ರಾಜಾರಾಂ ತಲ್ಲೂರು
ಮೊನ್ನೆಯಿಂದ ಏಕಾಏಕಿ ಹಳೇ ಬಿಲ್ಲು-ಹೊಸ ಬಿಲ್ಲು ಹೋಲಿಕೆ ಮಾಡಿ, ನಮಗೆ ಬಿಲ್ ಇಷ್ಟು ಜಾಸ್ತಿಯಾಗಿದೆ. ಇದು ಒಂದು ಕೈಯಲ್ಲಿ “ಉಚಿತ ಗ್ಯಾರಂಟಿ” ಕೊಟ್ಟು, ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವ ಆಟ ಇದು ಎಂದು, ಹೊಸದಾಗಿ ಬಂದು ಈಗಷ್ಟೇ ಅಧಿಕಾರ ವಹಿಸಿಕೊಂಡಿರುವ ರಾಜ್ಯಸರ್ಕಾರವನ್ನು ದೂರುವ ಹಲವು ಪೋಸ್ಟ್‌ಗಳನ್ನು ನೋಡಿದೆ. ಮೇಲುನೋಟಕ್ಕೆ ಹೌದು ಹೌದೆಂದೆನಿಸುವ ಈ ಪೋಸ್ಟ್‌ಗಳ ಆಳಕ್ಕೆ ಇಳಿದು ನೋಡಬೇಕನ್ನಿಸಿತು. ಹಾಗೆ ನೋಡಿದಾಗ ನನಗೆ ಕಾಣಿಸಿದ್ದು ಇಷ್ಟು:
ಈಗ ಬಹುತೇಕ ಸ್ವಾಯತ್ತ ಯೂನಿಟ್‌ಗಳಾಗಿ ವರ್ತಿಸಲು ಕಲಿಯುತ್ತಾ, ಇನ್ನೇನು ಖಾಸಗೀಕರಣಗೊಂಡು ಯಾವುದೋ #ಆನಿ ಕೈ ಸೇರಲಿರುವ ಎಸ್ಕಾಂಗಳಿಗೆ, ಅವರ ವಿದ್ಯುತ್ ದರ ನಿಗದಿ ಮಾಡುವುದಕ್ಕೆಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC)ಇದೆ. ಅದು ಮೇ 12ರಂದು ಎಸ್ಕಾಂಗಳ ಬೇಡಿಕೆಯನ್ನು ಆಧರಿಸಿ, ವಿದ್ಯುತ್ ದರ ಪರಿಷ್ಕರಿಸಿ ಪ್ರಕಟಣೆ ಹೊರಡಿಸಿದೆ. ಈ ಪರಿಷ್ಕೃತ ದರಗಳು ಈ ವರ್ಷದ ಎಪ್ರಿಲ್ ತಿಂಗಳಿನಿಂದಲೇ ಪೂರ್ವಾನ್ವಯವಾಗಬೇಕೆಂದು ಅದು ಆದೇಶಿಸಿದೆ.
ಚುನಾವಣೆ ಕಾಲದಲ್ಲಿ ವಿದ್ಯುತ್ ದರ ಏರಿಕೆ ಬೇಡವೆಂದು ಕಾದಿದ್ದ ಆಯೋಗ, ಚುನಾವಣೆ ಮಗಿದ ತಕ್ಷಣ ಹಣಕಾಸು ವರ್ಷದ ಆರಂಭದಿಂದಲೇ ಪೂರ್ವಾನ್ವಯ ಆಗವಂತೆ ಈ ಆದೇಶ ಹೊರಡಿಸಿರುವುದರಂದ, ಮತ್ತು ಎಸ್ಕಾಂಗಳು ಈ ತಿಂಗಳ ಬಿಲ್ಲಿನಲ್ಲಿ ಆ ಹಳೆ ಬಾಕಿಗಳನ್ನು ಸೇರಿಸಿರುವುದರಿಂದ ಒಂದು ಹಂತದ ಏರಿಕೆ ಆಗಿದೆ.
ಎರಡನೆಯದಾಗಿ, ಎಸ್ಕಾಂಗಳು ಯೂನಿಟ್ ಮೇಲೆ 16.83% ದರ ಏರಿಕೆ ಕೋರಿದ್ದವು. ಇದು ಯನಿಟ್ ಒಂದರ ಸರಾಸರಿ 1.39ರೂ. ಏರಿಕೆ ಆಗುತ್ತದೆ. ಆದರೆ KERC ಅದನ್ನು ಯೂನಿಟ್ಟಿಗೆ 70 ಪೈಸೆ ಏರಿಸಿದೆ. ಅಂದರೆ 8.31% ಏರಿಕೆ. ಇದೂ ಕೂಡ ಈ ಬಾರಿಯ ಬಿಲ್ಲಿನಲ್ಲಿ ಕಾಣಿಸಿಕೊಂಡಿದೆ.
ಈ ಎರಡೂ ಕಾರಣಗಳಿಗಾಗಿ ಈ ತಿಂಗಳ ಬಿಲ್ ರಾಜ್ಯದಾದ್ಯಂತ ಎಲ್ಲರಿಗೂ ಏರಿಕೆ ಆಗಲಿರುವುದು ಖಚಿತ!
ಸರಿ. ಈ ಏರಿಕೆಗಳಿಗೆ ಕಾರಣ ಏನು ಎಂಬುದನ್ನು KERC ಹೇಳಿದೆ. ಪರಿಶೀಲಿಸಿ.
1. ಎಸ್ಕಾಂಗಳ ಆದಾಯಕ್ಕಿಂತ ಖರ್ಚು ಹೆಚ್ಚಾಗಿ, 2023-24 ನೇ ಸಾಲಿಗೆ ಅವರಿಗೆ 3357.12 ಕೋಟಿ ರೂ. ಆದಾಯ ಕೊರತೆ ಕಾಣಿಸುತ್ತಿದೆ.
2. ಕಲ್ಲಿದ್ದಲು ಸಾಗಾಟ ದರ ಏರಿಸಿರುವುದರಿಂದ, ವಿದ್ಯುತ್ ಉತ್ಪಾದಕರು ದರ ಏರಿಸಿದ್ದು, ಅಲ್ಲಿ 13% ಏರಿಕೆ ಆಗಿದೆ. (ಇಲ್ಲಿ ಕಲ್ಲಿದ್ದಲು ಸಿಗುವುದೆಲ್ಲಿ, ಅದರ ಗಣಿ ಮಾಲಕರು ಯಾರು, ಹರಾಜಿನಲ್ಲಿ ಅದನ್ನು ಪಡೆದವರು ಯಾರು? ಕಲ್ಲಿದ್ದಲು ವಿದೇಶದಿಂದ ಯಾರು ಆಮದು ಮಾಡಿಕೊಳ್ಳುತ್ತಿದ್ದಾರೆ? ಇಲ್ಲಿ ಅದನ್ನು ಸಾಗಿಸುವವರು ಯಾರು, ಉಷ್ಣ ವಿದ್ಯುತ್ ಉತ್ಪಾದಕರು ಯಾರೆಲ್ಲ… ಇದನ್ನೆಲ್ಲ ಒಮ್ಮೆ ಗಮನಿಸಿಕೊಳ್ಳಿ).
3. ಎಸ್ಕಾಂ ಸಿಬ್ಬಂದಿಗಳ ಸಂಬಳದಲ್ಲಿ 20% ಹೆಚ್ಚಳ ಆಗಿದೆ.
4. ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳದಿಂದಾಗಿ ಬ್ಯಾಂಕ್ ಸಾಲ, ಬಡ್ಡಿ ಹೆಚ್ಚು ಕಟ್ಟಬೇಕಾಗಿದೆ. (ನಾಳೆ ಖಾಸಗಿಗೆ ಮಾರಾಟಗೊಳ್ಳಲು ಸಿದ್ಧವಾಗಿರುವ ಎಸ್ಕಾಂಗಳಿಗೆ ಈಗ ಹೊಸದಾಗಿ ಬಂಡವಾಳ ಹೂಡಿಕೆ ಹೆಚ್ಚಿಸುತ್ತಿರುವುದಕ್ಕೆ ಕಾರಣ ಏನು?!!)
ಈ ಎಲ್ಲ ಕಾರಣಗಳಿಂದಾಗಿ, ರಾಜ್ಯ ಖರೀದಿಸುವ ಪ್ರತೀ ಯೂನಿಟ್ ವಿದ್ಯುತ್ತಿನ ಬೆಲೆ 2023 ಯಲ್ಲಿ 8.42 ರೂ. ಇದ್ದದ್ದು 2024 ಕ್ಕೆ 9.12ರೂ.ಗೆ ಏರಲಿದೆ.
ಇದಿಷ್ಟು ಮೂಲ ಕಾರಣ ಆಯಿತು.
1. ಇನ್ನು ನಮ್ಮ “ಟ್ಯಾಕ್ಸ್ ಪೇಯರ್” ಗಳು! ನಾವು ಕಟ್ಟಿದ ತೆರಿಗೆಯಲ್ಲಿ “ಬಿಟ್ಟಿ ಭಾಗ್ಯ” ನೀವು ತಿನ್ನುತ್ತಿದ್ದೀರಿ ಎಂದು ಹಂಗಿಸುವ ಉದ್ದಿಮೆದಾರರಿಗೆ, ಅವರ ವಿದ್ಯುತ್ ದರವನ್ನು ಯನಿಟ್‌ಗೆ 6.00 ರೂ. ನಿಂದ 5.00 ರೂ.ಗೆ ಇಳಿಸಲಾಗಿದೆ! (ಇದು ಬಿಟ್ಟಿ ಭಾಗ್ಯ ಅಲ್ಲವೇ ಅಲ್ಲ ಪಾಪ!)
