ಹಾಸನ : ಭಾರತ ಸಂವಿಧಾನದ ಕರ್ತವ್ಯ 51ಎ(ಎ) ನೈಸರ್ಗಿಕ ಸಂಪತ್ತನ್ನು ರಕ್ಷಿಸುವುದು, ಪರಿಸರ ಸಂರಕ್ಷಣೆ ಮಾಡುವುದು ಎಲ್ಲರ ಕರ್ತವ್ಯ ಎಂದಿದೆ. ಸರ್ಕಾರಗಳು ಕೋಟ್ಯಾಂತರ ರೂಪಾಯಿ ವ್ಯಯಿಸಿ ಕೆರಕಟ್ಟೆಗಳನ್ನ ಪುನರುಜ್ಜೀವನಗೊಳಿಸುತ್ತದೆ ಅದನ್ನು ರಕ್ಷಣೆ ಮಾಡಿ ಸ್ವಚ್ಛವಾಗಿಟ್ಟುಕೊಳ್ಳುವುದು ನಾಗರೀಕರ ನಾಗರೀಕ ಜವಾಬ್ದಾರಿ ಎಂದು ಕೆರೆಪರಿಸರ ಸ್ವಚ್ಛತಾ ಅಭಿಯಾನದ ಸಂಚಾಲಕ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಹ ಕಾರ್ಯದರ್ಶಿ ನಾಗೇಶ್ ಹೇಳಿದರು.
ಚಿಕ್ಕಹೊನ್ನೇನಹಳ್ಳಿಕೆರೆ ಪರಿಸರ ಸ್ವಚ್ಛತೆಗಾಗಿ ಶ್ರಮದಾನ ಚಟುವಟಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಕಳೆ ತುಂಬಿ ಮುಚ್ಚಿರುವ, ಕೊಳಕು ತುಂಬಿ ಹದಗೆಟ್ಟಿರುವ ಚಿಕ್ಕಹೊನ್ನೇನಹಳ್ಳಿ ಕೆರೆಪರಿಸರವನ್ನು ಸ್ವಚ್ಛಗೊಳಿಸಿ, ಕಾಪಾಡಲು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಗ್ರಾಮದ ಜನತೆ ಒಂದುಗೂಡಿ ತಮ್ಮ ಶ್ರಮವನ್ನು ದಾನಮಾಡಿ ನಿಂತಿರುವುದು ನಿಜವಾದ ರಾಷ್ಟ್ರಸೇವೆ ಎಂದರು.
ಸರ್ವರನ್ನು ಸ್ವಾಗತಿಸಿದ ಅವರು ಚಿಕ್ಕಹೊನ್ನೇನಹಳ್ಳಿ ಕೆರೆಯನ್ನು ಸ್ವಚ್ಛಗೊಳಿಸಿ ಅದರ ಸುತ್ತಲೂ ಬಣ್ಣಬಣ್ಣದ ಹೂಗಿಡಗಳನ್ನು, ಕೆರೆಯ ಒಳಾಂಗಣದಲ್ಲಿ ಹಣ್ಣಿನ ಮರ ಹಾಗೂ ಮಿಯಾವಾಕಿ ಗಿಡಗಳನ್ನು ನೆಟ್ಟು ಕೆರೆಪರಿಸರವನ್ನು ಸುಂದರಗೊಳಿಸಲಾಗುವುದು ಈ ಕಾರ್ಯಸಾಧನೆಗಾಗಿ ಪ್ರತಿ ಭಾನುವಾರ ಬೆಳಗ್ಗೆ ಬೃಹತ್ ಪ್ರಮಾಣದಲ್ಲಿ ಶ್ರಮದಾನ ಮಾಡಲಾಗುವುದು ಇದನ್ನು ಆಗುಮಾಡಲು ನಗರದ ಎಲ್ಲ ಪರಿಸರಪ್ರಿಯ ಸಂಘಟನೆಗಳು ಹಾಗೂ ಕೆರೆಪರಿಸರ ವ್ಯಾಪ್ತಿಯ ಜನತೆ ಜೊತೆಗೂಡಲು ಮನವಿ ಮಾಡಿದರು.
