ವಿವಾದಿತ ಸಿನಿಮಾ ‘ದಿ ಕೇರಳ ಸ್ಟೋರಿ’ ವೀಕ್ಷಿಸಲು ಕಾಲೇಜಿಗೆ ಅರ್ಧದಿನ ರಜೆ : ಕಾಲೇಜಿನ ನಡೆಗೆ ಸಾರ್ವಜನಿಕರ ಆಕ್ಷೇಪ

ಬೆಂಗಳೂರು : ದೇಶಾದ್ಯಂತ ಭಾರೀ ಸಂಚಲನ ಎಬ್ಬಿಸಿರುವ ಬಾಲಿವುಡ್​ನ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಲು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಅರ್ಧ ದಿನದ ರಜೆ ನೀಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಇಳಕಲ್‌ನ ಶ್ರೀ ವಿಜಯ ಮಹಾಂತೇಶ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಬುಧವಾರ ಮಧ್ಯಾಹ್ನ ತನ್ನ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಿ, ವಿವಾದಾತ್ಮಕ ಚಲನಚಿತ್ರ ‘ದಿ ಕೇರಳ ಸ್ಟೋರಿ’ ವೀಕ್ಷಿಸಬೇಕು ಎಂದು ಸೂಚನೆ ನೀಡಿದೆ. ಇದಕ್ಕೆ ಸಾಕಷ್ಟು ಜನ ಆಕ್ಷೇಪ ಎತ್ತಿದ್ದು, ”ಸಿನಿಮಾ ನೋಡಲು ಆದೇಶ ಹೊರಡಿಸಲು ನೀವು ಕಾಲೇಜು ನಡೆಸುತ್ತಿರೋ ಅಥವಾ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತೀರೋ? ಇದೇ ಸಿನಿಮಾ ನೋಡಲು ನೀವು ಆದೇಶ ಹೊರಡಿಸಿರುವ ಹಿಂದಿನ ಉದ್ದೇಶವಾದರೂ ಏನು? ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಸಿನಿಮಾಗಳನ್ನು ತೋರಿಸುವು ಉದ್ದೇಶವಿದೆ. ಆದರೆ ಈ ವಿವಾದಿತ ಸಿನಿಮಾ ತೋರಿಸಲು ಹೊರಟ್ಟಿದ್ದಿರಿ, ಮಕ್ಕಳಿಗೆ ಏನು ಸಂದೇಶ ನೀಡಲು ಹೊರಟಿದ್ದೀರಿ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಾಲೇಜಿನ ಈ ನಡೆಯನ್ನು ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ಖಂಡಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯು, ಸಂಪೂರ್ಣ ಸುಳ್ಳು ವಿವರಗಳಿಂದ ಕೂಡಿರುವ ವಿವಾದಿತ ಮತ್ತು ದ್ವೇಷ ಪ್ರಚೋದಿತ ಚಲನಚಿತ್ರ ” ದಿ ಕೇರಳ ಸ್ಟೋರಿ” ಸಿನಿಮಾವನ್ನು ಉಚಿತವಾಗಿ ತೋರಿಸುವ ಅಗತ್ಯ ಏನಿದೆ ಎಂಬುದು ನಮ್ಮ ಪ್ರಶ್ನೆಯಾಗಿದೆ. ಹೀಗೊಂದು ಸುತ್ತೋಲೆ ಹಾಕಿ ಸಿನಿಮಾ ತೋರಿಸುವ ಸಂಗತಿ ಆಘಾತಕಾರಿ ಅಷ್ಟೇ ಅಲ್ಲ ರಾಜ್ಯದಲ್ಲಿ ಕೋಮು ದಳ್ಳುರಿ ಹಚ್ಚುವ ಹುನ್ನಾರು ಎಂಬುದರಲ್ಲಿ ಯಾವ ಸಂಶಯವೂ ಬೇಕಿಲ್ಲ.

ಇದನ್ನೂ ಓದಿದಿ ಕೇರಳ ಸ್ಟೊರಿ’ ಸಿನಿಮಾ: ಕೇರಳ ಮತ್ತು ಮುಸಲ್ಮಾನರೇ ಅವರ ಗುರಿ

ನಿಮಾ ಕುರಿತ ದೂರು ಕೋರ್ಟ್ ಮೆಟ್ಟಿಲೇರಿದೆ. ಈಗಾಗಲೆ ಉತ್ಪ್ರೇಕ್ಷಿತ ಕಪೋಲ‌ಕಲ್ಪಿತ ಅಂಶಗಳನ್ನು ತೆಗೆದುಹಾಕುವುದಾಗಿ ನಿರ್ದೇಶಕರು ಹೇಳಿದ್ದಾರೆಂದು ಕೂಡಾ ವರದಿ ಯಾಗಿದೆ. ಇದೊಂದು ಪ್ರಾಪಗಂಡಾ ಸಿನಿಮಾ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಸಿನಿಮಾ ಒಂದು ಮನರಂಜನೆಯ‌ ಸಾಧನವೆಂಬುದನ್ನೂ ಒಪ್ಪಿಕೊಳ್ಳುತ್ತಲೇ ಅದು ಬೀರುವ ಪ್ರಭಾವವನ್ನು ಗುರುತಿಸಬೇಕು ಎಂದಿದೆ.

ಸಿನಿಮಾ ನೋಡಲು ಜನರಿಗೆ ನಿರ್ಬಂಧ ವಿಧಿಸಬೇಕಿಲ್ಲ. ಆದರೆ ಸಮಾಜದಲ್ಲಿ ಅಶಾಂತಿ,ಹಿಂಸೆಗಳನ್ನು ಪ್ರಚೋದಿಸುವ ಸಿನಿಮಾಗಳನ್ನು ಕಡ್ಡಾಯವಾಗಿ, ‌ಉಚಿತವಾಗಿ ನೋಡಲು ಉತ್ತೇಜನ ನೀಡುವುದು ಎಷ್ಟು ಸರಿ?? ದೇಶದ ಸೌಹಾರ್ದ ಪರಂಪರೆಯನ್ನು ಹಾಳು ಮಾಡುವ ಹಲವಾರು ಪ್ರಯತ್ನಗಳ ಮುಂದುವರೆದ ವ್ಯವಸ್ಥಿತ ಸಂಚು
ಎಂಬುದು ಈಗಾಗಲೆ ಜಗಜ್ಜಾಹೀರಾಗಿದೆ. ಶಿಕ್ಷಣ, ಆರೋಗ್ಯ ಮುಂತಾದ ಸಾಮಾಜಿಕ ನೈಜ ಪ್ರಗತಿಯನ್ನು ಸಾರುವ ಕ್ಷೇತ್ರಗಳಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ ಎಂಬುದನ್ನು ನೀತಿ ಆಯೋಗದಂತಹ ಒಕ್ಕೂಟ ಸರಕಾರದ ಅಧೀನದಲ್ಲಿ ಕಾರ್ಯ‌ನಿರ್ವಹಿಸುವ ಸಂಸ್ಥೆ ಗಳೇ ದೃಢೀಕರಿಸಿವೆ. ಅವುಗಳನ್ನು ಮರೆ ಮಾಚಿ, ಧರ್ಮ ದ್ವೇಷ ಹುಟ್ಟಿಸುವ, ಸಮಾಜದ ಶಾಂತಿಗೆ ಭಂಗ ತರಲೆಂದೇ ಹಸಿ ಹಸಿ ಸುಳ್ಳುಗಳನ್ನು ತುಂಬಿ, ಅವು ನೈಜ ಘಟನೆಗಳೆಂದು ಹೇಳಲಾಗಿದೆ. ವಿವಾದಿತ ಅಂಶಗಳನ್ನು ಟೀಸರ್‌ನಿಂದ ತೆಗೆಯುವುದಾಗಿ ಕೂಡಾ ನ್ಯಾಯಾಲಯದಲ್ಲಿ ನಿರ್ದೇಶಕರು ಹೇಳಿದ್ದಾರೆಂದು ಹಾಗೂ ಸಿನಿಮಾದ‌ ಪ್ರಾರಂಭದಲ್ಲಿ ಡಿಸ್ಕ್ಲೈಮರ್ ಹಾಕಬೇಕೆಂದೂ ಸೂಚಿಸಲಾಗಿದೆ ಎಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ.

ಸರಕಾರ ಈ ದಿಸೆಯಲ್ಲಿ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಿ ತಕ್ಷಣವೇ ಆ ಶಿಕ್ಷಣ ಸಂಸ್ಥೆ ಮತ್ತು ಕಾಲೇಜಿನ ಪ್ರಾಚಾರ್ಯರ ಮೇಲೆ ಕಟ್ಟು‌ನಿಟ್ಟಿನ ಕ್ರಮ ಕೈ ಕೊಳ್ಳಬೇಕು. ಇಂತಹ ಕೆಲಸಕ್ಕೆ ಇನ್ನು ಮುಂದೆ ಯಾರೂ ಕೈಗೊಳ್ಳದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸಬೇಕು. ಈ ಕಾಲೇಜಿಗೆ ಮಾನ್ಯತೆ ನೀಡಿರುವ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ದೇಶದ ಸಂವಿಧಾನ, ನೆಲದ ಸೌಹಾರ್ದ ಪರಂಪರೆಗೆ ಧಕ್ಕೆ ತರುವ ಕಾರ್ಯಚಟುವಟಿಕೆಗಳನ್ನು ನಡೆಸದಂತೆ ಆ ಶಿಕ್ಷಣ ಸಂಸ್ಥೆಗೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.

ಈಗಾಗಲೇ ಹಲವಾರು ಸಂದರ್ಭಗಳಲ್ಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಮಕ್ಕಳನ್ನು ತಮ್ಮ ಅಂಗೈಯಲ್ಲಿ ಆಡುವ ಬುಗುರಿಯಾಗಿಸಿ ಬಲಿ‌ಹಾಕಿದ ಘಟನೆಗಳಿಗೆ ಈ ನೆಲ ಸಾಕ್ಷಿಯಾಗಿದೆ. ಅದಕ್ಕೆ ಇನ್ನು ಮುಂದೆ ಅವಕಾಶ ಇಲ್ಲ ಎಂಬ ಸಂದೇಶವನ್ನು ರವಾನಿಸಲು ಸರಕಾರ ಮುಂದಾಗಬೇಕು. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಕೋಮು ದ್ವೇಷ ಬಿತ್ತುವ ಯಾವುದೇ ಚಟುವಟಿಕೆಗಳಿಗೂ ಅವಕಾಶ ನೀಡಬಾರದೆಂದು ಮತ್ತು ಕೋಮು ಸಾಮರಸ್ಯ ಕಾಪಾಡಲು, ದ್ವೇಷ ರಾಜಕಾರಣವನ್ನು ಹತ್ತಿಕ್ಕಲು‌ ರಾಜ್ಯ ಸರಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ ಎಂದು ಡಾ.ಕೆ.ಮರುಳಸಿದ್ದಪ್ಪ,  ಡಾ.ಜಿ.ರಾಮಕೃಷ್ಣ,  ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವಿಜಯಾ, ಡಾ. ರಾಜೇಂದ್ರ ಚೆನ್ನಿ, ವಿಮಲಾ.ಕೆ.ಎಸ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ಮೀನಾಕ್ಷಿ ಬಾಳಿ, ಡಾ. ಕೆ. ಷರೀಫಾ,  ಟಿ.ಸುರೇಂದ್ರ ರಾವ್, ಬಿ.ಶ್ರೀಪಾದ ಭಟ್, ಡಾ.ವಸುಂಧರಾ ಭೂಪತಿ, ಮೂಡ್ನಾಕೂಡು ಚಿನ್ನಸ್ವಾಮಿ, ರುದ್ರಪ್ಪ ಹುನಗವಾಡಿ, ವಾಸುದೇವ ಉಚ್ಚಿಲ, ಶಶಿಧರ ಜೆ.ಸಿ,  ಯೋಗಾನಂದ, ಅಮರೇಶ್ ಕಡಗದ, ಡಾ.ನಿರಂಜನ ಆರಾಧ್ಯ,  ಡಾ.ಕೆ.ಷರೀಫಾ, ಡಾ.ಲೀಲಾ ಸಂಪಿಗೆ,  ಎಸ್. ದೇವೇಂದ್ರ ಗೌಡ,  ಸಿ.ಕೆ.ಗುಂಡಣ್ಣ ಸೇರಿದಂತೆ ಅನೇಕರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *