– ವಸಂತರಾಜ ಎನ್.ಕೆ
ಸೌದಿ ಅರೇಬಿಯ ಮತ್ತು ಇರಾನ್ ನಡುವೆ ರಾಜಿ ಮಾತುಕತೆ ನಡೆದು ಒಪ್ಪಂದವಾದ ಬೆನ್ನಲ್ಲೇ, ಪಶ್ಚಿಮ ಏಶ್ಯಾದಲ್ಲಿ ರಾಜಿ ಮಾತುಕತೆಯ ಟ್ರೆಂಡ್ ಹಬ್ಬುತ್ತಿದೆ. ಬಿಗುಮಾನ, ಸಂಘರ್ಷ, ಹಗೆಯ ಬದಲು ಈ ಪ್ರದೇಶದ ನಾಯಕರು ಪರಸ್ಪರ ರಾಜಿ ಮಾತುಕತೆಗೆ ಭೇಟಿ ನೀಡುತ್ತಿದ್ದಾರೆ. ಈಗಿನ ಸಂಘರ್ಷಗಳ ತಾತ್ಕಾಲಿಕ ಶಾಶ್ವತ ನಿಲುಗಡೆ ಕುರಿತು ಒಪ್ಪಂದಗಳತ್ತ ಸಾಗುತ್ತಿದ್ದಾರೆ. ಒಂದು ತಿಂಗಳಲ್ಲಿ ಪಶ್ಚಿಮ ಏಶ್ಯಾದ ಚಿತ್ರಣ ಬದಲಾಗಿ ಬಿಟ್ಟಿದೆ. ಇದರ ಜತೆಗೆ ಸೌದಿ ಮತ್ತು ಇರಾನ್ ವಿರುದ್ಧ ಪಕ್ಷಗಳಲ್ಲಿದ್ದ ಯೆಮೆನ್ ಮತ್ತು ಸಿರಿಯಾ ಸಂಘರ್ಷಗಳು ಕೊನೆಗಾಣುವ ಅವಕಾಶಗಳು ತೆರೆದುಕೊಂಡಿವೆ.
ಯೆಮೆನ್ ಯುದ್ಧ ವಿರಾಮ ಕುರಿತು ಚರ್ಚಿಸಲು ಸೌದಿ ಮತ್ತು ಒಮನ್ ರಾಯಭಾರಿಗಳು ಯೆಮೆನ್ ರಾಜಧಾನಿ ಸನಾ ಗೆ ತೆರಳಿದ್ದಾರೆ. ಅರಬ್ ಲೀಗ್ ನಿಂದ ಹೊರಹಾಕಲ್ಪಟ್ಟು ಏಕಾಂಗಿಯಾಗಿದ್ದ ಸಿರಿಯಾದ ಅಧ್ಯಕ್ಷ ಬಶರ್ ಆಅಲ್-ಅಸಾದ್ ಒಮನ್ ಮತ್ತು ಯು.ಎ.ಇ ಭೇಟಿ ನೀಡಿದ್ದು ಅವರಿಗೆ ಭವ್ಯ ಸ್ವಾಗತ ಸಿಕ್ಕಿದೆ. ಸಿರಿಯಾದ ವಿದೇಶ ಮಂತ್ರಿ ಮಾತುಕತೆಗೆ ಈಜಿಪ್ಟ್ ಮತ್ತು ಸೌದಿ ಅರೇಬಿಯ ಭೇಟಿ ನೀಡಿದ್ದಾರೆ,
ಯೆಮೆನ್ ನಲ್ಲಿ ಶಾಂತಿ ನಿರ್ಣಾಯಕ :
ಯೆಮೆನ್ ನಲ್ಲಿ ಕಳೆದ ಒಂದು ದಶಕದಿಂದ ನಡೆಯುತ್ತಿರುವ ಭೀಕರ ಯುದ್ಧ ನಿಲುಗಡೆ ಮಾಡಿ ಶಾಂತಿ, ಸಾಮಾನ್ಯ ಸ್ಥಿತಿ ತರುವುದು ಇರಾನ್-ಸೌದಿ ಒಪ್ಪಂದದ ಪರಿಣಾಮಕಾರಿತನದ ಒರೆಗಲ್ಲು. ಸಂಘರ್ಷದಲ್ಲಿ ತೊಡಗಿದ್ದ ಸೌದಿ ಮತ್ತು ಯೆಮೆನ್ ನ ಹೌತಿ ಬಂಡಾಯಗಾರರ ನಡುವೆ ಮಾತುಕತೆ ನಡೆದಿದ್ದು ಸ್ಥೂಲ ಒಪ್ಪಂದದ ರೂಪುರೇಷೆಗಳು ಸಿದ್ಧವಾಗಿವೆ. ಕದನ ನಿಲುಗಡೆ, ಬಂಧಿತರ ವಿನಿಮಯ, ಸನಾ ವಿಮಾನ ನಿಲ್ದಾಣವನ್ನು ತೆರೆಯುವದಕ್ಕೆ ಒಪ್ಪಂದವಾಗಿದ್ದು ಜಾರಿ ಆರಂಭವಾಗಿದೆ. 900ಕ್ಕೂ ಹೆಚ್ಚು ಯೆಮೆನಿ ಬಂಧಿತರನ್ನು ಸೌದಿ ಬಿಡುಗಡೆ ಮಾಡಿ ಅವರು ಯೆಮೆನ್ ಸೇರಿದ್ದಾರೆ. ಹೊಡೈದಾ ಬಂದರಿಗೆ ಹೋಗಲು ಮುಕ್ತ ಅವಕಾಶ, ತೈಜ್ ಮೇಲೆ ಹೌತಿ ದಿಗ್ಬಂಧನ ತೆಗೆಯುವುದು, ಸೌದಿ ನಿಯತ್ರಣದಲ್ಲಿರುವ ತೈಲ ಸ್ಥಾವರಗಳ ಆದಾಯದಿಂದ ಯೆಮೆನಿ ಸರಕಾರದ ನೌಕರರರಿಗೆ ವೇತನ ಪಾವತಿ ಮಾಡುವುದು – ಒಪ್ಪಂದದ ಇತರ ಅಂಶಗಳು.
ಹಿಂದೆ ಇವು ಬಹಳ ಅಸಾಧ್ಯ ಶರತ್ತುಗಳು ಎಂದು ಭಾವಿಸಲಾಗಿತ್ತು. ಆದರೆ ಒಬ್ಬ ಹೌತಿ ವಕ್ತಾರ ಹೇಳಿದಂತೆ ‘ಇತ್ತೀಚೆಗೆ ಈ ಪ್ರದೇಶದಲ್ಲಿ ಶಾಂತಿಯ ಗಾಳಿ ಬೀಸುತ್ತಿದ್ದು’ ಇದು ಸಾಧ್ಯವಾಗಿದೆ. ಮೊದಲ ಸುತ್ತಿನ ಒಪ್ಪಂದದ ಜಾರಿಯಾದ ಮೇಲೆ ಎಲ್ಲ ವಿದೇಶೀ ಪಡೆಗಳ ನಿರ್ಗಮನ, ಯೆಮೆನ್ ಗೆ ಒಂದು ರಾಜಕೀಯ ವ್ಯವಸ್ಥೆ ಮತ್ತು ಒಂದು ಏಕೀಕೃತ ಪ್ರಭುತ್ವದ ಸ್ಥಾಪನೆಯತ್ತ ಗಮನ ಹರಿಸಬಹುದು. ಯೆಮೆನ್ ನಲ್ಲಿ ಸೈದ್ಧಾಂತಿಕ, ರಾಜಕೀಯ, ಬುಡಕಟ್ಟು, ಪಂಥ ಮತ್ತಿತರ ವಿಭಜನೆಗಳಿದ್ದು ಇದು ಸಂಕೀರ್ಣ ವಿಷಯವಾದರೂ, ಅದು ಯೆಮೆನ್ ನ ಆಂತರಿಕ ವಿಷಯವಾಗಿರುತ್ತದೆ. ಈ ನಡುವೆ ಒಪ್ಪಂದದ ಕೆಲ ಅಂಶಗಳಿಗೆ ಒಪ್ಪದಿರಲು ಯು.ಎಸ್ ಸೌದಿ ಗಳ ಮೇಲೆ ಒತ್ತಡ ಹೇರುತ್ತಿದೆಯೆಂದು ಆಪಾದಿಸಿದ್ದಾರೆ. ಯೆಮೆನ್ ಯುದ್ಧದಲ್ಲಿ ಯು.ಎಸ್ ಸೌದಿ ಅರೇಬಿಯ ಕ್ಕೆ ತಾಂತ್ರಿಕ ನೆರವು ಮತ್ತು ಶಸ್ತ್ರಾಸ್ತ್ರ ಒದಗಿಸುತ್ತಿದ್ದು, ಈ ಯುದ್ಧ ಮುಂದುವರೆಯುವುದು ಯು.ಎಸ್ ಗೆ ಬೇಕಾಗಿದೆ.
ಸಿರಿಯಾ ಅರಬ್ ಸಮುದಾಯಕ್ಕೆ ಮತ್ತೆ ಸೇರ್ಪಡೆ :
ಟರ್ಕಿ ಮತ್ತು ಸಿರಿಯಾದಲ್ಲಿ ಫೆಬ್ರುವರಿಯಲ್ಲಿ ಸಂಭವಿಸಿದ ಭಾರೀ ಭೂಕಂಪಕ್ಕೆ ಮಾನವೀಯ ಸಹಾಯದ ಭಾಗವಾಗಿ ಯು.ಎ.ಇ., ಜೋರ್ಡಾನ್, ಲೆಬನಾನ್ ಇತ್ಯಾದಿ ಅರಬ್ ದೇಶಗಳು ಸಿರಿಯಾ ಸರಕಾರದ ಜತೆ ಸಂಪರ್ಕ ಆರಂಭಿಸಿದವು. ಸೌದಿ-ಇರಾನ್ ಒಪ್ಪಂದದ ನಂತರ ಇದು ವೇಗವಾಗಿ ಮುಂದುವರೆಯಿತು. ಸಿರಿಯಾ ನಾಯಕ ಅಸಾದ್ ಒಮನ್ ಗೆ ಭೇಟಿಯಿತ್ತರು. ಸೌದಿ-ಇರಾನ್ ಒಪ್ಪಂದದ ನಂತರ ಅಸಾದ್ ರಶ್ಯಾ ಮತ್ತು ಯು.ಎ.ಇ ಗೆ ಭೇಟಿಯಿತ್ತರು. ಅಸಾದ್ ಅವರನ್ನು ಸ್ವಾಗತಿಸುತ್ತಾ ಯು.ಎ.ಇ ಅಧ್ಯಕ್ಷ ರು ‘ಸಿರಿಯಾ ಮತ್ತೆ ಅರಬ್ ಸಮುದಾಯಕ್ಕೆ ಸೇರ್ಪಡೆಯಾಗುವ ಕಾಲ ಬಂದಿದೆ’ಯೆಂದರು. ಸಿರಿಯಾದ ವಿದೇಶ ಮಂತ್ರಿ ಸೌದಿ ಮತ್ತು ಈಜಿಪ್ಟ್ ಗೆ ಭೇಟಿಯಿತ್ತರು. ಮೇ ನಲ್ಲಿ ರಿಯಾದ್ ನಲ್ಲಿ ನಡೆಯುವ ಅರಬ್ ಶೃಂಗಸಭೆಯಲ್ಲಿ ಸಿರಿಯಾ ಪಾಲುಗೊಳ್ಳಲಿದ್ದು ಸಿರಿಯಾದ ರಾಜಕೀಯ ‘ಪುನರ್ವಸತಿ’ ಪೂರ್ಣಗೊಳ್ಳಲಿದೆ. ಸಿರಿಯಾ ಮತ್ತು ಟರ್ಕಿಗಳ ನಡುವೆ ಸಹ ರಾಜಿ ಮಾಡಿಸಲು ರಶ್ಯಾ ಪ್ರಯತ್ನ ನಡೆಸಿದೆ. ಉತ್ತರ ಸಿರಿಯಾದಿಂದ ಟರ್ಕಿ ಪಡೆಗಳು ಪೂರ್ಣವಾಗಿ ಹಿಂತಿರುಗಬೇಕೇಂದು ಸಿರಿಯಾ ಒತ್ತಾಯಿಸುತ್ತಿದ್ದು ಟರ್ಕಿ ಇದಕ್ಕೆ ಒಪ್ಪುತ್ತಿಲ್ಲ. ಆದರೆ ಮೇ ನಲ್ಲಿ ನಡೆಯುವ ಟರ್ಕಿ ಚುನಾವಣೆಗಳ ನಂತರ ಮಾತುಕತೆ ಮುಂದುವರೆದು ಒಪ್ಪಂದ ಸಾಧ್ಯವಾಗಬಹುದು.
ಪಶ್ಚಿಮ ಏಶ್ಯಾದಲ್ಲಿ ಮೂಡುತ್ತಿರುವ ಹೊಸ ಪ್ರಾದೇಶಿಕ ವ್ಯವಸ್ಥೆ :
ಪಶ್ಚಿಮ ಏಶ್ಯಾದಲ್ಲಿ ಸಂಘರ್ಷಗಳನ್ನು ಕೊನೆಗೊಳಿಸಿ ಶಾಂತಿ ಸ್ಥಾಪನೆ, ಮತ್ತು ರಾಜಿ ಮಾತುಕತೆಗಳ ಗಾಳಿ ಬೀಸುತ್ತಿರುವುದನ್ನು ಯು.ಎಸ್ ಮತ್ತು ಅದರ ಪ್ರಾದೇಶಿಕ ಪೋಲಿಸ್ ಮ್ಯಾನ್ ಇಸ್ರೇಲ್ ಬಹಳ ಆತಂಕದಿಂದ ನೋಡುತ್ತಿದೆ. ಈ ಎಲ್ಲ ಸಂಘರ್ಷಗಳಲ್ಲಿ ಪ್ರತ್ಯಕ್ಷ/ಪರೋಕ್ಷ ಪಾತ್ರವಿದ್ದ ಇವೆರಡಕ್ಕೂ ಶಾಂತಿ, ರಾಜಿ ಮಾತುಕೆಗಳಲ್ಲಿ ಯಾವುದೇ ಪಾತ್ರವಿಲ್ಲದಿರುವುದು ತೀವ್ರ ಆತಂಕ್ಕೆ ಕಾರಣವಾಗಿದೆ. ಸೌದಿ ಅರೇಬಿಯ ಶಾಂಘಾಯ್ ಸಹಕಾರ ಸಂಘಟನೆಯ ‘ಸಂವಾದ ಸಹಚರ’ ನಾಗಿದೆ. ಬ್ರಿಕ್ಸ್ ಸದಸ್ಯತ್ವವನ್ನು ಕೇಳಿದೆ. ಯು.ಎಸ್ ನಿಂದ ಶಸ್ತ್ರಾಸ್ತ್ರ ಖರೀದಿ ಮುಂದಯವರೆಸುತ್ತಿರುವಾಗಲೇ, ಚೀನಾದಿಂದ ಕ್ಷಿಪಣಿ ಖರೀದಿ ಆರಂಭಿಸಿದೆ. ಚೀನೀ ತಂತ್ರಜ್ಞಾನದ ನೆರವಿನೊಂದಿಗೆ ತನ್ನದೇ ಕ್ಷಿಪಣಿ ತಯಾರಿಯನ್ನೂ ಆರಂಭಿಸಲಿದೆ. ಸೌದಿ ಮತ್ತು ರಶ್ಯಾ ಒಪೆಕ್+ ತೈಲ ಕೂಟದಲ್ಲಿ ಈಗಾಗಲೇ ಸಹಕರಿಸುತ್ತಿವೆ. ರಶ್ಯಾ ಮತ್ತು ಚೀನಾ ಎರಡರೊಂದಿಗೂ ಇರಾನ್ ರಕ್ಷಣೆ, ಇಂಧನ, ಆರ್ಥಿಕ, ಸಾರಿಗೆಯ ಸಂಭಂಧಗಳನ್ನು ಹೊಂದಿದೆ. ಮಾರ್ಚ್ ನಲ್ಲಿ ಮೂರೂ ದೇಶಗಳು ಒಂದು ಜಂಟಿ ನೌಕಾ ಕವಾಯಿತು ನಡೆಸಿದವು. ಚೀನಾದ ‘ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್’ ನ ಕೇಂದ್ರ ಸ್ಥಾನದಲ್ಲಿದೆ. ಮಾಸ್ಕೋದಿಂದ ಭಾರತದ ಪಶ್ಚಿಮ ಕರಾವಳಿಯ ವರೆಗಿನ 7500 ಕಿ ಮಿ ಉದ್ದದ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ ನಲ್ಲಿರುವ ಕೊರತೆಗಳನ್ನು ತುಂಬುತ್ತಿದೆ. ಇವೆಲ್ಲ ಬೆಳವಣಿಗೆಗಳು ಒಂದು ಹೊಸ ಸಹಕಾರಿ ಪ್ರಾದೇಶಿಕ ವ್ಯವಸ್ಥೆ ರೂಪಿಸುವತ್ತ ಸಾಗುತ್ತಿವೆ. ಯಾವುದೇ ದೇಶ ಇಡೀ ಪ್ರದೇಶದ ಹಿರಿಯಣ್ಣನಂತೆ ವರ್ತಿಸದೆ ಅಲ್ಲಿನ ಎಲ್ಲ ದೇಶಗಳ ಜತೆ ಪರಸ್ಪರ ಸಹಕಾರ, ಮತ್ತು ಪ್ರದೇಶದ
ಹೊರಗೆ ಸಹ ಯಾವುದೇ ಶಕ್ತಿ ರಾಷ್ಟ್ರಗಳ ಅಡಿಯಾಳು ಅಥವಾ ಏಜೆಂಟ್ ಆಗದೆ ತನ್ನ ಹಿತಾಸಕ್ತಿಗೆ ತಕ್ಕಾಗಿ ಅವುಗಳಂತೆ ವ್ಯವಹರಿಸುವ ಸಹಕಾರ ವ್ಯವಸ್ಥೆಯತ್ತ ಸಾಗುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಈ ಟ್ರೆಂಡ್ ಯುಯುರೇಶ್ಯಾ ವನ್ನು ಆವರಿಸುವ ಸೂಚನೆಗಳೂ ಇವೆ.