ಬೆಂಗಳೂರು: ರಾಜ್ಯ ಸರಕಾರಿ ನೌಕರ ಸಮುದಾಯದ ಪ್ರಮುಖ ಬೇಡಿಕೆಯಾಗಿರುವ ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
“ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ (ಒಪಿಎಸ್) ಮರು ಜಾರಿಯಿಂದ ಎದುರಾಗುವ ಸಾಧಕ – ಬಾಧಕಗಳ ಕುರಿತಂತೆ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ, ಜುಲೈ 7ರ ಬಜೆಟ್ನಲ್ಲಿ ಪ್ರಕಟಿಸುವ ಬಗ್ಗೆ ನಿರ್ಧರಿಸಲಾಗುವುದು,” ಎಂದು ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದರು.
ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಜೂನ್ 13 ರಂದು ತಮ್ಮನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದ ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘ ಹಾಗೂ ನಾನಾ ನೌಕರ ಸಂಘಟನೆಗಳ ಪದಾಧಿಕಾರಿಗಳ ನಿಯೋಗಕ್ಕೆ ಅವರು ಈ ಭರವಸೆ ನೀಡಿದರು. “ನೌಕರರರ ಬೇಡಿಕೆಗಳಿಗೆ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಬಂದಿದೆ. ಸರಕಾರ ಜಾರಿ ಮಾಡುತ್ತಿರುವ ಐದು ‘ಗ್ಯಾರಂಟಿ’ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ತಲುಪಿಸಲು ನೌಕರ ಸಮುದಾಯ ಬದ್ಧತೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು,” ಎಂದು ಸಿಎಂ ಸಲಹೆ ನೀಡಿದರು.
ಇದನ್ನೂ ಓದಿ:ಎನ್ಪಿಎಸ್ ರದ್ದತಿಗೆ ಆಗ್ರಹಿಸಿ ಸರ್ಕಾರಿ ನೌಕರರ ಬೃಹತ್ ಪ್ರತಿಭಟನಾ ಪ್ರದರ್ಶನ ಆರಂಭ
ರಾಜ್ಯದಲ್ಲಿ 2006ರ ಏಪ್ರಿಲ್ 1ರಿಂದ ಹೊಸ ಪಿಂಚಣಿ ಯೋಜನೆ ಜಾರಿಗೆ ಬಂದಿದ್ದು, ಸುಮಾರು 2.98 ಲಕ್ಷ ಸರಕಾರಿ ನೌಕರರು ಎನ್ಪಿಎಸ್ ವ್ಯಾಪ್ತಿಯಲ್ಲಿದ್ದಾರೆ. ನಿಶ್ಚಿತ ಮೊತ್ತದ ಪಿಂಚಣಿ ಖಾತರಿ ಇಲ್ಲದ ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ನಿವೃತ್ತಿ ಬದುಕಿಗೆ ಆರ್ಥಿಕ ಭದ್ರತೆ ಖಾತರಿಗಾಗಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂಬುದು ನೌಕರ ಸಮುದಾಯದ ಬೇಡಿಕೆಯಾಗಿದೆ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೆಪಿಟಿಸಿಎಲ್, ಆರೋಗ್ಯ, ಜಲಮಂಡಳಿ, ಕಂದಾಯ ಇಲಾಖೆ ನೌಕರರ ಸಂಘಗಳು ಸೇರಿ ನಾನಾ ಸಂಘಟನೆಗಳ ಪದಾಧಿಕಾರಿಗಳು ಈ ನಿಯೋಗದಲ್ಲಿದ್ದರು.
ಕರ್ನಾಟಕ ರಾಜ್ಯ ಎನ್ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತಾರಾಮ್ ತೇಜ್ ಕೂಡ ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಎನ್ಪಿಎಸ್ ನ್ನು ರದ್ದುಗೊಳಿಸಲಾಗಿದೆ ಕರ್ನಾಟಕವು ಕೂಡ ಇದನ್ನು ಪಾಲಿಸಬೇಕು ಎಂದರು. ಇದುವರೆಗೆ ಠೇವಣಿ ಇಟ್ಟಿರುವ ಪಿಂಚಣಿ ಹಣವನ್ನು ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಬಹುದು. ಠೇವಣಿ ಇಟ್ಟಿರುವ 19 ಕೋಟಿ ರೂಪಾಯಿಗಳಲ್ಲಿ 9 ಕೋಟಿ ರೂಪಾಯಿಗಳು ನೌಕರರ ಪಾಲು ಆಗಿದ್ದು, ಇದನ್ನು ಸಾಮಾನ್ಯ ಭವಿಷ್ಯ ನಿಧಿಯನ್ನಾಗಿ ಪರಿವರ್ತಿಸಬಹುದು. ಸರ್ಕಾರದ ಪಾಲು 10 ಕೋಟಿ ರೂಪಾಯಿಯನ್ನು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಬಳಸಿಕೊಳ್ಳಬಹುದು ಎಂದು ಸಿಎಂಗೆ ಮನವರಿಕೆ ಮಾಡಿಕೊಟ್ಟರು.