ಗ್ಯಾರಂಟಿ ಯೋಜನೆಗಳ ಜಾರಿಗೆ ಕಾಂಗ್ರೆಸ್ ಸರ್ಕಾರ ವಿಳಂಬ: ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ನಾವು ಕೊಟ್ಟ ಮಾತನ್ನು ತಪ್ಪುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಚುನಾವಣೆಯ ಸಂದರ್ಭದಲ್ಲಿ ಹೇಳಿಕೊಂಡಿದ್ದರು. 200 ಯುನಿಟ್ ವಿದ್ಯುತ್ ಎಲ್ಲರಿಗೂ ಉಚಿತ ಎಂದು ಹೇಳಿದ್ದರು. ಆದರೆ ಅಧಿಕಾರಕ್ಕೆ ಬರುತ್ತಿದ್ದಂತೆ ಉಚಿತ ನೀಡಲು ಮಾನದಂಡ ಮಾಡುತ್ತೇವೆ ಎನ್ನುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ವೀರಾವೇಶದಿಂದ ಮಾತನಾಡಿ ಚಪ್ಪಾಳೆ ಹೊಡೆಸಿಕೊಂಡಿದ್ದವರು, ಈಗ ಉಲ್ಟಾ ಹೊಡೆದಿದ್ದಾರೆ ಎಂದು ಮಾಜಿ ಸಿಎಂ ಎಚ್​​.ಡಿ ಕುಮಾರಸ್ವಾಮಿ ಹೇಳಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಂದಿನ ಎರಡು ಸಚಿವ ಸಂಪುಟ ಸಭೆಗಳನ್ನು ಕಾದು ನೋಡಲಾಗುವುದು. ನಂತರವೂ ಕ್ರಮ ಗೊಳ್ಳದಿದ್ದರೆ 200 ಯೂನಿಟ್‌ಗೆ ದುಡ್ಡು ಕಟ್ಟಬೇಡಿ ಎಂದು ಕರೆ ನೀಡಿ ಆಂದೋಲನ ರೂಪದಲ್ಲಿ ಹೋರಾಟ ನಡೆಸುತ್ತೇವೆ.  ಕಾಂಗ್ರೆಸ್ ಘೋಷಿಸಿರುವ ಉಚಿತ ಯೋಜನೆಗಳು ಯಾವ ಸ್ವರೂಪದಲ್ಲಿ ಕಾರ್ಯ ರೂಪಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇವರ ಸುಳ್ಳಿನ ಆಟದ ಮುಂದೆ ನಮ್ಮ ಪಕ್ಷವು ಹೋರಾಟದ ಸ್ವರೂಪದಲ್ಲಿ ಎಚ್ಚರಿಕೆ ನೀಡಲಿದ್ದೇವೆ ಎಂದರು.

ಇದನ್ನೂ ಓದಿ5 ಗ್ಯಾರಂಟಿಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ; ಸಿಎಂ ಸಿದ್ದರಾಮಯ್ಯ ಘೋಷಣೆ

ಕಾಂಗ್ರೆಸ್‌ ಸರ್ಕಾರವು ಮಹಿಳೆಯರಿಗೆ ಎರಡು ಸಾವಿರ ರು. ಮತ್ತು ನಿರುದ್ಯೋಗಿಗಳಿಗೆ ಮೂರು ಸಾವಿರ ರು. ನೀಡಲಾಗುವುದು ಎಂದು ಘೋಷಣೆ ಮಾಡುವಾಗ ಯಾವುದೇ ಷರತ್ತುಗಳ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೆ, ಈಗ ಮಾರ್ಗಸೂಚಿಗಳನ್ನು ಹಾಕಲಾಗುತ್ತದೆ ಎಂಬುದಾಗಿ ಹೇಳುತ್ತಿರುವುದು ಸರಿಯಲ್ಲ. ಹಾದಿಬೀದಿಯಲ್ಲಿ ಹೋಗುವವರಿಗೆಲ್ಲ ಗ್ಯಾರಂಟಿ ಯೋಜನೆ ಕೊಡಕ್ಕಾಗುವುದಿಲ್ಲ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿಕೆಯನ್ನು ಒಪ್ಪಲಾಗದು. ಭರವಸೆ ನೀಡಬೇಕಾದಾಗ ನಿಮಗೆ ತಲೆ ಇರಲಿಲ್ಲವೇ? ಈಗ ಮತ ಕೊಟ್ಟವರೆಲ್ಲ ಹಾದಿಬೀದಿಯವರು ಆಗಿಬಿಟ್ಟರೆ? ಎಂದು ಕಿಡಿಕಾರಿದ ಅವರು, ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದ ನೈಜ ಬಣ್ಣ ಒಂದು ವಾರದಲ್ಲಿಯೇ ಬಯಲಿಗೆ ಬಂದಿದೆ. ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಹೇಳಿದ್ದರು. ಈಗ ವರಸೆ ಬದಲಿಸಿ, ಷರತ್ತುಗಳು ಅನ್ವಯವಾಗಲಿದೆ ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಗ್ಯಾರಂಟಿಗಳ ಭರವಸೆ ನೀಡಲಾಗಿದೆ. ಜಾರಿ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ವಿದ್ಯುತ್‌ ಬಿಲ್‌ ಕಟ್ಟುತ್ತಿಲ್ಲ, ಬಸ್‌ ಟಿಕೆಟ್‌ ಪಡೆಯಲು ನಿರಾಕರಿಸುತ್ತಿದ್ದಾರೆ. ನುಡಿದಂತೆ ನಡೆಯಬೇಕು. ಮಾತು ತಪ್ಪಿದರೆ ಜನರಿಗೆ ಮೋಸ ಮಾಡಿದಂತೆ ಆಗುತ್ತದೆ. ನಾವು ಜನರ ಪರ ನಿಲ್ಲುತ್ತೇವೆ. ನಾನು ಕೊಟ್ಟಮಾತು ತಪ್ಪಲ್ಲ, ಮಾತಿಗೆ ತಪ್ಪಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ ಎಂದಿದ್ದಾರೆ. ಅವರೆಲ್ಲಾ ಮಾಡಿರುವ ಭಾಷಣಗಳನ್ನು ಜನರು ನೋಡಿದ್ದಾರೆ ಮತ್ತು ಕೇಳಿದ್ದಾರೆ. ಎಲ್ಲರಿಗೂ ವಿದ್ಯುತ್‌ ಉಚಿತ ಎಂದು ಭಾಷಣದಲ್ಲಿ ಹೇಳಿದ್ದರು. ಈಗ ನೋಡಿದರೆ, ಅದಕ್ಕೆ ಮಾರ್ಗಸೂಚಿ ರಚನೆಯಾಗಬೇಕು ಎನ್ನುತ್ತಿದ್ದಾರೆ ಎಂದು ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ಅವತ್ತು ವೀರಾವೇಶದಲ್ಲಿ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಒಂದೇ ವಾರದಲ್ಲಿ ಅವರ ನಿಜವಾದ ಬಣ್ಣ ಬಯಲಾಗುತ್ತಿದೆ. ಇವರು ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *