ಮೂಲ : ಬಿ ಶಿವರಾಮನ್
ಅನುವಾದ : ನಾ ದಿವಾಕರ
ಈ ಲೇಖನವನ್ನು ನ್ಯೂಸ್ ಕ್ಲಿಕ್ (NewsClick) ಹಿಂದಿ ಆವೃತ್ತಿಯಿಂದ ಪಡೆದುಕೊಳ್ಳಲಾಗಿದೆ.
ಇಂದು ತಂತ್ರಜ್ಞಾನಾಧಾರಿತ ಶಿಕ್ಷಣದ (Ed-Tech – ಅಂದರೆ ಆನ್‌ಲೈನ್ ಕೋಚಿಂಗ್) ಉದ್ಯಮವು ತೀವ್ರ ಬಿಕ್ಕಟ್ಟಿನಲ್ಲಿದೆ. ಕೋವಿದ್ ಸಾಂಕ್ರಾಮಿಕ ಸಮಯದಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಮುಚ್ಚಲ್ಪಟ್ಟಾಗ ಮಧ್ಯಮ ವರ್ಗಗಳಲ್ಲಿ ದುಬಾರಿ ಆನ್ ಲೈನ್ ಶಿಕ್ಷಣದ ವೆಚ್ಚವನ್ನು ಭರಿಸಬಲ್ಲ ಜನರ ನಡುವೆ ಆನ್‌ಲೈನ್ ಶಿಕ್ಷಣಕ್ಕಾಗಿ ಅನಿವಾರ್ಯ ಉತ್ಸಾಹ ಇತ್ತು. ಸಾಂಕ್ರಾಮಿಕ ರೋಗವು ಮುಗಿದ ನಂತರ, ಆನ್‌ಲೈನ್ ಶಿಕ್ಷಣವು ತನ್ನ ಸೆಳೆತ ಕಳೆದುಕೊಂಡಿತ್ತು. ವಿದ್ಯಾರ್ಥಿ ಸಮುದಾಯದಲ್ಲಿಯೂ ಆನ್‌ಲೈನ್ ಶಿಕ್ಷಣವು ಬಹುಮಟ್ಟಿಗೆ ವಿಫಲವಾಯಿತು. ಅಗಾಧವಾದ ಶೈಕ್ಷಣಿಕ ಸಾಮರ್ಥ್ಯ ಮತ್ತು ವೆಚ್ಚದ ಅನುಕೂಲಗಳನ್ನು ಹೊಂದಿದ್ದರೂ, ಇದನ್ನು ಪ್ಯಾಕ್ ಮಾಡಿ ಆಕರ್ಷಕ ರೀತಿಯಲ್ಲಿ ಪ್ರಸ್ತುತಪಡಿಸದ ಕಾರಣ ಮತ್ತು ಇದು ಸಾಮಾನ್ಯ ತರಗತಿಯ ಕೆಲಸ ಮತ್ತು ಮನೆಕೆಲಸವನ್ನು ಹೊರತುಪಡಿಸಿ ಹೆಚ್ಚುವರಿ ಹೊರೆಯಾಗಿದ್ದರಿಂದ, ವಿದ್ಯಾರ್ಥಿಗಳು ಆನ್‌ಲೈನ್ ಕೋರ್ಸ್‌ಗಳಲ್ಲಿ ಆಸಕ್ತಿಯನ್ನು ಕಳೆದುಕೊಂಡರು ಮತ್ತು ಆದ್ದರಿಂದ ಸಾಂಕ್ರಾಮಿಕ ರೋಗದ ನಂತರದ ಅವಧಿಯಲ್ಲಿ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ED-TECH ಉದ್ಯಮವು ಈಗ ಬಿಕ್ಕಟ್ಟಿನಲ್ಲಿ ಸಿಲುಕಿದೆ.
ED-TECH ಉದ್ಯಮದ ಬಿಕ್ಕಟ್ಟನ್ನು ಬೈಜುಸ್ ಬಿಕ್ಕಟ್ಟಿನಿಂದ ಉತ್ತಮವಾಗಿ ಗ್ರಹಿಸಬಹುದಾಗಿದೆ. ಇದನ್ನು ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಎಂದು ಬೈಜು ರವೀಂದ್ರನ್, ದಿವ್ಯಾ ಗೋಕುಲ್‌ನಾಥ್ ಮತ್ತು ಸಹ ವಿದ್ಯಾರ್ಥಿಗಳ ಗುಂಪು 2011 ರಲ್ಲಿ 2 ಲಕ್ಷ ರೂ.ಗಳ ಆರಂಭಿಕ ಬಂಡವಾಳ ಹೂಡಿಕೆಯೊಂದಿಗೆ ಸ್ಟಾರ್ಟ್ಅಪ್ ಆಗಿ ಪ್ರಾರಂಭಿಸಿತು. ಅದು ಶೀಘ್ರಗತಿಯ ಪ್ರಗತಿಯನ್ನೂ ಹೊಂದಿತ್ತು. ಜೂನ್ 2023 ರ ವೇಳೆಗೆ, ಇದು 41,820 ಕೋಟಿ ರೂ.ಗಳ ಕಂಪನಿಯಾಯಿತು. ಆರಂಭದಲ್ಲಿ, ಇದು ಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕೋರ್ಸ್‌ಗಳನ್ನು ನೀಡಿತು. ನಂತರ ಅದು ಐಐಟಿ-ಜೆಇಇ, ನೀಟ್ ಪರೀಕ್ಷೆ ಅಥವಾ ಯುಪಿಎಸ್ಸಿ ಪ್ರವೇಶ ಪರೀಕ್ಷೆಗಳಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಪ್ರಾರಂಭಿಸಿತು. ಬೈಜುಸ್ ಸಾವಿರಾರು ಶಿಕ್ಷಕರು ಮತ್ತು ಇತರ ಆನ್ ಲೈನ್ ಶೈಕ್ಷಣಿಕ ವಿಷಯ ರೂಪಿಸುವವರನ್ನು ನೇಮಿಸಿಕೊಂಡಿತು ಮತ್ತು ಆನ್‌ಲೈನ್ ಶೈಕ್ಷಣಿಕ ವಿಷಯದ ವಿಶಾಲ ಶ್ರೇಣಿಯನ್ನು ನೀಡಿತು. ಈ ಜನರಲ್ಲಿ ಅನೇಕರು ಪ್ರಾಮಾಣಿಕವಾಗಿ ಕೆಲಸ ಮಾಡಿದರು ಮತ್ತು ಈ ಆನ್‌ಲೈನ್ ಶೈಕ್ಷಣಿಕ ಸಾಮಗ್ರಿಗಳ ಗುಣಮಟ್ಟವೂ ಸಾಕಷ್ಟು ಉತ್ತಮವಾಗಿತ್ತು.
2023 ರಲ್ಲಿ, ಬೈಜುಸ್ 3 ದಶಲಕ್ಷ ಪಾವತಿಸಿದ ಚಂದಾದಾರರನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಅದರ ಚಂದಾದಾರರ ಸಂಖ್ಯೆಯ ಬಗ್ಗೆ ಗಮನಿಸಬೇಕಾದ ಒಂದು ಅಂಶವೆಂದರೆ ಅವರಲ್ಲಿ ಸುಮಾರು ಶೇ 60ರಷ್ಟು ಸಣ್ಣ ಪಟ್ಟಣಗಳಿಂದ ಅಥವಾ ಗ್ರಾಮೀಣ ಪ್ರದೇಶಗಳಿಂದ ಬಂದವರು. ವೃತ್ತಿಪರ ಕೋರ್ಸ್ಗಳ ಬಗ್ಗೆ ಮಧ್ಯಮ ವರ್ಗದ ಆಕರ್ಷಣೆಯು ಗ್ರಾಮೀಣ ಮಧ್ಯಮ ವರ್ಗದವರನ್ನೂ ಆವರಿಸಿರುವುದನ್ನು ಇದು ತೋರಿಸುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಸಂಭಾವ್ಯ ಪ್ರತಿಫಲದಾಯಕ ವೃತ್ತಿಜೀವನದ ಅನ್ವೇಷಣೆಯಲ್ಲಿ ತುಲನಾತ್ಮಕವಾಗಿ ಹಿಂದುಳಿದವರಿಗೆ ಬೈಜುಸ್ ಯಶಸ್ಸಿಗೆ ಸುಲಭ ಹಾದಿಯಾಗಿತ್ತು.
ದುಬಾರಿ ಶುಲ್ಕಗಳು ಮತ್ತು ಸಿಬ್ಬಂದಿ ಸಮಸ್ಯೆ
ಐಐಟಿ-ಜೆಇಇ ಕೋಚಿಂಗ್‌ಗೆ ಬೈಜುಸ್ ವಿದ್ಯಾರ್ಥಿಯಿಂದ 95,000 ರೂ., ನೀಟ್ ಕೋಚಿಂಗ್‌ಗೆ 1,35,000 ರೂ, 7 ನೇ ತರಗತಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 3500 ರೂ, 8 ನೇ ತರಗತಿ ವಿದ್ಯಾರ್ಥಿಗೆ ತಿಂಗಳಿಗೆ 4,000 ರೂ ಆನ್‌ಲೈನ್ ಬೋಧನೆಯ ಭಾಗವಾಗಿ ವಿಧಿಸಲಾಗುತ್ತದೆ. ಕೆಲವು ಪುಸ್ತಕಗಳು, ಕೋರ್ಸ್ ಸಾಮಗ್ರಿಗಳು, ಟ್ಯಾಬ್ಲೆಟ್‌ಗಳು ಎಂದು ಕರೆಯಲ್ಪಡುವ ಆನ್‌ಲೈನ್ ಮಾಡ್ಯೂಲ್‌ಗಳು ಮತ್ತು ಕೆಲವು ಆನ್‌ಲೈನ್ ಉಪನ್ಯಾಸಗಳನ್ನು ನೀಡಿತು. 2021 ರ ಹೊತ್ತಿಗೆ, ಫ್ಲಿಪ್‌ಕಾರ್ಟ್ ತದನಂತರದಲ್ಲಿ ಬೈಜುಸ್ ಭಾರತದಲ್ಲಿ ಎರಡನೇ ಅತ್ಯಂತ ಯಶಸ್ವಿ ಸ್ಟಾರ್ಟ್ಅಪ್ ಆಗಿ ಮಾರ್ಪಟ್ಟಿದೆ. ನಂತರದಲ್ಲಿ ಅದರ ಕುಸಿತ ಆರಂಭವಾಗಿದೆ.
2022 ರ ಹೊತ್ತಿಗೆ, ಬೈಜುಸ್‌ನ ಗುಳ್ಳೆ ಸ್ಫೋಟಿಸಿತ್ತು. ಹೆಚ್ಚಿನ ಸಂಖ್ಯೆಯ ಶಿಕ್ಷಕರು ಮತ್ತು ಇತರ ವಿಷಯಗಳನ್ನು ಸಿದ್ಧಪಡಿಸುವ ಉದ್ಯೋಗಿಗಳನ್ನು ತನ್ನ ಸಾಮರ್ಥ್ಯವನ್ನು ಮೀರಿ ನೇಮಿಸಿಕೊಂಡಿದೆ ಎಂದು ಅರಿತುಕೊಂಡ ಸಂಸ್ಥೆಯು 2022-23ರಲ್ಲಿ 5000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತು. ತನ್ನ ಉತ್ಕರ್ಷದ ದಿನಗಳಲ್ಲಿ ವಿದೇಶಿ ಹಣಕಾಸು ಹೂಡಿಕೆದಾರರಿಂದ 2.5 ಬಿಲಿಯನ್ ಡಾಲರ್‌ವರೆಗೆ ಸಾಲ ಪಡೆಯಿತು. 2023 ರಲ್ಲಿ ಸಾಲವನ್ನು ಹಿಂದಿರುಗಿಸಲು ಅಥವಾ ಬಡ್ಡಿಯನ್ನು ಪಾವತಿಸಲು ಸಾಧ್ಯವಾಗದಿದ್ದುದರಿಂದ ಮರುಪಾವತಿ ಮಾಡುವಲ್ಲಿ ವಿಫಲವಾಗಿದೆ. 2021-22ರ ಹಣಕಾಸು ಖಾತೆಗಳನ್ನು ಪೂರ್ಣಗೊಳಿಸಲು ಮತ್ತು ಕಡ್ಡಾಯ ವಾರ್ಷಿಕ ಹಣಕಾಸು ಹೇಳಿಕೆಯನ್ನು ಬಿಡುಗಡೆ ಮಾಡಲು ಉದ್ದಿಮೆಯಿಂದ ಸಾಧ್ಯವಾಗಲಿಲ್ಲ. ತನ್ನ ಈ ಆರ್ಥಿಕ ಅನೌಚಿತ್ಯವನ್ನು ಸಹಿಸಲಾಗದೆ ಬೈಜೂಸ್‌ನ ಲೆಕ್ಕಪರಿಶೋಧಕ Deloitte ಕಂಪನಿಯನ್ನು ತೊರೆದರು. ತದನಂತರ ಸರ್ಕಾರಿ ಸಂಸ್ಥೆಗಳಿಂದ ದಾಳಿಗಳು ಆರಂಭವಾದವು. ಜಾರಿ ನಿರ್ದೇಶನಾಲಯವು ಬೈಜೂಸ್ ಕಚೇರಿಯಲ್ಲಿ ಶೋಧ ನಡೆಸಿದ್ದು ಕೆಲವು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೊಂಡಿದೆ.
ಬೈಜುಸ್ ಬಂಡವಾಳಶಾಹಿ ಸಾಹಸ
ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವ್ಯವಹಾರಗಳ ಉತ್ಕರ್ಷ ಮತ್ತು ಕುಸಿತ ಸಾಮಾನ್ಯವಾಗಿರುತ್ತದೆ. ಆದರೆ ಬೈಜುಸ್ ಒಂದು ಅಸಾಧಾರಣ ಪ್ರಕರಣವಾಗಿ ಎದ್ದು ಕಾಣುತ್ತದೆ. ಇದು ಆಕ್ರಮಣಕಾರಿ ಮಾರ್ಕೆಟಿಂಗ್ ತಂತ್ರವನ್ನು ಅಳವಡಿಸಿಕೊಂಡಿತು. ಬೈಜುಸ್‌ನ ಜಾಹೀರಾತುಗಳನ್ನು ಎಲ್ಲೆಡೆ, ಎಲ್ಲೆಂದರಲ್ಲಿ ನೋಡಬಹುದಿತ್ತು. ಹೊಸ ತಂತ್ರಜ್ಞಾನಗಳು ಉಪಯೋಗಕ್ಕೆ ಬಂದವು. ಅಂತರ್ಜಾಲದಲ್ಲಿ ನೀವು ಯಾವ ವೆಬ್‌ತಾಣಕ್ಕೆ ಭೇಟಿ ನೀಡಲು ಪ್ರಯತ್ನಿಸಿದರೂ, ಕೆಲವು ಬೈಜುಗಳ ಜಾಹೀರಾತು ಪಾಪ್ ಅಪ್ ಆಗುತ್ತದೆ. ಬೈಜುಸ್‌ನ ಉದ್ಯೋಗಿಗಳ ದೊಡ್ಡ ಸೈನ್ಯವು ಆನ್‌ಲೈನ್‌ನಲ್ಲಿ ರಚಿಸಿದ ಪ್ರತಿಯೊಂದು ವಿಷಯಾಧಾರಿತ ಬೆಳವಣಿಗೆಯ ಬಗ್ಗೆ ಉಚಿತ ಸುದ್ದಿ ವಿಶ್ಲೇಷಣೆಯನ್ನು ಅಪ್ಲೋಡ್ ಮಾಡಿದೆ ಮತ್ತು ಈ ಉಚಿತ ವಿಷಯದ ಮೂಲಕ ಬ್ರೌಸ್ ಮಾಡಲು ಬಯಸುವ ಎಲ್ಲರ ಇ-ಮೇಲ್ ಐಡಿ ಅಥವಾ ಫೋನ್ ಸಂಖ್ಯೆಗಳನ್ನು ಸಂಗ್ರಹಿಸುತ್ತದೆ. ಒಮ್ಮೆ ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿದ ನಂತರ, ಬೈಜುಸ್ ಪ್ರತಿದಿನ ಹಲವಾರು ಸಂದೇಶಗಳೊಂದಿಗೆ ಅವರ ಮೇಲೆ ದಾಳಿ ಮಾಡುತ್ತದೆ. ಈ ಆಕ್ರಮಣಕಾರಿ ಆನ್ ಲೈನ್ ಜಾಹೀರಾತು ಎಷ್ಟು ಹಾಸ್ಯಾಸ್ಪದ ಪ್ರಮಾಣವನ್ನು ತಲುಪಿದೆಯೆಂದರೆ, 70 ರ ವಯೋವೃದ್ಧ ಮಹಿಳೆಯೂ ಸಹ ಹದಿಹರೆಯದವರಿಗಾಗಿ ಇದ್ದ ಆನ್‌ಲೈನ್ ಕೋರ್ಸ್‌ಗಳ ಜಾಹೀರಾತುಗಳ ಬಗ್ಗೆ ದಿನಕ್ಕೆ 20-30 ಸಂದೇಶಗಳನ್ನು ಪಡೆಯುತ್ತಿದ್ದರು ! ಜಾಹೀರಾತು ವೆಚ್ಚಗಳು ಬೈಜುಸ್‌ನ ಒಟ್ಟು ವೆಚ್ಚದ 80% ರಷ್ಟಿದೆ.
ಇದು ರಸ್ತೆಬದಿಯ ದುಷ್ಕರ್ಮಿಗಳಿಂದ ಯುವತಿಯರು ಎದುರಿಸುತ್ತಿರುವ ಕಿರುಕುಳಕ್ಕೆ ಹೋಲುವ ಒಂದು ರೀತಿಯ ಆನ್ ಲೈನ್ ಹಿಂಬಾಲಿಸುವಿಕೆಗೆ ಸಮನಾಗಿತ್ತು. ಈ ಹೊಸ ಆಕ್ರಮಣಕಾರಿ ಉದ್ಯಮಶೀಲತೆಯ ಹಿಂದಿರುವ ನೈತಿಕ ಮಾನದಂಡಗಳು ಹೀಗೆಯೇ ಕಾಣುತ್ತವೆ. ಬೈಜುಸ್‌ನ ವ್ಯವಹಾರದ ಉಲ್ಬಣ ಹಣಕಾಸು ಒದಗಿಸುವ ಸಂಸ್ಥೆಗಳನ್ನು ಆಕರ್ಷಿಸಿತು. ವಿಸ್ತರಣೆಗೆ ಹೂಡಿಕೆ ಮಾಡಲು ಹಣವನ್ನು ನೀಡಲು ಹೂಡಿಕೆ ಸಂಸ್ಥೆಗಳು ಸಾಲುಗಟ್ಟಿ ನಿಂತವು. ಉದ್ದಿಮೆಯೂ ಬೆಳೆಯುತ್ತಲೇ ಹೋಯಿತು.
ಇದನ್ನೂಓದಿ:ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಶುಲ್ಕ ಪಡೆಯುವಂತಿಲ್ಲ: ರಾಜ್ಯ ಸರ್ಕಾರ ಸುತ್ತೋಲೆ
ಭಾರತದಲ್ಲಿ ಆನ್‌ಲೈನ್ ಪರ್ಯಾಯಗಳು
ಸಾಂಕ್ರಾಮಿಕದ ನಂತರದ ಚೇತರಿಕೆಯ ಜೊತೆಗೆ, ಶಾಲೆಗಳು ಮತ್ತು ಕಾಲೇಜುಗಳನ್ನು ಮತ್ತೆ ತೆರೆದ ನಂತರದಲ್ಲಿ Ed-Tech ಬೆಳವಣಿಗೆಯ ತನ್ನ ಪೂರ್ಣ ಮಿತಿಯನ್ನು ತಲುಪಲು ಕಾರಣವಾದ ಇತರ ಕೆಲವು ಅಂಶಗಳು ಸಹ ಇದ್ದವು. ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಅದರ ತಪ್ಪಾದ ಆದ್ಯತೆಗಳ ಪರಿಣಾಮವಾಗಿ ಟ್ಯೂಷನ್ ಸಂಸ್ಕೃತಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತ್ತು. ಪೋಷಕರು ತಮ್ಮ ಮಕ್ಕಳನ್ನು ನೆರೆಹೊರೆಯ ಸಾಧಾರಣ ಕೋಚಿಂಗ್ ಕೇಂದ್ರಗಳಲ್ಲಿ ಅಧ್ಯಯನ ಮಾಡಲು ದೈಹಿಕವಾಗಿ ಕಳುಹಿಸಲು ಆದ್ಯತೆ ನೀಡಿದರು. ಏಕೆಂದರೆ ವಿದ್ಯಾರ್ಥಿಯ ಕಲಿಕೆಯ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಆನ್‌ಲೈನ್ ಟ್ಯೂಷನ್‌ಗಳು ಅಸಮರ್ಥವಾಗಿದ್ದವು ಹಾಗೂ ಪರೀಕ್ಷೆಗಳಲ್ಲಿ ಮಗುವಿನ ಕಡಿಮೆ ಅಂಕಗಳಿಕೆಗೆ ಆನ್‌ಲೈನ್ ಟ್ಯೂಷನ್‌ಗಳೇ ಕಾರಣ ಎಂದು ದೂಷಿಸಲಾಯಿತು. ಆದ್ದರಿಂದ ಪೋಷಕರು ಕೋಚಿಂಗ್ ಕೇಂದ್ರಗಳಲ್ಲಿ ನೇರ ಬೋಧನೆಗೆ ಮರಳಲು ಆದ್ಯತೆ ನೀಡಿದರು. ಆನ್‌ಲೈನ್ ಬೋಧನೆಯ ವೇಗವನ್ನು ನಿಭಾಯಿಸಲು ಸಾಧ್ಯವಾಗದಿದ್ದುದರಿಂದ ಬೈಜುಸ್ ಚಂದಾದಾರರಲ್ಲಿ ನಿರ್ಗಮನದ ಪ್ರಮಾಣವು ಸುಮಾರು ಶೇ 15ರಷ್ಟಿತ್ತು. ಇದು ಸಾಮಾನ್ಯ ಶಾಲೆಗಳಲ್ಲಿ ಶಾಲೆಯಿಂದ ಹೊರಗುಳಿಯುವ ಪ್ರಮಾಣಕ್ಕೆ ಸಮನಾಗಿ ಕಾಣುತ್ತದೆ. ಅಂದರೆ 1 ಲಕ್ಷ ರೂ.ಗಳ ಪೂರ್ವ ಪಾವತಿಯ ನಂತರವೂ ಅನೇಕ ವಿದ್ಯಾರ್ಥಿಗಳು ನಿಭಾಯಿಸಲು ಸಾಧ್ಯವಾಗದೆ ಬೈಜುಸ್ ಕೋರ್ಸ್‌ನಿಂದ ಹೊರಗುಳಿದರು.
ಸಮಾನಾಂತರವಾಗಿ, ಉತ್ತರ ಪ್ರದೇಶದಂತಹ ಅನೇಕ ರಾಜ್ಯ ಸರ್ಕಾರಗಳು ಬಡ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ಬೋಧನೆಯನ್ನು ಪ್ರಾರಂಭಿಸಿದವು. ಇದಲ್ಲದೆ, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮತ್ತು ಬೆಂಗಳೂರು ಮೂಲದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಂಸ್ಥೆಗಳೊಂದಿಗೆ ಸಚಿವಾಲಯದ ಜಂಟಿ ಉದ್ಯಮವಾದ “ ತಂತ್ರಜ್ಞಾನ ವರ್ಧಿತ ಕಲಿಕೆಯ ರಾಷ್ಟ್ರೀಯ ಯೋಜನೆ “ (National Programme of Technology Enhanced Learning-NPTEL) ಅಡಿಯಲ್ಲಿ ನೀಡಲಾಗುವ ಉಚಿತ ಆನ್‌ಲೈನ್ ಕೋರ್ಸ್‌ಗಳ ವ್ಯಾಪ್ತಿಯನ್ನು ಕೇಂದ್ರ ಶಿಕ್ಷಣ ಸಚಿವಾಲಯವು ವ್ಯಾಪಕವಾಗಿ ವಿಸ್ತರಿಸಿದೆ. ಐಐಟಿ ಮತ್ತು ಐಐಎಸ್‌ಸಿಯ ಅನೇಕ ಅನುಭವಿ ಪ್ರಾಧ್ಯಾಪಕರು ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಚಿತ ಆನ್‌ಲೈನ್ ಉಪನ್ಯಾಸಗಳು ಮತ್ತು ಸಂವಾದಾತ್ಮಕ ಬೋಧನೆಯನ್ನು ಸಹ ಉಚಿತವಾಗಿ ನೀಡಲಾರಂಭಿಸಿದರು. NPTEL ನೀಡುವ ಈ ಅನ್‌ಲೈನ್ ಶಿಕ್ಷಣದ ಪಠ್ಯ ವಿಷಯದ ಗುಣಮಟ್ಟವು ಬೈಜುಸ್ ನೀಡುವ ಪಾಠಗಳಿಗಿಂತ ಉತ್ತಮವಾಗಿದೆ.
ಹೆಚ್ಚುವರಿಯಾಗಿ, ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚಿನ ಆನ್‌ಲೈನ್ ತರಗತಿಗಳನ್ನು ಭಾರತೀಯ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳು ಜೂಮ್ ಮೂಲಕ ನಡೆಸಿದವು. ಜೂಮ್ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದರೂ, ಇದು ಬಲವಾದ ಚೀನೀ ಸಂಪರ್ಕಗಳನ್ನು ಹೊಂದಿದೆ, ಏಕೆಂದರೆ ಮೂರು ಕಂಪನಿಗಳಲ್ಲಿ ಎರಡು ಚೀನೀ ಕಂಪನಿಗಳಾಗಿವೆ ಮತ್ತು ಮೂರನೆಯದರ ಮಾಲೀಕತ್ವ ಇನ್ನೂ ಅಸ್ಪಷ್ಟವಾಗಿದೆ ಮತ್ತು ಜೂಮ್ ಬಳಸುವ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಚೀನೀಯರು ಪೂರೈಸುತ್ತಾರೆ ಮತ್ತು ಜೂಮ್ ಮೀಟಿಂಗುಗಳ ದತ್ತಾಂಶಗಳನ್ನು ಚೀನಾದ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಜೂಮ್ ಮೂಲಕ ಜೀವರಸಾಯನಶಾಸ್ತ್ರದಲ್ಲಿ ಉಪನ್ಯಾಸವನ್ನು ನಡೆಸಿದರೆ, ವಿಷಯವು ಜೂಮ್ ಆಸ್ತಿಯಾಗುತ್ತದೆ ಮತ್ತು ಜೂಮ್ ನಂತಹ ವಿದೇಶಿ ಕಂಪನಿ ಅಥವಾ ಗೂಗಲ್ ಮೀಟ್ ಅಪ್ಲಿಕೇಶನ್‌ಗಳಿಂದ ಆ ವಿಷಯವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಪ್ಪಿಸುವ ಯಾವುದೇ ಡಿಜಿಟಲ್ ದತ್ತಾಂಶ ಅಥವಾ ಗೌಪ್ಯತೆ ಕಾನೂನು ಭಾರತದಲ್ಲಿ ಇಲ್ಲ. ಅನೇಕ ಚೀನೀ ಕಂಪನಿಗಳು ಅಂತಹ ಉಪನ್ಯಾಸಗಳನ್ನು ಮರು ಪ್ಯಾಕ್ ಮಾಡಿ ಆಫ್ರಿಕಾ, ಮಲೇಷ್ಯಾ ಮತ್ತು ಫಿಲಿಪೈನ್ಸ್ ಇತ್ಯಾದಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಗ್ರಾಹಕರಿಗೆ ಮಾರಾಟ ಮಾಡಿದವು. ಅವರು ಅವುಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಅಪ್‌ಲೋಡ್ ಮಾಡಿದ್ದಾರೆ ಅಥವಾ ತುಲನಾತ್ಮಕವಾಗಿ ಅತ್ಯಂತ ಅಗ್ಗದ ದರದಲ್ಲಿ ನೀಡುತ್ತಾರೆ. ಈ ವಿಷಯಗಳು ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಇದೇ ರೀತಿಯ ಪಾಠಗಳನ್ನು ಕಲಿಯಲು ಬೈಜುಸ್‌ಗೆ 1 ಲಕ್ಷ ರೂ.ಗಳನ್ನು ಏಕೆ ಪಾವತಿಸಬೇಕು ಎಂಬ ಪ್ರಶ್ನೆ ಸ್ವಾಭಾವಿಕವಾಗಿ ಮೂಡಿದ ಪರಿಣಾಮ ಮಧ್ಯಮ ವರ್ಗಗಳಲ್ಲಿ ಬೈಜುವಿನ ಪವಾಡವು ಮಸುಕಾಗಲು ಪ್ರಾರಂಭಿಸಿತು.
ಆದರೆ ಆನ್‌ಲೈನ್ ಕೋಚಿಂಗ್ ಭಾರತಕ್ಕೆ ಬಂದಿದ್ದು ಇದು ಭಾರತದ ಮಧ್ಯಮ ವರ್ಗಗಳ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಉಳಿಯುತ್ತದೆ. ಏಪ್ರಿಲ್ 2021 ರಲ್ಲಿ ಬೈಜುಸ್ 950 ಮಿಲಿಯನ್ ಅಮೆರಿಕನ್ ಡಾಲರ್ಸ್‌ಗೆ ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆ ಪೂರ್ವಸಿದ್ಧತಾ ಸೇವೆಗಳನ್ನು ಒದಗಿಸುವ ಆಕಾಶ್ ಎಜುಕೇಶನ್ ಸರ್ವೀಸಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಂಡಿತು. ಆಕಾಶ್-ಬೈಜುಸ್ ಈಗ ತರಗತಿಯ ಕೋಚಿಂಗ್ ಕಾರ್ಯಕ್ರಮಗಳು ಮತ್ತು ಡಿಜಿಟಲ್ ಮತ್ತು ದೂರದ ಕಲಿಕೆಯ ಕಾರ್ಯಕ್ರಮಗಳನ್ನು ಸಂಯೋಜಿಸುತ್ತದೆ. ಆಕಾಶ್-ಬೈಜುಸ್ ಇನ್ಸ್‌ಟಿಟ್ಯೂಟ್‌ನ ಸುಮಾರು 1,06,870 ವಿದ್ಯಾರ್ಥಿಗಳು 2023ರ ನೀಟ್ ಯುಜಿ ಪರೀಕ್ಷೆಗೆ ರಾಷ್ಟ್ರೀಯವಾಗಿ ಅರ್ಹತೆ ಪಡೆದಿದ್ದಾರೆ ಎಂದು ಆಕಾಶ್-ಬೈಜುಸ್ ಈಗ ಹೇಳಿಕೊಂಡಿದೆ. ವಿಶಾಲ ಮಧ್ಯಮ ವರ್ಗದ ವಿದ್ಯಾರ್ಥಿ ಸಮುದಾಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬೈಜುಸ್ ಕೋಚಿಂಗ್ ಕಾರ್ಯಕ್ರಮಗಳ ನಿರಂತರ ಜನಪ್ರಿಯತೆಯನ್ನು ಇದು ವಿವರಿಸುತ್ತದೆ. ಈ ವರ್ಷ ಸುಮಾರು 20 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದಾರೆ ಮತ್ತು ಅವರಲ್ಲಿ 11.46 ಲಕ್ಷ ಮಂದಿ ಅರ್ಹತೆ ಪಡೆದಿದ್ದಾರೆ ಎಂದು ಪರಿಗಣಿಸಿದರೆ, ಬೈಜುಸ್‌ನಂತಹ ಆನ್‌ಲೈನ್ ಕೋಚಿಂಗ್ ಕಾರ್ಯಕ್ರಮಗಳು ಇನ್ನೂ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವುದು ಸ್ಪಷ್ಟವಾಗುತ್ತದೆ.
ಆರ್ಥಿಕ ಬಿಕ್ಕಟ್ಟುಗಳ ಸುಳಿಯಲ್ಲಿ
ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಗಳಿಂದ ಇನ್ನೂ ಹೆಚ್ಚಿನ ಸಾಲಗಳನ್ನು ಸಂಗ್ರಹಿಸಲು ಬೈಜುಸ್ ಅಂತಹ ಪ್ರಭಾವಶಾಲಿ ಅಂಕಿಅಂಶಗಳನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಬೈಜುಸ್ 4 ಬಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ಪಡೆದಿದ್ದು ಆಕಾಶ್‌ನಂತಹ ಮೂರು ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು 2 ಬಿಲಿಯನ್ ಅಮೆರಿಕನ್ ಡಾಲರ್ ಖರ್ಚು ಮಾಡಿದೆ. ಬೈಜುಸ್‌ನ ಬಾಕಿ ಸಾಲಗಳು ಈಗ 1.2 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಮಾರ್ಚ್ 2022 ರಲ್ಲಿ, ರೇಟಿಂಗ್ ಏಜೆನ್ಸಿಗಳು ಬೈಜುಸ್ ಸಂಸ್ಥೆಯ ಮೌಲ್ಯವನ್ನು 22 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ನಿಗದಿಪಡಿಸಿದ್ದವು. ಆದರೆ ಬೈಜುಸ್‌ನ ಅತಿದೊಡ್ಡ ಷೇರುದಾರ ಉದ್ದಿಮೆಯಾದ Prosus ಈಗ ಮೌಲ್ಯಮಾಪನವನ್ನು 5.1 ಬಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ ಇಳಿಸಿದೆ. ಮೌಲ್ಯಮಾಪನದಲ್ಲಿ ಅಂತಹ ತೀವ್ರ ಕುಸಿತದೊಂದಿಗೆ, ಬೈಜುಸ್‌ಗೆ ಸಾಲದಾತರು ಸ್ವಾಭಾವಿಕವಾಗಿ ಭಯಭೀತರಾಗುತ್ತಾರೆ ಮತ್ತು ತಮ್ಮ ಹಣವನ್ನು ಹಿಂಪಡೆಯಲು ಪ್ರಾರಂಭಿಸುತ್ತಾರೆ. ಇತ್ತೀಚೆಗೆ 6 ಜೂನ್ 2023 ರಂದು 40 ದಶಲಕ್ಷ ಡಾಲರ್ ಸಾಲ ಮರುಪಾವತಿಗೆ ಗಡುವನ್ನು ಎದುರಿಸಿದಾಗ ಬೈಜುಸ್ ಮರುಪಾವತಿ ಮಾಡಲು ವಿಫಲವಾಯಿತು ಮತ್ತು ಬೈಜುಸ್‌ನ ಸಿಇಒ ರವೀಂದ್ರನ್ ಸಾಲಗಳನ್ನು ಪುನರ್ರಚಿಸಲು ಹತಾಶ ಮಾತುಕತೆಗಳಲ್ಲಿ ತೊಡಗಿದರು. ಅದರ ಬೃಹತ್ ಸಾಲ ಸಂಸ್ಕೃತಿ ಈಗ ಬೈಜುಸ್ ಉದ್ದಿಮೆಯನ್ನು ಕಾಡುತ್ತಿದೆ. ವ್ಯವಹಾರವನ್ನು ನಡೆಸಲು ಸಾಲದ ಮೂಲಕ ಹಣಕಾಸು ಹೊಂದಿಸುವ ಜೂಜಾಟವು ಬೈಜುಸ್‌ಗೆ ಸ್ಪಷ್ಟವಾಗಿ ಹಿನ್ನಡೆಯನ್ನುಂಟು ಮಾಡಿದೆ.
ಸೆಲೆಬ್ರಿಟಿಗಳ ಜಾಹೀರಾತುಗಳಿಗೆ ಬೈಜುಸ್ ಉದ್ದಿಮೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತನ್ನ ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳನ್ನು ಆಕರ್ಷಿಸಲು ಅದು ತನ್ನ ಜಾಹೀರಾತುಗಳಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಸಂಪೂರ್ಣವಾಗಿ ಬಳಸಿಕೊಂಡಿತು. ಆರ್ಯನ್ ಖಾನ್ ಮಾದಕವಸ್ತು ಸೇವನೆ ವಿವಾದಕ್ಕೆ ಸಿಲುಕಿದ ಮೇಲೆ ಅವರನ್ನು ಕೈಬಿಡಬೇಕಾಯಿತು. ಐಪಿಎಲ್ ಜಾಹೀರಾತಿಗೆ ಬೈಜುಸ್ ಪ್ರಮುಖ ಪ್ರಾಯೋಜಕತ್ವ ವಹಿಸಿತ್ತು. ಐಪಿಎಲ್ ತಂಡಗಳ ಆಟಗಾರರು ಬೈಜು ಅವರ ಹೆಸರನ್ನು ಹೊಂದಿರುವ ಜರ್ಸಿಗಳನ್ನು ಧರಿಸಿದ್ದರು. ಬಿಕ್ಕಟ್ಟಿನ ನಂತರ, ಬೈಜುಸ್ ಬಿಸಿಸಿಐಗೆ ಆದಾಯವನ್ನು ಪಾವತಿಸಲು ಸಾಧ್ಯವಾಗಲಿಲ್ಲ ಮತ್ತು ಫ್ಯಾಂಟಸಿ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್ 11 ಬೈಜುಸ್ ಸ್ಥಾನವನ್ನು ತುಂಬಿತು.
ಏತನ್ಮಧ್ಯೆ, ಬೈಜು ರವೀಂದ್ರನ್ ಸೇರಿದಂತೆ ಬೈಜುಸ್‌ನ ಪ್ರವರ್ತಕರು ಖಾಸಗಿ ವಹಿವಾಟುಗಳಲ್ಲಿ 400 ಮಿಲಿಯನ್ ಡಾಲರ್ ಮೌಲ್ಯದ ಬೈಜು ಷೇರುಗಳನ್ನು ಇತರರಿಗೆ ಮಾರಾಟ ಮಾಡಿದ್ದಾರೆ ಮತ್ತು ಇದು 2016 ರ ಹಣಕಾಸು ವರ್ಷದಲ್ಲಿ 71.6% ರಿಂದ ಈಗ 21.2% ಕ್ಕೆ ಇಳಿದಿದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. ಇದರರ್ಥ ಪ್ರವರ್ತಕರು ತಮ್ಮ ಸ್ವಂತ ಕಂಪನಿಗೆ ಉಜ್ವಲ ಭವಿಷ್ಯವನ್ನು ನೋಡದೆ ಮುಳುಗುತ್ತಿರುವ ಹಡಗಿನಿಂದ ಪಲಾಯನ ಮಾಡುತ್ತಿದ್ದಾರೆಯೇ ?