ಇದನ್ನೂ ಓದಿ : ನಗರವನ್ನು ಸ್ವಚ್ಛವಾಗಿಡುವುದು ನಮ್ಮಗಳ ಮೂಲಭೂತ ಕರ್ತವ್ಯ – ಇಂಜಿನೀಯರ್ ಕವಿತ
ನಗರಸಭೆಯ ಇಂಜಿನೀಯರ್ ಕವಿತ ಪಾರ್ಥೇನಿಯಂ ಕಳೆ ಕೀಳುವ ಮೂಲಕ ಶ್ರಮದಾನ ಉದ್ಘಾಟನೆ ಮಾಡಿ ಹಾಸನ ನಗರದಲ್ಲಿರುವ ಕೆರೆಪರಿಸರವನ್ನು ರಕ್ಷಿಸಲು ನಗರಸಭೆ ನಿಮ್ಮ ಜೊತೆಗಿದೆ ಅಗತ್ಯ ಸಹಕಾರ ಮಾಡಲು ಸಿದ್ಧವಿದೆ ಎಂದು ಹೇಳಿ ಸ್ವಚ್ಚಪರಿಸರ ಎಲ್ಲರ ಹಕ್ಕು ಹಾಗೆಯೆ ಅದನ್ನು ರಕ್ಷಿಸಿ ಸ್ವಚ್ಛವಾಗಿಡುವುದು ನಾಗರೀಕ ಜವಾಬ್ದಾರಿ ಎಂದರು. ಇಲ್ಲಿನ ಕೆರೆಪರಿಸರದಲ್ಲಿ ತಮ್ಮ ವೈಯುಕ್ತಿಕ ಆಸಕ್ತಿಯಿಂದ ಜನತೆಗಾಗಿ ಗಜಿಬೊ ನಿರ್ಮಿಸಿ ಕೊಡುವುದಾಗಿ ಹೇಳಿದರು.
ಪಾರ್ಥೇನಿಯಂ ಕಳೆಯಿಂದ ಮುಚ್ಚಿಹೋಗಿದ್ದ ಕೆರೆಪರಿಸರದ ವಾಕಿಂಗ್ ಪಾಥ್ ಅನ್ನು ವಿವಿಧ ಸಂಘಟನೆಗಳ ನೂರಕ್ಕೂ ಅಧಿಕ ಪ್ರತಿನಿಧಿಗಳು ಸ್ವಚ್ಛಗೊಳಿಸಿದರು. ಗ್ರಾಮಸ್ವರಾಜ್ ಸಮಿತಿ ಚಿಕ್ಕಹೊನ್ನೇನಹಳ್ಳಿ, ಹಸಿರುಭೂಮಿ ಪ್ರತಿಷ್ಠಾನ ಹಾಸನ, ಭಾರತ ಜ್ಞಾನ ವಿಜ್ಞಾನ ಸಮಿತಿ, ಜಯನಗರ ಘಟಕ, ನಗರಸಭೆ ಹಾಸನ, ಮಾರುತಿ ಕ್ಷೇಮಾಭಿವೃದ್ಧಿ ಸಂಘ, ಜಯನಗರ & ಚಿಕ್ಕಹೊನ್ನೇನಹಳ್ಳಿ, ಮುಂಜಾನೆೆ ಮಿತ್ರರು, ರಾಜಾಜಿನಗರ ನಿವಾಸಿ ವೃಂದ, ಪತಂಜಲಿ ಯೋಗಪರಿವಾರ, ತಿರುಮಲ ಯೋಗಕೇಂದ್ರ ಚಿಕ್ಕಹೊನ್ನೇನಹಳ್ಳಿ, ಲಯನ್ಸ್ ಕ್ಲಬ್ ಹಾಸನ, ಶೌರ್ಯ ಹಾಸನ, ಸ್ನೇಹಿತರು ಚಿಕ್ಕಹೊನ್ನೇನಹಳ್ಳಿ ಸಂಘಟನೆಗಳು ಜಂಟಿಯಾಗಿ ಈ ಕಾರ್ಯಕ್ರಮ ಆಯೋಜಿಸಿದ್ದವು.