ಮಣಿಪುರ ಹಿಂಸಾಚಾರ: ರಾಜೀನಾಮೆ ನೀಡುದಿಲ್ಲವೆಂದ ಮುಖ್ಯಮಂತ್ರಿ ಬಿರೇನ್ ಸಿಂಗ್

ಮುಖ್ಯಮಂತ್ರಿ ಶುಕ್ರವಾರ ರಾಜೀನಾಮೆ ನೀಡಲಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು

ಇಂಫಾಲ್: ಮಣಿಪುರ ಹಿಂಸಾಚಾರ ತಹಬದಿಗೆ ಬಂದಿಲ್ಲವಾದ ಕಾರಣ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಶುಕ್ರವಾರ ರಾಜೀನಾಮೆ ನೀಡಲಿದ್ದಾರೆ ಎಂಬ ಊಹಾಪೋಹಕ್ಕೆ ತೆರೆಬಿದ್ದಿದ್ದು, ತಾನು ರಾಜೀನಾಮೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅವರ ನಿರ್ಧಾರವನ್ನು ವಿರೋಧಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿ, ರಾಜೀನಾಮೆ ಪತ್ರವನ್ನು ಹರಿದು ಹಾಕಿದ್ದಾರೆ.

ಬಿರೇನ್ ಸಿಂಗ್ ಅವರ ನಿವಾಸದ ಬಳಿ ನೂರಾರು ಮಹಿಳೆಯರು ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ, ಮುಖ್ಯಮಂತ್ರಿಯ ರಾಜೀನಾಮೆಯನ್ನು ವಿರೋಧಿಸಿದ್ದಾರೆ. ಸಚಿವರು ತಮ್ಮ ನಿವಾಸದಿಂದ ಹೊರಬಂದಾಗ ಅವರ ರಾಜೀನಾಮೆ ಪತ್ರದ ಪ್ರತಿಯನ್ನು ಮಹಿಳೆಯೊಬ್ಬರು ಹರಿದು ಹಾಕಿದ್ದಾರೆ.

ಇದನ್ನೂ ಓದಿ: ಮಣಿಪುರ: ರಾಹುಲ್ ಗಾಂಧಿ ಭೇಟಿ ಬೆನ್ನಿಗೆ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ಸಾಧ್ಯತೆ

ಇದಕ್ಕೂ ಮೊದಲು, ಇಂಫಾಲ್ ಮೂಲದ ದಿನಪತ್ರಿಕೆಯ ವರದಿಯೊಂದು, ಮಣಿಪುರ ಸಿಎಂ ಶುಕ್ರವಾರ ರಾಜೀನಾಮೆ ನೀಡುವ ಸಾಧ್ಯತೆಯಿದ್ದು, ಒಕ್ಕೂಟ ಸರ್ಕಾರವೂ ಮಧ್ಯಪ್ರವೇಶಿಸಿ ಅಧಿಕಾರ ವಹಿಸಿಕೊಳ್ಳುತ್ತದೆ ಎಂದು ವರದಿ ಮಾಡಿತ್ತು. ಈ ವರದಿಗೆ ಪ್ರತಿಕ್ರಿಯಿಸಿದ್ದ ಮಹಿಳೆಯರ ಗುಂಪು ಮಣಿಪುರ ಮುಖ್ಯಮಂತ್ರಿಯ ಸಚಿವಾಲಯ ಮತ್ತು ರಾಜಭವನದ ಹೊರಗೆ ಜಮಾಯಿಸಿ, ಬಿರೇನ್ ಸಿಂಗ್ ರಾಜೀನಾಮೆ ನೀಡದಂತೆ ಒತ್ತಾಯಿಸಿದ್ದಾರೆ.

ಪ್ರತಿಭಟನಾ ನಿರತ ಮಹಿಳೆಯರು, ತೊಂದರೆ ಉಂಟುಮಾಡುವವರ ವಿರುದ್ಧ ದೃಢವಾದ ನಿಲುವು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಯವರನ್ನು ಕೇಳಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ತಮ್ಮ ರಾಜೀನಾಮೆ ವಿಚಾರವಾಗಿ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಬಿರೇನ್ ಸಿಂಗ್, “ಈ ನಿರ್ಣಾಯಕ ಘಟ್ಟದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.

ಈ ಮಧ್ಯೆ ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್‌ನಲ್ಲಿರುವ ಎರಡು ಪರಿಹಾರ ಶಿಬಿರಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಭೇಟಿ ನೀಡಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ಇಂಫಾಲ್‌ನಿಂದ ಹೆಲಿಕಾಪ್ಟರ್ ಮೂಲಕ ಮೊಯಿರಾಂಗ್ ತಲುಪಿದ ರಾಹುಲ್ ಗಾಂಧಿ, ಸಂತ್ರಸ್ತ ಜನರನ್ನು ಭೇಟಿಯಾಗಿ ಅವರ ಕಷ್ಟಗಳನ್ನು ಆಲಿಸಿದರು. ಸುಮಾರು 1,000 ಜನರು ಆಶ್ರಯ ಪಡೆದಿರುವ ಎರಡೂ ಶಿಬಿರಗಳಿಗೆ ರಾಹುಲ್ ಭೇಟಿ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ನಂತರ ಅವರು ರಾಜ್ಯದ ರಾಜ್ಯಪಾಲರಾದ ಅನುಸೂಯಾ ಉಯಿಕೆ ಅವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚಿಸಿದ್ದಾರೆ.

ಇದನ್ನೂ ಓದಿ: ತಮಿಳುನಾಡು: ಸಚಿವರನ್ನು ಸಂಪುಟದಿಂದ ವಜಾಗೊಳಿಸಿ ಕೆಲವೇ ಗಂಟೆಗಳಲ್ಲಿ ಆದೇಶ ಹಿಂಪಡೆದ ರಾಜ್ಯಪಾಲ!

ಮತ್ತೆ ಭುಗಿಲೆದ್ದ ಹಿಂಸಾಚಾರ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಗುರುವಾರ ಭದ್ರತಾ ಪಡೆಗಳು ಮತ್ತು ಶಂಕಿತ ಗಲಭೆಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

ಒಕ್ಕೂಟ ಸರ್ಕಾರ ಮಣಿಪುರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ವಾರಗಳಿಂದ ಪ್ರತಿಭಟನಾಕಾರರು ಮತ್ತು ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಮಣಿಪುರದ ಒಂಬತ್ತು ಬಿಜೆಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು, ಬಿರೇನ್ ಸಿಂಗ್ ನೇತೃತ್ವದ ಸರ್ಕಾರದ ಮೇಲೆ ರಾಜ್ಯದ ಜನರು ಸಂಪೂರ್ಣ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು.

ಜನಾಂಗೀಯ ಘರ್ಷಣೆಗಳು

ಮಣಿಪುರದಲ್ಲಿ ಮೈತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ಕಾರಣಕ್ಕೆ ಇಲ್ಲಿಯವರೆಗೆ 100 ಕ್ಕೂ ಹೆಚ್ಚು ಜನರು ಸಾವುಗೀಡಾಗಿದ್ದಾರೆ. ಮೇ 3 ರಂದು ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಿದ ನಂತರ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.

ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೆಯಿ ಸಮುದಾಯವು ಈ ಮೆರವಣಿಗೆ ಆಯೋಜಿಸಿತ್ತು. ಇದಕ್ಕೆ ಬುಡಕಟ್ಟು ಕುಕಿ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಂದಿನಿಂದ ಎರಡು ಗುಂಪುಗಳ ನಡುವಿನ ಘರ್ಷಣೆ ತೀವ್ರಗೊಂಡಿದೆ.

Donate Janashakthi Media

Leave a Reply

Your email address will not be published. Required fields are marked *