ಬೆಂಗಳೂರು: ಇಂದಿನ ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ತನಿಖೆಗೆ ವಹಿಸುವ ನಿಟ್ಟಿನಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದಲ್ಲಿನ ಹಗರಣವನ್ನು ಯಾವ ತಂಡಗಳಿಗೆ ತನಿಖೆಗೆ ವಹಿಸಬೇಕು ಎಂಬ ನಿಟ್ಟಿನಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ. ಬೇರೆ ಬೇರೆ ರೀತಿಯ ಹಗರಣಗಳಿರುವುದರಿಂದ ತನಿಖೆಗಳನ್ನೂ ಬೇರೆ ಬೇರೆ ರೀತಿ ನಡೆಸಬೇಕಾಗುತ್ತದೆ ಎಂದರು. ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸೈಬರ್ ಪರಿಣಿತರ ತಂಡ ಬೇಕು. ಕೆಲವು ಕಡೆ ಎಸ್ಐಟಿ ತನಿಖೆ ಮಾಡುತ್ತದೆ. ಕೆಲವು ಇಲಾಖಾವಾರು ತನಿಖೆ ಮಾಡಬೇಕಾಗುತ್ತದೆ. ಮತ್ತೆ ಕೆಲವೊಂದು ಪ್ರಕರಣಗಳನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕಾಗುತ್ತದೆ. ಯಾವ ಯಾವ ಹಗರಣ ಯಾವ ರೀತಿಯಲ್ಲಾಗಿದೆ ಎಂಬುದರ ಮೇಲೆ ತನಿಖೆ ನಿರ್ಧಾರವಾಗುತ್ತದೆ ಎಂದರು.
ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನಾವು ಜನರಿಗೆ ಹಗರಣಗಳ ಬಗ್ಗೆ ತನಿಖೆ ಮಾಡಿಸುವುದಾಗಿ ಭರವಸೆ ನೀಡಿದ್ದೆವು. ಅದಕ್ಕೆ ನಾವು ಬದ್ಧವಾಗಿದ್ದು, ತನಿಖೆ ಮಾಡಿಸುತ್ತೇವೆ. ಬಿಟ್ ಕಾಯಿನ್, ಪಿಎಸ್ಐ, ಗಂಗಾಕಲ್ಯಾಣ, ಕೆಪಿಟಿಸಿಎಲ್ ನೇಮಕಾತಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣಗಳು, ಕೋವಿಡ್ ಸಮಯದ ಭ್ರಷ್ಟಾಚಾರ ಸೇರಿದಂತೆ ಎಲ್ಲಾ ವಿಚಾರಗಳನ್ನು ತನಿಖೆಗೊಳಪಡಿಸುತ್ತೇವೆ ಎಂದು ತಿಳಿಸಿದರು.ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ನಾವು ನಡೆದುಕೊಳ್ಳಬೇಕು. ಗಂಗಾಕಲ್ಯಾಣ ಯೋಜನೆ ಅಕ್ರಮ ಕುರಿತಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ 2 ಎಫ್ಐಆರ್ಗಳು ದಾಖಲಾಗಿವೆ. ಕಲ್ಯಾಣ ಕರ್ನಾಟಕ ಯೋಜನೆಯಲ್ಲಿ ಸಾವಿರಾರು ಕೋಟಿ ರೂ. ಅಕ್ರಮವಾಗಿದೆ. ಇದು ಇಲಾಖಾವಾರು ತನಿಖೆ ನಡೆಯುತ್ತಿದೆ. ಉನ್ನತಾಧಿಕಾರಿಗಳನ್ನು ತನಿಖಾ ತಂಡಕ್ಕೆ ನೇಮಿಸಿ ಹಂತಹಂತವಾಗಿ ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಹಗರಣ: 545 ಅಭ್ಯರ್ಥಿಗಳಲ್ಲಿ ಎಷ್ಟು ಜನರ ವಿಚಾರಣೆಯಾಗಿದೆ: ಪ್ರಿಯಾಂಕ್ ಖರ್ಗೆ ಪ್ರಶ್ನೆ
ಹಗರಣದಲ್ಲಿ ಸಚಿವರು, ಶಾಸಕರು ಯಾರೇ ಭಾಗಿಯಾಗಿದ್ದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಬಿಜೆಪಿಯವರು ಹಗರಣದಲ್ಲಿ ಕಾಂಗ್ರೆಸ್ನವರೇ ಸಿಲುಕಿಕೊಳ್ಳುತ್ತಾರೆ ಎಂದು ಆರೋಪ ಮಾಡುತ್ತಿದ್ದರು. ಯಾರು ತಪ್ಪು ಮಾಡಿದ್ದಾರೋ ಅವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ತನಿಖೆ ನಂತರ ಸತ್ಯಾಂಶ ಹೊರಬರಲಿದೆ. ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ.ಪ್ರಾಮಾಣಿಕವಾಗಿ ಕೆಪಿಎಸ್ಸಿ, ಕರ್ನಾಟಕ ಪರೀಕ್ಷಾ ಪ್ರಾಕಾರ ನಡೆಸಿದ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆ ಬರೆದಿರುವ 20 ರಿಂದ 30 ಲಕ್ಷ ಅಭ್ಯರ್ಥಿಗಳಿದ್ದಾರೆ. ಅವರ ಭವಿಷ್ಯ ಏನಾಗಬೇಕು. ನಮಗೆ ಯುವಕರ ಭವಿಷ್ಯ ಮುಖ್ಯ. ಹೀಗಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು. ಸಚಿವರ ನಿಯೋಗ ಪಕ್ಷ ಹೈಕಮಾಂಡ್ ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ವರಿಷ್ಠರನ್ನು ಭೇಟಿ ಮಾಡಿ ಸಲಹೆ, ಮಾರ್ಗದರ್ಶನ ಪಡೆಯುತ್ತಾರೆ. ಹೈಕಮಾಂಡ್ ನೀಡುವ ಸೂಕ್ತ ಸಲಹೆಗಳನ್ನು ಜಾರಿ ಮಾಡಲು ಯೋಚಿಸುತ್ತಾರೆ. ಇದೊಂದು ಸೌಜನ್ಯ ರೀತಿಯ ಭೇಟಿಯಾಗಲಿದ್ದು, ಈ ತಿಂಗಳ 20 ಇಲ್ಲವೇ 21 ರಂದು ಭೇಟಿಯಾಗುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು