ಸಿದ್ದರಾಮಯ್ಯರಿಂದ ನನಗೆ ಅನ್ಯಾಯ ಆಗಿದೆ, ಈ ಬಾರಿ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿ : ವಿ.ಶ್ರೀನಿವಾಸ ಪ್ರಸಾದ್

ಮೈಸೂರು : ಪ್ರತೀ ಹಂತದಲ್ಲಿ ನೆರವು ನೀಡಿದ ನನಗೆ ಅನ್ಯಾಯ ಮಾಡಿದ ಸಿದ್ದರಾಮಯ್ಯನಿಗೆ ಸರಿಯಾದ ಪಾಠ ಕಲಿಸಿ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್ ಕರೆ ನೀಡಿದರು. ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಗಡೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಮ್ಮ ಮಾತಿನುದ್ದಕ್ಕೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಸೋಮಣ್ಣರನ್ನ ಗೆಲ್ಲಿಸಲು ಮನವಿ :
ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕಳೆದ ಸಾಲಿನಲ್ಲಿ ಗೊಂದಲ ಆಯಿತು. ಹಾಗಾಗಿ ಕಾಂಗ್ರೆಸ್ ಯತೀಂದ್ರ ಸಿದ್ದರಾಮಯ್ಯ ಗೆದ್ದರು. ಅದು ನನ್ನ ಮನಸ್ಸಿಗೆ ಬಹಳ ನೋವಾಗಿದೆ. ಇದು ನನ್ನ ಕೊನೆಯ ಚುನಾವಣಾ ಪ್ರಚಾರ. ನಿಮ್ಮಿಂದ ನಾನು ಬಹಳ ನಿರೀಕ್ಷೆ ಇಟ್ಟಿದ್ದೇನೆ. ದಯವಿಟ್ಟು ಅತಿ ಹೆಚ್ಚು ಮತಗಳ ಅಂತರದಿಂದ ಸೋಮಣ್ಣ ಅವರನ್ನು ಆರಿಸಿ ಕಳುಹಿಸಿ ಎಂದು ಮನವಿ ಮಾಡಿದರು. ವಿಧಾನಸಭೆ ಚುನಾವಣೆಯ ನಂತರದ ಕೆಲವೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 80 ಸಾವಿರ ಮತ ಲೀಡ್ ಬಂತು . ಅಂದರೆ, ಅಂದಿನ ಗೊಂದಲದಿಂದ ಬಿಜೆಪಿ ಅಭ್ಯರ್ಥಿ ಸಿದ್ದಲಿಂಗಸ್ವಾಮಿ ಸೋತರು ಎಂದು ಬೇಸರ ವ್ಯಕ್ತಪಡಿಸಿದರು.

ನಂಜನಗೂಡು ಕ್ಷೇತ್ರದಲ್ಲಿ ಅವರು ಮಾಡಿದ ಮೋಸ ನಾನು ಮರೆತಿಲ್ಲ. ನಾನು ಎಂದಿಗೂ ಹಗೆ ಸಾಧಿಸಲಿಲ್ಲ. ಕಾಂಗ್ರೆಸ್ ಗೆ ಕರೆತಂದು ಗೆಲ್ಲಿಸಿದೆ. ನನ್ನ ಮನೆ ಬಾಗಿಲಿಗೆ ಬಂದು ಕೈಮುಗಿದ ನಿನ್ನ ಬಲಗಡೆ ನಿಂತು ಗೆಲುವು ತಂದುಕೊಟ್ಟರೂ ನಿನಗೆ ಕೃತಜ್ಞತೆ ಇಲ್ಲ, ವರುಣ ಕ್ಷೇತ್ರದಲ್ಲಿ ನಾನು ನಿಂತಿದ್ದರೆ ತೋರಿಸುತ್ತಿದ್ದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯಗೆ ಚಾಮುಂಡೇಶ್ವರಿ, ಬಾದಾಮಿ ಮುಗೀತು. ಈಗ ಇಲ್ಲಿಗೆ ಓಡಿ ಬಂದಿದ್ದಾನೆ :
ನನ್ನ ವಿರುದ್ಧ ಪಿತೂರಿ ಮಾಡಿದ್ದೆ. ಮಂತ್ರಿ ಮಂಡಲದಿಂದ ಕೈಬಿಟ್ಟೆ. ನಾನು ನಿನಗೆ ಮಾಡಿರುವ ಅನ್ಯಾಯವಾದರೂ ಏನು? ಎಂದು ಪ್ರಶ್ನಿಸಿದ ಅವರು, ಸಿಎಂ ಆಗಿದ್ದರೂ ಕ್ಷೇತ್ರವಿಲ್ಲದೆ ಎರಡು ಕಡೆ ನಿಂತೆ, ಸೋತ. ಚಾಮುಂಡೇಶ್ವರಿ, ಬಾದಾಮಿ ಮುಗೀತು. ಈಗ ಇಲ್ಲಿಗೆ ಓಡಿಬಂದಿದ್ದಾನೆ ಎಂದರು.
ಹೋರಾಟದ ಮುಖಾಂತರ ನಾನು ಈವರೆಗೆ ಗೆದ್ದಿದ್ದೇನೆ. ನನ್ನ ರಾಜಕೀಯ ಜೀವನದ ಹಿನ್ನೆಲೆಗೂ ನಿನ್ನ ಹಿನ್ನೆಲೆಗೂ ಅಜಗಜಾಂತರ ವ್ಯತ್ಯಾಸ ಇದೆ. ನಿನ್ನದು ಮಾತೊಂದು, ಕೃತಿಯೊಂದು. ಮಾತಿನಂತೆ ನಡೆದುಕೊಳ್ಳಲ್ಲ. ಕೃತ್ರಿಮ ಎಂದು ಹಿಗ್ಗಾಮುಗ್ಗಾ ಝಾಡಿಸಿದರು.

ಹೋರಾಟ ಮಾಡಿ ಖರ್ಗೆ ಮಂತ್ರಿ ಆದವರಲ್ಲ :
ಖರ್ಗೆ ಬಗ್ಗೆ ನಾನು ಎಂದೂ ಮಾತನಾಡಿಲ್ಲ. ಅವರು ಎಂದೂ ಹೋರಾಟ ಮಾಡಿಲ್ಲ, ಅವಕಾಶವಾದಿ ರಾಜಕಾರಣಿ ಖರ್ಗೆ. ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿ ಭದ್ರವಾಗಿದ್ದರೆ ಇವರಿಗೆ ಎಲ್ಲಿ ಕೊಡುತ್ತಿದ್ದರು. ಹಾಗಾಗಿ ಮುರಿದಿರುವ ಖುರ್ಚಿಯಲ್ಲಿ ಕುಳಿತಿದ್ದಾರೆ. ಅಧಿಕಾರ ಇಲ್ಲದೆ ಖರ್ಗೆ ಬದುಕುವುದಿಲ್ಲ. ಹೋರಾಟ ಮಾಡಿ ಖರ್ಗೆ ಮಂತ್ರಿ ಆದವರಲ್ಲ. ಕಾಡಿ ಬೇಡಿ ಮಂತ್ರಿ ಆದವರು ಎಂದು ಟೀಕಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಅವರನ್ನು ಕತ್ತಿಯ ರೀತಿ ಹಾಗೂ ಸಂವಿಧಾನವನ್ನು ಗುರಾಣಿಯಂತೆ ಹಿಡಿದುಕೊಂಡು ಬರುತ್ತಿದ್ದಾರೆ. ಅವರನ್ನು ಯಾಕೆ ಬೀದಿಗೆ ತರಬೇಕು ಎಂದು ಸೂಚ್ಯವಾಗಿ ತಿಳಿಸಿದರು.

ಸೋಮಣ್ಣ ಅವರಿಗೆ ಅದ್ಬುತ ಬೆಂಬಲ ಸಿಗಲಿದೆ : 
ಮೀಸಲಾತಿ ಜಾರಿ ಬಗ್ಗೆ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಅದೇ ಸಿದ್ದರಾಮಯ್ಯ ಆಗಿದ್ದರೆ ಕೊಲ್ಲಾಪುರದ ಪೈಲ್ವಾನನ ಹಾಗೆ ಬರುತ್ತಿದ್ದರು. ಇವರಿಗೆ ನಾಗರೀಕತೆ ಇಲ್ಲ ಎಂದು ಛೇಡಿಸಿದ ಪ್ರಸಾದ್, ಇದು ಡಬಲ್ ಇಂಜಿನ್ ಸರ್ಕಾರ. ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಇದೆ. ಬಿಜೆಪಿ ಅಧಿಕಾರಕ್ಕೆ ಬಂದೇ ಬರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಗ್ಗೆ ಜನರಿಗೆ ವಿಶ್ವಾಸ ಇದೆ. ಸೋಮಣ್ಣ ಅವರಿಗೆ ಅದ್ಭುತ ಬೆಂಬಲ ಸಿಗುತ್ತಿದೆ. ಅವರ ಕೈ ಬಲಪಡಿಸಿ ಎಂದು ಕೋರಿದರು.

ಇದನ್ನೂ ಓದಿ : ಸಿದ್ದರಾಮಯ್ಯ ನನ್ನೊಟ್ಟಿಗೆ ವರುಣಾ ಕ್ಷೇತ್ರ ಸಂಚಾರ ಮಾಡಲಿ: ವಿ.ಸೋಮಣ್ಣ ಸವಾಲು

ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಯಾಕೆ ಆ ಪರಿ ಸೋತಿರಿ. ವಿಧಾನಸಭೆಯಲ್ಲಿ ನೀವು, ಮಹಾದೇವಪ್ಪ ಯಾಕೆ ಸೋತ್ರಿ. ಈಬಾರಿ ಜನ ತೀರ್ಮಾನ ಮಾಡಲಿ. ಜನ ಯೋಚಿಸುತ್ತಿದ್ದಾರೆ. ಮೇ 13ರಂದು ಗೊತ್ತಾಗಲಿದೆ ಎಂದು ಮಾರ್ಮಿಕವಾಗಿ ನುಡಿದರು.

Donate Janashakthi Media

Leave a Reply

Your email address will not be published. Required fields are marked *