ಉನ್ನತ ಶಿಕ್ಷಣದಲ್ಲಿ ಮೀಸಲಾತಿ ಅಸಂವಿಧಾನಿಕ : ಯು.ಎಸ್ ಸುಪ್ರೀಂ ಕೋರ್ಟು

ವಸಂತರಾಜ ಎನ್.ಕೆ

ಜೂನ್ 29 ರಂದು, ಯು.ಎಸ್ ಸುಪ್ರೀಂ ಕೋರ್ಟು ಉನ್ನತ ಶಿಕ್ಷಣಕ್ಕೆ ಜನಾಂಗ-ಆಧಾರಿತ ಪ್ರವೇಶ ನೀತಿಗಳು ಅಸಂವಿಧಾನಿಕ ಎಂದು ತೀರ್ಪು ನೀಡಿದೆ. ಮೀಸಲಾತಿಯಂತಹ  ಈ ವ್ಯವಸ್ಥೆಯನ್ನು ಯು.ಎಸ್ ನಲ್ಲಿ ‘ಸಕಾರಾತ್ಮಕ ತಾರತಮ್ಯ’ (ಪಾಸಿಟಿವ್ ಡಿಸ್ಕ್ರಿಮಿನೇಶನ್ ಅಥವಾ ‘ದೃಢೀಕರಣ ಕ್ರಮ’ – ಅಫರ್ಮೇಟಿವ್ ಆಕ್ಶನ್) ಎಂದು ಕರೆಯಲಾಗುತ್ತದೆ. ಎಲ್ಲರಿಗೂ ಕಾನೂನಿನ ಸಮಾನ ರಕ್ಷಣೆ ನೀಡುವ 14 ನೇ ತಿದ್ದುಪಡಿಯ ಹಕ್ಕನ್ನು ಈ ಕ್ರಮ ಉಲ್ಲಂಘಿಸುತ್ತದೆ ಎಂದು ಕೋರ್ಟು ಹೇಳಿದೆ.

ಈ ತೀರ್ಪು ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಪ್ರವೇಶಕ್ಕೆ ಜನಾಂಗದ ಅಂಶವನ್ನು ಪರಿಗಣಿಸುವುದನ್ನು ಅಸಾಧ್ಯವಾಗಿಸುತ್ತದೆ. ಜನಾಂಗ-ಆಧಾರಿತ ‘ಸಕಾರಾತ್ಮಕ ತಾರತಮ್ಯ’ ಕ್ರಮವಿಲ್ಲದೆ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ಕರಿಯ (ಆಫ್ರಿಕನ್-ಅಮೆರಿಕನ್ ) ಮತ್ತು ಲ್ಯಾಟಿನೊ (ದಕ್ಷಿಣ ಮತ್ತು ಮಧ‍್ಯ ಅಮೆರಿಕಾದ ಸ್ಥಳೀಯ)  ವಿದ್ಯಾರ್ಥಿಗಳ ಸಂಖ್ಯೆಯು ಕುಸಿಯುತ್ತದೆ ಎಂದು ಪುರಾವೆಗಳು ತೋರಿಸುತ್ತವೆ. ಆ ಮೂಲಕ ಹೆಚ್ಚು ಗಳಿಕೆಯ ಉತ್ತಮ ಉದ್ಯೋಗಗಳಿಂದಲೂ ಅವರನ್ನು ವಂಚಿತರನ್ನಾಗಿಸುತ್ತದೆ. ಇನ್ನೂ ಸಾಂಸ್ಥಿಕ ವರ್ಣಭೇದ ನೀತಿಯಿಂದ ಪೀಡಿತವಾಗಿರುವ ಮತ್ತು ಕಳೆದ ಕೆಲವು ದಶಕಗಳಲ್ಲಿ ಜನಾಂಗೀಯ ಸಂಪತ್ತಿನ ಅಂತರ ಹೆಚ್ಚುತ್ತಿರುವ ಯು.ಎಸ್ ನಲ್ಲಿ ಜನಾಂಗೀಯ ನ್ಯಾಯ ಕ್ಕೆ ದೊಡ್ಡ ಪೆಟ್ಟು ನೀಡುತ್ತದೆ.

ಯು.ಎಸ್ ವಿಶ್ವವಿದ್ಯಾನಿಲಯಗಳಲ್ಲಿನ ದೃಢೀಕರಣ ಕ್ರಮದ ನೀತಿಗಳನ್ನು ಕಾನೂನಾಗಿ ಕ್ರೋಡೀಕರಿಸಲಾಗಿಲ್ಲ. ಹೀಗಾಗಿ ಉನ್ನತ ಶಿಕ್ಷಣ ಸಂಸ್ಥೆಯಿಂದ ಸಂಸ್ಥೆಗೆ ನೀತಿಗಳು ವ್ಯಾಪಕವಾಗಿ ಬದಲಾಗುತ್ತದೆ. ನಾಗರಿಕ ಹಕ್ಕುಗಳ ಚಳುವಳಿ ಮತ್ತು 1960 ಮತ್ತು 70 ರ ಇತರ ಜನಾಂಗೀಯ ನ್ಯಾಯ ಹೋರಾಟಗಳ ನಂತರ . ಯು.ಎಸ್ ವಿಶ್ವವಿದ್ಯಾನಿಲಯಗಳು ಶ್ವೇತವರ್ಣೇತರ – ನಿರ್ದಿಷ್ಟವಾಗಿ ಕರಿಯ ಮತ್ತು ಲ್ಯಾಟಿನೋ ವಿದ್ಯಾರ್ಥಿಗಳು – ವಿದ್ಯಾರ್ಥಿಗಳ ಪ್ರವೇಶಕ್ಕೆ ಆದ್ಯತೆ ನೀಡಲಾರಂಭಿಸಿದವು. ಈ ಆದ್ಯತೆಯನ್ನು  ತೊಡೆದು ಹಾಕಿದ ವಿಶ್ವವಿದ್ಯಾನಿಲಯಗಳಲ್ಲಿ ಕರಿಯ ಮತ್ತು ಲ್ಯಾಟಿನೋ ವಿದ್ಯಾರ್ಥಿಗಳ ಸಂಖ್ಯೆ ಕುಸಿದಿದೆ.
1995 ರಲ್ಲಿ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ದೃಢೀಕರಣ ಕ್ರಮವನ್ನು ನಿಷೇಧಿಸಿತು. 1998 ರಲ್ಲಿ, ನಿಷೇಧದಿಂದ ಪ್ರಭಾವಿತವಾದ ಮೊದಲ ವರ್ಷ, ಅದರ ಎರಡು ಪ್ರಮುಖ ಸಂಸ್ಥೆಗಳಲ್ಲಿ ಕಪ್ಪು ಮತ್ತು ಲ್ಯಾಟಿನೋ ಮೊದಲ ವರ್ಷದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ಅರ್ಧದಷ್ಟು ಕಡಿಮೆಯಾಯಿತು.

ಯು.ಎಸ್ ಸುಪ್ರೀಂ ಕೋರ್ಟ್ ಕಳೆದ ವರ್ಷ ಜೂನ್ 24 ರಂದು ರಾಷ್ಟ್ರವ್ಯಾಪಿ ಗರ್ಭಪಾತದ ಹಕ್ಕುಗಳನ್ನು ತೆಗೆದುಹಾಕಿತು. ಹಾಗೆ ಮಾಡುವ ಮೂಲಕ, ನ್ಯಾಯಾಲಯವು ತನ್ನದೇ ಹಿಂದಿನ ನಿರ್ಧಾರವನ್ನು ರದ್ದುಗೊಳಿಸಿತು. ಮಹಿಳಾ  ಚಳುವಳಿಯ ಕಠಿಣ ಹೋರಾಟದ ನಂತರ 1972 ರಲ್ಲಿ ಫೆಡರಲ್ ಗರ್ಭಪಾತ ಹಕ್ಕುಗಳನ್ನು ಸ್ಥಾಪಿಸಿತು. ಈ ತೀರ್ಪಿನ ನಂತರ, ಕ್ಲಾರೆನ್ಸ್ ಥಾಮಸ್‌ನಂತಹ ಸಂಪ್ರದಾಯವಾದಿ ನ್ಯಾಯಮೂರ್ತಿಗಳು, ಸಲಿಂಗ ವಿವಾಹ ಮತ್ತು ಗರ್ಭನಿರೋಧಕ ಹಕ್ಕುಗಳಂತಹ  ದೀರ್ಘ ಹೋರಾಟದ ನಂತರ ಪಡೆದ ಇತರ ಹಕ್ಕುಗಳಿಗೂ ಕಂಟಕ ಕಾದಿದೆ ಎಂಬ ಸುಳಿವು ನೀಡಿದ್ದರು.

ಸ್ಟೂಡೆಂಟ್ಸ್ ಫಾರ್ ಫೇರ್ ಅಡ್ಮಿಷನ್ಸ್ (ನ್ಯಾಯಯುತ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು – ಎಸ್‌ಎಫ್‌ಎಫ್‌ಎ ಎಂಬ ಸಂಪ್ರದಾಯವಾದಿ ಗುಂಪು ಮುಂದಿಟ್ಟಿರುವ ಎರಡು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಎರಡು ಪ್ರಕರಣಗಳನ್ನು ಆ ಸಂಘಟನೆ ಹಾರ್ವರ್ಡ್ ಕಾಲೇಜ್ ಮತ್ತು ನಾರ್ತ್ ಕೆರೊಲಿನಾ ವಿವಿಗಳ  ಜನಾಂಗ-ಆಧಾರಿತ ಪ್ರವೇಶ ನೀತಿಗಳನ್ನು ಪ್ರಶ್ನಿಸಿತ್ತು.

ಎಸ್‌ಎಫ್‌ಎಫ್‌ಎ, ಅದರ ಹೆಸರಿನ ಹೊರತಾಗಿಯೂ, ವಿದ್ಯಾರ್ಥಿಗಳ ನೇತೃತ್ವದಲ್ಲಿ ಇಲ್ಲ. ಅದು ಎಡ್ವರ್ಡ್ ಬ್ಲಮ್ ಅವರ ನಾಯಕತ್ವದ ಸಂಘಟನೆ. ಅವರು ಅನೇಕ ಜನಾಂಗೀಯ  ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ಮಂಡಿಸಲು ಆರ್ಥಿಕವಾಗಿ ಬೆಂಬಲಿಸಿದ್ದಾರೆ.  ನಾಗರಿಕ ಹಕ್ಕುಗಳ ಚಳವಳಿಯ ಮತ್ತೊಂದು ಕಠಿಣ ಹೋರಾಟದ ಫಲವಾಗಿದ್ದ 1965 ರ ಮತದಾನ ಹಕ್ಕುಗಳ ಕಾಯಿದೆಯನ್ನು ಕಸಿದುಕೊಂಡ ಪ್ರಕರಣ ಇವುಗಳಲ್ಲಿ ಒಂದು. ಅವರು ಸಂಪ್ರದಾಯವಾದಿ ಶ್ರೀಮಂತರಿಂದ  ಇದಕ್ಕಾಗಿ ಲಕ್ಷಾಂತರ ಡಾಲರ್ ಹಣವನ್ನು ಪಡೆಯುತ್ತಾರೆ.

ಕಳೆದ ವರ್ಷ ಈ ಎರಡು ಪ್ರಕರಣಗಳ ಕುರಿತು ಸುಪ್ರೀಂ ಕೋರ್ಟ್ ಮೌಖಿಕ ವಾದಗಳನ್ನು ಆಲಿಸಿತ್ತು. ಬಲಪಂಥೀಯ ನ್ಯಾಯಮೂರ್ತಿಗಳು ವಾದಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬುದರ ಆಧಾರದ ಮೇಲೆ, ಜನಾಂಗ-ಆಧಾರಿತ ಪ್ರವೇಶ ನೀತಿಗಳು ಅಪಾಯದಲ್ಲಿವೆ ಎಂಬುದು ಸ್ಪಷ್ಟವಾಗಿತ್ತು. ಶೈಕ್ಷಣಿಕವಾಗಿ ಈ ಕ್ರಮ ಹೇಗೆ ಪ್ರಯೋಜನಕಾರಿ ಎಂಬುದು ಪ್ರಶ್ನೆಯಾಗಿತ್ತು. ಮತ್ತು ‘ದೃಡೀಕರಣ ಕ್ರಮ’ ಶೈಕ್ಷಣಿಕವಾಗಿ ವೈವಿಧ್ಯತೆಗಳನ್ನು ಹೆಚ್ಚಿಸುವ ಮೂಲಕ ಎಲ್ಲರಿಗೂ ಪ್ರಯೋಜನಕಾರಿ ಎಂಬುದು ಉತ್ತರವಾಗಿತ್ತು.

ಇದನ್ನೂ ಓದಿ:ಯು.ಎಸ್ ಚುನಾವಣೆಗಳು; ‘ಟ್ರಂಪ್ ಅಲೆ’ಗೆ ತಡೆ, ಆದರೆ ಪ್ರಜಾಪ್ರಭುತ್ವಕ್ಕೆ ಅಪಾಯ ತಪ್ಪಿಲ್ಲ

‘ದೃಡೀಕರಣ ಕ್ರಮ’ದ ಹೋರಾಟವು ಎಂದಿಗೂ ವೈವಿಧ್ಯತೆಯ ಬಗ್ಗೆ ಅಥವಾ ಎಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯೋಜನಗಳ ಬಗ್ಗೆ ಮಾತ್ರ ಆಗಿರಲಿಲ್ಲ. ಜಿಮ್ ಕ್ರೌ ಯುಗದ ವರ್ಣಬೇಧದ ನೀತಿಗಳಂತಹ ಹಿಂದಿನ ತಪ್ಪುಗಳನ್ನು ಸರಿಪಡಿಸಲು ಮತ್ತು ಅಸಮಾನತೆಗಳನ್ನು ತೊಡೆದುಹಾಕಲು ಹಲವು ಮಾರ್ಗಗಳಲ್ಲಿ ಒಂದಾಗಿತ್ತು. ಉದಾಹರಣೆಗೆ, ನಾರ್ತ್ ಕೆರೊಲಿನಾ ವಿವಿ 1950 ರವರೆಗೆ ಕಪ್ಪು ವಿದ್ಯಾರ್ಥಿಗಳಿಗೆ ಪ್ರವೇಶವನ್ನೇ ನೀಡುತ್ತಿರಲಿಲ್ಲ.

ಪಾರ್ಟಿ ಫಾರ್ ಸೋಷಿಯಲಿಸಂ ಅಂಡ್ ಲಿಬರೇಶನ್‌ನ ಮಾಜಿ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಸ್ವತಃ ದೃಢೀಕರಣದ ಕ್ರಮದ ಫಲಾನುಭವಿ, ಗ್ಲೋರಿಯಾ ಲಾ ರಿವಾ, ಲಿಬರೇಶನ್ ನ್ಯೂಸ್‌ನಲ್ಲಿ ಬರೆಯುತ್ತಾರೆ, “1960 ಮತ್ತು 1970 ರ ಸಾಮಾಜಿಕ ಮತದಾನ ಮತ್ತು ನಾಗರಿಕ ಹಕ್ಕುಗಳಿಗಾಗಿ, ಪ್ರತ್ಯೇಕ ಸಾರಿಗೆ ಮತ್ತು ವಸತಿಗಳ ವಿರುದ್ಧ ಹೋರಾಟಗಳು, ಬ್ಲ್ಯಾಕ್ ಪ್ಯಾಂಥರ್ಸ್ ಮತ್ತು ಬ್ಲ್ಯಾಕ್ ಲಿಬರೇಶನ್‌ಗಳು ಬಲಗೊಂಡಿದ್ದು – ಶಿಕ್ಷಣದಲ್ಲಿನ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಲು ಕಾರ್ಯಕ್ರಮಗಳ ಬೇಡಿಕೆಯನ್ನು ಸಹ ತಂದಿತು. ಹೆಚ್ಚಿನ ವಿಶ್ವವಿದ್ಯಾನಿಲಯಗಳ ಅಲಿಖಿತ ನೀತಿಗಳು ಕರಿಯ ಮತ್ತು ಇತರ ಯುವಕರ ವಿರುದ್ಧ ತಾರತಮ್ಯವನ್ನು ಉಂಟು ಮಾಡಿದವು ಮತ್ತು ಪಠ್ಯಕ್ರಮವು ಬಿಳಿಯ ಪ್ರಾಬಲ್ಯವಾದಿ ಕಲ್ಪನೆಗಳನ್ನು ಶಾಶ್ವತಗೊಳಿಸಿತು.” ಜನಾಂಗೀಯ ನ್ಯಾಯಕ್ಕಾಗಿ ಹೋರಾಟಗಳ ಮಧ್ಯೆ ದೃಢೀಕರಣ ಕ್ರಮಕ್ಕಾಗಿ ಹೋರಾಟವು ರಾಷ್ಟ್ರವ್ಯಾಪಿ ರಾಜಕೀಯವನ್ನು ಪ್ರವೇಶಿಸಿತು.

“ವಿಶ್ವವಿದ್ಯಾನಿಲಯಗಳು ಚಾರಿತ್ರಿಕ ಕಾರಣಗಳಿಗಾಗಿ ತಾರತಮ್ಯ ಅನುಭವಿಸಿದ ವಿದ್ಯಾರ್ಥಿಗಳ ಪ್ರವೇಶ ಮತ್ತು ಬೆಳೆಸಲು ಅರ್ಥಪೂರ್ಣ ಗುರಿಗಳನ್ನು ಪೂರೈಸುತ್ತವೆ ಎಂದು ಖಚಿತಪಡಿಸಿಕೊಳ್ಳಲು ಕೋಟಾಗಳನ್ನು ಒಳಗೊಂಡಂತೆ ದೃಢೀಕರಣ ಕ್ರಮಗಳನ್ನು ಒತ್ತಾಯಿಸಲು ವಿದ್ಯಾರ್ಥಿಗಳು ತಮ್ಮ ಕ್ಯಾಂಪಸ್‌ಗಳಲ್ಲಿ  ಹೋರಾಟ ಸಂಘಟಿಸಲು ಪ್ರಾರಂಭಿಸಿದರು” ಎಂದು ಲಾ ರಿವಾ ಬರೆಯುತ್ತಾರೆ.

ಜನಾಂಗ-ಆಧಾರಿತ ಪ್ರವೇಶಗಳು ಗರ್ಭಪಾತ ಹಕ್ಕುಗಳಷ್ಟು ವ್ಯಾಪಕ ಗಮನ, ಬೆಂಬಲ ಸೆಳೆಯುವುದಿಲ್ಲ. ಅದನ್ನು ಹೇಗೆ ಪ್ರಸ್ತುತ ಪಡಿಸಲಾಗುತ್ತದೆ ಎಂಬುದರ ಮೇಲೆ ಅದು ಅವಲಂಭಿಸಿರುತ್ತದೆ.

ಬ್ರೇಕ್‌ಥ್ರೂ ನ್ಯೂಸ್‌ನ ಮುಖ್ಯ ಸಂಪಾದಕ ಮತ್ತು ಯುಎಸ್ ಇತಿಹಾಸಕಾರ ಬೆನ್ ಬೆಕರ್ ಅವರು ನವೆಂಬರ್‌ನಲ್ಲಿ ಹೇಳಿದಂತೆ, “ಆಯ್ದ ವಿಶ್ವವಿದ್ಯಾಲಯಗಳಲ್ಲಿ ನಾವು ಕಪ್ಪು ಮತ್ತು ಲ್ಯಾಟಿನೋ ವಿದ್ಯಾರ್ಥಿಗಳ ಪಾಲನ್ನು ಹೆಚ್ಚಿಸಬೇಕೇ? ಎಂಬ ಪ್ರಶ್ನೆಯನ್ನು ಕೇಳಿದರೆ, ಸರಳ ಬಹುಮತದ ಜನ ದೃಢೀಕರಣದ ಕ್ರಮದ ನೀತಿಗಳ ಪರವಾಗಿರುತ್ತಾರೆ. ಆದರೆ ಅದೇ ಪ್ರಶ್ನೆಯನ್ನು “ನಾವು ಬಿಳಿ ಮತ್ತು ಏಷ್ಯನ್ ವಿದ್ಯಾರ್ಥಿಗಳ ಪಾಲನ್ನು ಇತರರಿಗೆ ಸ್ಥಳಾವಕಾಶ ಕಲ್ಪಿಸಲು ಕಡಿಮೆ ಮಾಡಬೇಕೇ? ಎಂಬ ಪ್ರಶ್ನೆ ಕೇಳಿದರೆ ಬಹಮತ ಕಳೆದುಕೊಳ್ಳುತ್ತದೆ. ‘ದೃಢೀಕರಣದ ಕ್ರಮ’ಕ್ಕಾಗಿ ಬಿಳಿ ಮತ್ತು ಏಷ್ಯಾದ ಜನರ ಶೈಕ್ಷಣಿಕ ಅವಕಾಶಗಳನ್ನು ಕಸಿದುಕೊಳ್ಳಬೇಕೆ ?. ಎಂದು ಕೇಳಿದರೆ ಕೇವಲ 19% ರಷ್ಟು ಮಾತ್ರ ಬೆಂಬಲ ಸಿಗುತ್ತದೆ.

ಬಲಪಂಥೀಯರು ‘ದೃಢೀಕರಣದ ಕ್ರಮವು ಸಾಮಾನ್ಯವಾಗಿ ಬಿಳಿಯ ಮತ್ತು ಏಷ್ಯನ್-ಅಮೆರಿಕನ್ನರ ವಿರುದ್ಧವಾಗಿದ್ದು ಜನಾಂಗೀಯವಾಗಿದೆ’ ಎಂದು ಹೇಳಿಕೊಳ್ಳುತ್ತಾರೆ, ಆದಾಗ್ಯೂ ಹಲವಾರು ಅಧ್ಯಯನಗಳು ಬಿಳಿಯ ಮಹಿಳೆಯರು ಐತಿಹಾಸಿಕವಾಗಿ ‘ದೃಢೀಕರಣ ಕ್ರಮ’ಗಳಿಂದ ಹೆಚ್ಚಿನ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಕಂಡುಹಿಡಿದಿವೆ..

ಬೆಕರ್ ಅವರು ಕರಿಯ ಮತ್ತು ಲ್ಯಾಟಿನೊ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳ ಜೊತೆಗೆ, ಎಲ್ಲರಿಗೂ ಶಿಕ್ಷಣಕ್ಕೆ ಹೆಚ್ಚಿನ ಪ್ರವೇಶಕ್ಕಾಗಿ ಒತ್ತಾಯಿಸಬೇಕು ಎನ್ನುತ್ತಾರೆ. ಶೈಕ್ಷಣಿಕ ಅವಕಾಶಗಳನ್ನು ವ್ಯಾಪಕವಾಗಿ ವಿಸ್ತರಿಸಿದರೆ ದೃಢೀಕರಣ ಕ್ರಮ ಯಾರಿಗೂ ಅನಾನೂಕೂಲ ತರಬೇಕೆಂದಿಲ್ಲ. ಯು.ಎಸ್ ಶಿಕ್ಷಣ ವ್ಯವಸ್ಥೆಯಲ್ಲಿ ಸರಾಸರಿ ಪದವಿಪೂರ್ವ ಶಿಕ್ಷಣದ ವೆಚ್ಚ 145,000 ಡಾಲರಾಗಿದ್ದು ಎಲ್ಲ ಜನಾಂಗದ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಅದು ವಿವಿ ಶಿಕ್ಷಣ ನಿರಾಕರಿಸುತ್ತದೆ. ಪ್ರತಿಷ್ಠಿತ ವಿವಿಗಳಲ್ಲಿ ಶಿಕ್ಷಣ ಪಡೆದವರ ಕುಟುಂಬದ ಸದಸ್ಯರಿಗೆ ಆದ್ಯತೆ ನೀಡುವಂತಹ ಹಲವು ನಿಜವಾಗಿಯೂ ತಾರತಮ್ಯದ ಕ್ರಮಗಳು ದೃಡೀಕರಣ ಕ್ರಮದಷ್ಟು ಗಮನ, ಚರ್ಚೆಗೆ ಬರುವುದಿಲ್ಲ.

Donate Janashakthi Media

Leave a Reply

Your email address will not be published. Required fields are marked *