ಕೈ ಸೇರದ ಹಕ್ಕುಪತ್ರ : ಗ್ರಾಮಸ್ಥರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಮಂಡ್ಯ : “ನಾವು ಕಳೆದ 60-70 ವರ್ಷಗಳಿಂದ ಇದೇ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇವೆಯಾದರೂ ನಮಗೆ ಈವರೆಗೆ ನಿವೇಶನ ಹಕ್ಕು ಪತ್ರವನ್ನು ಒದಗಿಸಿಕೊಡುವಲ್ಲಿ ಜನಪ್ರತಿನಿಧಿಗಳು,ಅಧಿಕಾರಿಗಳು ವಿಫಲರಾಗಿದ್ದಾರೆ”, ಹೀಗಾಗಿ  ನಾವು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡುವುದಿಲ್ಲ ಎಂದು ಗೌರಿಪಾಳ್ಯದ ಗ್ರಾಮಸ್ಥರು ಈ ಬಾರಿಯ ವಿಧಾನಸಭೆ ಚುನಾವಣೆಯ ಮತದಾನವನ್ನು ಬಹಿಷ್ಕಾರ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗೌರಿಪಾಳ್ಯದ ನಿವಾಸಿಗಳು ಮತದಾನವನ್ನು ಬಹಿಷ್ಕರಿಸಿದ್ದು, ಅಧಿಕಾರಿಗಳ ವಿರುದ್ಧ ಬೇಸರವನ್ನು ಹೊರಹಾಕಿದ್ದಾರೆ.

ಈ ಕುರಿತು ಮಾತನಾಡಿದ ಗ್ರಾಮದ ಯುವಮುಖಂಡ ಬಿ.ಆರ್. ಚೇತನ್ ಕುಮಾರ್ ಅವರು ಕಳೆದ 60 ವರ್ಷಗಳ ಹಿಂದೆ ನಮಗೆ ಹಕ್ಕು ಪತ್ರವನ್ನು ನೀಡಿ ಆನಂತರದಲ್ಲಿ ಅಧಿಕಾರಿಗಳು ಗ್ರಾಂಟ್ ಕೊಡುತ್ತೇವೆ ಎಂದು ಹೇಳಿ ವಾಪಸ್ ಪಡೆದುಕೊಂಡಿದ್ದಾರೆ. ವಾಪಸ್ ಪಡೆದುಕೊಂಡ ಹಕ್ಕುಪತ್ರಗಳನ್ನು ಇಂದಿಗೂ ನಮಗೆ ನೀಡಿರುವುದಿಲ್ಲ. ಹಕ್ಕು ಪತ್ರ ನೀಡಿರುವುದರಿಂದ ನಾವು ವಾಸ ಮಾಡುತ್ತಿರುವ ಮನೆಗಳಿಗೆ ಖಾತೆ ಹಾಗೂ ಈ ಸ್ವತ್ತು ಮಾಡಿಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಚುನಾವಣೆಗಳು ಬಂದಾಗಲೆಲ್ಲಾ ಹಕ್ಕುಪತ್ರ ಕೊಡಿಸುತ್ತೇವೆ ಎಂದು ಹೇಳಿ ಮತ ಹಾಕಿಸಿಕೊಳ್ಳುವ ರಾಜಕೀಯ ನಾಯಕರು ಗೆದ್ದ ನಂತರ ನಮ್ಮನ್ನು ಮರೆಯುತ್ತಿದ್ದಾರೆ. ಆ ಕಾರಣಕ್ಕಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾವು ಮತದಾನ ಬಹಿಷ್ಕಾರ ಮಾಡುವ ನಿರ್ಧಾರ ಕೈಗೊಂಡಿದ್ದೇವೆ ಅಧಿಕಾರಿಗಳು ತಕ್ಷಣ ಹಕ್ಕುಪತ್ರವನ್ನು ನೀಡುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ  : ಬಡವರಿಗೆ ಹಕ್ಕುಪತ್ರ-ನಿವೇಶನಕ್ಕಾಗಿ ಆಗ್ರಹಿಸಿ ತಹಶೀಲ್ದಾರ್‌ ಕಛೇರಿ ಮುಂಭಾಗ ಪ್ರತಿಭಟನೆ

ಪ್ರತಿಭಟನೆಯಲ್ಲಿ ಉಮೇಶ್‌, ಉಲ್ಲಾಸ, ಸಿದ್ದರಾಜು, ಪುಟ್ಟಲಿಂಗಯ್ಯ, ಅಶೋಕ್‌, ನಾಗಮ್ಮ, ರಮ್ಯಾ, ತಾಯಮ್ಮ, ಲಕ್ಷ್ಮಮ್ಮ, ಜಯಮ್ಮ, ಶೋಭಾ, ಅತ್ತಮ್ಮ, ಚಿಕ್ಕತಾಯಮ್ಮ, ಲಕ್ಷ್ಮಿ, ಗುಂಡಮ್ಮ, ಸುಶೀಲಮ್ಮ ಸೇರಿದಂತೆ ಹಲವರು ಪಾಲ್ಗೊಂಡು ಆಕ್ರೋಶ ಹೊರಹಾಕುವ ಮೂಲಕ ನಿವೇಶನ ಹಕ್ಕುಪತ್ರಕ್ಕಾಗಿ ಆಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *