ಶಕ್ತಿ ಯೋಜನೆ ಬಗ್ಗೆ ಗೋ(ಮೋ)ದಿ ಮೀಡಿಯಾಗಳಿಗೆ ಯಾಕೆ ಸಿಟ್ಟು? ಇದು ಸ್ತ್ರೀ ವಿರೋಧಿ  ಮನಸ್ಥಿತಿಯೇ?

ಬಾಪು ಅಮ್ಮೆಂಬಳ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ‘ಶಕ್ತಿ ಯೋಜನೆ’ಗೆ ಮಹಿಳೆಯರಿಂದ ಭರಪೂರ ಸ್ವಾಗತ ದೊರೆತಿದೆ. ಯೋಜನೆ ಅನುಷ್ಠಾನಗೊಂಡ ಜೂನ್ 11 ರಿಂದ 19 ರವರಿಗೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಸುಮಾರು 4 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದಾರೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳಿವೆ. ಅಷ್ಟರ ಮಟ್ಟಿಗೆ ಈ ಯೋಜನೆ ಗೆದ್ದಿದೆ ಎಂದೇ ಹೇಳಬಹುದು. ಹಾಗೆ ನೋಡಿದರೆ ಯಾವುದೆ ಹೆಚ್ಚಿನ ತಕರಾರುಗಳಿಲ್ಲದೆ, ಮಧ್ಯವರ್ತಿಗಳಿಲ್ಲದೆ, ಅರ್ಜಿಗಳಿಲ್ಲದೆ ಸರಳವಾಗಿ ಹಾಗೂ ನೇರವಾಗಿ ಫಲಾನುಭವಿಗಳಿಗೆ ದಕ್ಕಿರುವ ಯೋಜನಗೆಗಳಲ್ಲಿ ಇದೂ ಒಂದು ಎಂದು ಹೇಳಬಹುದು ಅಥವಾ ಇದುವೆ ಒಂದು ಎಂದೂ ಹೇಳಬಹುದು.

ಸರ್ಕಾರವೊಂದು ಯಾವುದಾದರೂ ಜನ ಕಲ್ಯಾಣ ಯೋಜನೆಯನ್ನು ತಂದಾಗ ಅವುಗಳಲ್ಲಿ ದೋಷಗಳು ಇದ್ದೇ ಇರುತ್ತವೆ. ಈ ದೋಷಗಳನ್ನು ವಿಪಕ್ಷಗಳು, ಮಾಧ್ಯಮಗಳು ಹಾಗೂ ಜನರು ಎತ್ತಿ ತೋರಿಸಿ ಅವುಗಳನ್ನು ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ. ಆದರೆ ನಮ್ಮ ರಾಜ್ಯದ ಪ್ರಮುಖ ವಿಪಕ್ಷವಾದ ಬಿಜೆಪಿ, ಅದರ ನಾಯಕರು ಮತ್ತು ಅದರ ಬೆಂಬಲಿಗರು ಹಾಗೂ ವಿಪಕ್ಷವಾಗಿ ಕಾರ್ಯ ನಿರ್ವಹಿಸಬೇಕಾಗಿದ್ದ ಮಾಧ್ಯಮಗಳು ಯೋಜನೆಯೆ ಸರಿಯಿಲ್ಲ ಹಾಗೂ ಯೋಜನೆಯನ್ನು ನಿಲ್ಲಸಲೇಬೇಕು ಎಂಬಂತೆ ಅಭಿಯಾನ ನಡೆಸುತ್ತಿವೆ.

ಶಕ್ತಿ ಯೋಜನೆಗೆ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ‘ಜನಶಕ್ತಿ ಮೀಡಿಯಾ’ ಜೊತೆ ಮಾತನಾಡಿದ  ಕಾಂಗ್ರೆಸ್ ನಾಯಕಿ ಭವ್ಯ ನರಸಿಂಹಮೂರ್ತಿ, ”ಬಸ್ಸಿನಲ್ಲಿ ಜನರು ಜಗಳ ಮಾಡುತ್ತಿರುವುದು ಅಥವಾ ಬಸ್ಸು ರಶ್‌ ಆಗಿ ಪ್ರಯಾಣ ಮಾಡುತ್ತಿರುವುದೇನು ರಾಜ್ಯಕ್ಕೆ ಹೊಸತೇನಲ್ಲ. ಆದರೆ ಅದನ್ನು ಈ ಯೋಜನೆಗೆ ತಗಲು ಹಾಕುವುದನ್ನು ನೋಡಿದರೆ ಇವರೊಳಗೆ ಎಂತಹ ಕೆಟ್ಟ ಉದ್ದೇಶವಿದೆ ಎಂಬವುದು ಅರ್ಥವಾಗುತ್ತದೆ. ಈ ಯೋಜನೆಯೆ ಮಹಿಳೆಯರಿಗೆ ಆಗಿರುವುದರಿಂದ ಹೆಚ್ಚಿನ ಮಹಿಳೆಯರು ಅದರ ಲಾಭ ಪಡೆಯುತ್ತಾರೆ, ಹಾಗಾಗಿ ರಶ್‌ ಆಗುತ್ತದೆ. ಅದಲ್ಲದೆ ಹೊಸ ಯೋಜನೆ ಆಗಿರುವುದರಿಂದ ಮಹಿಳೆಯರು ತುಸು ಉತ್ಸಾಹಗೊಂಡಿದ್ದು ಸ್ವಲ್ಪ ದಿನಗಳಲ್ಲಿ ದೇವಸ್ಥಾನ, ಪ್ರವಾಸ ಎಂದು ಓಡಾಡುತ್ತಾರೆ. ಇದರಲ್ಲಿ ತಪ್ಪೇನಿದೆ?” ಎಂದು ಅವರು ಪ್ರಶ್ನಿಸುತ್ತಾರೆ.

ಭವ್ಯ ನರಸಿಂಹಮೂರ್ತಿ
ಭವ್ಯ ನರಸಿಂಹಮೂರ್ತಿ

ಇವೆಲ್ಲವೂ ಸ್ವಲ್ಪ ದಿನಗಳಲ್ಲಿ ಸಹಜ ಸ್ಥಿತಿಗೆ ಬರುತ್ತವೆ. ಜನರೇನು ದುಡಿಮೆ ಬಿಟ್ಟು ಪ್ರವಾಸ ಮಾಡುತ್ತಲೆ ಇರುವುದಿಲ್ಲ ಒಂದು ವೇಳೆ ಮಾಡುತ್ತಲೆ ಇದ್ದರೂ ಯಾರಿಗೆ ಏನು ನಷ್ಟವಾಗಲಿದೆ ಎಂದು ಭವ್ಯ ಅವರು ಅಭಿಪ್ರಾಯ ಪಡುತ್ತಾರೆ. “ಗಂಡಸರು ಮಾತ್ರ ರಶ್‌ ಆಗಿ ಪ್ರಯಾಣಿಸುವ ಬಸ್‌ಗಳ ಬಗ್ಗೆ ಯಾವುದೆ ತಕರಾರು ಎತ್ತದವರು, ಮಹಿಳೆಯರು ಜಾಸ್ತಿಯಿದ್ದು ರಶ್‌ ಆದ ಕೂಡಲೆ ತಕರಾರು ತೆಗೆಯುತ್ತಾರೆ. ಗಂಡಸರು ಗಲಾಟೆ ಮಾಡಿದಾಗ ಸಮಸ್ಯೆ ಅನ್ನದವರು, ಮಹಿಳೆಯರು ಗಲಾಟೆ ಮಾಡಿದಾಗ ಯೋಜನೆಯಿಂದ ಎಂದು ಹೇಳುತ್ತಿದ್ದಾರೆ. ಇವೆಲ್ಲವೂ ಅವರ ಸ್ತ್ರೀ ವಿರೋಧಿ  ಮನಸ್ಥಿತಿಯಷ್ಟೆ” ಎಂದು ಭವ್ಯ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮಧ್ಯಮ ವರ್ಗ ಹಾಗೂ ಬಡವರು ನೇರವಾಗಿ ಲಾಭ ಪಡೆಯುವ ಯೋಜನೆಯನ್ನು ‘ಬಿಟ್ಟಿ ಭಾಗ್ಯ’ ಎಂದು ಹಂಗಿಸುವ ಮೂಲಕ ಶ್ರಮಜೀವಿಗಳ ಸ್ವಾಭಿಮಾನಕ್ಕೆ ದಕ್ಕೆ ತರುವ ಎಲ್ಲಾ ಪ್ರಯತ್ನವನ್ನು ಮಾಧ್ಯಮಗಳು ಮತ್ತು ವಿಪಕ್ಷ ಬಿಜೆಪಿ ನಡೆಸುತ್ತಿದೆ. ‘ಬಿಟ್ಟಿ ಭಾಗ್ಯಕ್ಕಾಗಿ ಜನರ ತೆರಿಗೆ ಹಣ ಪೋಲಾಗುತ್ತಿದೆ’ ಎಂಬ ನರೇಟಿವ್ ಹುಟ್ಟು ಹಾಕಿ, ಶ್ರೀಮಂತರ ತೆರಿಗೆ ಹಣದಿಂದ ಮಾತ್ರ ಈ ದೇಶದ ಬಡವರು ಬದುಕುತ್ತಿದ್ದಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ಇದರೊಂದಿಗೆ ಈ ದೇಶದಲ್ಲಿ ಬದುಕುತ್ತಿರುವ ಕಡು ಬಡವ ಕೂಡಾ ತೆರಿಗೆ ಕಟ್ಟುತ್ತಿದ್ದಾನೆ ಎಂಬುವುದನ್ನು ಪ್ರಜ್ಞಾಪೂರ್ವಕವಾಗಿ ಮರೆಸಲಾಗುತ್ತಿದೆ.

ಬಸ್‌ಗಳಲ್ಲಿ ನಡೆಯುವ ಗಲಾಟೆಗಳನ್ನು ಅಥವಾ ಬಸ್ಸು ತುಂಬಿ ತುಳುಕಿ ಹೋಗುತ್ತಿರುವುದನ್ನು, ಬಸ್‌ಗಳ ತಾಂತ್ರಿಕ ದೋಷಗಳನ್ನು ‘ಶಕ್ತಿ ಯೋಜನೆ’ಗೆ ತಗಲುಹಾಕಿ ಯೋಜನೆಯ ಸರಿಯಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಎಲ್ಲಿವರೆಗೆಯೆಂದರೆ, ತನ್ನ ಪ್ರೇಮಿಯ ಭೇಟಿಗೆ ಹೊರಟ ಯುವತಿಯ ಸುದ್ದಿ ಬರೆಯುವಾಗ ಕೂಡಾ, ‘ಉಚಿತ ಬಸ್ಸ್‌ನಲ್ಲಿ ಪರಾರಿಯಾದ ಯುವತಿ’ ಎಂಬ ನಂಜಿನ ತಲೆಬರಹಗಳನ್ನು ನೀಡಿ ಬಿಜೆಪಿ ಪರವಾಗಿರುವ ಮಾಧ್ಯಮಗಳು ಸುದ್ದಿ ಮಾಡುತ್ತಿವೆ. ಬಲಪಂಥೀಯ ಸಾಹಿತಿಯೊಬ್ಬರು, ಯೋಜನೆಯಿಂದಾಗಿ ಬೆವರಿನ ವಾಸನೆ ಇರುವ ಮಹಿಳೆ ತನ್ನ ಪಕ್ಕ ಕೂತು ಪ್ರಯಾಣ ಮಾಡಿದ್ದರಿಂದ ತಮ್ಮ ಪ್ರಯಾಣದುದ್ದಕ್ಕೂ ಸಂಕಷ್ಟ ಅನುಭವಿಸಿದೆ ಎಂಬಂತಹ ಅಮಾನವೀಯ ಟಿಪ್ಪಣಿಗಳನ್ನು ಬರೆದು ಶಕ್ತಿ ಯೋಜನೆಯನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ.

