ಧಾರವಾಡ : ಇಷ್ಟು ವರ್ಷ ಬಿಜೆಪಿಯಲ್ಲಿ ಸುಖ, ಶಾಂತಿ, ಸಂತೋಷ ಅನುಭವಿಸಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಪಕ್ಷ ತೊರೆದಿರುವುದು ದುರದೃಷ್ಟಕರ. ಪಕ್ಷದಿಂದ ಯಾರೇ ಹೋದರೂ ಬಿಜೆಪಿ ಬಹುಮತ ಬರುವುದು ಖಚಿತ. ಈ ದೇಶಕ್ಕೆ ನರೇಂದ್ರ ಮೋದಿ, ರಾಜ್ಯಕ್ಕೆ ಬಿಜೆಪಿ ಸರ್ಕಾರ ಬೇಕಿದೆ. ಈ ಬಾರಿ ಬಿಜೆಪಿಗೆ ಹೊಸ ನಾಯಕತ್ವ ಬರಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಲಿಂಗಾಯತರೇ ಮುಂದಿನ ಸಿಎಂ :
ಧಾರವಾಡ ಜಿಲ್ಲೆ ನವಲಗುಂದದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡುತ್ತಾ, ಬಿಜೆಪಿಯಲ್ಲಿ ಈ ಬಾರಿ ಎರಡನೇ ಸಾಲಿನ ನಾಯಕತ್ವ ಬರಲಿದ್ದು, ಲಿಂಗಾಯತರೇ ಮುಂದಿನ ಸಿಎಂ. ಸಾಕಷ್ಟು ಲಿಂಗಾಯತ ನಾಯಕರು ಇನ್ನೂ ಪಕ್ಷದಲ್ಲಿ ಇದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಸಂಕ್ರಾಂತಿ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ- ಶಾಸಕ ಯತ್ನಾಳ್ ಹೊಸ ಬಾಂಬ್
ದುಡಿಯಲಾರದೆ, ದುಃಖ ಪಡಲಾರದೆ ಸುಖ ಉಂಡಿದ್ದಾರೆ : ಜಗದೀಶ್ ಶೆಟ್ಟರ್ ಮತ್ತಿತರು ಅನ್ಯಾಯ ಆಗಿದೆ ಎನ್ನುತ್ತಾರೆ. ಶಾಸಕ, ಮಂತ್ರಿ, ಸಿಎಂ, ಸ್ಪೀಕರ್, ಡಿಸಿಎಂ ಆಗಿ ಸುಖ ಉಂಡಿದ್ದಾರೆ. ದುಡಿಯಲಾರದೆ ದುಃಖ ಪಡಲಾರದೆ ಸುಖ ಉಂಡಿದ್ದಾರೆ. ದುಡಿಯುವವರೇ ಬೇರೆ, ಸುಖ ಉಂಡ ಇವರೇ ಬೇರೆ. ಹೋಗುವವೆರೆಲ್ಲ ಹೋಗಿ ಆಗಿದೆ. ಈಗ ಎಲ್ಲವೂ ನಮ್ಮ ಕೈಯಲ್ಲಿ ಬರುವುದಿದೆ ಎಂದು ಜಗದೀಶ್ ಶೆಟ್ಟರ್ ವಿರುದ್ಧ ಕಿಡಿಕಾರಿದರು.
ನಾನು ಸಿಎಂ ರೇಸ್ನಲ್ಲಿ ಇಲ್ಲ ಎನ್ನಲಾರೆ : ಪ್ರಲ್ಹಾದ ಜೋಶಿ, ಬಿ.ಎಲ್. ಸಂತೋಷ್ ಯಾರೂ ಸಿಎಂ ಆಗುವುದಿಲ್ಲ. ಮತ್ತೊಮ್ಮೆ ಲಿಂಗಾಯತರೇ ಮುಖ್ಯಮಂತ್ರಿ ಆಗುತ್ತಾರೆ. ಪ್ರಲ್ಹಾದ ಜೋಶಿ ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ. ನಾನು ಸಿಎಂ ರೇಸ್ನಲ್ಲಿ ಇಲ್ಲ ಎಂದು ಹೇಳಲಾರೆ. ಕರ್ನಾಟಕದಲ್ಲಿ ಬಿಜೆಪಿಯದ್ದೇ ಸಿಎಂ ಆಗುತ್ತಾರೆ. ಜಗದೀಶ್ ಶೆಟ್ಟರ್, ಶಾಮನೂರ ಶಿವಶಂಕರಪ್ಪ, ಎಂ.ಬಿ. ಪಾಟೀಲ್ ಎಲ್ಲರೂ ಬೀಗರು. ಇವರೆಲ್ಲ ಒಂದೇ ಪಕ್ಷದಲ್ಲಿದ್ದಾರೆ. ಇಷ್ಟು ದಿನ ಬೀಗರು ಬೇರೆ ಬೇರೆ ಪಕ್ಷದಲ್ಲಿದ್ದು, ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.