12 ವರ್ಷಗಳಲ್ಲಿ 2 ಲಕ್ಷ ರೂ.ಗಳಿಂದ 42,000 ಕೋಟಿ ರೂ.ಗಳಿಗೆ ಏರಿರುವುದು ನಿಜಕ್ಕೂ ಅವಾಸ್ತವಿಕ ಏರಿಕೆಯಾಗಿಯೇ ಕಾಣುತ್ತದೆ. ಅಂತಹ ಹಿನ್ನೆಲೆಯೊಂದಿಗೆ, ಬೈಜುಸ್‌ನ ಮಾರುಕಟ್ಟೆ ಸಾಮರ್ಥ್ಯವನ್ನು ಗಮನಿಸಿದರೆ, ಕಂಪನಿಯು ತನ್ನ ಆರ್ಥಿಕ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಬೈಜುಸ್‌ನ ರವೀಂದ್ರನ್ ಭರವಸೆ ವ್ಯಕ್ತಪಡಿಸಿದ್ದಾರೆ. ಇದು ವಾಸ್ತವಿಕ ಆಶಾವಾದವೇ ಅಥವಾ ಆಕಾಂಕ್ಷೆಯೇ ಎಂದು ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಆದರೆ ಬೈಜುಸ್ ಸುಸ್ಥಿರವಲ್ಲದ ಬೃಹತ್ ಸಾಲಗಳ ಹೊರೆಯನ್ನು ಹೊತ್ತಿದೆ ಎಂಬುದು ವಾಸ್ತವವಾಗಿದೆ. ಈ ಸಾಲಗಳ ಭಾರದಲ್ಲಿ ಕಂಪನಿಯು ಮುಳುಗುತ್ತದೆಯೇ ಮತ್ತು ಹಾಗಿದ್ದರೆ ಯಾವಾಗ ಮತ್ತು ಹೇಗೆ ಎಂಬುದನ್ನು ಕಾದು ನೋಡಬೇಕಾಗಿದೆ. ಋಣಾಧಾರಿತ ಹಣಕಾಸು ಹೊಂದಿಸುವ ಸಾಹಸಿ ಬಂಡವಾಳಶಾಹಿಗೆ ಬೈಜುಸ್ ಮಾದರಿಯಾಗಿದೆ. ಆದರೆ ಉತ್ಕರ್ಷದ ಗುಳ್ಳೆಗಳು ಅನಿವಾರ್ಯವಾಗಿ ಸ್ಫೋಟಗೊಳ್ಳುತ್ತವೆ. ಬೈಜುಸ್‌ನ ಪತನವು ಅದರ ಕ್ಷಿಪ್ರಗತಿಯ ಏರಿಕೆಯಷ್ಟೇ ವೇಗವಾಗಿದೆ !
ಇದು ಶಿಕ್ಷಣ ಸಂಸ್ಥೆ ಅಲ್ಲ ಜನರಿಂದ ದುಡ್ಡು ಲೂಟಿ ಮಾಡುವ ಸಂಸ್ಥೆಯಾಗಿದೆ ಅಡ್ಮಿಶನ್ ಮಾಡಿಸಿಕೊಳ್ಳೋ ಟೈಮ್ ಅಲ್ಲಿ ಹೇಳೋದೊಂದು ಮಾಡೋದೊಂದು ಇತರ ಆಗಿದೆ ನಮ್ಮ ಮಕ್ಕಳ ಸಿಲಬಸ್ ಬೇರೆದಿತ್ತು ಇವ್ರ್ ಪಾಠ ಮಾಡ್ಸಿದ್ದೆ ಬೇರೆ ಮತ್ತೆ ಹೋಗಿ ಕೇಳಿದರೆ ಆ ಸಿಲಬಸ್ ಮಕ್ಕಳು ಇನ್ನು ಜಾಯಿನ್ ಆಗ್ಬೇಕು ಅಂತ ಹೇಳಿದ್ರು ಆಗಿದ್ ತಕ್ಷಣ ಸ್ಟಾರ್ಟ್ ಮಾಡ್ತೀನಿ ಅಂತ ಹೇಳಿದ್ರು ನಮ್ಮ ಮಗುಗೆ ಪ್ರಯೋಜನ ಆಗ್ತಾ ಇಲ್ಲ ಅದಕ್ಕೆ ನಾವು ಸ್ಟಾಪ್ ಮಾಡ್ಸಿದಿವಿ 20000 ಅಡ್ಮಿಶನ್ ಕಟ್ಟಿಸಿಕೊಂಡರೆ ತಿಂಗಳು ತಿಂಗಳು 4000 ಚಿಲ್ದ್ರೆನ್ ಪೀಸ್ ಕಟ್ಟಿಸಿಕೊಂಡರು ಮೂರು ತಿಂಗಳು ಆದಮೇಲೆ ಸ್ಟಾಪ್ ಮಾಡ್ಸಿದ್ವಿ ನಾವು, ಇವಾಗ ಯಾರು ಅವಲ್ ಫೈನಾನ್ಸ್ ಕಂಪನಿಯಿಂದ ಫೋನ್ ಮಾಡಿ ತಲೆ ತಿಂತಾವ್ ನಮ್ಗೆ. ನೀವು ಬೈಜೂಸ್ ಎಜುಕೇಶನ್ ಲೋನ್ ತಗೊಂಡಿದೀರಾ ನಾವು ಪದೇ ಪದೇ ಬೈ ಜ್ಯೂಸ್ ರವರಿಗೆ ಈ ಸಮಸ್ಯೆ ಸರಿಪಡಿಸಿ ಅಂದ್ರೆ ಕಿವಿಗೆ ಆಗ್ತಾಯಿಲ್ಲ ನಾವು ಅಡ್ಮಿಶನ್ ಮಾಡುವ ಟೈಮಲ್ಲಿ ನಮಗೆ ಹೇಳಿಲ್ಲ ಇವ್ರು ಇತರ ನಾವು ನಿಮ್ಮ ಮಕ್ಕಳ ಹೆಸರಲ್ಲಿ ಲೋನ್ ತಗೊಂತಿವಿ ಅಂತ ಆನ್ಲೈನ್ ಪೇಮೆಂಟ್ ಇರುತ್ತೆ ಮೇಡಂ ಇದನ್ನೇ ಹೇಳಿ ಸುಳ್ಳು ಹೇಳಿ ನಮಗೆ ಬ್ಯಾಂಕ್ ಒಟಿಪಿ ಅಲ್ಲ ಪಡೆದು ವಂಚಿಸುತ್ತಿದ್ದಾರೆ ಜನರಲ್ಲಿ ನನ್ನ ಒಂದು ಮನವಿ ಯಾರು ಕೂಡ ತಮ್ಮ ಮಕ್ಕಳನ್ನು ಬೈಜೂಸಲ್ಲಿ ಸೇರಿಸಬೇಡಿ ಇದು ಶಿಕ್ಷಣ ಸಂಸ್ಥೆ ಅಲ್ಲ ಒಂದು ಲೂಟಿ ಸಂಸ್ಥೆಯಾಗಿ ಮಾರ್ಪಟ್ಟಿದೆ 9739373911