ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಘೋಷಣೆಗಳು ಎಲ್ಲಿ ಹೋದವು?

ಚಂಸು ಪಾಟೀಲ

ವಿಚಿತ್ರವೆಂದರೆ ಬೇರೆಲ್ಲ ವಸ್ತು ವಗೈರೆಗಳ ಬೆಲೆಗಳು ಏರುತ್ತಲೇ ಇರುತ್ತವೆ ಒಮ್ಮೆ ಏರಿದರೆ ಇಳಿಯುವ ಮಾತೇ ಅಪರೂಪ. ಆದರೆ, ಕೃಷಿ ಉತ್ಪನ್ನಗಳ ಬೆಲೆಗಳು ಮಾತ್ರ ಈ ಎಲ್ಲ ಬೆಲೆಗಳ ಕಾಲುಮಟ್ಟದಲ್ಲಿ ಏರುತ್ತವೆ ಮತ್ತು ಏರಿದಷ್ಟೇ ಶೀಘ್ರವಾಗಿ ಇಳಿಯುತ್ತಲೇ ಇರುತ್ತವೆ. ಮುಖ್ಯವಾಗಿ ಮಾರುಕಟ್ಟೆಯ ಈ ಅನಿಶ್ಚಿತತೆ ನಮ್ಮ ರೈತರನ್ನು ದಿಗ್ಞ್ಮೂಢರನ್ನಾಗಿಸಿದೆ. ಅಸಹಾಯಕರನ್ನಾಗಿಸಿದೆ.

2014ರಿಂದ 2019/20 ರವರೆಗೂ 2022 ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ಘೋಷಣೆಗಳು ಮೊಳಗಿದ್ದೇ ಬಂತು.

ನನಗಂತೂ ಇದರಲ್ಲಿ ಯಾವ ಅತಿಶಯೋಕ್ತಿಯೂ ಕಾಣಿಸುತ್ತಿಲ್ಲ. ಈ ಹತ್ತು ವರ್ಷಗಳ‌ಲ್ಲಿ ಯಾವ ವಸ್ತುವಿನ ಬೆಲೆ ಕಡಿತಗೊಂಡಿವೆ? ಬಹುತೇಕ ಎಲ್ಲ ವಸ್ತು/ ಪರಿಕರ/ ಸಾಮಗ್ರಿಗಳ ಬೆಲೆಯಲ್ಲಿ ವ್ಯತ್ಯಾಸ ಸಹಜವೇ. ಹಾಗೇ, ಈ ವೇಳೆಗೆ ದವಸಧಾನ್ಯ‌ಗಳ ಬೆಲೆಗಳಲ್ಲೂ ಸ್ವಲ್ಪ ಏರಿಕೆ ಸಹಜ. ಅದರಿಂದ ರೈತರ ಆದಾಯ ದುಪ್ಪಟ್ಟಾಗುತ್ತದೆ. ಆದಾಯದಲ್ಲಿ ಏರಿಕೆ ಕಂಡರೂ ಅವನ ಖರ್ಚಿನ ಬಾಬತ್ತೂ ಅದೇ ಮಟ್ಟದಲ್ಲಿ ಬೆಳೆಯುತ್ತಲೇ ಸಾಗುತ್ತದೆ. ಏಕೆಂದರೆ, ಅದೇ ಹೊತ್ತಿಗೆ ಡಿಸೇಲ್, ರಸಗೊಬ್ಬರ, ಕೀಟನಾಶಕ, ಕೃಷಿಕಾರ್ಮಿಕರ ವೇತನ ಮತ್ತು ಯಂತ್ರೋಪಕರಣಗಳ ಬೆಲೆ ಈಗ ಇರುವಷ್ಟೆ ಇರುತ್ತದೆಯೇ? ಅದೂ ಏರಿರುತ್ತದೆ ತಾನೇ?
ಒಟ್ಟಾರೆ ಇದರಿಂದ ಅವನ ಸಮಸ್ಯೆ, ಸಂಕಷ್ಟಗಳಿಗೆ ಪರಿಹಾರ ಸಿಗುವುದಿಲ್ಲ. ನೆಮ್ಮದಿಯ ಬದುಕು ಆಗಲೂ ಅವನಿಗೆ ಕನಸೆ.!

ಡಿಸೇಲಿನ ಬೆಲೆಗೂ ಕೃಷಿಗೂ ಎತ್ತಣ ಸಂಬಂಧ ಎಂದು ನೀವು ಕೇಳಬಹುದು. ಖಂಡಿತವಾಗಿಯೂ ಸಂಬಂಧ ಇದೆ. ಇವತ್ತಿನ ಕೃಷಿ, ಯಾಂತ್ರಿಕ ಕೃಷಿ! ಹೊಲ ಉಳುವುದರಿಂದ ಹಿಡಿದು ಬಿತ್ತನೆ, ಒಕ್ಕಣೆಯ ನಂತರ ಕಾಳು ಚೀಲದೊಳಕ್ಕೆ ಬಿದ್ದು ಮಾರುಕಟ್ಟೆ ಸೇರುವವರೆಗೂ ಯಂತ್ರಗಳದೆ ದೊಡ್ಡ ಪಾತ್ರ. ಡಿಸೇಲಿನ ಬೆಲೆ ಹೆಚ್ಚಾದರೆ ರೈತರು ಈ ಯಂತ್ರಗಳಿಗೆ ತೆರುವ ಬಾಡಿಗೆ ಬೆಲೆಯೂ ಹೆಚ್ಚಾಗುತ್ತದೆ. 2006ರಲ್ಲಿ ಕ್ವಿಂಟಾಲ್ ಜೋಳಕ್ಕೆ 20 ರೂ. ಇದ್ದ ಒಕ್ಕಣೆ ಬೆಲೆ ಈಗ 100ಕ್ಕೆ ತಲುಪಿದೆ. ಹೊಲ ಹರಗಲು ಆಗ 250 ರೂ. ಇದ್ದದ್ದು ಈಗ 800ಕ್ಕೆ ತಲುಪಿದೆ.

ಹೆಚ್ಚು ಇಳುವರಿಯ ದುರಾಸೆಗೆ ಬಿದ್ದಿರುವ ರೈತರು ರಸಗೊಬ್ಬರವನ್ನೂ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚೆ ಬಳಸತೊಡಗಿದ್ದಾರೆ. ಇನ್ನೊಂದೆಡೆ ರಸಗೊಬ್ಬರದ ಮೇಲಿನ ಸಹಾಯಧನವನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸುತ್ತ ಬರಲಾಗುತ್ತಿದೆ. ಆರಂಭದಲ್ಲಿ ಮುಕ್ಕಾಲು ಭಾಗ ಸಹಾಯಧನದಲ್ಲಿ ಲಭ್ಯವಿದ್ದ ರಸಗೊಬ್ಬರ ಈಗ ಅನಿವಾರ್ಯವೇ ಆಗಿಬಿಟ್ಟಿದೆ. ಇಂಥ ಸಂದರ್ಭದಲ್ಲಿ ರಸಗೊಬ್ಬರದ ಮೇಲಿನ ಸಹಾಯಧನವನ್ನು ಸ್ವಲ್ಪ ಸ್ವಲ್ಪವೆ ಕಡಿತಗೊಳಿಸುತ್ತ ಪೂರ್ಣ ಸ್ಥಗಿತಗೊಳಿಸುವ ಮಾತುಗಳು ಕೇಳಿಬರುತ್ತಿವೆ.

ಕೀಟನಾಶಕಗಳ ಬೆಲೆಗಳಂತೂ ಲೀಟರ್ ಗೆ 300 ರಿಂದ ಹಿಡಿದು 3000 ದವರೆಗೂ ಇವೆ. ನಮ್ಮ ರೈತರು ಕೀಟನಾಶಕಗಳನ್ನು ಯಾವ ರೀತಿ ಬಳಸುತಿದ್ದಾರೆ ಅಂದರೆ ಹೊಲ ಹೋಗಲಿ ಬದು ಉಳೀಲಿ ಅಂತಾರಲ್ಲ ಹಾಗೆ! ಕೃಷಿ ವಿ. ವಿ. ಗಳು ಶಿಫಾರಸು ಮಾಡಿದ ಪ್ರಮಾಣದಲ್ಲಿ ರೈತರು ಕೀಟನಾಶಕ ಬಳಸುತ್ತಾರೆ ಎಂದುಕೊಂಡರೆ ಅದು ನಮ್ಮ ಮುಠ್ಠಾಳತನವಷ್ಟೇ! ಹುಳ ಸಾಯಬೇಕು ಬೆಳೆ ಉಳೀಬೇಕು ಅನ್ನುವುದಷ್ಟೇ ಅವರ ಉದ್ದೇಶವಾಗಿರುತ್ತದೆ. ಹುಳ ಸಾಯಲಿಲ್ಲ ಎಂದರೆ ದುಪ್ಪಟ್ಟು ಪ್ರಮಾಣದ ವಿಷ ಬಳಸಿ ಮತ್ತೊಮ್ಮೆ ಸಿಂಪರಿಸುತ್ತಾರೆ.

ಯಾಂತ್ರೀಕರಣ ಹಾಗೂ ನಗರೀಕರಣದ ಪರಿಣಾಮ ಕೃಷಿ ಕಾರ್ಮಿಕರ ಅಭಾವ ಈಗಾಗಲೇ ಕೃಷಿ ಕ್ಷೇತ್ರವನ್ನು ಬಾಧಿಸುತ್ತಿದೆ. ಕಾರ್ಮಿಕರು ನಗರಗಳತ್ತ ಹೊರಳಲು ಅವರಿಗೆ ದೊರಕುತ್ತಿರುವ ಕನಿಷ್ಠ ವೇತನವೂ ಒಂದು ಮುಖ್ಯ ಕಾರಣ. ಶಹರದ ಉದ್ಯೋಗಗಳ ವೇತನಕ್ಕೆ ಹೋಲಿಸಿದರೆ ಕೃಷಿ ಕಾರ್ಮಿಕರು ಕನಿಷ್ಠವೆಂದರೂ 200 ರೂ. ಕಡಿಮೆ ವೇತನವನ್ನೇ ಪಡೆಯುತ್ತಿದ್ದಾರೆ. ತನಗೆ ಅಗತ್ಯವಿರುವ ಕಾರ್ಮಿಕರನ್ನಾದರೂ ಪಡೆಯಬೇಕೆಂದರೆ ಕೃಷಿಕರು ಆರ್ಥಿಕ ಸದೃಢತೆಯನ್ನು ಸಾಧಿಸಲೇಬೇಕಿದೆ.

ಸ್ವತಃ ತಾವೇ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಕೃಷಿಕಾರ್ಮಿಕರನ್ನು ಎಂತು ಸಲುಹಬಲ್ಲ ಕೃಷಿಕ್ಷೇತ್ರದ ಸದೃಢತೆ ಮುಖ್ಯವಾಗಿ ಕೃಷಿಕರು ಮತ್ತು ಕೃಷಿಕಾರ್ಮಿಕರ ಆರ್ಥಿಕ ಸದೃಢತೆಯನ್ನೆ ಅವಲಂಬಿಸಿರುವಂಥದೆಂಬುದನ್ನು ನಾವಿಲ್ಲಿ ಮರೆಯಬಾರದು.

ಇದನ್ನೂ ಓದಿ:ಎಪಿಎಂಸಿ ಕಾಯ್ದೆಯಿಂದ ರೈತರ ಆದಾಯಕ್ಕೆ ಪೆಟ್ಟು: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್

ಒಬ್ಬ ರೈತ ಒಂದು ಎಕರೆಯಲ್ಲಿ ಶೇಂಗಾ ಬಿತ್ತಬೇಕೆಂದರೆ 60 ಕೆಜಿ ಶೇಂಗಾ ಬೀಜ ಬೇಕು. ಶೇಂಗಾ ಬೀಜ ಕ್ವಿಂಟಾಲ್ಗೆ 6000 ರೂ. ಎಂದರೂ 60ಕೆಜಿಗೆ 3600 ರೂ. ಬೇಕು. ಕಳೆ ತೆಗೆಯಲು, ಎಡೆ ಹೊಡೆಯಲು ಕನಿಷ್ಠ 20 ಆಳಿನ ಕೆಲಸ ನಂತರದ್ದು. ಒಂದು ಆಳಿಗೆ 200 ರೂ. ಕೂಲಿ ಹಿಡಿದರೂ 4000 ರೂ. ಆಯ್ತು. ಮಳೆ ಹೆಚ್ಚಾಗಿ ಹುಲ್ಲುಗೂಡಿದರೆ ಇದು ಪುನರಾವರ್ತನೆ ಆಗಬಹುದು. ಇದರ ಮೇಲೆ ಗೊಬ್ಬರ ಇತ್ಯಾದಿಯೆಲ್ಲ ಸೇರಿ ಒಟ್ಟಾರೆ ಖರ್ಚು 15000 ರೂ. ತಲುಪುತ್ತದೆ. ಸರಾಸರಿ ಇಳುವರಿ 15/20 ಚೀಲ ಶೇಂಗಾ ಬೆಳೆದರೆ ಅದು 5/6 ಕ್ವಿಂಟಾಲ್ ಆಗುತ್ತದೆ. 6 ಕ್ವಿಂಟಾಲ್ಗೆ ಸಧ್ಯದ ಮಾರುಕಟ್ಟೆ ಬೆಲೆಯಂತೆ (5000)/ 6000 ರೂ. ಬೆಲೆ ಸಿಕ್ಕರೆ 36000ರೂ.ಆಯ್ತು. ಇದರಲ್ಲಿ ದಲಾಲಿ/ ಹಮಾಲಿ, ಸಾಗಣೆ ವೆಚ್ಚ ತೆಗೆದರೆ ಉಳಿಯೋದು 32 ಸಾವಿರವಷ್ಟೇ! ರೈತನಿಗೆ ಉಳಿದದ್ದು ಕೇವಲ 17 ಸಾವಿರ ರೂ.

ಶೇಂಗಾ ನಾಲ್ಕು ತಿಂಗಳ ಬೆಳೆ ಎಂದುಕೊಂಡರೆ ರೈತನಿಗೆ ತಿಂಗಳಿಗೆ ನಾಲ್ಕು ಸಾವಿರ ರೂ. ದಿನಕ್ಕೆ ನೂರಾ ಮೂವತ್ತಮೂರು ರೂ. ಕೂಲಿ ಸಿಕ್ಕಂತಾಯ್ತು! ಅಂದರೆ ಕೃಷಿಕಾರ್ಮಿಕರಿಗೆ ಸಿಗುತ್ತಿರುವ ಕೂಲಿಯೂ ಇವತ್ತು ರೈತನಿಗೆ ಸಿಗುತ್ತಿಲ್ಲ!

2023ಕ್ಕೆ ಬಂದು ಹೊರಳಿ ನೋಡಿದಾಗ, 2022ಕ್ಕೆ ರೈತರ ಆದಾಯ ದುಪ್ಪಟ್ಟಾಗುತ್ತದೆ ಎಂದು ಹೇಳಿಕೊಂಡು ಬಂದವರ ಬಗ್ಗೆ ಮರುಕವೆನಿಸುತ್ತದೆ. ಸಹಜವಾಗಿ ಆಗಬಹುದಾದ್ದನ್ನೆ ಆಗುತ್ತದೆ ಎಂದು ಹೇಳಿ ತಾವೇನೋ ಪವಾಡ ಮಾಡುತ್ತೇವೆ ಎಂಬಂತೆ ಬಿಂಬಿಸಿಕೊಂಡದ್ದು ಹಾಸ್ಯಾಸ್ಪದ ಎನಿಸುತ್ತದೆ. ಅದು ಏಕೆ ಮತ್ತು ಹೇಗೆಂಬುದನ್ನು ತಿಳಿಯಲು ನಾವು ಕೆಲ ವರ್ಷಗಳ ಧಾರಣಿಗಳನ್ನು.. ಅಲ್ಲಿನ ಏರಿಳಿತಗಳನ್ನೂ ಗಮನಿಸಬೇಕಾಗುತ್ತದೆ., 2007ರಲ್ಲಿ ನಾವು ಕ್ವಿಂಟಾಲ್ ಗೆ 1700 ರೂ. ಧಾರಣಿಯಲ್ಲಿ ಶೇಂಗಾ ಮಾರಿದ್ದೆವು. 2016/17ರ ಧಾರಣಿ 3400 ರೂ. ಕಳೆದ ವರ್ಷ ಅದು 4500/4600 ರೂ. ಆಗಿತ್ತು. ಈ ವರ್ಷ ಅಂದರೆ 2023 ರಲ್ಲಿ 5500/6000 ಆಗಿದೆ. ಗೋವಿನ ಜೋಳ 2006/7ರಲ್ಲಿ 500 ರೂ. ಇದ್ದದ್ದು, ನಡುವೆ 1200 ರೂ. ಗೂ ಕುಸಿದಿತ್ತು. ಅದು 2013ರಲ್ಲಿ 1800ಕ್ಕೂ ಏರಿತ್ತು. ಈ ವರ್ಷ ಅತಿವೃಷ್ಟಿಯ ಪರಿಣಾಮ ಉತ್ಪಾದನೆಯ ಪ್ರಮಾಣವೂ ಕುಸಿದು ಅದರ ಬೆಲೆ 2000/2200ಕ್ಕೆ ಏರಿದ್ದು ತದನಂತರ 1700/1800 ರೂ.ಗೆ ಕುಸಿದಿತ್ತು.

