ನೂತನ ಸಂಸತ್ ಭವನದ ಉದ್ಘಾಟನೆ ಬಹಿಷ್ಕರಿಸಲು ಮುಂದಾದ ವಿಪಕ್ಷಗಳು

ನವದೆಹಲಿ: ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿರುವುದ್ದಕ್ಕೆ ಪ್ರತಿಪಕ್ಷಗಳ ಆಕ್ಷೇಪದ ನಡುವೆಯೇ ಮೇ 28 ರಂದು ನಡೆಯಲಿರುವ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಘೋಷಿಸಿದೆ.

ಸಿಪಿಐ(ಎಂ) ರಾಜ್ಯಸಭಾ ಸಂಸದ ಡಾ.ಜಾನ್ ಬ್ರಿಟಾಸ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ನೂತನ ಸಂಸತ್‌ ಭವನ ಉದ್ಘಾಟನೆಗೆ ಮುನ್ನವೇ ವಿವಾದಗಳು ಹುಟ್ಟಿಕೊಳ್ಳುತ್ತಿದೆ. ನೂತನ ಕಟ್ಟಡವನ್ನು ರಾಷ್ಟ್ರಪತಿಯವರು ಉದ್ಘಾಟನೆ ಮಾಡುವುದು ಸಹಜವಾಗಿ ನಿರೀಕ್ಷೆಯಾಗಿತ್ತದೆ. ಆದರೆ ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ ಮಾಡಲು ಹೊರಟಿರುವುದು ಆಕ್ರೋಶಕ್ಕೆ ಗುರಿಯಾಗಿದೆ.

ಏತನ್ಮಧ್ಯೆ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಪ್ರಧಾನಿ ಮೋದಿ ಅವರು ರಾಷ್ಟ್ರಪತಿಯನ್ನು ಹಿಂದಿಕ್ಕುತ್ತಿದ್ದಾರೆ. ನೂತನ ಸಂಸತ್ ಭವನಕ್ಕೆ ಶಂಕುಸ್ಥಾಪನೆ ವೇಳೆ ಮೋದಿ ರಾಷ್ಟ್ರಪತಿಯನ್ನು ಬೈಪಾಸ್ ಮಾಡಿದ್ದಾರೆ. ಈಗ ಉದ್ಘಾಟನೆಯಲ್ಲೂ ಅದೇ ಆಗುತ್ತಿದೆ ಇದು ಸ್ವೀಕಾರಾರ್ಹವಲ್ಲ. ಸಂವಿಧಾನದ ವಿಧಿ 79 ಒಕ್ಕೂಟಕ್ಕೆ ಸಂಸತ್ತು ಅಧ್ಯಕ್ಷರು ಮತ್ತು ಎರಡು ಸದನಗಳನ್ನು ಒಳಗೊಂಡಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ“ಪ್ರಜಾಪ್ರಭುತ್ವ ವ್ಯವಸ್ಥೆಗೆ ಪ್ರಧಾನಮಂತ್ರಿಗಳು ಅಪಚಾರ ಎಸಗಿದ್ದಾರೆ”

ಭಾರತದ ರಾಷ್ಟ್ರಪತಿಗಳು ಸಂಸತ್ತಿಗೆ ಕರೆ ನೀಡಿದಾಗ ಮಾತ್ರ ಸಭೆ ಸೇರಬಹುದು. ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿಗಳು ವಾರ್ಷಿಕವಾಗಿ ಸಂಸತ್ತಿನ ಕಾರ್ಯಚಟುವಟಿಕೆಯನ್ನು ಪ್ರಾರಂಭಿಸುತ್ತಾರೆ. ಪ್ರತಿ ವರ್ಷ ಸಂಸತ್ತು ನಡೆಸುವ ಮೊದಲ ವ್ಯವಹಾರವೆಂದರೆ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸಂಸತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ನಿರ್ಮಾಣವಾಗಿದೆ, ಅಹಂಕಾರದ ಇಟ್ಟಿಗೆಗಳಿಂದ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ನೂತನ ಸಂಸತ್ ಭವನ ಕಟ್ಟಡ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮಾಡಿಸದೇ ಇರೋದು ಹಾಗೂ ರಾಷ್ಟ್ರಪತಿಗಳಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡದೇ ಇರೋದು ಈ ದೇಶದ ಅತಿ ದೊಡ್ಡ ಸಾಂವಿಧಾನಿಕ ಹುದ್ದೆಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದಾರೆ.

”ಎಲ್ಲಾ ವಿರೋಧ ಪಕ್ಷಗಳು ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಹೇಳಿವೆ. ನಾವೂ ಕೂಡ ಬಹಿಷ್ಕರಿಸುತ್ತೇವೆ” ಎಂದು ಶಿವಸೇನಾ ಉದ್ಧವ್‌ ಬಾಳಾ ಸಾಹೇಬ್ ಠಾಕ್ರೆ ಪಕ್ಷದ ಸಂಜಯ್‌ ರಾವುತ್ ಹೇಳಿದ್ದಾರೆ.

ಈ ಹಿಂದೆ ಆಮ್ ಆದ್ಮಿ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಪ್ರಧಾನಿ ಮೋದಿಯವರಿಂದ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.  ಮೇ 28 ರಂದು ದೆಹಲಿಯಲ್ಲಿ ಹೊಸ ಸಂಸತ್ ಭವನದ ಉದ್ಘಾಟನಾ ಸಮಾರಂಭವನ್ನು ಆರ್‌ಜೆಡಿ (ರಾಷ್ಟ್ರೀಯ ಜನತಾ ದಳ) ಬಹಿಷ್ಕರಿಸಲಿದೆ ಎಂದು ತಿಳಿದು ಬಂದಿದೆ.

 

Donate Janashakthi Media

Leave a Reply

Your email address will not be published. Required fields are marked *