ಈ ಬಗ್ಗೆ ಜನಶಕ್ತಿ ಮೀಡಿಯಾಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, “ಹೆಣ್ಣು ಮಕ್ಕಳಿಗಾಗಿ ಏನೇನೂ ಮಾಡದ ಭಯಾನಕ ಪುರುಷ ಪ್ರಧಾನ ಸಮಾಜವಿರುವ ನಮ್ಮ ವ್ಯವಸ್ಥೆಯಲ್ಲಿ ಮಹಿಳೆಯರಿಗಾಗಿ ಕಲ್ಯಾಣ ಯೋಜನೆಯನ್ನು ತಂದಾಗ ನಾವು ಸ್ವಾಗತಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ನೋಡಿದರೆ ಶಕ್ತಿ ಯೋಜನೆಯೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ” ಎಂದು ಹೇಳಿದರು. ಸರ್ಕಾರವೊಂದು ಹೆಣ್ಣು ಮಕ್ಕಳಿಗೆ ಈ ರೀತಿಯ ಯೋಜನೆಯನ್ನು ನೀಡಿದರೆ ಅವುಗಳಿಂದ ಉಳಿತಾಯವಾದ ಹಣ ಬೇರೆ ರೀತಿಯಲ್ಲಿ ಖರ್ಚು ಮಾಡಿ ಆರ್ಥಿಕತೆಗೆ ಬಲ ನೀಡುತ್ತಾರೆ ಎಂದು ಅವರು ಅಭಿಪ್ರಾಯಪಡುತ್ತಾರೆ.

Mallige Sirimane | ಮಲ್ಲಿಗೆ ಸಿರಿಮನೆ
ಮಲ್ಲಿಗೆ ಸಿರಿಮನೆ

“ನಮ್ಮ ರಾಜ್ಯದ 80% ದಿಂದ 85% ಮಹಿಳೆಯರು ತಮ್ಮ ಹೊಟ್ಟೆ ಪಾಡಿಗಾಗಿ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಪ್ರತಿ ದಿನ ದುಡಿಯಲೆ ಬೇಕಾಗಿದೆ. ಈ ಯೋಜನೆಯ ನಂತರ ಬಡವರ ಬೆವರಿಗೆ ವಾಸನೆ ಬರುತ್ತದೆ ಎನ್ನುವ ಸಾಹಿತಿಗಳು ಎಷ್ಟು ಜನರ ಹೆಣ್ಣು ಮಕ್ಕಳನ್ನು ಸಾಕಿದ್ದಾರೆ? ಇಷ್ಟು ವರ್ಷಗಳ ಕಾಲ ಮಹಿಳೆಯರು ತಾವು ದುಡಿದು, ತಮ್ಮ ಕುಟುಂಬದ ಹೊಟ್ಟೆ ಹೊರೆದುಕೊಂಡು, ತಮ್ಮ ಕುಡುಕು ಗಂಡಂದಿರು, ಹಾದಿ ತಪ್ಪಿರುವ ಮಕ್ಕಳನನ್ನು ಸಾಕುತ್ತಿರಲಿಲ್ಲವೆ? ಈ ಎಲ್ಲಾ ಮಹಿಳೆಯರು ಶಕ್ತಿ ಯೋಜನೆ ಬರುವುದಕ್ಕಿಂತ ಮೊದಲು ಕೂಡಾ ದುಡಿಮೆಗಾಗಿ ಓಡಾಡುತ್ತಲೆ ಇದ್ದರಲ್ಲವೆ? ತಮ್ಮ ಹೊಟ್ಟೆಪಾಡಿಗಾಗಿ ಅವತ್ತೂ ಓಡಾಡುತ್ತಿದ್ದ ಮಹಿಳೆ ಇವತ್ತೂ ಓಡಾಡುತ್ತಲೆ ಇದ್ದಾರೆ. ಅವರುಗಳಿಗೆ ಈ ಯೋಜನೆಯಿಂದ ಸಣ್ಣ ಲಾಭವಾಗಿದೆ. ಅಂತವರ ಬೆವರ ವಾಸನೆ ಹೊಡೆಯುತ್ತದೆ ಎನ್ನುವವರು ತಮ್ಮ ತಮ್ಮ ಕಾರುಗಳಲ್ಲಿ ಓಡಾಡಲಿ” ಎಂದು ಮಲ್ಲಿಗೆ ಅಸಮಾಧಾನ ವ್ಯಕ್ತಪಡಿಸಿದರು.

“ಮನೆಗೆಲಸ, ಬೀದಿಬದಿ ವ್ಯಾಪಾರ, ಕಟ್ಟಡ ಕೆಲಸ ಮಾಡುವ ಮಹಿಳೆಯರು ಬಸ್‌ ಚಾರ್ಜ್‌ ಉಳಿಸುವ ಸಲುವಾಗಿ ಕಿಲೋಮೀಟರ್‌ ಗಟ್ಟಲೆ ನಡೆಯುತ್ತಿದ್ದರು. ಅದರಲ್ಲೂ ಯಾವುದೆ ಆದಾಯವಿಲ್ಲದ ವಿಧವೆ, ವೃದ್ಧರಿಗೆ ಈ ಯೋಜನೆಯಿಂದ ಲಾಭವಾಗಿದೆ. ಈ ಯೋಜನೆಯಿಂದಾಗಿ ಬಸ್‌ನಲ್ಲಿ ಓಡಾಡುವ 10% ಮಹಿಳೆಯರು ಹೆಚ್ಚಾಗಿರಬಹುದು. ಇದನ್ನು ನಾವು ಸ್ವಾಗತಿಸುವುದನ್ನು ಬಿಟ್ಟು ಕುಹಕ ಮಾಡುವುದು ಎಷ್ಟು ಸರಿ?” ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷರಾದ ದೇವಿ ಅವರು ಕೇಳುತ್ತಾರೆ.  ಶ್ರೀಮಂತ ವರ್ಗಕ್ಕೆ ಉಚಿತ ಅಗತ್ಯವಿಲ್ಲ ಎಂದಾದರೆ ಅವರು ದುಡ್ಡು ತೆತ್ತು ಪ್ರಯಾಣಿಸಲಿ. ಈ ಯೋಜನೆಯ ಲಾಭವನ್ನು ಅವಶ್ಯಕತೆ ಇರುವ ಮಹಿಳೆಯರು ಪಡೆಯಲಿ ಎಂದು ಅವರು ಹೇಳಿದರು.

Devi Aidwa Mandya
ದೇವಿ

ರಾಜ್ಯದ ಹಲವಾರು ಗ್ರಾಮಗಳಿಗೆ ಬಸ್‌ ಸೇವೆ ಇನ್ನೂ ತಲುಪಿಯೆ ಇಲ್ಲ. ಹಲವು ಗ್ರಾಮಗಳಲ್ಲಿ ಬೆರಳೆಣಿಕೆಯ ಬಸ್‌ ಸೇವೆಗಳಿವೆ. ಹೀಗಾಗಿ ಆ ಬಸ್‌ಗಳು ಹಿಂದೆಯೂ ತುಂಬಿಯೆ ಪ್ರಯಾಣಿಸುತ್ತಾ ಇದ್ದವು, ಈಗಲೂ ತುಂಬಿಯೆ ಪ್ರಯಾಣಿಸುತ್ತಿವೆ. ಇಂತಹ ಪ್ರದೇಶಗಳಲ್ಲಿ ಬಸ್‌ ಪ್ರಾರಂಭಿಸುವ ಬಗ್ಗೆ ಅಥವಾ ಅಲ್ಲಿಗೆ ಹೆಚ್ಚಿನ ಬಸ್‌ ಹಾಕುವ ಬಗ್ಗೆ ಮಾಧ್ಯಮಗಳು ಗಮನ ಹರಿಸಬೇಕಿತ್ತು. ಆದರೆ ಈ ‘ಮೋ(ಗೋ)ದಿ’ ಮಾಧ್ಯಮಗಳು ಅವುಗಳನ್ನು ಬಿಟ್ಟು ಬಸ್‌ ಒಳಗಡೆಯಾಗುವ ಗಲಾಟೆಗಷ್ಟೆ ಕ್ಯಾಮೆರಾ ಹಿಡಿಯುತ್ತಿವೆ. ಇದು ಕ್ರೌರ್ಯವಲ್ಲದೆ ಮತ್ತೇನು?

ಬಸ್‌ಗಳಲ್ಲಿ ಗಲಾಟೆಯಾಗುವ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೆ ಪ್ರತಿಕ್ರಿಯಿಸುತ್ತಾ, ”ಇಂತಹ ಗಲಾಟೆಗಳನ್ನು ಆರೆಸ್ಸೆಸ್‌ ಮತ್ತು ಬಿಜೆಪಿ ಉದ್ದೇಶಪೂರ್ವಕವಾಗಿ ನಡೆಸುತ್ತಿರಬಹುದೆ?” ಎಂಬ ಬಗ್ಗೆ ಕೂಡಾ ಹೋರಾಟಗಾರ್ತಿ ದೇವಿ ಸಂಶಯ ವ್ಯಕ್ತಪಡಿತ್ತಾರೆ.

ಇದೆಲ್ಲದರ ನಡುವೆ ಶ್ರಮಜೀವಿ ಮಹಿಳೆಯರಿಗಂತೂ ಶಕ್ತಿ ಯೋಜನೆ ರೆಕ್ಕೆ ನೀಡಿದೆ ಎಂದೇ ಹೇಳಬಹುದು. ಸಧ್ಯಕ್ಕೆ ಯೋಜನೆಯ ಲಾಭ ಪಡೆಯಲು ಸರ್ಕಾರ ನೀಡಿರುವ ಯಾವುದಾದರೂ ಗುರುತಿನ ಚೀಟಿ ತೋರಿದರೆ ಸಾಕು ಎಂದು ಸರ್ಕಾರ ಹೇಳಿದೆ. ಮುಂದಕ್ಕೆ  ಸ್ಮಾರ್ಟ್‌ ಕಾರ್ಡ್‌ ಅನ್ನು ಪರಿಚಯಿಸುವುದಾಗಿ ಹೇಳಿಕೊಂಡಿದೆ. ಆದರೆ ಈಗಿರುವ ಮಾದರಿಯಲ್ಲೆ ಯೋಜನೆ ಮುಂದುವರೆದರೆ ಅವಿದ್ಯಾವಂತ ಬಡ ಮಹಿಳೆಯರೂ ಇದರ ನೇರ ಲಾಭ ಪಡೆಯುವುದನ್ನು ಮುಂದುವರೆಸಿದಂತಾಗುತ್ತದೆ. ಇಲ್ಲವೆಂದರೆ ಶಕ್ತಿ ಯೋಜನೆಯ ಗುರುತಿನ ಚೀಟಿಗಾಗಿ ಮತ್ತೆ ಕಚೇರಿ, ಸೇವಾ ಕೇಂದ್ರ ಅಳೆಯುವಂತಾಗುತ್ತದೆ.

ಅಲ್ಲದೆ ಮಹಿಳೆಯರು ತಮ್ಮ ಗುರುತಿನ ಚೀಟಿಯನ್ನು ಮೊಬೈಲ್ ಮೂಲಕ ತೋರಿಸಿದರೆ ಕೆಲವೊಂದು ಬಸ್‌ಗಳಲ್ಲಿ ಪರಿಗಣಿಸಿದರೆ, ಕೆಲವೊಂದು ಬಸ್‌ಗಳಲ್ಲಿ ಅವುಗಳನ್ನು ಪರಿಗಣಿಸುವುದಿಲ್ಲ ಎಂಬ ಬಗ್ಗೆ ದೂರುಗಳಿವೆ. ಇಂತಹ ಗೊಂದಲಗಳನ್ನು ಸರ್ಕಾರ ನಿವಾರಿಸಬೇಕಾಗಿದೆ. ಜೊತೆಗೆ ಬಸ್‌ಗಳೇ ಇಲ್ಲದ ಪ್ರದೇಶಗಳಿಗೆ ಹೊಸದಾಗಿ ಬಸ್‌ ಸೇವೆ ಪ್ರಾರಂಭಿಸುವುದು, ಕಡಿಮೆ ಬಸ್‌ಗಳು ಇರುವ ಪ್ರದೇಶಗಳಿಗೆ ಹೆಚ್ಚಿನ ಬಸ್‌ಗಳನ್ನು ನಿಯೋಜಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ಬಗ್ಗೆ ಮಾಧ್ಯಮ, ವಿಪಕ್ಷಗಳು, ಜನರು ಸರ್ಕಾವನ್ನು ಒತ್ತಾಯಿಸಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *