ಮಂಡ್ಯ: ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ (ಬಫ್ನ) ಮಲ್ಲಿಕ್ಯಾತನಹಳ್ಳಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಗು ಹೆಚ್ಚು ಕಾಲದಿಂದ ವಾಸವಾಗಿರುವ 42 ಕುಟುಂಬದವರಿಗೆ ಹಕ್ಕು ಪತ್ರ ನೀಡದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳ ವಿರುದ್ದ ಕರ್ನಾಟಕ ಪ್ರಾಂತ ರೈತ ಸಂಘವು ಪ್ರತಿಭಟನೆ ನಡೆಸಿದೆ.
ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಧರಣಿ ನಡೆಸಿದರು. ಪ್ರತಿಭಟನೆಯನ್ನ ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಅವರು ಮಾತನಾಡಿ ಮಲ್ಲಿಕ್ಯಾತನಹಳ್ಳಿ ಸನಂ. 375ರಲ್ಲಿ ಈಗಾಗಲೆ 80 ಕುಟುಂಬಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ಹಕ್ಕು ಪತ್ರಗಳನ್ನು ನೀಡಿದ್ದಾರೆ. ಉಳಿದಂತೆ ಗ್ರಾಮ ಪಂಚಾಯತಿಯವರು ಸ್ಥಳ ಪರಿಶೀಲನೆ ಮಾಡಿ ಸ್ಕೆಚ್ ಸಹ ತಯಾರಿಸಿದ್ದಾರೆ ಮತ್ತು ನಿವೇಶನ ರಹಿತರ ಪಟ್ಟಿಯನ್ನು ಸಹ ತಯಾರಿಸಲಾಗಿರುತ್ತದೆ. ಆದರೆ 2016 ರಲ್ಲೂ ನಾವು 94C ಅಡಿಯಲ್ಲಿ ಅರ್ಜಿಯನ್ನೂ ಸಹ ಸಲ್ಲಿಸಿದಾಗ ಗ್ರಾಮ ಲೆಕ್ಕಿಗರು. ಹಾಗೂ ರಾಜಸ್ವ ನಿರೀಕ್ಷಕರು ಯಾವುದೇ ಕುಟುಂಬಗಳು ವಾಸ ಇಲ್ಲ, ಮನೆ ಕಟ್ಟಿಲ್ಲ ಎಂದು ಸುಳ್ಳು ವರದಿ ನೀಡಿರುತ್ತಾರೆ. ಇದರಿಂದ ಗ್ರಾಮದ ನಿವಾಸಿಗಳು ಹಕ್ಕು ಪತ್ರದಿಂದ ವಂಚಿತರಾಗಿದ್ದಾರೆ. ಕೂಡಲೇ ಅವರ ಮೇಲೆ ಕಾನೂನು ಕ್ರಮ ಜರುಗಿಸ ಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ ಗ್ರಾಮ ಪಂಚಾಯಿತಿಯ ನಿವೇಶನ ರಹಿತರ ಪಟ್ಟಿಯಲ್ಲಿ ಇಲ್ಲಿನ ನಿವಾಸಿಗಳಲ್ಲದವರ ಪಟ್ಟಿ ಇದ್ದು ನೈಜ ವಾಸಿಗಳ ಹೆಸರನ್ನು ಕೈಬಿಡಲಾಗಿದೆ ಅಥವಾ ಅವರ ಹೆಸರನ್ನು ಕಡೆಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಅರೋಪಿಸಿದರು.
ಇದನ್ನೂ ಓದಿ:ಕೃಷಿ ಇಲಾಖೆಯೊಂದಿಗೆ ರೇಷ್ಮೆ ಇಲಾಖೆ ವಿಲೀನ ಖಂಡಿಸಿ ಕೆಪಿಆರ್ಎಸ್ ಪ್ರತಿಭಟನೆ
ಗೋಮಾಳದಲ್ಲಿ 120 ಎಕರೆ ಜಮೀನಿದ್ದು, ಈಗಾಗಲೆ 3.20 ಎಕರೆಯ ಹಕ್ಕನ್ನು ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಿದ್ದಾರೆ. ಅದನ್ನ ಕಲಂ9 ರಲ್ಲಿ ಸೇರ್ಪಡೆ ಮಾಡಿಸಿಕೊಂಡು ಹಕ್ಕು ಪತ್ರ ವಿತರಿಸುವಲ್ಲಿ ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ವಿಪಲರಾಗಿದ್ದರೆಂದರು. ಆದರೆ ನಮ್ಮ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿರುವ ಸರ್ಕಾರಿ ಭೂಮಿಯಲ್ಲಿ ನೂರಾರು ಎಕರೆ ಪ್ರದೇಶವನ್ನು ಹಲವಾರು ಬಂಡವಾಳ ಶಾಹಿಗಳು ಹಾಗೂ ಪಟ್ಟಭದ್ರರಿಗೆ ಆಕ್ರಮವಾಗಿ ಡಾಬಾ, ಫಾರಂಹೌಸ್ , ಹಾಗೂ ಮನರಂಜನಾ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿ ಕೊಡಲಾಗಿದೆ.
ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಮತ್ತು ಜನ ಪ್ರತಿನಿಧಿಗಳಿಗೆ ನಮ್ಮ ಅಹವಾಲು ಸಲ್ಲಿಸಿದ್ದರೂ ಏನು ಪ್ರಯೋಜನವಾಗಿಲ್ಲ, ಬಡಕೂಲಿಕಾರರಿಗೆ ಅಶ್ರಯ ಮನೆ,ಡಾ.ಬಿ.ಆರ್.ಅಂಬೇಡ್ಕರ್ ಮನೆ, ಬಸವ ವಸತಿ ಮುಂತಾದ ಯೋಜನೆಗಳಿಂದ ಸುಸಜ್ಜಿತ ಮನೆ ಕೊಳ್ಳಲು ಅನುದಾನ ಪಡೆಯಲು ಸಾಧ್ಯವಾಗದೆ ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ ಎಂದರು. ಇದರಿಂದಾಗಿ ಬಡಜನರಿಗೆ ತಲುಪಬೇಕಾದ ಸರ್ಕಾರದ ಯೋಜನೆಗಳು ಮರಿಚಿಕೆಯಾಗಿವೆ. ಮಲ್ಲಿಕ್ಯಾತನಹಳ್ಳಿ ಗ್ರಾಮಕ್ಕೆ ಸರ್ಮಪಕವಾಗಿ ರಸ್ತೆ, ಡಾಂಬರ್, ಚರಂಡಿ ವ್ಯವಸ್ಥೆಯನ್ನು ಕಲ್ಪಿಸ ಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಯಾವುದೇ ರೀತಿಯ ಕ್ರಮ ಜರುಗಿಸದೇ ಇದ್ದರೆ. ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಮನೆ-ನಿವೇಶನ ಹಕ್ಕು-ಪತ್ರ ಹೋರಾಟ ಸಮಿತಿಗಳು ಉಗ್ರ ಹೋರಾಟಕ್ಕೆ ಸಿದ್ದರಾಗಬೇಕೆಂದು ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೆ ಎನ್ ನಾಗೇಶ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ, ಹೊಸಹಳ್ಳಿ ಪಿಡಿಓ ಕುಮಾರ್ ಆಗಮಿಸಿ ಮನವಿ ಸ್ವೀಕರಿಸಿ ತಿಂಗಳೊಳಗೆ ಸಮಸ್ಯೆ ಇತ್ಯಾರ್ಥ ಪಡಿಸುವ ಭರವಸೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಉಪಾಧ್ಯಕ್ಷರಾದ ಗುರುಸ್ವಾಮಿ, ಶಿವಕುಮಾರ್, ಮರಿಲಿಂಗೇಗೌಡ, ಸಿಐಟಿಯು ಮುಖಂಡರಾದ ಜಿ ರಾಮಕೃಷ್ಣ, ವಿಷಕಂಠ ರಾಜು, ಮೀನಾಕ್ಷಾಮ್ಮ, ರಾಜಮ್ಮ, ಮಹಾದೇವು, ಸತೀಶ್, ಸುನಿಲ್ ಮತ್ತಿತರರು ಭಾಗವಹಿಸಿದ್ದರು.