ಬೆಂಗಳೂರು: ರಾಜ್ಯ ಸರ್ಕಾರಿ ಶಾಲೆಗಳ ಮೂಲಸೌಕರ್ಯ ವರದಿಯ ಬಗ್ಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆರ್ ಟಿಇ ನಿಯಮಗಳ ಅನುಸಾರವಾಗಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯವೇ ಮೊದಲಾದ ಮೂಲಸೌಕರ್ಯ, ಅದನ್ನೂ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಹೈಕೋರ್ಟ್ ಅಸಮಾಧಾನಗೊಂಡಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಮರ್ಪಕವಾಗಿ ಮೂಲಸೌಕರ್ಯ ಕಲ್ಪಿಸದ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಶಾಲೆಗಳ ದುಸ್ಥಿತಿ ನಿಜಕ್ಕೂ ಅಘಾತವನ್ನು ಉಂಟು ಮಾಡಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ವ್ಯವಸ್ಥೆ ಇಲ್ಲದೇ, ಮೂಲ ಸೌಲಭ್ಯಗಳಿಲ್ಲದ ಶಾಲೆಗಳಿಗೆ ಯಾವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ, ಇಂತಹ ಪರಿಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸುವುದಕ್ಕೆ ಪೋಷಕರು ಹಿಂಜರಿಯುತ್ತಾರೆ ಎಂದು ಸಿ.ಜೆ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾ.ಎಂಜೆಎಸ್ ಕಮಲ್ ಅವರಿದ್ದ ಪೀಠ ಹೇಳಿದೆ.
ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ವಿಚಾರವಾಗಿ 2013ರಲ್ಲಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಹಾಗೂ ನ್ಯಾಯಮೂರ್ತಿ ಎಂ.ಜಿ.ಎಸ್.ಕಮಾಲ್ ಅವರಿದ್ದ ಪೀಠ, ಸರ್ಕಾರಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಕೊರತೆ ಬಗ್ಗೆ ಕಳವಳ ವ್ಯಕ್ತಪಡಿಸಿತು. ಶಾಲೆಗಳನ್ನು ಅರ್ಧಕ್ಕೆ ಬಿಡುತ್ತಿರುವವರ ಕುರಿತು ಮಾಧ್ಯಮಗಳ ವರದಿಯನ್ನಾಧರಿಸಿ ತನ್ನದೇ ಆದ ಪಿಐಎಲ್ ನ ವಿಚಾರಣೆಯನ್ನು ನ್ಯಾಯಪೀಠ ನಡೆಸಿದ್ದು, ಶಾಲೆಗಳ ದುಸ್ಥಿತಿ ಮನಸಾಕ್ಷಿಯನ್ನು ಚುಚ್ಚಿದೆ ಎಂದು ಹೇಳಿದೆ. ಸರಕಾರ ಸಲ್ಲಿಸಿದ ವರದಿ ಹಾಗೂ ಛಾಯಾಚಿತ್ರಗಳನ್ನು ಪರಿಶೀಲಿಸಿದ ಪೀಠಕ್ಕೆ ಶೌಚಾಲಯದ ಸುತ್ತಮುತ್ತ ಗಿಡ-ಗಂಟಿಗಳು ಬೆಳೆದಿದ್ದ ಶಾಲೆಗಳ ಸ್ಥಿತಿ ಅತ್ಯಂತ ದಯನೀಯವಾಗಿರುವುದನ್ನು ಕಂಡಿದೆ. ಈ ರೀತಿ ವರದಿ ಸಲ್ಲಿಸಿರುವ ಅಧಿಕಾರಿಗಳ ಮನೆಗಳಲ್ಲಿಯೂ ಇದೇ ಆಗಿದೆಯೇ ಎಂದು ತೀಕ್ಷ್ಣವಾಗಿ ನ್ಯಾಯಪೀಠ ಪ್ರಶ್ನಿಸಿದೆ.
ಇದನ್ನೂ ಓದಿ:ಸರ್ಕಾರಿ ಶಾಲೆಗಳ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸರ್ಕಾರ ವಿಫಲವಾಗಿದೆ; ʻʻಧ್ಯಾನʼʼದಲ್ಲಿ ಮುಳುಗಿದೆ
ಶಾಲೆಗಳಲ್ಲಿ ಮೂಲಭೂತ ಅವಶ್ಯಕತೆಗಳು ಲಭ್ಯವಿಲ್ಲದಿದ್ದರೆ ಯಾವ ರೀತಿಯ ಸಮಾಜ ಅಭಿವೃದ್ಧಿಯಾಗುತ್ತದೆ? ಎಂದು ಹೈಕೋರ್ಟ್ ಕೇಳಿದೆ. ವರದಿ ಸಲ್ಲಿಸಿದ ಅಧಿಕಾರಿಗಳು ತಮ್ಮ ಮಕ್ಕಳನ್ನು ಅಂತಹ ಶಾಲೆಗಳಿಗೆ ಕಳುಹಿಸುತ್ತಾರೆಯೇ ಎಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಕೇಳಿದ್ದಾರೆ. ಅಧಿಕಾರಿಗಳು ‘ಚಲ್ತಾ ಹೈ’ ಧೋರಣೆ ತೋರುತ್ತಿದ್ದಾರೆ ಎಂದು ನ್ಯಾಯಪೀಠ ಅಸಮಾಧಾನಗೊಂಡಿದೆ.
2013 ರಿಂದಲೂ ಪಿಐಎಲ್ ವಿಚಾರಣೆ ನಡೆಯುತ್ತಿದ್ದು, ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳೂ ಇಲ್ಲ. ಸರ್ಕಾರಿ ಶಾಲೆಗಳಲ್ಲಿನ ಪರಿಸ್ಥಿತಿಯಿಂದಾಗಿ ದೇಶದ ಭವಿಷ್ಯ ಅಪಾಯದಲ್ಲಿದೆ ಎಂದು ನ್ಯಾಯಪೀಠ ಆಕಂತ ವ್ಯಕ್ತಪಡಿಸಿದೆ. ಮುಂದಿನ ಮೂರು ತಿಂಗಳಲ್ಲಿ ಸರಕಾರಿ ಶಾಲೆಗಳ ಹೊಸ ಸಮೀಕ್ಷೆ ನಡೆಯಬೇಕು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು ಇದರಲ್ಲಿ ಭಾಗಿಯಾಗಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಪಿಐಎಲ್ನ ಮುಂದಿನ ವಿಚಾರಣೆಯಲ್ಲಿ ಸರ್ಕಾರ ಸಲ್ಲಿಸಿದ ವರದಿಗೆ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಕಡ್ಡಾಯವಾಗಿ ಕೌಂಟರ್ಸೈನ್ ಮಾಡಬೇಕು ಎಂದು ನಿರ್ದೇಶಿಸಿದೆ. ಈ ನಿರ್ದೇಶನಗಳನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರಬೇಕು ಎಂದು ನ್ಯಾಯಾಲಯ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.