ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ನ ಕೇಂದ್ರ ನಾಯಕರ ಜತೆಗೆ ಗುರುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರೂ ಕಗ್ಗಂಟು ಬಿಡಿಸಲಾಗಲಿಲ್ಲ. ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರು ತಮ್ಮ ಆಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಪಟ್ಟು ಹಿಡಿದಿದ್ದು, ನಾಲ್ಕೈದು ಶಾಸಕರ ಸೇರ್ಪಡೆ ವಿಷಯದಲ್ಲಿ ಸಹಮತಕ್ಕೆ ಬಂದಿಲ್ಲ ಎನ್ನಲಾಗಿದೆ.
ಸಂಪುಟದಲ್ಲಿ ಒಟ್ಟು 34 ಸಚಿವರ ಸೇರ್ಪಡೆಗೆ ಅವಕಾಶ ಇದೆ. ಈಗ 10 ಸ್ಥಾನಗಳು ಭರ್ತಿಯಾಗಿವೆ. 20 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಗುರುವಾರ ನಡೆದ ಸಭೆಯಲ್ಲಿ ಗಂಭೀರ ಚರ್ಚೆಗಳು ಆಗಿವೆ. 24 ಸ್ಥಾನಗಳನ್ನು ಒಂದೇ ಕಂತಿನಲ್ಲಿ ಭರ್ತಿ ಮಾಡಲು ಕೇಂದ್ರ ನಾಯಕತ್ವವು ಕಸರತ್ತು ನಡೆಸಿದೆ. ಪಟ್ಟಿ ಬಹುತೇಕ ಅಂತಿಮವಾಗಿದ್ದು, ಶನಿವಾರವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರ ರಾಜಧಾನಿಯಲ್ಲಿ 40 ಕ್ಕೂ ಹೆಚ್ಚು ಆಕಾಂಕ್ಷಿಗಳು ಬೀಡು ಬಿಟ್ಟಿದ್ದು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಬುಧವಾರ ದೆಹಲಿಗೆ ಬಂದಿಳಿದಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಕೆಸಿ ವೇಣುಗೋಪಾಲ್ ಅವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ. ತಾತ್ಕಾಲಿಕ ಪಟ್ಟಿಗಳನ್ನು ಸಿದ್ದ ಮಾಡಲಾಗಿದೆ. ಗುರುವಾರ ರಾತ್ರಿ ಅವರು ಪಕ್ಷದ ವಾರ್ ರೂಂನಲ್ಲಿ24 ಶಾಸಕರನ್ನು ಆಯ್ಕೆ ಮಾಡುವ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಇಂದು ಸಿದ್ದರಾಮಯ್ಯ ಮತ್ತು ಶಿವಕುಮಾರ್, ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ : ಸಿದ್ದರಾಮಯ್ಯ ಸಿಎಂ; ಡಿ.ಕೆ. ಶಿವಕುಮಾರ್ ಡಿಸಿಎಂ : ಎಐಸಿಸಿಯಿಂದ ಅಧಿಕೃತ ಘೋಷಣೆ
ಬಿಜೆಪಿಯಿಂದ ಕಾಂಗ್ರೆಸ್ಗೆ ಸೇರ್ಪಡೆಯಾದ ಅಥಣಿ ಶಾಸಕ ಲಕ್ಷ್ಮಣ ಸವದಿ, ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಎಂಎಲ್ಸಿ ಎನ್.ಎಸ್.ಬೋಸರಾಜು ಮತ್ತು ಧಾರವಾಡ ಶಾಸಕ ವಿನಯ್ ಕುಲಕರ್ಣಿ ಹೆಸರು ಪಟ್ಟಿಯಲ್ಲಿ ಸೇರಿದೆ ಎನ್ನಲಾಗಿದೆ. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ನೇಮಕ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶಾಸಕರಾದ ಅಜಯ್ ಸಿಂಗ್, ನಾಗೇಂದ್ರ, ದಿನೇಶ್ ಗುಂಡೂರಾವ್, ರಾಘವೇಂದ್ರ ಹಿಟ್ನಾಳ್, ಸಂಸದ ನರೇಂದ್ರಸ್ವಾಮಿ ಕೂಡ ತೀವ್ರ ಲಾಬಿ ನಡೆಸಿದ್ದರು, ಆದರೆ ಅವರ ಹೆಸರು ಪಟ್ಟಿಯಲ್ಲಿಲ್ಲ. ಕ್ಯಾಬಿನೆಟ್ ಸ್ಥಾನ ತಪ್ಪಿದ ಬೆಂಗಳೂರಿನ ಶಾಸಕರನ್ನು ಪ್ರತಿಷ್ಠಿತ ಬಿಡಿಎ ಸೇರಿದಂತೆ ಮಂಡಳಿಗಳು ಮತ್ತು ನಿಗಮಗಳಿಗೆ ನೇಮಿಸಲಾಗುವುದು ಎಂದು ತಿಳಿದು ಬಂದಿದೆ.
ಜಾತಿ ಸಮೀಕರಣವನ್ನು ಪಕ್ಕಕ್ಕಿಟ್ಟು ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಪ್ರಯತ್ನಿಸಿದೆ ಎಂದು ತಿಳಿದುಬಂದಿದೆ . ಲಿಂಗಾಯತರು (39, ಒಕ್ಕಲಿಗರು (21), ಎಸ್ಸಿ (21), ಎಸ್ಸಿ ( 22), ಎಸ್ಟಿ (15), ಕುರುಬರು (9), ಮುಸ್ಲಿಮರು (9) ಶಾಸಕರು ಇದ್ದಾರೆ. ಸ್ಪೀಕರ್ ಸ್ಥಾನ ನಿರಾಕರಿಸಿದ ಕರಾವಳಿ ಕರ್ನಾಟಕದ ಒಬ್ಬ ಶಾಸಕ ಮತ್ತು ತುಮಕೂರಿನ ಇಬ್ಬರು ಹಿರಿಯ ನಾಯಕರು ಸಚಿವರಾಗಿ ಸೇರ್ಪಡೆಗೊಳ್ಳುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಸಂಭನೀಯ ಸಚಿವರ ಪಟ್ಟಿ: ಬಿ.ಕೆ.ಹರಿಪ್ರಸಾದ್ (ಎಂಎಲ್ಸಿ), ಎನ್.ಎಸ್. ಭೋಸರಾಜು (ಎಂಎಲ್ಸಿ) ಲಕ್ಷ್ಮೀ ಹೆಬ್ಬಾಳ್ಕರ್ (ಬೆಳಗಾವಿ ಗ್ರಾಮಾಂತರ), ಲಕ್ಷ್ಮಣ ಸವದಿ (ಅಥಣಿ), ಶಿವಾನಂದ ಪಾಟೀಲ್ (ಬಸವನಬಾಗೇವಾಡಿ), ಶರಣಬಸಪ್ಪ ಗೌಡ ದರ್ಶನಾಪುರ (ಶಹಾಪುರ), ಎಸ್ ಎಸ್ ಮಲ್ಲಿಕಾರ್ಜುನ್ (ದಾವಣಗೆರೆ ಉತ್ತರ), ರಹೀಮ್ ಖಾನ್ (ಬೀದರ್), ಡಿ ಸುಧಾಕರ್ (ಹಿರಿಯೂರು) , ಎಚ್ ಕೆ ಪಾಟೀಲ್(ಗದಗ), ಬೈರತಿ ಸುರೇಶ್(ಹೆಬ್ಬಾಳ), ಈಶ್ವರ ಖಂಡ್ರೆ(ಭಾಲ್ಕಿ), ಬಸವರಾಜ ರಾಯರೆಡ್ಡಿ(ಯಲಬುರ್ಗಾ), ಕೆ ವೆಂಕಟೇಶ್(ಪಿರಿಯಾಪಟ್ಟಣ), ಸಿ ಪುಟ್ಟರಂಗಶೆಟ್ಟಿ(ಚಾಮರಾಜನಗರ), ವಿನಯ್ ಕುಲಕರ್ಣಿ (ಧಾರವಾಡ) ಎಂಪಿ ನರೇಂದ್ರಸ್ವಾಮಿ(ಮಳವಳ್ಳಿ), ಡಾ ಎಂ ಸಿ ಸುಧಾಕರ್(ಚಿಂತಾಮಣಿ), ಎನ್ ಚೆಲುವರಾಯಸ್ವಾಮಿ (ನಾಗಮಂಗಲ), ಕೆ ಎನ್ ರಾಜಣ್ಣ (ಮಧುಗಿರಿ), ಮಧು ಬಂಗಾರಪ್ಪ (ಸೊರಬ), ಮಂಕಾಳ ವೈದ್ಯ (ಭಟ್ಕಳ), ಶಿವರಾಜ್ ತಂಗಡಗಿ (ಕನಕಗಿರಿ), ಮತ್ತು ಕೃಷ್ಣ ಬೈರೇಗೌಡ (ಬೈಟರಾಯನಪುರ)