ಬೆಂಗಳೂರು : ಒಂದು ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಾವಿರಾರು ಬಸ್‌ಗಳ ಮೂಲಕ ಜನರನ್ನು ಕರೆತರಲಾಗಿತ್ತು. ಎರಡು ಗಂಟೆ ಕಾರ್ಯಕ್ರಮಕ್ಕೆ 25 ಕೋಟಿ ರೂ ಖರ್ಚು ಮಾಡಲಾಗಿದೆ ಎಂಬ ಸತ್ಯ ಬಹಿರಂಗೊಂಡಿದೆ.
ಕಾನೂನು ವಿದ್ಯಾರ್ಥಿ ಆಕಾಶ್ ಪಾಟೀಲ್ ಎಂಬುವರು ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ವಿವಿಧ ಜಿಲ್ಲೆಗಳ ಜನರನ್ನು ಕರೆತರಲು ಎಷ್ಟು ಕೆಎಸ್‌ಆರ್‌ಟಿಸಿ ಬಸ್ ಬಳಸಲಾಗಿತ್ತು, ಎಷ್ಟು ಹಣ, ಎಂಬೆಲ್ಲ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಅಧಿಕಾರಿಗಳು ನೀಡಿದ ಉತ್ತರದಿಂದ ಸತ್ಯಾಂಶ ಬಯಲಾಗಿದೆ.
ಫೆಬ್ರವರಿ 27 ರಂದು ಪ್ರಧಾನಮಂತ್ರಿ ನರೆಂದ್ರ ಮೋದಿಯವರು ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾದ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ಜನರು ಲಕ್ಷಾಂತರ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಹಜವಾಗಿ ರಾಜಕೀಯ ಪಕ್ಷಗಳ ಕಾರ್ಯಕ್ರಮ ಅಂದಾಗ ಹಣ ಕೊಟ್ಟು, ಬಸ್ ನಲ್ಲಿ ಜನರನ್ನು ಕರೆತರುವುದು ಸರ್ವೆ ಸಾಮಾನ್ಯ. ಆದರೆ ಬಿಜೆಪಿ ರಾಜಕೀಯ ಲಾಭಕ್ಕಾಗಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಕೇವಲ 2 ಗಂಟೆ ಕಾರ್ಯಕ್ರಮಕ್ಕೆ ಜನರನ್ನು ಕರೆ ತರುವುದಕ್ಕಾಗಿ 3.93 ಕೋಟಿ ರೂ ಖರ್ಚು ಮಾಡಲಾಗಿದೆ. (3,93,92,565) ಇದು ಕೇವಲ ಬಸ್ ಗೆ ಖರ್ಚು ಮಾಡಿದ್ದು ಮಾತ್ರ. ಪೆಂಡಾಲ್ ಡೆಕೋರೇಷನ್, ಭದ್ರತೆ, ವಸತಿ, ಊಟ ಅಂತೆಲ್ಲ 25 ಕೋಟಿ ರೂ ಖರ್ಚು ಮಾಡಿ ಕಾರ್ಯಕ್ರಮ ಮಾಡಲಾಗಿದೆ. ಇದು ಅಧಿಕಾರದ ದುರುಪಯೋಗ ಎಂದು ವಿಪಕ್ಷಗಳು ಕಿಡಿ ಕಾರಿವೆ.
ಪ್ರಧಾನಿ ಮೋದಿಯವರು ಉದ್ಘಾಟಿಸಿದ ಕಾರ್ಯಕ್ರಮಕ್ಕೆ ಸರಕಾರಿ ಹಣವನ್ನು ಅಷ್ಟು ಪ್ರಮಾಣದಲ್ಲಿ ವ್ಯಯ ಮಾಡಿದ್ದು ಸರಿಯೇ ಎಂದು ಸಿಪಿಐಎಂ ಪ್ರಶ್ನಿಸಿದೆ. ಮೋದಿಯವರ ಭಾಷಣವನ್ನು ಕೇಳಲಿಕ್ಕಾಗಿ, ಬಿಜೆಪಿಯ ಬಾವುಟವನ್ನು ಜನ ಹಿಡಿಯುವುದಕ್ಕಾಗಿ ಸರಕಾರದ ದುಡ್ಡನ್ನು ಪೋಲು ಮಾಡಲಾಗಿದೆ. 1600 ಬಸ್‌ಗಳಿಗೆ 4 ಕೋಟಿ ರೂ ನಷ್ಟು ಹಣವನ್ನು ಪಿಡಬ್ಲ್ಯೂಡಿ ಕಡೆಯಿಂದ ಬಿಲ್ ಕಟ್ಟಿಸಿರುವುದು ಅಧಿಕಾರದ ದುರುಪಯೋಗ ಅಲ್ಲದೆ ಇನ್ನೇನು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಅಪೂರ್ಣ ಕಾಮಗಾರಿಗಳ ಉದ್ಘಾಟನೆ : ಮತ ಕೀಳುವ ಯತ್ನದತ್ತ ಬಿಜೆಪಿ
ವಿಮಾನ ನಿಲ್ದಾಣದ ಉದ್ಘಾಟನೆಗೆ 25 ಕೋಟಿ ರೂ. ಖರ್ಚು! ಇನ್ನು, ವಿಮಾನ ನಿಲ್ದಾಣದ ಕಾರ್ಯಕ್ರಮಕ್ಕೆ 25 ಕೋಟಿ ರೂ. ಖರ್ಚಾಗಿದೆ. ಸಮಾರಂಭದ ವೇದಿಕೆ ಮತ್ತು ಸಿದ್ಧತೆಯ ಖರ್ಚು ವೆಚ್ಚಗಳನ್ನು ಕೈಗೊಳ್ಳಲು ಪಾರದರ್ಶಕತೆ ಕಾಯಿದೆಯಿಂದ ವಿನಾಯಿತಿ ನೀಡಿ ಟೆಂಡರ್ ಕರೆಯದೆ ನೇರವಾಗಿ ಕೈಗೊಳ್ಳಲು ಸರಕಾರ ಅವಕಾಶ ಮಾಡಿಕೊಟ್ಟಿತ್ತು. ಸಮಾರಂಭ ಭೂಮಿ ಸಮತಟ್ಟುಗೊಳಿಸಲು 3 ಕೋಟಿ ರೂ., ಪೆಂಡಾಲ್ ನಿರ್ಮಾಣಕ್ಕೆ 5.27 ಕೋಟಿ ರೂ., ಊಟ ಮತ್ತು ಕುಡಿಯುವ ನೀರಿಗೆ 1.50 ಕೋಟಿ ರೂ., ಸಾರಿಗೆ ವೆಚ್ಚ 4.25 ಕೋಟಿ ರೂ., ಊಟದ ಕೌಂಟರ್‌ಗಳು ಮತ್ತು ಪೆಂಡಾಲ್ ನಿರ್ಮಾಣಕ್ಕೆ 59 ಲಕ್ಷ ರೂ., ವಿದ್ಯುತ್, ಮೈಕ್ ಸಿಸ್ಟಮ್, ಸಿಸಿ ಕ್ಯಾಮೆರಾ ಇತರೆಗೆ 1 ಕೋಟಿ ರೂ., ವೇದಿಕೆ ಅಲಂಕಾರಕ್ಕೆ 18 ಲಕ್ಷ ರೂ., ಕುಡಿಯುವ ನೀರು ಮತ್ತು ಶೌಚಾಲಯಕ್ಕೆ 10 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 25 ಲಕ್ಷ ರೂ., ಆಹ್ವಾನ ಪತ್ರಿಕೆ ಮುದ್ರಣ ಮತ್ತು ಇತರೆ 15 ಲಕ್ಷ ರೂ., ವಿವಿಐಪಿಗಳ ಊಟದ ವೆಚ್ಚ 35 ಲಕ್ಷ ರೂ., ಕಾಂಪೌಂಡ್ ಒಡೆದು ಮರು ನಿರ್ಮಿಸಲು 11 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ವಿಮಾನ ನಿಲ್ದಾಣಕ್ಕೆ ಜಾಗ ನೀಡಿದ ಫಲಾನುಭವಿಗಳಿಗೆ ಪರಿಹಾರದ ಹಣ ಇನ್ನೂ ಸಿಕ್ಕಿಲ್ಲ. ಉದ್ಘಾಟನೆಗೊಂಡು ಎರಡು ತಿಂಗಳು ಕಳೆದರೂ ಒಂದು ವಿಮಾನವೂ ಹಾರಾಟ ಮಾಡಿಲ್ಲ. ಸ್ಥಳೀಯರು ಹೇಳುವಂತೆ ಅಪೂರ್ಣಗೊಂಡ ಕಾಮಗಾರಿಯನ್ನು ಉದ್ಘಾಟಿಸಿವ ಮೂಲಕ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ.