ಟಿ.ಯಶವಂತ
ಒಂದು ದಿನ ಮಹಾರಾಜನಿಗೆ ತನ್ನ ಜನಪ್ರಿಯತೆ ಕುಸಿಯುತ್ತಿದೆಯೇ ಎಂಬ ಆನುಮಾನ ಶುರುವಾಯಿತು. ತನ್ನ ಬಗ್ಗೆ ರಾಜ್ಯದ ಜನರು ಏನು ಅಭಿಪ್ರಾಯ ಪಡುತ್ತಿದ್ದಾರೆ ಎಂದು ತಿಳಿದುಕೊಳ್ಳುವುದಕ್ಕಾಗಿ ಮಾರುವೇಷದಲ್ಲಿ ಊರು ಸುತ್ತುವುದಕ್ಕೆ ಆತ ಮುಂದಾದ.
ಸಾವಿರಾರು ವೇಷ ಭೂಷಣ, ಮುಖವಾಡಗಳ ನಡುವೆ ನಿಂತ ರಾಜನಿಗೆ ಯಾವ ವೇಷ ತೊಡುವುದು ಎಂಬುವುದೇ ತಲೆ ನೋವಾಯಿತು. ಕೊನೆಗೆ ತನ್ನ ಆಸ್ಥಾನದ ಬುದ್ಧಿವಂತ ಮಂತ್ರಿಯನ್ನು ಬರಹೇಳಿ ತನಗೊಂದು ವೇಷ ಭೂಷಣ ಆರಿಸಿ ಕೊಡಲು ಹೇಳಿದ.
ಕೊಂಚ ಹೊತ್ತಿನ ಬಳಿಕ ಕೈಯಲ್ಲಿ ಒಂದು ಮಡಿಕೆ ಹಿಡಿದುಕೊಂಡು ಬಂದ ಬುದ್ಧಿವಂತ ಮಂತ್ರಿ ಹೇಳಿದ –
“ಮಹಾಪ್ರಭು. ನೀವು ತಲೆಯ ಮೇಲೆ ಈ ಮಡಿಕೆಯನ್ನು ಹಾಕಿದರೆ ಯಾರಿಗೂ ಅನುಮಾನ ಬಾರದು’’
“ಅದು ಸರಿ ಮಂತ್ರಿಗಳೇ. ತಲೆಯ ಮೇಲೇನೋ ಈ ಮಡಿಕೆಯನ್ನು ಹಾಕಿಕೊಳ್ಳಬಹುದು. ಆದರೆ ಉಡಲು ಒಂದು ವೇಷ ಬೇಕಲ್ಲವೇ?’’
ಬುದ್ಧಿವಂತ ಮಂತ್ರಿ ಉತ್ತರಿಸಿದ –
“ಕ್ಷಮಿಸಿ ಮಹಾಪ್ರಭುವೇ… ಆಸ್ಥಾನದಲ್ಲಿರುವ ಸ್ವಂತ ಹಾಗೂ ಪರ ರಾಜ್ಯದ ರಾಜರಿಂದ ಬಾಡಿಗೆಗೆ ತಂದ ಎಲ್ಲಾ ವೇಷಗಳನ್ನು ನೀವು ಈಗಾಗಲೇ ಪ್ರಚಾರ ಕಾರ್ಯಕ್ರಮಗಳಲ್ಲಿ ತೊಟ್ಟಿದ್ದೀರಿ. ಈಗ ಯಾವ ವೇಷದಲ್ಲಿ ಹೋದರೂ ಜನರು ಗುರುತು ಹಿಡಿಯುವ ಅಪಾಯವಿದೆ. ಆದ್ದರಿಂದ ಈ ಮಡಿಕೆಯನ್ನು ಮಾತ್ರವೇ ತೊಡುವುದು ಉತ್ತಮ ಮಹಾಪ್ರಭು…’’
ಇದನ್ನು ಓದಿ: ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲ-ಮಂಡ್ಯ ಜನತೆಗೆ ಬಗೆಯುತ್ತಿರುವ ದ್ರೋಹ: ಸಿಪಿಐ(ಎಂ)
ಹೀಗೆ ಈಗ ಪಕ್ಷಾತೀತ ಸ್ವಾಭಿಮಾನದ ಮೇಡಂ ಸುಮಲತಾ ರವರು ತಮ್ಮ ಸ್ವಾಭಿಮಾನಕ್ಕೆ ಅಂತ್ಯ ಹಾಡಿ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ ಅಂದರೆ ಬಿಜೆಪಿ ಸೇರಿಕೊಳ್ಳುತ್ತಾರೆ.
ಮಂಡ್ಯದ ಗುಣ – ನಡವಳಿಕೆಯ ಸಂಕೇತದಂತೆ ಇದ್ದ ಅಂಬರೀಶ್ ರ ಸಾವಿನ ಅನುಕಂಪದ ಹಿನ್ನೆಲೆಯಲ್ಲಿ, ಎರಡು ಪ್ರಬಲ ಪ್ರತಿಸ್ಪರ್ಧಿ ಜಾತ್ಯಾತೀತ ಪಕ್ಷಗಳು ಒಂದೇ ಮೈತ್ರಿ ಅಭ್ಯರ್ಥಿ ನಿಲ್ಲಿಸುವ ರಾಜಕೀಯ ನಿರ್ಧಾರಕ್ಕೆ ಬಂದ ನಂತರ ಮೇಡಂ ಸುಮಲತಾ ರವರು ಲೋಕಸಭಾ ಚುನಾವಣಾ ಸ್ಪರ್ಧೆಗೆ ಕಾಂಗ್ರೆಸ್ ಟಿಕೇಟ್ ಕೇಳುತ್ತಾರೆ.
ಈಗಾಗಲೇ ಸೀಟು ಹಂಚಿಕೆ ಪ್ರಕಾರ ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ ಎಂದು ಸ್ಪಷ್ಟವಾಗಿ ತಿಳಿಯಲ್ಪಟ್ಟರೂ ಸ್ವಾಭಿಮಾನದ ಸ್ಪರ್ಧೆ ಘೋಷಿಸುತ್ತಾರೆ. ಇಡೀ ಮಾಧ್ಯಮಗಳು ದೇಶದಲ್ಲಿ ಮಂಡ್ಯ ಒಂದರಲ್ಲೇ ಚುನಾವಣೆ ಎಂಬಂತೆ ಚುನಾವಣಾ ಪ್ರಕ್ರಿಯೆ ಉದ್ದಕ್ಕೂ ದಿನದ 24 ಗಂಟೆಯೂ ಮಂಡ್ಯ ಲೋಕಸಭಾ ಚುನಾವಣಾ ಕ್ಷೇತ್ರದ ವಿಷಯವನ್ನು ಮಾತ್ರ ಕವರ್ ಮಾಡುತ್ತಿದ್ದದ್ದು ಒಂದು ಬಹಳ ಆಳವಾಗಿ ಯೋಚಿಸಿ ರೂಪಿಸಿದ ಕಾರ್ಯತಂತ್ರ ಹಾಗೂ ವ್ಯೂಹ ಎಂದು ತಿಳಿಯುವುದಿಲ್ಲ.
ಲೋಕಸಭಾ ಚುನಾವಣಾ ಸಂದರ್ಭದಲ್ಲೇ ಮೇಡಂ ಸುಮಲತಾ ರವರು ಬಿಜೆಪಿಯ ವ್ಯೂಹಾತ್ಮಕ ಅಭ್ಯರ್ಥಿಯೇ ಹೊರತು ಪಕ್ಷೇತರರಲ್ಲ ಎಂದು ಸಿಪಿಐ(ಎಂ) ಮಂಡ್ಯ ಜಿಲ್ಲಾ ಸಮಿತಿ ವಿಶ್ಲೇಷಿಸಿತ್ತು.
ಆದರೆ, ಈ ಮರ್ಮವನ್ನು ಮರೆ ಮಾಚಿದ್ದರಿಂದ ಜೆಡಿಎಸ್ ನ ಕುಟುಂಬ ರಾಜಕೀಯವನ್ನು ಚುನಾವಣಾ ವಿಷಯವನ್ನಾಗಿಸಿ ಎಲ್ಲರ ಮನಸ್ಸಿಗೆ ಇಳಿಸಿದ್ದರಂದ ಭಾರೀ ಅಲೆ ಸೃಷ್ಟಿಯಾಗಿ ದೇಶದಲ್ಲೇ ಲೋಕಸಭೆಗೆ ಸ್ವತಂತ್ರವಾಗಿ ಆಯ್ಕೆಯಾದ ಮಹಿಳೆ ಎಂಬ ದಾಖಲೆಯನ್ನು ಮೇಡಂ ಸುಮಲತಾ ತಮ್ಮದಾಗಿಸಿಕೊಂಡರು.
ಇದನ್ನು ಓದಿ: ʻಸುಮಲತಾ – ಕುಮಾರಸ್ವಾಮಿʻ ರಾಜಕೀಯ ಕೆಸರೆರಚಾಟದಲ್ಲಿ ಸ್ಪೋಟಗೊಂಡಿದ್ದು “ಅಕ್ರಮ ಗಣಿಗಾರಿಕೆ”
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ರೂಪುಗೊಳ್ಳುವ ಹಿನ್ನೆಲೆಯಲ್ಲಿ ಅವಕಾಶವಾದಿ ರಾಜಕೀಯ ಅಧಿಕಾರ ಹೊಂದಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವರೇ ಕಾಂಗ್ರೆಸ್ ನ ಬಹುತೇಕ ಮತದಾರರ ಓಟು ಸುಮಲತಾಗೆ ಬೀಳುವಂತಹ ರಾಜಕೀಯ ವಾತಾವರಣ ನಿರ್ಮಿಸಿದರು.
ಈಗ ಮೇಡಂ ಸುಮಲತಾ ಬಿಜೆಪಿಗೆ ಬೆಂಬಲ ಘೋಷಿಸಿ, ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿ ಎಂಬಂತೆ ಓಟು ನೀಡಿದ್ದ ಸಹಸ್ರಾರು ಕಾರ್ಯಕರ್ತರನ್ನು ಹಾಗೂ ಲಕ್ಷಾಂತರ ಮತದಾರರನ್ನು ಮೂರ್ಖರನ್ನಾಗಿಸಿದ್ದಾರೆ.
ಮುಂದಿನ ತಿಂಗಳು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಹೊಸ್ತಿಲಿನಲ್ಲಿ ನಿಂತಿರುವ ಕಾಂಗ್ರೆಸ್ ಗೆ ಮಂಡ್ಯ ಜಿಲ್ಲೆಯ ಈ ಬೆಳವಣಿಗೆ ಭಾರಿ ಮುಖಭಂಗ ಉಂಟು ಮಾಡಿ, ಸರಳ ಬಹುಮತಕ್ಕೆ ಕೊರತೆ ಉಂಟಾಗುವಂತಹ ಸ್ಥಿತಿಯನ್ನು ಈ ಮೂಲಕ ನಿರ್ಮಿಸಿದ್ದಾರೆ.
ಇದನ್ನು ಓದಿ: ಅಕ್ರಮ ಗಣಿ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ, ಸಿಬಿಐ ತನಿಖೆಗೆ ಆಗ್ರಹ
ಅವಕಾಶವಾದಿ ಹಾಗೂ ಸೇಡಿನ ರಾಜಕಾರಣವು ಯಾವುದೇ ಪಕ್ಷವನ್ನು ಬಲಗೊಳಿಸುವುದಿಲ್ಲ. ಬದಲಾಗಿ ದುರ್ಬಲಗೊಳಿಸುತ್ತದೆ ಎಂಬುದಕ್ಕೆ ಧರ್ಮಸಿಂಗ್ ಸರ್ಕಾರ ಉರುಳಿಸಿದ ಜೆಡಿಎಸ್ ಈಗ ಅನುಭವಿಸುತ್ತಿರುವ ಸ್ಥಿತಿ ಹಾಗೂ ವಿರೋಧ ಪಕ್ಷದಲ್ಲಿ ಇದ್ದರೂ ಬಿಜೆಪಿ ಸರ್ಕಾರದ ವಿರುದ್ಧ ದೊಡ್ಡ ಪ್ರಮಾಣದ ಅತೃಪ್ತಿ ಇದ್ದರೂ ಬಳಸಿಕೊಳ್ಳಲು ಕಷ್ಟ ಪಡುತ್ತಿರುವ ಕಾಂಗ್ರೆಸ್ ನ ಪರಿಸ್ಥಿತಿ ಸಾಕ್ಷಿಯಾಗಿದೆ.
ಹೀಗಾಗಿ ಕೋಮುವಾದಿ ಶಕ್ತಿಗಳು ತಲೆ ಎತ್ತದಂತೆ ಜಿಲ್ಲೆಯ ಸೌಹಾರ್ದ ಪರಂಪರೆ ರಕ್ಷಿಸುವ ವಿಷಯದಲ್ಲಿ ಪ್ರಜ್ಞಾವಂತರ ಮೇಲೆ ಜವಾಬ್ದಾರಿ ಹೆಚ್ಚಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