ಪ್ರೊ. ಪ್ರಭಾತ್ ಪಟ್ನಾಯಕ್
ಅನು: ಕೆ.ಎಂ.ನಾಗರಾಜ್
ಕಾರ್ಪೊರೇಟ್ ನಿಯಂತ್ರಿತ ಮಾಧ್ಯಮಗಳ ನಿರಂತರ ಪ್ರಚಾರದ ಫಲವಾಗಿ ಪಾಶ್ಚ್ಯಾತ್ಯ ದೇಶಗಳಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಜಾಣ್ಮೆಯಿಂದ ಸಾಮ್ರಾಜ್ಯಶಾಹಿಯ ಪರವಾಗಿ ತಿರುಗಿಸಲಾಗುತ್ತದೆ. ಇಂತಹ ಚಮತ್ಕಾರಗಳಿಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಇತ್ತೀಚಿನ ಲೇಖನವೇ ಒಂದು ಉದಾಹರಣೆ. ಆದರೆ ಇದು ಈಗ ಬದಲಾಗುತ್ತಿದೆ ಎಂಬುದನ್ನು ಐರೋಪ್ಯ ಒಕ್ಕೂಟದ ದೇಶಗಳ ಕಾರ್ಮಿಕರು ಆಗಾಗ ಮುಷ್ಕರಗಳಲ್ಲಿ ತೊಡಗುತ್ತಿರುವ ವಿದ್ಯಮಾನವು ಸ್ಪಷ್ಟಪಡಿಸುತ್ತದೆ. ತಮ್ಮದೇ ಸರ್ಕಾರಗಳು ಅನುಸರಿಸುತ್ತಿರುವ ಕ್ರಮಗಳಿಂದಾಗಿಯೇ ಉಕ್ರೇನ್ ಯುದ್ಧವು ಲಂಬಿಸುತ್ತಿದೆ ಎಂಬುದನ್ನು ಅವರು ಈಗ ಅರಿತುಕೊಂಡಿದ್ದಾರೆ. ಸದ್ಯದ ಮಟ್ಟಿಗೆ ಹೇಳುವುದಾದರೆ, ರಷ್ಯಾದ ವಿರುದ್ಧ ಪ್ರಕಟಗೊಳ್ಳುತ್ತಿರುವ ಆಕ್ರಮಣಕೋರತೆಯಿಂದಾಗಿ ಸ್ವತಃ ಸಾಮ್ರಾಜ್ಯಶಾಹಿ ಆಧಿಪತ್ಯವೇ ಅಪಾಯಕ್ಕೊಳಗಾಗಿದೆ. ಮೂರನೇ ಜಗತ್ತಿನ ಜನತೆಯು ರಷ್ಯಾ ಮತ್ತು ಚೀನಾವನ್ನು ಬೆಂಬಲಿಸುತ್ತಿದ್ದರೆ, ಅದು ಅವರು ಸಾಮ್ರಾಜ್ಯಶಾಹಿ ಯೋಜನೆ ಏನೆಂಬುದನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿರುವುದರಿಂದಾಗಿಯೇ ಹೊರತು, ನ್ಯೂಯಾರ್ಕ್ ಟೈಮ್ಸ್ ಹೇಳುವಂತೆ ಪ್ರಜಾಪ್ರಭುತ್ವ, ನಾಗರಿಕ ಸ್ವಾತಂತ್ರ‍್ಯಗಳು, ಜಾತ್ಯತೀತತೆ ಇತ್ಯಾದಿ ಮೌಲ್ಯಗಳ ಮಹತ್ವವನ್ನು ಸೂಕ್ಷವಾಗಿ ಗ್ರಹಿಸದ ಕಾರಣದಿಂದಾಗಿ ಅಲ್ಲ.
ಜಾಗತಿಕವಾಗಿ ಹೇಗೆ ಜನಾಭಿಪ್ರಾಯವನ್ನು ರೂಪಿಸಲಾಗುತ್ತದೆ ಎಂಬ ವಿಷಯದ ಬಗ್ಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಬೆನೆಟ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಪಾಲಿಸಿ ಎಂಬ ಸಂಸ್ಥೆಯು ಒಂದು ಸಮೀಕ್ಷೆಯನ್ನು ನಡೆಸಿದೆ. ಈ ಸಮೀಕ್ಷೆಯ ವರದಿಯ ಬಗ್ಗೆ ಒಂದು ವಿಶ್ಲೇಷಣೆಯನ್ನು ನ್ಯೂಯಾರ್ಕ್ ಟೈಮ್ಸ್ ನ್ಯೂಸ್ ಸರ್ವಿಸ್ ಪ್ರಕಟಿಸಿದೆ. ಇದನ್ನು ಕೋಲ್ಕತಾದ ದಿ ಟೆಲಿಗ್ರಾಫ್ ಪತ್ರಿಕೆಯು ಮೇ 7ರಂದು ಮರುಪ್ರಕಟಿಸಿದೆ. ಈ ವಿಶ್ಲೇಷಣೆಯ ಒಂದು ಭಾಗದ ಸಾರಾಂಶವು ಹೀಗಿದೆ: ಉಕ್ರೇನ್ ಯುದ್ಧವು “ಪೂರ್ವ ಏಷ್ಯಾ ಮತ್ತು ಅಭಿವೃದ್ಧಿ ಹೊಂದಿದ ಯುರೋಪಿನ ಪ್ರಜಾಪ್ರಭುತ್ವಗಳಲ್ಲಿ ಹಾಗೂ ಅಮೇರಿಕಾದಲ್ಲಿ ಜನಸಾಮಾನ್ಯರ ಅಭಿಪ್ರಾಯಗಳನ್ನು ಹೇಗೆ ಬದಲಿಸಿತು ಎಂಬುದನ್ನು ಮತ್ತು ರಷ್ಯಾ ಮತ್ತು ಚೀನಾ ದೇಶಗಳ ವಿರುದ್ಧವಾಗಿ ಈ ದೇಶಗಳ ಜನತೆಯನ್ನು ಒಗ್ಗೂಡಿಸಿತು ಎಂಬುದನ್ನು ಮತ್ತು ಒಟ್ಟು ಜನಾಭಿಪ್ರಾಯವು ಒಟ್ಟಾರೆಯಾಗಿ ಹೇಗೆ ಅಮೆರಿಕದ ಪರವಾಗಿ ತಿರುಗಿತು” ಎಂಬುದನ್ನು ಮತ್ತು ಇದಕ್ಕೆ ವ್ಯತಿರಿಕ್ತವಾಗಿ “ಈ ಪ್ರಜಾಪ್ರಭುತ್ವಗಳ ಬಣದ ಹೊರಗೆ, ಜನರ ಒಲವು-ನಿಲುವುಗಳು ಬಹಳವಾಗಿ ಭಿನ್ನವಾಗಿದ್ದವು” ಹೇಗೆ ಎಂಬುದನ್ನು ಈ ವಿಶ್ಲೇಷಣೆ ತೋರಿಸುತ್ತದೆ. ಕೇವಲ ಒಂದು ದಶಕದ ಹಿಂದೆ, ಯುರೇಷಿಯಾ ಖಂಡದಿAದ ಆಫ್ರಿಕಾದ ಉತ್ತರ ಮತ್ತು ಪಶ್ಚಿಮದ ವರೆಗಿನ ವಿಶಾಲ ವ್ಯಾಪ್ತಿಯ ದೇಶಗಳ ಜನತೆಯು ಸಾಮಾನ್ಯವಾಗಿ ಹೊಂದಿದ್ದ ಅಭಿಪ್ರಾಯವು ರಷ್ಯಾದ ಪರವಾಗೇ ಇತ್ತು. ಉಕ್ರೇನ್ ಯುದ್ಧವು ಅದನ್ನು ಸ್ವಲ್ಪಮಟ್ಟಿಗೆ ಬದಲಿಸಿತು ಮತ್ತು ಚೀನಾದ ಬಗ್ಗೆಯೂ ಸಾರ್ವಜನಿಕ ಅಭಿಪ್ರಾಯವನ್ನು ತುಸು ಬದಲಿಸಿತು.
ವಿಶ್ವದ ಎರಡು ಭಾಗಗಳ ಜನರ ಸಹಾನುಭೂತಿಯು ಬೇರೆ ಬೇರೆ ದಿಕ್ಕಿನಲ್ಲೇ ಇದೆ ಎಂಬ ಅಂಶವನ್ನು ವರದಿ ತಿಳಿಸುತ್ತದೆ. ಈ ಬಗ್ಗೆ ವರದಿಯಲ್ಲಿ ನೀಡಿರುವ ವಿವರಣೆಯು ತೀರಾ ಸಪ್ಪೆ ಎನಿಸುತ್ತದೆ: ಇದನ್ನು “ಮೂಲಭೂತ ಮೌಲ್ಯಗಳಲ್ಲಿನ ಭಿನ್ನತೆ” ಎಂದು ಕರೆಯುತ್ತದೆ. ಅಭಿವೃದ್ಧಿಶೀಲ ಜಗತ್ತಿನ “ದಮನಕಾರಿ” ಮತ್ತು “ನಿರಂಕುಶ” ಪ್ರಭುತ್ವಗಳ ಗ್ರಹಿಕೆಗಳು ಮುಂದುವರಿದ ದೇಶಗಳ “ಪ್ರಜಾಪ್ರಭುತ್ವ ಮತ್ತು ಉದಾರವಾದಿ” ಗ್ರಹಿಕೆಗಳಿಗಿಂತ ಭಿನ್ನವಾಗಿವೆ ಮಾತ್ರವಲ್ಲ, ಅಭಿವೃದ್ಧಿಶೀಲ ಜಗತ್ತಿನ ದೇಶಗಳ ಜನರು, ಅವರು ಹೊಂದಿರುವ ವಿಭಿನ್ನ ಮೂಲಭೂತ ಮೌಲ್ಯಗಳ ಕಾರಣದಿಂದಾಗಿ, ಪಾಶ್ಚ್ಯಾತ್ಯ ಶಕ್ತಿಗಳ ಬಗ್ಗೆ ಸಹಾನುಭೂತಿ ಹೊಂದಿಲ್ಲವೆಂದು ತೋರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಮೂರನೇ ಜಗತ್ತಿನ ಜನತೆಯು ಪ್ರಜಾಪ್ರಭುತ್ವ, ನಾಗರಿಕ ಸ್ವಾತಂತ್ರ‍್ಯಗಳು, ಜಾತ್ಯತೀತತೆ ಇತ್ಯಾದಿ ಮೌಲ್ಯಗಳ ಮಹತ್ವವನ್ನು ಸೂಕ್ಷವಾಗಿ ಗ್ರಹಿಸದ ಕಾರಣದಿಂದಾಗಿಯೇ ರಷ್ಯಾ ಮತ್ತು ಚೀನಾವನ್ನು ಬೆಂಬಲಿಸುತ್ತಾರೆ. ಆದ್ದರಿಂದ ಅವರು ಪಾಶ್ಚ್ಯಾತ್ಯರೊಂದಿಗೆ ಗುರುತಿಸಿಕೊಂಡಿಲ್ಲ. ಆದ್ದರಿಂದ, ಅಮೆರಿಕಾದ ವಿದೇಶಾಂಗ ನೀತಿಯು ಟರ್ಕಿ ಅಥವಾ ಭಾರತದಂತಹ ಮೂರನೇ ಜಗತ್ತಿನ “ಅಸಹಿಷ್ಣು” ಆಡಳಿತಗಳನ್ನು ದೂರವಿಡುವ ಬದಲು ಓಲೈಸಬೇಕು. ಏಕೆಂದರೆ, ಅಂತಹ ಆಡಳಿತಗಳು, ಪಾಶ್ಚಿಮಾತ್ಯ ಮೌಲ್ಯಗಳಿಂದ ಭಿನ್ನವಾಗಿದ್ದರೂ, ಸಾಮಾನ್ಯವಾಗಿ ಮೂರನೇ ಪ್ರಪಂಚದ ಜನರ ಮನಸ್ಥಿತಿಯೊಂದಿಗೆ ಮೇಳವಿಸಿ ಕೊಂಡಿರುತ್ತವೆ ಎಂಬ ಸಲಹೆಯನ್ನು ಈ ವರದಿಯಲ್ಲಿ ಸೂಚ್ಯವಾಗಿ ಹೇಳಲಾಗಿದೆ.
ಮಿಥ್ಯಾಪವಾದ
ಈ ವಿಶ್ಲೇಷಣೆಯು ಏನನ್ನು ನಿರ್ಲಕ್ಷಿಸುತ್ತದೆ ಎಂದರೆ, ಅಂತಹ ಆಡಳಿತಗಳನ್ನು ಅಮೆರಿಕಾ ದೂರವಿಟ್ಟಿರಲೇ ಇಲ್ಲ ಎಂಬುದನ್ನು. ಅದಲ್ಲದೆ, ಮೂರನೇ ಜಗತ್ತಿನ ಜನರ ಮೌಲ್ಯಗಳು ಅಂತಹ ಆಡಳಿತಗಳೊಂದಿಗೆ ಮೇಳವಿಸಿಕೊಳ್ಳುತ್ತವೆ ಎಂಬ ಸೂಚನೆಯೂ ಸಹ ಒಂದು ಮಿಥ್ಯಾಪವಾದವೇ. ವಾಸ್ತವವಾಗಿ, ಅದಕ್ಕೆ ತದ್ವಿರುದ್ಧವಾಗಿ, ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ, ತಮ್ಮ ಪರವಾಗಿ ಕೆಲಸ ಮಾಡುವ ಆಡಳಿತಗಳನ್ನು ಮೂರನೇ ಜಗತ್ತಿನ ಜನತೆ ಆಯ್ಕೆ ಮಾಡಿದಾಗಲೆಲ್ಲಾ, ದಂಗೆಗಳ ಮೂಲಕ ಅಥವಾ ದಂಗೆಗಳನ್ನು ಉತ್ತೇಜಿಸುವ ಮೂಲಕ ಅಂತಹ ಜನರಿಂದ ಚುನಾಯಿಸಲ್ಪಟ್ಟ ಪ್ರಜಾಪ್ರಭುತ್ವ ಆಡಳಿತಗಳನ್ನು ಉರುಳಿಸಲು ಅಮೆರಿಕಾ ನೇರವಾಗಿ ಅಥವಾ ಪರೋಕ್ಷವಾಗಿ ಕೆಲಸ ಮಾಡಿದೆ. ಗ್ವಾಟೆಮಾಲಾ (ಅರ್ಬೆಂಜ್), ಇರಾನ್ (ಮೊಸ್ಸಾದೆಹ್), ಇಂಡೋನೇಷ್ಯಾ (ಸುಕಾರ್ನೊ), ಚಿಲಿ (ಅಲೆಂಡೆ), ಬ್ರೆಜಿಲ್ (ಗೌಲರ್ಟ್), ಕಾಂಗೋ (ಲುಮುಂಬಾ), ಬುರ್ಕಿನಾ ಫಾಸ್ಸೊ (ಸಂಕರ) ಉದಾಹರಣೆಗಳು ತಕ್ಷಣ ನೆನಪಿಗೆ ಬರುತ್ತವೆ. ಅದಲ್ಲದೆ, ತಮ್ಮ ಜನರನ್ನು ರಾಷ್ಟ್ರೀಯ ವಿಮೋಚನೆಯತ್ತ ಮುನ್ನಡೆಸುತ್ತಿದ್ದ ಎಡ್ವರ್ಡೊ ಮೊಂಡ್ಲೇನ್, ಅಮಿಲ್ಕರ್ ಕ್ಯಾಬ್ರಾಲ್ ಮತ್ತು ಇತರ ಜನಪ್ರಿಯ ನಾಯಕರ ಹತ್ಯೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಅಮೆರಿಕಾ ಬೆಂಬಲಿಸಿದೆ.
ಉಕ್ರೇನ್ ಯುದ್ಧವೂ ಸೇರಿದಂತೆ ಪಾಶ್ಚ್ಯಾತ್ಯ ಶಕ್ತಿಗಳ ವಿರುದ್ಧ ತೃತೀಯ ಜಗತ್ತಿನ ಜನರಿಗಿರುವ ವಿರೋಧದ ಹಿಂದಿರುವ ನಿಜ ಕಾರಣದ ಬಗ್ಗೆ ಕಣ್ಣು ಮುಚ್ಚಿಕೊಂಡಾಗ ಮಾತ್ರ ಮೂರನೇ ವಿಶ್ವದ ಸರ್ವಾಧಿಕಾರಗಳಿಗೆ ಅಮೆರಿಕಾ ಇನ್ನೂ ಹೆಚ್ಚಿನ ಬೆಂಬಲ ಕೊಡುವ ಶಿಫಾರಸು ಮಾಡುವ ಪ್ರಶ್ನೆ ಉದ್ಭವಿಸುತ್ತದೆ. ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯ ಮೇಲಿನ ಅವರ ವಿರೋಧವು, ಅದು ತಿಳುವಳಿಕೆಯಿಂದ ಕೂಡಿದ್ದೇ ಅಥವಾ ಸಹಜವಾಗಿ ಬಂದದ್ದೋ ಎಂಬುದಕ್ಕಿಂತ ಮುಖ್ಯವಾಗಿ, ಅವರ ಜೀವನಾನುಭವದ ಆಧಾರದ ಮೇಲೆ ಮೂಡಿಬಂದಿರುವುದಂತೂ ಹೌದು. ಈ ಸಂಗತಿಯನ್ನು ಅಮೆರಿಕದೊಂದಿಗೆ ಮೈತ್ರಿ ಹೊಂದಿರುವ ನಿರಂಕುಶ ಪ್ರಭುತ್ವಗಳೂ ಸೇರಿದಂತೆ ಮೂರನೇ ಜಗತ್ತಿನ ಸರ್ಕಾರಗಳು ಅರಿತುಕೊಳ್ಳಬೇಕಾದ ಅನಿವಾರ್ಯತೆಗಳು ಆಗಾಗ ಉದ್ಭವಿಸಿವೆ. ಹಾಗಾಗಿಯೇ, ಮೂರನೇ ವಿಶ್ವದ ಈ ಸರ್ವಾಧಿಕಾರಿ ಸರ್ಕಾರಗಳು ಉಕ್ರೇನ್ ಯುದ್ಧದಲ್ಲಿ ರಷ್ಯಾದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿವೆ.
ಮತ್ತೊಂದೆಡೆ, ಕಾರ್ಪೊರೇಟ್ ನಿಯಂತ್ರಿತ ಮಾಧ್ಯಮಗಳ ನಿರಂತರ ಪ್ರಚಾರದ ಫಲವಾಗಿ ಪಾಶ್ಚ್ಯಾತ್ಯ ದೇಶಗಳಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಜಾಣ್ಮೆಯಿಂದ ಸಾಮ್ರಾಜ್ಯಶಾಹಿಯ ಪರವಾಗಿ ತಿರುಗಿಸಲಾಗುತ್ತದೆ. ಇಂತಹ ಚಮತ್ಕಾರಗಳಿಗೆ ನಾವೀಗ ಚರ್ಚಿಸುತ್ತಿರುವ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಲೇಖನವೇ ಒಂದು ಉದಾಹರಣೆ.
ಆದರೆ ಇದು ಈಗ ಬದಲಾಗುತ್ತಿದೆ ಎಂಬುದನ್ನು ಐರೋಪ್ಯ ಒಕ್ಕೂಟದ ದೇಶಗಳ ಕಾರ್ಮಿಕರು ತಮ್ಮ ಜೀವನಮಟ್ಟವನ್ನು ಹಾಳುಗೆಡವುತ್ತಿರುವ ಹಣದುಬ್ಬರದ ವಿರುದ್ಧ ಇಂದಿನ ದಿನಗಳಲ್ಲಿ ಆಗಾಗ ಮುಷ್ಕರಗಳಲ್ಲಿ ತೊಡಗುತ್ತಿರುವ ವಿದ್ಯಮಾನವು ಸ್ಪಷ್ಟಪಡಿಸುತ್ತದೆ. ಉಕ್ರೇನ್ ಯುದ್ಧದಿಂದಾಗಿಯೇ ಹಣದುಬ್ಬರ ಉಂಟಾಗಿದೆ ಎಂದು ಅವರು ಸಕಾರಣವಾಗಿ ದೂಷಿಸುತ್ತಾರೆ. ತಮ್ಮದೇ ಸರ್ಕಾರಗಳು ಅನುಸರಿಸುತ್ತಿರುವ ಕ್ರಮಗಳಿಂದಾಗಿಯೇ ಈ ಯುದ್ಧವು ಲಂಬಿಸುತ್ತಿದೆ ಎಂಬುದನ್ನೂ ಅವರು ಅರಿತುಕೊಂಡಿದ್ದಾರೆ.
ತಮ್ಮ ಜನರಿಗೇ ಭಾರೀ ದ್ರೋಹವೆಸಗುವ ಪಶ್ಚಿಮದ ರಾಜಕೀಯ ಪಕ್ಷಗಳು
ಆದಾಗ್ಯೂ, ಗಮನಿಸಬೇಕಾದ ಅಂಶ ಯಾವುವೆಂದರೆ, ಕೆಲವು ಅಪವಾದಗಳನ್ನು ಹೊರತುಪಡಿಸಿ, ಅಮೆರಿಕಾದ ಹಿಂದೆ ಕೈಕಟ್ಟಿ ನಿಂತಿರುವ ಪಶ್ಚಿಮದ ರಾಜಕೀಯ ಪಕ್ಷಗಳು ತಮ್ಮ ಜನತೆಗೆ ಭಾರೀ ದ್ರೋಹವೆಸಗಿವೆ ಎಂಬುದು. ಅವು ಯುಎಸ್‌ಗೆ ಕೊಡುತ್ತಿರುವ ಬೆಂಬಲವು ಯಾವ ಹಂತಕ್ಕೆ ಹೋಗಿದೆ ಎಂದರೆ, ಜರ್ಮನಿಯು ತನ್ನ ಅಗತ್ಯದ ಅನಿಲವನ್ನು ರಷ್ಯಾದಿಂದ ಭವಿಷ್ಯದಲ್ಲೂ ಪಡೆಯುವ ಸಾಧ್ಯತೆಯನ್ನು ತಪ್ಪಿಸುವ ಸಲುವಾಗಿಯೇ ನಾರ್ಡ್ ಸ್ಟ್ರೀಮ್ ಅನಿಲ ಕೊಳವೆ ಮಾರ್ಗವನ್ನು ಅಮೆರಿಕವೇ ಸ್ಫೋಟಿಸಿತು ಎಂಬುದನ್ನು ಖ್ಯಾತ ಪತ್ರಕರ್ತ ಸೆಮೋರ್ ಹರ್ಷ್ ಬಹಿರಂಗಪಡಿಸಿದ ನಂತರವೂ ಅವರು ಯಾವ ಆತಂಕವನ್ನೂ ವ್ಯಕ್ತಪಡಿಸಲಿಲ್ಲ. ನಾರ್ಡ್ ಸ್ಟ್ರೀಮ್ ಅನಿಲ ಕೊಳವೆ ಮಾರ್ಗದ ಸ್ಫೋಟದ ಸುದ್ದಿಯು ಹೆಚ್ಚು ಮಂದಿಯ ಗಮನಕ್ಕೆ ಬಾರದಂತೆ ಅಮೆರಿಕಾದ ಮತ್ತು ಯುರೋಪಿಯನ್ ಒಕ್ಕೂಟದ ಮಾಧ್ಯಮಗಳು ನೋಡಿಕೊಂಡವು.
ಈ ರೀತಿಯಲ್ಲಿ, ದುಡಿಯುವ ವರ್ಗದ ಪರವಾಗಿ ಮಾತನಾಡುತ್ತೇವೆಂದು ಹೇಳಿಕೊಳ್ಳುವ ಪಕ್ಷಗಳು ಮತ್ತು ಕಾರ್ಮಿಕ ವರ್ಗದ ಬೆಂಬಲವನ್ನು ಸಾಂಪ್ರದಾಯಿಕವಾಗಿ ಪಡೆಯುವ ಪಕ್ಷಗಳೂ ಸೇರಿದಂತೆ, ರಾಜಕೀಯ ಪಕ್ಷಗಳು ಜನರ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುವ ಸಂಗತಿಯು, ಯುದ್ಧನಿರತರಾಗಿದ್ದ ಪ್ರತಿ ದೇಶದ ಎರಡನೇ ಅಂತಾರಾಷ್ಟ್ರೀಯ (ಇಂಟರ್‌ನ್ಯಾಷನಲ್)ದ ನಾಯಕತ್ವವು “ತನ್ನದೇ ಬಂಡವಾಳಶಾಹಿ”ಗಳ ಯುದ್ಧ ಪ್ರಯತ್ನವನ್ನು ಬೆಂಬಲಿಸಿದ ಮೊದಲ ಮಹಾಯುದ್ಧ-ಪೂರ್ವ ದಿನಗಳನ್ನು ನೆನಪಿಸುತ್ತದೆ. ಜರ್ಮನ್ ಪಾರ್ಲಿಮೆಂಟಿನಲ್ಲಿ, 1914ರಲ್ಲಿ, ಯುದ್ಧ-ಸಾಲಗಳ ಪ್ರಶ್ನೆಯನ್ನು ಮತಕ್ಕೆ ಹಾಕಿದಾಗ, 86 ದಿನಪತ್ರಿಕೆಗಳನ್ನು ಹೊಂದಿದ್ದ ಜರ್ಮನಿಯ ಬಲಿಷ್ಠ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿಯು ಯುದ್ಧದ ಪರವಾಗಿ ಮತ ಚಲಾಯಿಸಿತು. ರೋಸಾ ಲಕ್ಸೆಂಬರ್ಗ್ ಅವರೊಂದಿಗೆ ಹುತಾತ್ಮರಾಗುವ ಮೊದಲು, ಜರ್ಮನ್ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಿದ ಕಾರ್ಲ್ ಲೀಬ್ಕ್ನೆಕ್ಟ್ ಅವರ ಏಕೈಕ ಮತವಷ್ಟೇ ಯುದ್ಧದ ವಿರುದ್ಧವಾಗಿತ್ತು.
ಇಂದು ರಷ್ಯಾದ ವಿರುದ್ಧ ಉಕ್ರೇನನ್ನು ಬೆಂಬಲಿಸುವ ಜರ್ಮನ್ ಸರ್ಕಾರದ ಹಿಂದೆ ಸೋಶಿಯಲ್ ಡೆಮಾಕ್ರಾಟ್ಸ್ ಮಾತ್ರವಲ್ಲ, ಯುರೋಪಿನ ತೀವ್ರಗಾಮಿ ಎಡಪಂಥೀಯರು ಸಹ ನಿಂತಿದ್ದಾರೆ. ಅವರು ಎರಡು ವಾದಗಳನ್ನು- ಒಂದು ಸಾಮಾನ್ಯ ವಾದ ಮತ್ತು ಒಂದು ನಿರ್ದಿಷ್ಟ ವಾದವನ್ನು ಮಂಡಿಸುತ್ತಾರೆ. ಯುದ್ಧವು ಪಾಶ್ಚಿಮಾತ್ಯ ಸಾಮ್ರಾಜ್ಯಶಾಹಿಯ ಫಲಿತಾಂಶವಾಗಿರುವುದರ ಬದಲು, ರಷ್ಯಾದ ಸಾಮ್ರಾಜ್ಯಶಾಹಿ ಯುದ್ಧದಲ್ಲಿ ಪಶ್ಚಿಮವು ಉಕ್ರೇನ್‌ಅನ್ನು ಬೆಂಬಲಿಸುತ್ತಿದೆ ಮತ್ತು ರಷ್ಯಾವೇ ಆಕ್ರಮಣಕಾರಿ ಸಾಮ್ರಾಜ್ಯಶಾಹಿ ಶಕ್ತಿಯಾಗಿದೆ ಎಂಬುದಾಗಿ ಸಾಮಾನ್ಯ ವಾದ ಹೇಳುತ್ತದೆ.
ಪ್ರಸ್ತುತ ಪರಿಸ್ಥಿತಿ ಬಗ್ಗೆ ಹುರುಳಿಲ್ಲದ ವಾದಗಳು
ಇಂದಿನ ಯುದ್ಧದ ಹಿನ್ನೆಲೆಯನ್ನು ಒಂದು ವೇಳೆ ನಾವು ಸಂಪೂರ್ಣವಾಗಿ ನಿರ್ಲಕ್ಷಿಸಿದರೂ ಸಹ, ಅಂದರೆ, ಉಕ್ರೇನಿನ ಚುನಾಯಿತ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಅವರ ವಿರುದ್ಧ ಅಮೆರಿಕದ “ನವ-ಸಂಪ್ರದಾಯವಾದಿಗಳು” (“ಟಿeo-ಛಿoಟಿs”) ವಿನ್ಯಾಸಗೊಳಿಸಿದ “ಮೈದಾನ” ಕ್ಷಿಪ್ರ-ಕ್ರಾಂತಿ ಮತ್ತು ರಷ್ಯನ್ ಭಾಷೆಯನ್ನು ಮಾತನಾಡುವ ಬಹುಸಂಖ್ಯಾತರನ್ನು ದಮನಿಸಿದ್ದರಿಂದಾಗಿ ತದನಂತರದಲ್ಲಿ ಪೂರ್ವ ಉಕ್ರೇನಿನಲ್ಲಿ ಭುಗಿಲೆದ್ದ ಸಂಘರ್ಷವನ್ನು ನಾವು ನಿರ್ಲಕ್ಷಿಸಿದರೂ ಸಹ, ರಷ್ಯಾ-ಉಕ್ರೇನ್ ಯುದ್ಧಕ್ಕೆ ಯಾರು ಹೊಣೆಗಾರರು ಎಂಬುದನ್ನು ತೋರಿಸುವ ಒಂದು ಸರಳ ಅಂಶವಿದೆ. ಯುದ್ಧವನ್ನು ತಡೆಯಬಹುದಾಗಿದ್ದ ಮತ್ತು ರಷ್ಯಾ ಒಪ್ಪಿಕೊಂಡಿದ್ದ ಮತ್ತು ಬದ್ಧವಾಗಿದ್ದ ಮಿನ್ಸ್ಕ್ ಒಪ್ಪಂದವನ್ನು ಇಂಗ್ಲಿಷರು ಮತ್ತು ಅಮೆರಿಕನ್ನರು ಸಮಾಧಿ ಮಾಡಿದರು. ವಾಸ್ತವವಾಗಿ, ಮಿನ್ಸ್ಕ್ ಒಪ್ಪಂದವು, ಉಕ್ರೇನ್‌ಗೆ ಸಾಕಷ್ಟು ಶಸ್ತ್ರಸಜ್ಜಿತವಾಗಲು ಸಮಯಾವಕಾಶವನ್ನು ಕಲ್ಪಿಸಿಕೊಡುವ ಉದ್ದೇಶದಿಂದ ಪ್ರೇರೇಪಿಸಲ್ಪಟ್ಟಿತ್ತು ಎಂಬುದನ್ನು ಏಂಜೆಲಾ ಮರ್ಕೆಲ್ ಒಪ್ಪಿಕೊಂಡಿದ್ದರು. (ನಂತರ, ಪಶ್ಚಿಮದ ದೇಶಗಳಿಗೆ ಮುಜುಗುರವಾಗುವ ಕಾರಣದ ಮೇಲೆ ಅವರು ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡರು). ಮಿನ್ಸ್ಕ್ ಒಪ್ಪಂದವನ್ನು ರಷ್ಯಾ ಒಪ್ಪಿಕೊಂಡಿದ್ದ ರೀತಿಯಲ್ಲಿ ಒಂದು ಒಪ್ಪಂದಕ್ಕೆ ರಷ್ಯಾ ಬಂದ ಕ್ರಮವನ್ನು ರಷ್ಯಾದ ಸಾಮ್ರಾಜ್ಯಶಾಹಿಯ ಲಕ್ಷಣವೆಂದು ಹೇಳಲಾಗದು.
ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದರಿಂದಾಗಿ, ಮುಂದುವರೆಯುತ್ತಲೇ ಇರುವ ಈ ಯುದ್ಧಕ್ಕೆ ರಷ್ಯಾವನ್ನೇ ನೇರ ಹೊಣೆಗಾರನಾಗಿ ಮಾಡಬೇಕು ಎಂಬುದಾಗಿ ನಿರ್ದಿಷ್ಟ ವಾದವು ಹೇಳುತ್ತದೆ. ಈ ವಾದವೂ ಸಹ ಹುರುಳಿಲ್ಲದ್ದೇ. ಆಕ್ರಮಣವನ್ನು ಯಾರು ಮಾಡಿದರೂ ಅದನ್ನು ಅನುಮೋದಿಸಲಾಗದು. ಆದರೆ, ಆಕ್ರಮಣದ ಹಿನ್ನೆಲೆಯನ್ನು ರೂಪಿಸಿದ ಘಟನೆಗಳಿಂದ ಆಕ್ರಮಣ ಒಂದನ್ನೇ ಪ್ರತ್ಯೇಕಿಸಿ ನೋಡಲಾಗದು. ಒಟ್ಟಾರೆ ಸನ್ನಿವೇಶದ ಮಹತ್ವವನ್ನು ಲೆನಿನ್ ಅವರು ಮೊದಲ ಮಹಾಯುದ್ಧದ ಬಗ್ಗೆ ನಿರ್ಣಯವೊಂದರ ಬರೆವಣಿಗೆ ಮಾಡುವಾಗ 1915ರಲ್ಲೇ ಒತ್ತಿಹೇಳಿದ್ದರು: “ಸಮಾಜವಾದಿಗಳು ತಮ್ಮ ತಂತ್ರಗಾರಿಕೆಯನ್ನು ನಿರ್ಧರಿಸುವಲ್ಲಿ ಯಾವ ಗುಂಪು ಮೊದಲ ಮಿಲಿಟರಿ ಹೊಡೆತವನ್ನು ಆರಂಭಿಸಿತು ಅಥವಾ ಯುದ್ಧವನ್ನು ಮೊದಲು ಘೋಷಿಸಿತು ಎಂಬ ಪ್ರಶ್ನೆ ಮುಖ್ಯವಲ್ಲ” (ಮೇ 6ರ ʼದಿ ಡೆಲ್ಫಿ ಇನಿಶಿಯೇಟಿವ್ʼನಲ್ಲಿ ಉಲ್ಲೇಖಿಸಲಾಗಿದೆ). ಪ್ರಸ್ತುತ ಸನ್ನಿವೇಶವು ಪಾಶ್ಚ್ಯಾತ್ಯ ಸಾಮ್ರಾಜ್ಯಶಾಹಿಯು ತನ್ನ ಹಿಡಿತವನ್ನು ಪೂರ್ವ ದಿಕ್ಕಿನತ್ತ ವಿಸ್ತರಿಸುವ ಪ್ರಯತ್ನವೇ.
ಸಾಮ್ರಾಜ್ಯಶಾಹಿಯ ಪೂರ್ವಾಭಿಮುಖ ವಿಸ್ತರಣೆಗೆ ರಷ್ಯಾ ಏಕೆ ಹೆದರಬೇಕು? ಎಂಬ ಪ್ರಶ್ನೆಯನ್ನು ಎತ್ತಬಹುದು. ಅಂತಹ ವಿಸ್ತರಣೆಯು ದುರುದ್ದೇಶದಿಂದಲೇ ಕೂಡಿದೆ ಎಂದೇ ಏಕೆ ಭಾವಿಸಬೇಕು? ಈ ಪ್ರಶ್ನೆಗಳಿಗೆ ಉತ್ತರವನ್ನು ಸಾಮ್ರಾಜ್ಯಶಾಹಿಯ ಪ್ರವೃತ್ತಿಯಲ್ಲಿ ಕಾಣಬಹುದು.
ಅಂದರೆ, ಸಾಮ್ರಾಜ್ಯಶಾಹಿಯು ದೊಡ್ಡ ದೇಶಗಳನ್ನು ಸಣ್ಣ ಸಣ್ಣ ತುಂಡುಗಳಾಗಿ ವಿಭಜಿಸಿ ಅವುಗಳ ಮೇಲೆ ಪ್ರಾಬಲ್ಯವನ್ನು ಸಮಗ್ರವಾಗಿ ಸಾಧಿಸುವ ಪ್ರವೃತ್ತಿಯನ್ನು ಹೊಂದಿದೆ. ಈ ಪ್ರವೃತ್ತಿಯು ಯುಗೊಸ್ಲಾವಿಯಾದ ವಿಷಯದಲ್ಲಿ ಮೊದಲು ಪ್ರಕಟಗೊಂಡಿತು. ಒಂದು ಗಣರಾಜ್ಯವಾಗಿದ್ದ ಯುಗೊಸ್ಲಾವಿಯಾವನ್ನು 1990-92ರಲ್ಲಿ ಜನಾಂಗೀಯತೆಯ ಆಧಾರದ ಮೇಲೆ ಎಂಟು ಗಣರಾಜ್ಯಗಳಾಗಿ ವಿಭಜಿಸಲಾಯಿತು. ನೈಸರ್ಗಿಕ ಸಂಪನ್ಮೂಲಗಳಿಂದ, ವಿಶೇಷವಾಗಿ ನೈಸರ್ಗಿಕ ಅನಿಲ ಮತ್ತು ಸ್ವಲ್ಪ ಮಟ್ಟಿಗೆ ತೈಲದಿಂದ, ಸಮೃದ್ಧವಾಗಿರುವ ರಷ್ಯಾದ ವಿಷಯದಲ್ಲಿ ಸಾಮ್ರಾಜ್ಯಶಾಹಿಯ ಈ ಪ್ರವೃತ್ತಿಯು ಇನ್ನೂ ಹೆಚ್ಚು ಮೊನಚಾಗಿರುತ್ತದೆ. ಅದಲ್ಲದೆ, ರಷ್ಯಾ ಒಂದು ವೇಳೆ ವಿಭಜನೆಗೊಂಡರೆ ಅಥವಾ ಬೇರೆ ರೀತಿಯಲ್ಲಿ ಅದರ ಮೇಲೆ ಹಿಡಿತ ಹೊಂದುವುದು ಸಾಧ್ಯವಾದರೆ, ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಮಧ್ಯ ಏಷ್ಯಾದ ಅನೇಕ ಗಣರಾಜ್ಯಗಳ ಮೇಲೆ ಪ್ರಾಬಲ್ಯ ಹೊಂದುವಲ್ಲಿ ಸಾಮ್ರಾಜ್ಯಶಾಹಿಯ ಹಾದಿಯು ಸುಗಮವಾಗುತ್ತದೆ. ಚೀನಾದ ವಿರುದ್ಧವಾಗಿ ಪ್ರಕಟಗೊಳ್ಳುತ್ತಿರುವ ಸಾಮ್ರಾಜ್ಯಶಾಹಿಯ ಆಕ್ರಮಣಶೀಲತೆಯೂ ಸಹ ಇದೇ ರೀತಿಯ ಪ್ರೇರಣೆಯಿಂದ ಕೂಡಿದೆ. ಎಷ್ಟು ಸಾಧ್ಯವೊ ಅಷ್ಟು ತುಂಡುಗಳಾಗಿ ಚೀನಾವನ್ನು ವಿಭಜಿಸಲು ಸಾಮ್ರಾಜ್ಯಶಾಹಿಯು ಬಯಸುತ್ತದೆ. ಪ್ರಾಸಂಗಿಕವಾಗಿ ಹೇಳುವುದಾದರೆ, ಭಾರತದಂತಹ ಒಂದು ದೇಶವು ಸಾಮ್ರಾಜ್ಯಶಾಹಿಯ ಈ ಪ್ರವೃತ್ತಿಯ ಬಗ್ಗೆ ಚಿಂತಿಸಬೇಕಾದದ್ದು ಬಹಳಷ್ಟಿದೆ.
ಸದ್ಯದ ಮಟ್ಟಿಗೆ ಹೇಳುವುದಾದರೆ, ಇತರ ಅಂಶಗಳಿಗಿಂತ ಮಿಗಿಲಾಗಿ, ರಷ್ಯಾದ ವಿರುದ್ಧ ಪ್ರಕಟಗೊಳ್ಳುತ್ತಿರುವ ಈ ಆಕ್ರಮಣಕೋರತೆಯಿಂದಾಗಿಯೇ, ಸಾಮ್ರಾಜ್ಯಶಾಹಿ ಆಧಿಪತ್ಯವೇ ಅಪಾಯಕ್ಕೊಳಗಾಗಿದೆ. ವಿಶ್ವ ಪ್ರಾಬಲ್ಯವನ್ನು ಹೊಂದ ಬಯಸುವ “ನವ-ಸಂಪ್ರದಾಯವಾದಿ”ಗಳಿಂದ ಪ್ರೇರಿತವಾಗಿರುವ ಸಾಮ್ರಾಜ್ಯಶಾಹಿಯ ಈ ಕಾರ್ಯತಂತ್ರವು ಅದರ ಆಕ್ರಮಣಕೋರತೆಯ ಕಾರಣದಿಂದಾಗಿಯೇ ಭಾರೀ ವೈಫಲ್ಯವನ್ನು ಅನುಭವಿಸುತ್ತಿದೆ. ಈ ವೈಫಲ್ಯವು ಅದರ ಅತಿಯಾದ ಮಹತ್ವಾಕಾಂಕ್ಷೆಯ ಅನಿವಾರ್ಯ ಪರಿಣಾಮವೇ. ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ವೈಫಲ್ಯದಿಂದಾಗಿ ಮೊಟ್ಟಮೊದಲಿಗೆ ಈ ಮಹತ್ವಾಕಾಂಕ್ಷೆಯ ಯೋಜನೆ ಇರಲೇ ಇಲ್ಲ ಎಂಬ ಅಭಿಪ್ರಾಯಕ್ಕೆ ಬರಲಾಗದು. ಮೂರನೇ ಜಗತ್ತಿನ ಜನತೆಯು ಸಾಮ್ರಾಜ್ಯಶಾಹಿ ಯೋಜನೆ ಏನೆಂಬುದನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದಲೇ ರಷ್ಯಾಕ್ಕೆ ಅಷ್ಟೊಂದು ಬೆಂಬಲ ಸಿಕ್ಕಿದೆ.