– ನವೀನ್ ಸೂರಿಂಜೆ
“ಮೀನು ಹಿಡಿಯುವವರಿಗೆ ದೇವಸ್ಥಾನ ಪ್ರವೇಶ ಇಲ್ಲ” ಎಂಬ ಸಾಮಾಜಿಕ ಬಹಿಷ್ಕಾರವನ್ನು ಪ್ರತಿಭಟಿಸಿ, ಮೊಗವೀರರೇ ನಿರ್ಮಿಸಿದ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದೊಳಗೆ ಮೀನು ಹಿಡಿದೆನೆಂಬ ಕಾರಣಕ್ಕೆ ರಾಹುಲ್ ಗಾಂಧಿ ಖುದ್ದು ಪ್ರವೇಶ ನಿರಾಕರಿಸಿದ್ದು ಅಪಾಯಕಾರಿ ಮೂರ್ಖತನದ ನಡೆ.
ನಾನು ಮೀನು ಮುಟ್ಟಿರುವುದರಿಂದ ಉಚ್ಚಿಲ ದೇವಸ್ಥಾನದೊಳಗೆ ಹೋಗುವುದಿಲ್ಲ ಎಂದು ರಾಹುಲ್ ಗಾಂಧಿಯವರು ದೇವಸ್ಥಾನ ಪ್ರವೇಶ ನಿರಾಕರಿಸಿರುವ ನಡೆಯನ್ನು ಹೊಗಳಲಾಗುತ್ತಿದೆ. “ಮೀನು ತಿಂದು ದೇವಸ್ಥಾನದೊಳಗೆ ಹೋದ್ರೆ ತಪ್ಪೇನು ? ಮೀನು ತಿಂದು ಬರಬೇಡಿ ಎಂದು ದೇವರು ಹೇಳಿದ್ದಾನಾ ? ಎಂದು ಕೇಳಿದ್ದ ಸಿದ್ದರಾಮಯ್ಯನವರು ರಾಹುಲ್ ಗಾಂಧಿಯಿಂದ ಕಲಿಯಬೇಕಿದೆ” ಎಂದು ಚರ್ಚೆಗಳು ನಡೆಯುತ್ತಿದೆ. ಬೇರೆ ದೇವಸ್ಥಾನಗಳ ಕತೆ ಪಕ್ಕಕ್ಕಿಡೋಣಾ. ರಾಹುಲ್ ಗಾಂಧಿ ತಾನು ಮೀನು ಮುಟ್ಟಿದ್ದೇನೆ ಎಂಬ ಕಾರಣಕ್ಕಾಗಿ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದೊಳಗೆ ಪ್ರವೇಶವನ್ನು ತಾನೇ ಖುದ್ದು ನಿರಾಕರಿಸಿದ್ದು ದೇವಸ್ಥಾನದ ಸಾಂಸ್ಕೃತಿಕ, ಸಾಮಾಜಿಕ ಹಿನ್ನಲೆ ತಿಳಿಯದಿರುವ ಮೂಢತನವಷ್ಟೆ.
ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನವೇ ಮೀನು ಹಿಡಿಯುವ ಮೊಗವೀರರದ್ದು. ಈ ದೇವಸ್ಥಾನದ ಪ್ರತೀ ಕಲ್ಲು ಕಲ್ಲಿನಲ್ಲೂ ಮೊಗವೀರರ ಕಡಲುಪ್ಪಿನ ಬೆವರ ಪರಿಮಳವಿದೆ. ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿರುವ ಪ್ರತೀ ನೋಟು, ನಾಣ್ಯದಲ್ಲೂ ಕಡಲಲ್ಲಿರುವ ಅಷ್ಟೂ ಮೀನುಗಳ ಘಮವಿದೆ. ಉಚ್ಚಿಲ ಮಹಾಲಕ್ಷ್ಮಿ ದೇವಿಗೆ ಪ್ರೀಯವಾಗಿರುವ ಕಾಪು ಮಲ್ಲಿಗೆಯಂತೂ ಮೀನಿನದ್ದೇ ಕಂಪು ಸೂಸುತ್ತದೆ. ಇದ್ಯಾವುದೂ ಕೂಡಾ ಹಸಿ ಮೀನಿನ ಪರಿಮಳ ಬಂದಿಲ್ಲ ಎಂದಾದರೆ ಉಚ್ಚಿಲ ಮಹಾಲಕ್ಷ್ಮಿ ದೇವಿಯು ಮೊಗವೀರರಲ್ಲಿ ಮುನಿಸಿದ್ದಾಳೆ ಎಂದರ್ಥ. ಯಾಕೆಂದರೆ ಮೊಗವೀರರು ಒಳ್ಳೆ ಮೀನುಗಾರಿಕೆ, ಮೀನಿನ ಉತ್ತಮ ವ್ಯಾಪಾರ, ಮೀನಿನ ದೋಣಿಗಳ ಸಂಪತ್ತಿಗಾಗಿ ಹೊತ್ತುಕೊಂಡ ಹರಕೆಗಳು ಫಲಿಸಿದರೆ ಮೀನು ಹಿಡಿದ, ಮೀನು ಮಾರಿದ ಕೈಯ್ಯಲ್ಲೇ ಹರಕೆ ತೀರಿಸುತ್ತಾರೆ. ಕಾಣಿಕೆ ಡಬ್ಬಿಯಲ್ಲಿ, ಮಲ್ಲಿಗೆಯಲ್ಲಿ ಮೀನಿನ ಘಮಲು ಇಲ್ಲವೆಂದರೆ ಮೊಗವೀರರ ಮೀನು ಉಧ್ಯಮ ಕ್ಷೀಣಿಸಿದೆ ಎಂದರ್ಥ. ಇಂತಹ ದೇವಿಗೆ ಮೀನು ಹಿಡಿದ ಕೈಯ್ಯಲ್ಲಿ ರಾಹುಲ್ ಗಾಂಧಿ ನಮಿಸಿದ್ದರೆ ಉಚ್ಚಿಲ ಮಹಾಲಕ್ಷ್ಮಿ ದೇವಿಗೆ ಅದೆಷ್ಟು ಖುಷಿಯಾಗುತ್ತಿತ್ತು…
ಮೀನು ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂಬ ನಿಯಮ ಮೀನೇ ಮುಖ್ಯ ಆಹಾರವಾಗಿರುವ ಕರಾವಳಿಯಲ್ಲಿ ಇಲ್ಲ. ಧರ್ಮಸ್ಥಳಕ್ಕೆ ಮೀನು ತಿಂದು ಸಿದ್ದರಾಮಯ್ಯ ಹೋದಾಗ ಖುದ್ದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯೇ ಸುದ್ದಿಗೋಷ್ಠಿ ನಡೆಸಿ “ಮೀನು ತಿಂದು ಬರಬಾರದು ಎಂಬ ನಿಯಮ ಧರ್ಮಸ್ಥಳ ದೇವಸ್ಥಾನದಲ್ಲಿ ಇಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದರು. ಮೀನು ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂಬುದು ಕೋಮುವಾದಿ ವೈದಿಕರ ಹೊಸ ಪಿತೂರಿಯಷ್ಟೆ. ಈಗ ಮೀನು ಹಿಡಿದವರೂ ದೇವಸ್ಥಾನಕ್ಕೆ ಹೋಗಬಾರದು ಎಂಬ ನರೇಟಿವ್ ಅನ್ನು ಸೃಷ್ಟಿಸುವುದು ಅದಕ್ಕಿಂತಲೂ ಅಪಾಯಕಾರಿ ನಡೆ. ಕುರಿ ತಿಂದು ದೇವಸ್ಥಾನಕ್ಕೆ ಹೋಗಬಾರದು ಎನ್ನುವ ಮಡಿವಂತಿಕೆಯ ಮುಂದುವರಿದ ಭಾಗವಾಗಿ ಕುರಿ ಸಾಕುವವರು/ಮುಟ್ಟಿದವರು ದೇವಸ್ಥಾನಕ್ಕೆ ಬರಬಾರದು ಎಂಬ ನಿಯಮ ಸೃಷ್ಟಿಸಬಹುದು. ಒಟ್ಟಾರೆ ಕಾರ್ಮಿಕ ಶೂದ್ರರನ್ನು ಬಹಿಷ್ಕರಿಸುವ ವ್ಯವಸ್ಥಿತ ಪಿತೂರಿಗೆ ಇಂತಹ ಅತಿ ಬುದ್ದಿವಂತಿಕೆಯ ನಡೆಗಳು ನೀರೆರೆಯುತ್ತದೆ.
ಇದನ್ನೂ ಓದಿ : ಮೀನು ಮುಟ್ಟಿದ್ದಕ್ಕೆ ದೇವಸ್ಥಾನಕ್ಕೆ ಹೋಗಲು ನಿರಾಕರಿಸಿದ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣದಲ್ಲಿ ಬಿರುಸಿನ ಚರ್ಚೆ
ಮೀನು ಹಿಡಿದವರು ದೇವಸ್ಥಾನ ಪ್ರವೇಶಿಸಬಾರದು ಎಂಬ ಸಾಮಾಜಿಕ ಬಹಿಷ್ಕಾರವನ್ನು ಪ್ರತಿಭಟಿಸಿಯೇ ಮೊಗವೀರರು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನವನ್ನು 1957 ರಲ್ಲಿ ಸ್ಥಾಪಿಸಿದರು. ಬಾರ್ಕೂರು ದೇವಳದಲ್ಲಿ ಪ್ರವೇಶವಿಲ್ಲದ ಕಾರಣ ತಣ್ಣನೆಯ ಧಾರ್ಮಿಕ ಬಂಡಾಯವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಮೊಗವೀರರಿಗೆ ಅನುಕೂಲವಾಗುವಂತೆ ಮೊಗವೀರರು ಉಚ್ಚಿಲದಲ್ಲಿ ಸುಮಾರು 18 ಎಕರೆ ಭೂಮಿಯನ್ನು ಖರೀದಿಸಿ ಭವ್ಯವಾದ ದೇವಸ್ಥಾನ ನಿರ್ಮಿಸಿದರು. ಇಂತಹ ಬಂಡಾಯದ, ಕ್ರಾಂತಿಯ ಐತಿಹಾಸಿಕ, ಮೀನು ಹಿಡಿವವರ ಅಧಿದೇವತೆ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ “ಮೀನು ಹಿಡಿದೆನೆಂದು” ಪ್ರವೇಶಿಸದಿರುವ ರಾಹುಲ್ ಗಾಂಧಿ ನಿರ್ಧಾರ ಅಪಾಯಕಾರಿ ಮೂಢತನ.