2. ವಿದ್ಯುತ್ ವಾಹನಗಳ ಪ್ರೋತ್ಸಾಹಕ್ಕಾಗಿ ವಿದ್ಯುತ್ ಚಾರ್ಜಿಂಗ್ ಸ್ಟೇಷನ್‌ಗಳಿಗೆ ಪ್ರತೀ ಯೂನಿಟ್ ದರವನ್ನು 5 ರಿಂದ 4.50 ರೂ.ಗೆ ಇಳಿಸಲಾಗಿದೆ. (ನಾಳೆ ಇದರ ಮಾಲಕರು ಯಾರೆಂದು ಕೇಳಬೇಡಿ ಮತ್ತೆ!)
ಇಂತಹದೇ ಇನ್ನಷ್ಟು ರಿಯಾಯಿತಿಗಳಿವೆ. ಅದರಲ್ಲಿ ಕೆಲವನ್ನು ಮಾತ್ರ ಮೇಲೆ ಹೇಳಿದ್ದೇನೆ.
ಇನ್ನು, ಖಾಸಗೀಕರಣದ ಪುಟ್ಟಪುಟ್ಟ ಹೆಜ್ಜೆಗಳು ಮುಂದುವರಿದಿದ್ದು, ಕೃಷಿ ಪಂಪ್ ಸೆಟ್‌ಗಳ RRNo. ನ್ನು ಗ್ರಾಹಕರ ಆಧಾರ್ ನಂಬರ್ ಜೊತೆ ಆರು ತಿಂಗಳ ಒಳಗೆ ಲಿಂಕ್ ಮಾಡದಿದ್ದಲ್ಲಿ, ಸರ್ಕಾರ ಅವರಿಗೆ ಸಬ್ಸಿಡಿ ಕೊಡುವುದಿಲ್ಲ ಎಂದು KERC ಪ್ರಕಟಣೆಯಲ್ಲಿ ಹೇಳಲಾಗಿದೆ.
ಈ ವಿದ್ಯುತ್ ವಿತರಣೆ ಖಾಸಗೀಕರಣದ ಪ್ರಯತ್ನಗಳು, ಜೊತೆಗೆ ವಿದ್ಯುತ್ ಖರೀದಿ ದರದಲ್ಲಿ ಸತತ ಏರಿಕೆ, ಅದೆಲ್ಲ ಹೊರೆಯನ್ನೂ ತಳದಲ್ಲಿರುವ ಗ್ರಾಹಕರಿಗೆ ವರ್ಗಾಯಿಸುವ ಪ್ರಯತ್ನ, ಎಸ್ಕಾಂಗಳ ನಷ್ಟದ ಹೊರೆ ತಗ್ಗಿಸುವ ಪ್ರಯತ್ನ, ನಷ್ಟ ತಗ್ಗಿದ ಬಳಿಕ ಅವನ್ನು ತಟ್ಟೆಯಲ್ಲಿಟ್ಟು ಆನಿಗಳಿಗೆ ಕೊಡಲು ಸಿದ್ಧತೆ, ಕ್ರಾಸ್ ಸಬ್ಸಿಡಿಗಳ ಮೂಲಕ ಆಗುತ್ತಿರುವ ನಷ್ಟದ ಕೆಲವು ಭಾಗವನ್ನು ಹೊಂದಾಣಿಕೆ ಮಾಡಿಕೊಳ್ಳುವುದು… ಇವೆಲ್ಲವುಗಳ ಹಿಂದಿರುವ “ಖಾಸಗೀಕರಣ ನೀತಿ” ಯಾರದು?!!
ಕೋತಿ ತಿಂದು ಮೇಕೆ ಮೂತಿಗೆ ಒರೆಸವುದು ಎಂಬ ಗಾದೆ ಕೇಳಿದ್ದೀರಾ ಯಾವತ್ತಾದರೂ?!!
ಈ ಎಲ್ಲ ವಿವರಗಳು KERC ವೆಬ್‌ಸೈಟಿನಲ್ಲಿ ಲಭ್ಯ. ಲಿಂಕ್ ಇಲ್ಲಿದೆ: https://kerc.karnataka.gov.in/uploads/27271683893437.pdf
(ಚಿತ್ರದಲ್ಲಿರುವುದು BESCOM ಮತ್ತು ಇತರ ESCOM ಗಳ ವಿದ್ಯುತ್ ದರ ಏರಿಕೆಯ ಹಾಲೀ ದರ, ಪ್ರಸ್ತಾವಿತ ದರ ಮತ್ತು ಅನುಮೋದಿತ ದರಗಳ ಎಕ್ಸೆಲ್ ಶೀಟ್. ಇದು ಕೂಡ KERC ಸೈಟಿನಲ್ಲಿ ನೋಡಲು ಲಭ್ಯ.)