ಆಶ್ವಾಸನೆ ಸಾಂವಿಧಾನಿಕ ನಿಬಂಧನೆ ಅಲ್ಲ, ಅದು ಕೇವಲ ಭರವಸೆ ಎಂದ ಸಚಿವ ಹೆಚ್​ಸಿ ಮಹದೇವಪ್ಪ

ಮೈಸೂರು: ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡುವುದು ಸಾಮಾನ್ಯ. ಆಶ್ವಾಸನೆ ಸಾಂವಿಧಾನಿಕ ನಿಬಂಧನೆ ಅಲ್ಲ, ಅದು ಕೇವಲ ಭರವಸೆ ಎಂದು ಸಚಿವ ಹೆಚ್​.ಸಿ.ಮಹದೇವಪ್ಪ  ಹೇಳಿದರು. ಇಂದು ಮೈಸೂರಿನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಗೆ ಮತ ಹಾಕಿದರೆ ಇದನ್ನು ಪೂರೈಸುತ್ತೇವೆ ಅಂತಾ ಹೇಳುತ್ತೇವೆ. ಆದರೆ ಕೊಟ್ಟ ಮಾತನ್ನು ಈಡೇರಿಸಬೇಕಲ್ಲವಾ ಎಂದರು. ನಮ್ಮದು ಬದುಕಿಗೆ ಪ್ರೇರಣೆ, ಪ್ರೋತ್ಸಾಹದಾಯಕ ಯೋಜನೆಗಳು. ಅದಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೆವು.  ಗ್ಯಾರಂಟಿ ಜಾರಿಗೆ ಮೊದಲ ಸಂಪುಟದಲ್ಲಿ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

ಸಂವಿಧಾನ ತಿದ್ದುಪಡಿಗೆ ಅವಕಾಶವಿದೆ, ತಿರುಚಲು ಅಲ್ಲ

ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪೀಠಿಕೆ ಓದುವುದು ಕಡ್ಡಾಯ. ಒಂದು ನಿಮಿಷದ ಪೀಠಿಕೆಯು ಸಮಾನತೆಯ ಬದುಕು ಕಲಿಸುತ್ತದೆ. ಸಂವಿಧಾನದ ಪೀಠಿಕೆ ಮೂಲಕ ಮಕ್ಕಳಲ್ಲಿ ಸಮಾನತೆ ಮೂಡಿಸಬಹುದು. ಇದು ದೇಶದ 140 ಕೋಟಿ ಜನರಿಗೂ ಅನ್ವಯವಾಗುತ್ತಿದೆ. ಸಂವಿಧಾನದ ತಿದ್ದುಪಡಿಗೆ ಅವಕಾಶವಿದೆ, ಆದರೆ ತಿರುಚಲು ಅವಕಾಶವಿಲ್ಲ ಎಂದರು.

ಇದನ್ನೂ ಓದಿ:ವಸತಿ ಶಾಲೆಗಳ ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ -ಸಚಿವ ಹೆಚ್.ಸಿ ಮಹದೇವಪ್ಪ

ಅಧಿಕಾರ ಹಂಚಿಕೆ ಬಗ್ಗೆ ಗುಟ್ಟು ಬಿಟ್ಟು ಕೊಡದ ಹೆಚ್​​.ಸಿ.ಮಹದೇವಪ್ಪ 

ಸಿಎಂ ಅಧಿಕಾರ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯ ಪರ ಹೆಚ್​ಸಿ ಮಹದೇವಪ್ಪ ವಕಾಲತ್ತು ವಹಿಸಿದರು. ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ಮೂರು ಬಾರಿ ಉಚ್ಚರಿಸಿದರು. ಅಧಿಕಾರ ಹಸ್ತಾಂತರದ ಬಗ್ಗೆ ಹೆಚ್​ಸಿ ಮಹದೇವಪ್ಪ ಯಾವುದೇ ವಿಚಾರ ಬಿಟ್ಟು ಕೊಡಲಿಲ್ಲ. ಈ ಹಿಂದೆ ಮೈಸೂರಿನಲ್ಲಿ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದರು.

ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ

ಅಕ್ಕಿ ವಿಚಾರವಾಗಿ ಮಾತನಾಡಿದ ಅವರು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ. ಹೆಚ್ಚುವರಿ ಅಕ್ಕಿ ಕೇಳಿದರೆ ಚುನಾವಣೆಗೂ ಮುಂಚೆ ನಮ್ಮನ್ನು ಕೇಳಿದರಾ ಎನ್ನುತ್ತಾರೆ. ಪ್ರಣಾಳಿಕೆ ಬಗ್ಗೆ ಒಂದು ಪಕ್ಷ ಇನ್ನೊಂದು ಪಕ್ಷದ ಜತೆ ಚರ್ಚಿಸಲು ಹೇಗೆ ಸಾಧ್ಯ ಎಂದು ಕಿಡಿ ಕಾರಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *