ಎಂ, ಎಸ್.ಯು.ಸಿ.ಐ. ಕನ್ನಡ ಪರ ಸಂಘಟನೆಗಳು, ಐ.ಎನ್.ಟಿ.ಯು.ಸಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ಜನಮನ ಸಂಸ್ಕೃತಿಕ ಸಂಘಟನೆ, ನೆಲೆ ಹಿನ್ನೆಲೆ, ದಲಿತ ವಿದ್ಯಾರ್ಥಿ ಒಕ್ಕೂಟ ಮೈ.ವಿ.ವಿ., ಸಂಶೋಧಕರ ಸಂಘ ಮೈ.ವಿ.ವಿ., ಕರ್ನಾಟಕ ದಲಿತ ವೇದಿಕೆ, ಜೈ ಭೀಮ್‌ ಕೋರಾಂಗಾವ್‌ ವಿಜಯೋತ್ಸವ ಸಮಿತಿ, ದಲಿತ ವಿದ್ಯಾರ್ಥಿ ಪರಿಷತ್‌, ಮಾನವ ಹಕ್ಕು ಸಂಘಟನೆಗಳು, ಎಲ್ಲ ಎಡ ಪಕ್ಷಗಳು ಮತ್ತು ಮಹಿಳಾ ಸಂಘಟನೆಗಳು, ವಿದ್ಯಾರ್ಥಿ ಯುವ ಸಂಘಟನೆಗಳು – ಸಾಹಿತಿಗಳು, ಚಿಂತಕರು, ಕಲಾವಿದರು ಭಾಗವಹಿಸುತ್ತಿದ್ದಾರೆ. ಜೊತೆಗೆ ನಾವು ನೀವು ಸೌಜನ್ಯಗಳಿಗಾಗಿ ಒಂದಿಷ್ಟು ಸಮಯ ನೀಡಿ. ದಯಮಾಡಿ ಜುಲೈ- 17ನೇ ತಾರೀಕು ನಡೆಯಲಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು, ಅಮಾನುಷ ಅತ್ಯಾಚಾರ ಹಾಗೂ ಕೊಲೆಗೀಡಾದ ಬಾಲೆ ಸೌಜನ್ಯಳ ರೀತಿಯ ನೂರಾರು ಮಹಿಳೆಯರ ಮಕ್ಕಳ ಸಾವಿಗೆ ನ್ಯಾಯ ದೊರಕಿಸಲು ನಡೆಯುವ ನ್ಯಾಯಪರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

 

 

Donate Janashakthi Media

Leave a Reply

Your email address will not be published. Required fields are marked *