ಕೊಲೆ ಪ್ರಕರಣದ 4ನೇ ಆರೋಪಿ ನಗರಪಾಲಿಕೆ ಬಿಜೆಪಿ ಸದಸ್ಯೆಯ ಸಹೋದರ ಅನ್ನೋದು ಬಹಿರಂಗ
ಮೈಸೂರು: ಟಿ.ನರಸೀಪುರ ಪಟ್ಟಣದಲ್ಲಿ ಭಾನುವಾರ ನಡೆದಿದ್ದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ನಾಯಕನ ಕೊಲೆ ಪ್ರಕರಣದಲ್ಲಿ ಮೈಸೂರಿನ ಬಿಜೆಪಿ ಕಾರ್ಪೋರೇಟರ್ ಸಹೋದರ ಶಂಕರ್ ಅಲಿಯಾಸ್ ತುಪ್ಪ ಎಂಬಾತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಮೈಸೂರು ನಗರದ ದಟ್ಟಗಳ್ಳಿಯ 48 ನೇ ವಾಡ್೯ ಬಿಜೆಪಿ ಕಾರ್ಪೋರೇಟರ್ ಲಕ್ಷ್ಮಿ ಕಿರಣ್ ಸಹೋದರ ಕೊಲೆ ಆರೋಪಿ ಶಂಕರ್ ಎಂದು ಹೇಳಲಾಗುತ್ತಿದೆ.
ಹನುಮಜಯಂತಿ ಆಚರಣೆ ವೇಳೆ ನಾಯಕ ನಟ ದಿ.ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಾಕುವ ವಿಚಾರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರುಗಳ ನಡುವೆಯೇ ಗಲಾಟೆ ನಡೆದಿತ್ತು. ಈ ಸಂಬಂಧ ರಾಜಿ ಮಾಡಿಕೊಳ್ಳಲು ವೇಣುಗೋಪಾಲನನ್ನು ಭಾನುವಾರ ರಾತ್ರಿ ಅಗ್ನಿಶಾಮಕ ಕಚೇರಿ ಬಳಿಗೆ ಕರೆಸಿಕೊಂಡು ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ:ನೈಸರ್ಗಿಕ ಸಂಪತ್ತು, ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ – ನಾಗೇಶ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯ ವಿರುದ್ಧ ದೂರು ದಾಖಲಾಗಿದ್ದು, ಸೋಮವಾರ ಸಂದೇಶ್ ಮತ್ತು ಮಣಿಕಂಠ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಇನ್ನುಳಿದ ನಾಲ್ವರು ಆರೋಪಿಗಳಾದ ಶಂಕರ ಅಲಿಯಾಸ್ ತುಪ್ಪ, ಅನಿಲ್, ಹ್ಯಾರಿಸ್ ಮತ್ತು ಮಂಜ ಎಂಬುವವರನ್ನು ಬಂಧಿಸಲಾಗಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ. ಪ್ರಕರಣದ ಆರೋಪಿಯ ವಿಚಾರ ತಿಳಿದ ಬಿಜೆಪಿಗೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಇದೀಗ ಸತ್ಯ ಶೋಧನೆಗಿಳಿದ ಬಿಜೆಪಿ ತಂಡದ ಸದಸ್ಯರು ಮೈಸೂರಿಗೆ ಬರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.