ಶಿವಮೊಗ್ಗ: ವಿದ್ಯುತ್ ದರ ಹೆಚ್ಚಳ ಖಂಡಿಸಿ ಶಿವಮೊಗ್ಗದ ಮೆಸ್ಕಾಂ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮೆಸ್ಕಾಂ ಕಚೇರಿ ಮೇಲೆ ಕಲ್ಲು ಎಸೆದು ವಿಕೃತಿ ಮೆರೆದಿದ್ದಾರೆ.
ಶಿವಮೊಗ್ಗದ ಕೆ.ಇ.ಬಿ ವೃತ್ತದಲ್ಲಿ ಇಂದು ಶಿವಮೊಗ್ಗ ನಗರ ಬಿಜೆಪಿ ಘಟಕದ ವತಿಯಿಂದ ವಿದ್ಯುತ್ ದರ ಏರಿಕೆ ಖಂಡಿಸಿ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಮ್ಮಿಕೊಳ್ಳಲಾಗಿತ್ತು. ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಪ್ರತಿಭಟನೆಯ ನಂತರ ಶಿವಮೊಗ್ಗ ನಗರ ಬಿಜೆಪಿ ಶಾಸಕ ಚನ್ನಬಸಪ್ಪ ಅವರು ಕರೆ ನೀಡುತ್ತಿದ್ದಂತೆ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಇದನ್ನೂ ಓದಿ : ನಾಳೆಯಿಂದ ಆರಂಭವಾಗಬೇಕಿದ್ದ ‘ಗೃಹ ಜ್ಯೋತಿ’ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ?
ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ್ದಾರೆ. ಆದರೂ ಕಾರ್ಯಕರ್ತರು ಪೊಲೀಸರ ಬ್ಯಾರಿಕೇಡ್ಗಳನ್ನು ತಳ್ಳಿ ಪೊಲೀಸರನ್ನೂ ನೂಕಿ ಒಳಗೆ ನುಗ್ಗಿದ್ದಾರೆ. ಕಚೇರಿ ಪ್ರವೇಶ ದ್ವಾರದ ಬಳಿ ಹಾಕಿದ್ದ ಬ್ಯಾರಿಕೇಡ್ ಅನ್ನು ಸಹ ತಳ್ಳಿ ಕಾರ್ಯಕರ್ತರು ಮುಂದೆ ಹೋಗಿದ್ದಾರೆ. ಏಕಾಏಕಿ ಪ್ರತಿಭಟನಕಾರರನ್ನು ತಡೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಂತೆ ಕಾರ್ಯಕರ್ತನೋರ್ವ ಕಚೇರಿ ಮುಂಭಾಗದ ಗಾಜಿಗೆ ಕಲ್ಲು ತೂರಾಟ ಮಾಡಿದ್ದಾನೆ.
ಆತನನ್ನು ಪೊಲೀಸರು ಹಿಂದೆ ಕರೆದುಕೊಂಡು ಹೋಗುತ್ತಿದ್ದಂತಯೇ ಆತನೇ ಮತ್ತೆ ಬಂದು ಕಚೇರಿಯ ಇನ್ನೊಂದು ಭಾಗದ ಗಾಜಿಗೆ ಕಲ್ಲು ತೂರಾಟ ನಡೆಸಿದ್ದಾನೆ. ಈ ವೇಳೆ ಕಲ್ಲು ಕಚೇರಿ ಒಳಗೆ ನುಗ್ಗಿದ್ದು, ಈ ವೇಳೆ ಕೊಠಡಿಯಲ್ಲಿ ಯಾರೂ ಇಲ್ಲದ ಕಾರಣ, ಯಾವುದೇ ಅನಾಹುತ ಸಂಭವಿಸಿಲ್ಲ. ಇತ್ತ ಪೊಲೀಸರು ಕಾರ್ಯಕರ್ತರನ್ನು ಬಂಧಿಸುತ್ತಿದ್ದಂತೆಯೇ ಕಚೇರಿ ಒಳ ಭಾಗಕ್ಕೆ ನುಗ್ಗಿದವರು ಕಚೇರಿಯ ನೋಟಿಸ್ ಬೋರ್ಡ್ ಅನ್ನು ಕೂಡ ಒಡೆದು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ಕಚೇರಿ ಒಳಗೆ ನುಗ್ಗಿ ಕಲ್ಲು ತೂರಾಟ ನಡೆಸುತ್ತಿದ್ದಂತೆ ಶಾಸಕ ಚನ್ನಬಸಪ್ಪ, ಮೇಯರ್ ಶಿವಕುಮಾರ್, ಬಿಜೆಪಿ ನಗರಾಧ್ಯಕ್ಷ ಜಗದೀಶ್, ಕಾರ್ಪೋರೇಟರ್ ವಿಶ್ವಾಸ್ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.