ಹೋಟೆಲ್‍ನಲ್ಲಿ ನೀರು ಕುಡಿದ ವಿಚಾರ : ಕಾರು ಹತ್ತಿಸಿ ದಲಿತರಿಬ್ಬರನ್ನು ಹತ್ಯೆಗೈದ ದುಷ್ಕರ್ಮಿಗಳು

ಯಲಹಂಕ : ಹೋಟೆಲ್‍ ವೊಂದರಲ್ಲಿ ನೀರು ಕುಡಿದ ವಿಚಾರಕ್ಕೆ ನಡೆದ ಗಲಾಟೆಯನ್ನೆ ಮುಂದಿಟ್ಟುಕೊಂಡು ಇಪ್ಪತ್ತು ದಿನಗಳ ಬಳಿಕ ಕಾರು ಹತ್ತಿಸಿ ಇಬ್ಬರು ದಲಿತರನ್ನು ಹತ್ಯೆಗೈದಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇಲ್ಲಿನ ರಾಜಾನಕುಂಟೆ ಪೊಲೀಸ್ ಠಾಣೆ ಎದುರು ಶವವಿಟ್ಟು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಸರಘಟ್ಟ ಹೋಬಳಿಯ ಚಲ್ಲಹಳ್ಳಿ ನಿವಾಸಿಗಳಾದ ನಾಗರಾಜ್ ಹಾಗೂ ರಾಮಯ್ಯ ಎಂಬುವರನ್ನು ಉದ್ದೇಶ ಪೂರಕವಾಗಿ ಜಾತಿಯ ವಿಚಾರಕ್ಕೆ ಕಾರು ಹತ್ತಿಸಿ ಹಾಡುಹಾಗಲೇ ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಕೃತ್ಯವೆಸಗಿದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳು ಕುಟುಬಸ್ಥರೊಂದಿಗೆ ಪ್ರತಿಭಟನೆ ನಡೆಸಿದರು.

ಘಟನೆಯ ವಿವರ : ಘಟನೆ ಸಂಬಂಧ ಮೃತರ ಸಂಬಂಧ ವೆಂಕಟೇಶ್ ಮಾಧ್ಯಮಗಳಿಗೆ ವಿವರಗಳನ್ನು ನೀಡಿದರು. ಗುರುವಾರ ಮುಂಜಾನೆ ನಾಗರಾಜ್, ರಾಮಯ್ಯ ಹಾಗೂ ಗೋಪಾಲ್ ಎಂಬುವರು ಒಂದೇ ಬೈಕ್‍ನಲ್ಲಿ ಇಲ್ಲಿನ ಕೆಎಂಎಫ್ ಕಾರ್ಖಾನೆಗೆ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಇದರ ರಭಸಕ್ಕೆ ನಾಗರಾಜ್, ರಾಮಯ್ಯ ಸ್ಥಳದಲ್ಲಿಯೇ ಮೃತಪಟ್ಟರೆ, ಗೋಪಾಲ್ ಅವರು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ, ಈ ಕಾರನ್ನು ರೌಡಿಶೀಟರ್ ಭರತ್, ನಿಶಾಂತ್, ವಿನಯ್ ಸೇರಿದಂತೆ ಇತರರು ಶರವೇಗವಾಗಿ ಚಲಾಯಿಸಿಕೊಂಡು ಬಂದು ಉದ್ದೇಶ ಪೂರಕವಾಗಿ ಹತ್ಯೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಕಳೆದ ಇಪ್ಪತ್ತು ದಿನಗಳ ಹಿಂದೆ ಹೆಸರುಘಟ್ಟದಲ್ಲಿ ಹೋಟೆಲ್‍ನಲ್ಲಿ ನಾಗರಾಜ್ ನೀರು ಕುಡಿದ ವಿಚಾರಕ್ಕೆ ಭರತ್ ಎಂಬಾತ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ. ಅಲ್ಲದೆ, ಚುನಾವಣೆ ಬಳಿಕೆ ಕೊಲೆ ಮಾಡುವುದಾಗಿ ಬಹಿರಂಗ ಬೆದರಿಕೆವೊಡ್ಡಿದ್ದ.ಇನ್ನೂ, ಈ ಭರತ್ ಈಗಾಗಲೇ ರೌಡಿಶೀಟರ್ ಆಗಿದ್ದು, ಈತನ ತಂದೆ ವಿರುದ್ಧವೂ ಅನೇಕ ಗಂಭೀರ ಆರೋಪಗಳಿವೆ. ಹೀಗಾಗಿ, ಭರತ್, ನಿಶಾಂತ್, ವಿನಯ್ ಎಂಬುವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಘಟನೆ ಕುರಿತು ಮಾತನಾಡಿದ ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಉದ್ದೇಶ ಪೂರಕವಾಗಿಯೇ ಕಾರು ಹತ್ತಿಸಿ ಕೊಲೆ ಮಾಡಲಾಗಿದೆ. ಘಟನೆ ನಡೆದ ಸ್ಥಳ ಪರಿಶೀಲನೆ ನಡೆಸಿದರೆ, ಇದು ಕೊಲೆಯೆಂದೇ ಹೇಳಬಹುದಾಗಿದೆ. ಸದ್ಯ ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಆದರೆ, ಇಂತಹ ಭಯಾನಕ ಕೃತ್ಯವೆಸಗಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.ಇಲ್ಲದಿದ್ದರೆ, ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.

Donate Janashakthi Media

Leave a Reply

Your email address will not be published. Required fields are marked *