ಬೆಂಗಳೂರು : ದೆಹಲಿಯ ಮಹಿಳಾ ಕುಸ್ತಿಪಟುಗಳ ಹೋರಾಟದ ಬಗ್ಗೆ ತೀರ್ವ ನಿರ್ಲಕ್ಷ್ಯ ವಹಿಸಿರುವ ಕೇಂದ್ರದ ಒಕ್ಕೂಟ ಸರಕಾರದ ಧೋರಣೆಯನ್ನು ಸಾಹಿತಿ, ಕಲಾವಿದರು ಕಟುವಾಗಿ ಟೀಕಿಸಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರದ ಗೃಹ ಸಚಿವಾಲಯಕ್ಕೆ ಒತ್ತಾಯಪತ್ರ ಸಲ್ಲಿಸಿದ್ದಾರೆ.
ಜಾಗೃತ ನಾಗರಿಕರು ಕರ್ನಾಟಕ ದ ಮೂಲಕ ಸಲ್ಲಿಸಿದ ಒತ್ತಾಯಪತ್ರ ದಲ್ಲಿ, ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಪದಕ ಗಳಿಸಿ ದೇಶದ ಘನತೆಯನ್ನು ಎತ್ತಿಹಿಡಿದ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ತಮ್ಮದೇ ಪಕ್ಷದ ಸಂಸದರನ್ನು ತನಿಖೆಗೆ ಒಳಪಡಿಸುವ ಬದಲು ಅವರ ರಕ್ಷಣೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಲಾಗಿದೆ. ಪೋಕ್ಸೋ ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿಯೂ ಇದುವರೆಗೂ ಬಂಧನವಾಗದಿರುವುದು,ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಒತ್ತಾಯ ಪತ್ರದಲ್ಲಿ ಹೇಳಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೆಲದ ಕಾನೂನನ್ನು ಸರಕಾರವೇ ಹದಗೆಡಿಸುತ್ತಿರುವುದನ್ನು ಖಂಡಿಸಲಾಗಿದೆ.
ಅಂತರರಾಷ್ಟ್ರೀಯ ಕುಸ್ತಿ ಫೆಡರೇಶನ್ ನಿಂದಲೂ ನಿಂದನೆಗೆ ಒಳಗಾದ ಮೇಲೂ ಸಂಸದರ ಮೇಲೆ ಕ್ರಮ ಕೈಗೊಳ್ಳದ ಸರಕಾರ ಕ್ರಮ ನಿರ್ಲಜ್ಜತೆಗೆ ಸಾಕ್ಷಿಯಾಗಿದೆ ಎಂದು ಹೇಳಿದೆ. ಬೆಂಗಳೂರಿನ ಸಾಂಸ್ಕೃತಿಕ ವಲಯದ ವಿವಿಧ ರಂಗಗಳ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ಮಾಡಿ ಪತ್ರ ಸಲ್ಲಿಸಲಾಯಿತು.
ನಿಯೋಗದಲ್ಲಿ ಹಿರಿಯ ಚಿಂತಕಿ,ಲೇಖಕಿ ಡಾ.ವಿಜಯಾ, ಡಾ.ವಸುಂಧರಾ ಭೂಪತಿ ಡಾ.ಎಚ್.ಎಲ್.ಪುಷ್ಪ, ಸುಕನ್ಯಾ ಮಾರುತಿ,ಕೆ.ಎಸ್.ವಿಮಲಾ, ರಂಗಭೂಮಿಯನ್ನು ಪ್ರತಿನಿಧಿಸಿ ಜೆ.ಸಿ. ಶಶಿಧರ್, ಶಶಿಕಾಂತ ಯಡಹಳ್ಳಿ, ಟಿ.ಸುರೇಂದ್ರ ರಾವ್, ಡಾ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ಎಸ್.ಜಿ.ಸಿದ್ದರಾಮಯ್ಯ, ಶ್ರೀಪಾದ ಭಟ್, ಡಾ.ಬಂಜಗೆರೆ ಜಯಪ್ರಕಾಶ್, ಸಿ.ಕೆ.ಗುಂಡಣ್ಣ, ಡಾ.ಲೀಲಾ ಸಂಪಿಗೆ, ಡಾ.ಎನ್.ಗಾಯತ್ರಿ, ಡಾ.ಆರ್.ಪೂರ್ಣಿಮಾ, ಭಾರತಿ ಹೆಗಡೆ, ರಾಜಶೇಖರ ಕಿಗ್ಗ, ಯೋಗಾನಂದ, ಅಮರೇಶ್ ಕಡಗದ , ಡಾ.ವಿ.ಪಿ.ನಿರಂಜನ ಆರಾಧ್ಯ, ಪ್ತೊ.ಬಿ.ಕೆ.ಚಂದ್ರಶೇಖರ್ ,ಮತ್ತಿತರರು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.