ದೇಶದ 60% ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿ ಜಾರಿಯಲ್ಲಿವೆ ಎಂದ ಮುನಿಸಿಪಲ್ ಕಾರ್ಮಿಕರ ಸಂಘ ಮುಖಂಡ ಸಯೀದ್ ಮುಜೀಬ್
ವರದಿ : ಬಾಪು ಅಮ್ಮೆಂಬಳ
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ 2023ರ ಆಗಸ್ಟ್ ತಿಂಗಳ ಒಳಗೆ ‘ಮಲಹೊರುವ ಪದ್ಧತಿ ಮುಕ್ತ ಭಾರತ’ ಎಂದು ಘೋಷಿಸುವ ಗುರಿಯನ್ನು ಹಾಕಿಕೊಂಡಿದೆ. ಅದಾಗ್ಯೂ ದೇಶದ 246 ಜಿಲ್ಲೆಗಳಿಂದ ಈ ಬಗ್ಗೆ ಯಾವುದೆ ವರದಿ ಬಂದಿಲ್ಲ ಎಂದು ವರದಿಯಾಗಿದೆ. ವರದಿಯ ಪ್ರಕಾರ ದೇಶದ 766 ಜಿಲ್ಲೆಗಳ ಪೈಕಿ ಸುಮಾರು 520 ಜಿಲ್ಲೆಗಳು ಮಾತ್ರ ಮಲಹೊರುವ ಪದ್ಧತಿಯಿಂದ ಮುಕ್ತರಾಗಿರುವುದಾಗಿ ಘೋಷಿಸಿದೆ.
ಒಕ್ಕೂಟ ಸರ್ಕಾರದ ಸಾಮಾಜಿಕ ನ್ಯಾಯ ಸಚಿವ ವೀರೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗಿತ್ತು. ಈ ಸಭೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು. “ಮಲಹೊರುವ ಪದ್ಧತಿ ಮುಕ್ತ ಭಾರತ ಎಂದು ಘೋಷಿಸುವ ಗುರಿ ಹತ್ತಿರವಾಗುತ್ತಿದೆ. ಆದರೆ, ದೇಶಾದ್ಯಂತ 766 ಜಿಲ್ಲೆಗಳ ಪೈಕಿ ಇದುವರೆಗೆ 520 ಜಿಲ್ಲೆಗಳು ಮಾತ್ರ ಘೋಷಿಸಿವೆ. ಇನ್ನೂ 246 ಜಿಲ್ಲೆಗಳಿಗೆ ಅಂತಹ ವರದಿ ಬಂದಿಲ್ಲ. ಉಳಿದ ಜಿಲ್ಲೆಗಳ ರಾಜ್ಯಗಳು ಆದಷ್ಟು ಬೇಗ ಈ ವರದಿ ಕಳುಹಿಸಬೇಕು. ಏಕೆಂದರೆ ಮುಂದಿನ ತಿಂಗಳ ಅಂತ್ಯದೊಳಗೆ ಗುರಿ ತಲುಪಲಾಗಿದೆ ಎಂದು ಘೋಷಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ” ಎಂದು ಹೇಳಿದ್ದಾಗಿ ‘ದಿನತಂತಿ‘ ವರದಿ ಮಾಡಿದೆ.
ಮಲಹೊರುವ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಒಕ್ಕೂಟ ಸರ್ಕಾರ ಯೋಜಿಸಿದೆ. 2023ರ ಆಗಸ್ಟ್ ಒಳಗೆ ಭಾರತವನ್ನು ‘ಮಲಹೊರುವ ಪದ್ಧತಿ ಮುಕ್ತ’ ದೇಶವಾಗಿ ಘೋಷಿಸುವ ಗುರಿ ಹೊಂದಿದೆ. ಅಷ್ಟರೊಳಗೆ ಮಲಹೊರುವ ಪದ್ಧತಿಯನ್ನು ರದ್ದುಪಡಿಸಿ ಕೇಂದ್ರ ಸರಕಾರಕ್ಕೆ ವರದಿ ಕಳುಹಿಸುವಂತೆ ದೇಶಾದ್ಯಂತ ಎಲ್ಲ ಜಿಲ್ಲೆಗಳಿಗೂ ಆದೇಶ ನೀಡಲಾಗಿತ್ತು.
ಇದನ್ನೂ ಓದಿ: ಮ್ಯಾನ್ ಹೋಲ್ ಸ್ವಚ್ಛತೆ : ಉಸಿರುಗಟ್ಟಿ ಪೌರಕಾರ್ಮಿಕ ಸಾವು
ಮಲಹೊರುವ ಪದ್ಧತಿಯನ್ನು 2013 ರಲ್ಲಿ ನಿಷೇಧಿಸಲಾಗಿದ್ದು, ಇದರ ಮೇಲೆ ನಿಗಾ ಇಡಲು ರಾಜ್ಯ ಜಾಗೃತ ಸಮಿತಿಗಳು ಮತ್ತು ಜಿಲ್ಲಾ ಜಾಗೃತ ಸಮಿತಿಗಳನ್ನು ರಚಿಸುವಂತೆ ಆದೇಶಿಸಲಾಗಿತ್ತು. ಅದಾಗಿಯೂ ದೇಶದಲ್ಲಿ ಮಲಹೊರುವ ಪದ್ಧತಿ ಇನ್ನೂ ಜೀವಂತವಾಗಿರುವುದು ಕಂಡುಬಂದಿದೆ.
ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಕರ್ನಾಟಕ ರಾಜ್ಯ ಮುನಿಸಿಪಲ್ ಕಾರ್ಮಿಕರ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್, “ದೇಶದ 520 ಜಿಲ್ಲೆಗಳು ಮಲಹೊರುವ ಪದ್ಧತಿಯಿಂದ ಮುಕ್ತವಾಗಿವೆ ಎಂಬ ವರದಿ ಕೂಡಾ ಸುಳ್ಳಾಗಿದೆ. ಈಗಲೂ ದೇಶದ 60% ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿ ಜಾರಿಯಲ್ಲಿವೆ. ಎಲ್ಲೆಲ್ಲಾ ಭೂಗತ ಒಳಚರಂಡಿ(ಯುಜಿಡಿ | Under Ground drainage) ಇಲ್ಲವೊ, ಎಲ್ಲೆಲ್ಲಾ ಪಿಟ್ ಗುಂಡಿಗಳು ಇವೆಯೋ ಅಲ್ಲೆಲ್ಲಾ ಇನ್ನೂ ಮಲಹೊರುವ ಪದ್ಧತಿ ಜೀವಂತವಿದೆ. ಸುಪ್ರೀಂಕೋರ್ಟ್ಗೆ ಮತ್ತು ಸರ್ಕಾರಕ್ಕೆ ಸ್ಥಳೀಯ ಆಡಳಿತಗಳು ಸುಳ್ಳು ವರದಿ ಅಫಿಡವಿಟ್ಗಳನ್ನು ಸಲ್ಲಿಸಿವೆ. ಹಾಗಾಗಿ ಈ ಘೋಷಣೆಯೆ ಸುಳ್ಳಿನ ಕಂತೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ವಾಸ್ತವದಲ್ಲಿ 40% ನಗರ ಹಾಗೂ ಪಟ್ಟಣಗಳಲ್ಲಿ ಭೂಗತ ಒಳಚರಂಡಿ ಇಲ್ಲ. ಅದೂ ಅಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಪಿಟ್ ಗುಂಡಿಗಳೆ ಇರುವುದು. ಈ ಗುಂಡಿಗಳು ತುಂಬಿದಾಗ ಅದನ್ನು ನಿರ್ದಿಷ್ಟ ಸಮುದಾಯದ ಜನರು ಹೊತ್ತುಕೊಂಡು ಹೋಗುತ್ತಿದ್ದಾರೆ. ರಾಜ್ಯದ ದಕ್ಷಿಣ ಭಾಗಗಳಲ್ಲಿ ಮಾದಿಗ ಸಮುದಾಯದವರನ್ನು ಇದರಲ್ಲಿ ಕೆಲಸ ಮಾಡುವಂತೆ ಒತ್ತಾಯ ಮಾಡಲಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ
ಮಲದ ಗುಂಡಿಗಳಿಗೆ ಬಿದ್ದು ಮೃತಪಟ್ಟವರಿಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ನಿರ್ದೇಶನವಿದೆ. ಆದರೆ ಇಂತಹ ಸಾವುಗಳಲ್ಲಿ 50% ಪ್ರಕರಣಗಳು ವರದಿಯೆ ಆಗುವುದಿಲ್ಲ. ಕೆಲವೊಮ್ಮೆ ಸಂಘಟನೆಗಳ ಮೂಲಕ, ಹೋರಾಟಗಳ ಮೂಲಕ, ಮಾಧ್ಯಮ ವರದಿಗಳ ಮೂಲಕ ವರದಿಯಾದ ಸಾವುಗಳಲ್ಲೂ 50% ಪ್ರಕರಣಗಳಿಗೆ ಮಾತ್ರವೆ ಪರಿಹಾರ ನೀಡಲಾಗುತ್ತಿದೆ. ಮದ್ಯ ಸೇವಿಸಿ ಬಿದ್ದಿದ್ದಾರೆ, ಗುಂಡಿಗೆ ಇಳಿಸಿರಲಿಲ್ಲ, ಅವರಾಗಿಯೆ ಬಿದ್ದರು, ಕೆಲಸದಲ್ಲಿ ಇರಲಿಲ್ಲ ಎಂಬ ತಾಂತ್ರಿಕ ಕಾರಣಗಳನ್ನು ನೀಡಿ ಇಂತಹ ಪ್ರಕರಣಗಳನ್ನು ಮುಚ್ಚಿ ಹಾಕಲಾಗುತ್ತದೆ.
ಇಂತಹ ಸಾವುಗಳಾದಾಗ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಬೇಕು ನೀಡಬೇಕು ಎಂಬ ನಿಯಮವಿದೆ. “80% ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಸಿಕ್ಕಿಯೆ ಇಲ್ಲ. ಇದನ್ನು ನಿರಂತರವಾಗಿ ಉಲ್ಲಂಘನೆ ಮಾಡಲಾಗುತ್ತಿದೆ” ಸೈಯದ್ ಮುಜೀಬ್ ಹೇಳಿದರು.