ಬೆಂಗಳೂರು: ವಿದ್ಯಾರ್ಥಿನಿ ಬರೆದ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೇಯಾಂಕ ಬರೆದ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಮರಳಿ ಪತ್ರ ಬರೆದಿದ್ದಾರೆ.
ಕೊಪ್ಪಳ ನಗರದ ಮಾಸ್ತಿ ಪಬ್ಲಿಕ್ ಸ್ಕೊಲ್ನ ವಿದ್ಯಾರ್ಥಿನಿ ಶ್ರೇಯಾಂಕ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಕ್ಕೆ ಅವರಿಗೆ ಅಭಿನಂದಿಸಿ ಹಾಗೂ ಅವರ ಸಾಮಾಜಿಕ ಕಾಳಜಿಯ ಬಗ್ಗೆ ಪತ್ರ ಬರೆದಿದ್ದಳು.
ಇದನ್ನೂ ಓದಿ:ಉತ್ತರ ಕರ್ನಾಟಕ ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ಒದಗಿಸಲು ಸಿದ್ದರಾಮಯ್ಯ ಆಗ್ರಹ: ಸಿಎಂಗೆ ಸುದೀರ್ಘ ಪತ್ರ
ಅನ್ನಭಾಗ್ಯ, ಶೂ ಭಾಗ್ಯ ಸೇರಿದಂತೆ ಇನ್ನು ಅನೇಕ ಕಾರ್ಯಕ್ರಮಗಳ ಕುರಿತು ಶ್ರೇಯಾಂಕ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಳು. ಈ ಬಾರಿಯೂ ಉತ್ತಮ ಆಡಳಿತ ನಡೆಸಲು ವಿದ್ಯಾರ್ಥಿನಿ ಮನವಿ ಮಾಡಿಕೊಂಡಿದ್ದಳು.
ವಿದ್ಯಾರ್ಥಿನಿ ಶ್ರೇಯಾಂಕಳಿಗೆ ಸಿಎಂ ಸಿದ್ದರಾಮಯ್ಯ ಮರಳಿ ಪತ್ರ ಬರೆದಿದ್ದು, ಇಂದಿನ ಮಕ್ಕಳೇ ನಾಳಿನ ರಾಷ್ಟ್ರ ನಿರ್ಮಾತೃಗಳು. 8ನೇ ತರಗತಿ ಓದುತ್ತಿರುವ ನೀನು, ನಿನಗಿರುವ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು, ಈ ಎಳೆಯ ವಯಸ್ಸಿನಲ್ಲಿ ಬಡವರು, ದೀನ ದಲಿತರು, ರೈತರು ಬಗೆಗಿನ ನಿನ್ನ ಕಾಳಜಿ ಬೆರಗು ಮೂಡಿಸುವಂತದ್ದು. ಜೀವನದಲ್ಲಿ ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯೆ ಕಲಿತು, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಇತರರಿಗೆ ಮಾದರಿಯಾಗು ಎಂದು ಶುಭ ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.
ಈ ಹಿಂದಿಯೂ ಪತ್ರಗಳು ಸದ್ದು ಮಾಡಿದ್ದವು : ಹಿಂದೆ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ವಿದ್ಯಾರ್ಥಿನಿಯರು 2018ರಲ್ಲಿ ಬರೆದಿದ್ದ 2 ಪತ್ರಗಳು ಭಾರೀ ಸುದ್ದಿಯಾಗಿದ್ದವು. ವಿಜ್ಞಾನ ಪದವಿ ವಿದ್ಯಾರ್ಥಿನಿಯೊಬ್ಬಳು ರೆಕಾರ್ಡ್ ಬರೆಯುವ ಸಂಕಷ್ಟದ ಬಗ್ಗೆ ಅಳಲು ತೋಡಿಕೊಂಡಿದ್ದಳು. ಬೆಂಗಳೂರಿನ ಮಹಾರಾಣಿ ಶಿರೀಷಾ ಎಂಬ ವಿದ್ಯಾರ್ಥಿನಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ರೆಕಾರ್ಡ್ ಬುಕ್ ಬರೆಯುವುದು ತುಂಬ ಕಷ್ಟವಾಗುತ್ತದೆ. ಹೀಗಾಗಿ ಈ ವ್ಯವಸ್ಥೆಗೆ ಅಂತ್ಯ ಹಾಡಬೇಕೆಂದು ಮನವಿ ಮಾಡಿದ್ದಳು.
ಅದೇ ರೀತಿ ಮೈಸೂರಿನ ಸ್ವಾತಿ ಎಂಬ ವಿದ್ಯಾರ್ಥಿನಿ ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಸಾಲ ಮನ್ನಾ ಮಾಡಲು ಹೊರಟಿರುವುದು ಸ್ವಾಗತಾರ್ಹ. ಆದರೆ ಸಾಲ ಮನ್ನಾ ಮಾಡಿದ್ದೇ ಆದಲ್ಲಿ ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ ಬೀಳಲಿದ್ದು ಅದನ್ನು ತುಂಬಿಸಲು ನೀವು ತೆಗೆದುಕೊಂಡಿರುವ ಕ್ರಮಗಳೇನು ಎಂಬುದನ್ನು ರಾಜ್ಯದ ಮುಂದಿಡಬೇಕಾದ್ದೂ ನಿಮ್ಮ ಕರ್ತವ್ಯ.ಎಂದು ಬರೆದಿದ್ದಳು.