ವಿಚಿತ್ರವೆಂದರೆ ಬೇರೆಲ್ಲ ವಸ್ತು ವಗೈರೆಗಳ ಬೆಲೆಗಳು ಏರುತ್ತಲೇ ಇರುತ್ತವೆ ಒಮ್ಮೆ ಏರಿದರೆ ಇಳಿಯುವ ಮಾತೇ ಅಪರೂಪ. ಆದರೆ, ಕೃಷಿ ಉತ್ಪನ್ನಗಳ ಬೆಲೆಗಳು ಮಾತ್ರ ಈ ಎಲ್ಲ ಬೆಲೆಗಳ ಕಾಲುಮಟ್ಟದಲ್ಲಿ ಏರುತ್ತವೆ ಮತ್ತು ಏರಿದಷ್ಟೇ ಶೀಘ್ರವಾಗಿ ಇಳಿಯುತ್ತಲೇ ಇರುತ್ತವೆ. ಮುಖ್ಯವಾಗಿ ಮಾರುಕಟ್ಟೆಯ ಈ ಅನಿಶ್ಚಿತತೆ ನಮ್ಮ ರೈತರನ್ನು ದಿಗ್ಞ್ಮೂಢರನ್ನಾಗಿಸಿದೆ. ಅಸಹಾಯಕರನ್ನಾಗಿಸಿದೆ.

ಡಿಸೇಲು, ರಸಗೊಬ್ಬರ, ಕೀಟನಾಶಕ ಹಾಗೂ ಯಂತ್ರೋಪಕರಣಗಳ ಬೆಲೆ 2014/2015ರಲ್ಲಿ ಇರುವಷ್ಟೆ ಇದ್ದರೆ ಮಾತ್ರ ದುಪ್ಪಟ್ಟಾಗುವ ರೈತರ ಆದಾಯ ನಿಜವಾದ ಅರ್ಥದಲ್ಲಿ ದುಪ್ಪಟ್ಟಾಗಿರುತ್ತದೆ. ಇದು ಅಸಾಧ್ಯವಾದಲ್ಲಿ ಆಗಲೂ ಯಥಾಸ್ಥಿತಿಯೆ ಇರುತ್ತದೆ. ರೈತರ ಸಂಕಷ್ಟಗಳೂ ಆತ್ಮಹತ್ಯೆಗಳೂ ನಿರಂತರ ಮುಂದುವರೆಯುತ್ತವೆ. ಏಕೆಂದರೆ, ಕೃಷಿ, ಕೃಷಿಕ ಮತ್ತು ಕೃಷಿಕಾರ್ಮಿಕ ಈ ಮೂರು ಅಂಶಗಳ ಜೊತೆಗೆ ಆ ಸಂದರ್ಭದಲ್ಲಿನ ಈ ಎಲ್ಲ ಸಂಗತಿಗಳೂ ರೈತನ ಆದಾಯ ನಿರ್ಧರಿಸುವಲ್ಲಿ ಮಹತ್ವ ಪಡೆದಿವೆ. ಇದೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳದೆ, ಪರಾಮರ್ಶಿಸದೆ, ಅಗತ್ಯ ಕಾರ್ಯಯೋಜನೆ ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಕಾರ್ಯಗತಗೊಳಿಸದೆ ಹೋದರೆ ರೈತರ ಆದಾಯ ದುಪ್ಪಟ್ಟುಗೊಳಿಸುವ ಮಾತುಗಳು ಕೂಡ ಹಾಸ್ಯಾಸ್ಪದವಾಗುತ್ತವೆ. ಸಾಯುತ್ತಿರುವ ರೈತನನ್ನು ಉಳಿಸಿಕೊಳ್ಳುವುದೇ ಇವತ್ತಿನ ತುರ್ತಾಗಿದೆ. ಇವತ್ತಿನ ಬರ್ಬರತೆಯ ಕುರಿತು ಚಿಂತಿಸದೆ, ಯಾವುದೇ ಕಾಲಮಿತಿ ಯೋಜನೆ ರೂಪಿಸಿ, ಜಾರಿಗೊಳಿಸದೇ 2022ರಲ್ಲಿ ರೈತರ ಆದಾಯ ದುಪ್ಪಟ್ಟು ಆಗುತ್ತದೆ ಎಂದು ಹೇಳಿದ್ದು, ಹೇಳಿಕೊಂಡು ಬಂದಿದ್ದು ಬರಿ ಬೂಟಾಟಿಕೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆ. ಇಂಥ ಕಣ್ಣೊರೆಸುವ ತಂತ್ರಗಳು ಇಲ್ಲಿ ಇನ್ನೂ ಎಷ್ಟು ದಿನ ಚಾಲ್ತಿಯಲ್ಲಿರುತ್ತವೋ …!

Donate Janashakthi Media

Leave a Reply

Your email address will not be published. Required fields are marked *