ಶ್ರೀನಗರ: ಪ್ರಧಾನಮಂತ್ರಿ ಕಾರ್ಯಾಲಯದ ಉನ್ನತ ಮಟ್ಟದ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಶ್ರೀನಗರದಲ್ಲಿ ಓಡಾಡಿರುವ ಘಟನೆ ನಡೆದಿದೆ. ಗುಜರಾತ್ ಮೂಲದ ಕಿರಣ್ ಪಟೇಲ್ ಎಂಬವ ವ್ಯಕ್ತಿಯೊಬ್ಬ ಪಂಚತಾರಾ ಹೊಟೇಲ್ನಲ್ಲಿ ಐಷಾರಾಮಿ ಆತಿಥ್ಯದ ಜತೆಗೆ ವಿಶೇಷ ಭದ್ರತೆ ಹಾಗೂ ಬುಲೆಟ್ ಪ್ರೂಫ್ ವಾಹನ ಭದ್ರತೆ ಪಡೆದುಕೊಂಡಿದ್ದಾನೆ. ಶ್ರೀನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ಕಿರಣ್ ಪಟೇಲ್ ಎಂದು ಗುರುತಿಸಲಾಗಿದ್ದು, ಮೂಲಗಳ ಪ್ರಕಾರ ಕಾಶ್ಮೀರ ಕಣಿವೆಗೆ 3ನೇ ಬಾರಿ ಭೇಟಿ ನೀಡಿರುವುದು ಕಂಡುಬಂದಿದೆ. ಮಾರ್ಚ್ 3ರಂದು ಭದ್ರತಾ ಅಧಿಕಾರಿಗಳು ಈತನನ್ನು ಬಂಧಿಸಿದ್ದಾರೆ. ಈತನು ದಕ್ಷಿಣ ಕಾಶ್ಮೀರದಲ್ಲಿ ಸೇಬಿನ ತೋಟಗಳಿಗೆ ಖರೀದಿದಾರರನ್ನು ಗುರುತಿಸಲು ಕೇಂದ್ರ ಸರ್ಕಾರ ತನಗೆ ಆದೇಶ ನೀಡಿದೆ ಎಂದು ಹೇಳಿಕೊಂಡು ಆಗಮಿಸಿದ್ದ ಎನ್ನಲಾಗಿದೆ.
ಇದನ್ನು ಓದಿ: ಉದ್ಯಮಿ ಗೌತಮ್ ಅದಾನಿ ವಿರುದ್ಧ ಷೇರು ತಿರುಚುವಿಕೆ-ಲೆಕ್ಕಪತ್ರ ವಂಚನೆ ಆರೋಪ; ತನಿಖೆಗೆ ಕಾಂಗ್ರೆಸ್ ಆಗ್ರಹ
2ನೇ ಬಾರಿ ಆಗಮಿಸಿದ ಸಂದರ್ಭದಲ್ಲಿ ಕಿರಣ್ ಪಟೇಲ್ ಪ್ರವಾಸಿ ತಾಣವಾದ ಗುಲ್ಮಾರ್ಗ್ ಸ್ಥಳಕ್ಕೆ ಭೇಟಿ ನೀಡಿದ್ದಾನೆ. ಈ ಪ್ರದೇಶದಲ್ಲಿ ಹೋಟೆಲ್ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರ ತನಗೆ ಕೆಲಸ ನೀಡಿದೆ ಎಂದು ಹೇಳಿಕೊಂಡಿದ್ದಾನೆ. ಅಂದು ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾನೆ. ಅಷ್ಟೇ ಅಲ್ಲದೇ ಝಡ್ ಪ್ಲಸ್ ಭದ್ರತೆ, ಬುಲೆಟ್ ಪ್ರೂಫ್ ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿ, ಪಂಚತಾರಾ ಹೋಟೆಲ್ನಲ್ಲಿ ಅಧಿಕೃತ ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆದುಕೊಂಡಿದ್ದಾನೆ.
ಮಾರ್ಚ್ 2 ರಂದು ಮೂರನೇ ಬಾರಿ ಭೇಟಿ ವೇಳೆ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಯಾವುದೇ ವಿಐಪಿ ಭೇಟಿ ಬಗ್ಗೆ ಮಾಹಿತಿ ಇಲ್ಲದ ಕಾರಣ ಭದ್ರತಾ ಏಜೆನ್ಸಿಗಳಿಗೆ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಶ್ರೀನಗರ ಪೊಲೀಸರು ಇಲ್ಲಿನ ಪಂಚತಾರಾ ಹೊಟೇಲ್ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನು ಓದಿ: ಜಮ್ಮು-ಕಾಶ್ಮೀರದಲ್ಲಿ ಶೀಘ್ರದಲ್ಲಿ ಚುನಾವಣೆ ನಡೆಸಿ – ರಾಜ್ಯ ಸ್ಥಾನಮಾನ ಮರಳಿ ನೀಡಿ; ಫಾರೂಕ್ ಅಬ್ದುಲ್ಲಾ
ವಂಚನೆ ಸೇರಿದಂತೆ ಇತರೆ ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಬಂಧನದ ಅವಧಿ ವಿಸ್ತರಣೆ ಮಾಡುವಂತೆ ಕೋರಿ ಆರೋಪಿಯನ್ನು ಪೊಲೀಸರು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕಿರಣ್ ಪಟೇಲ್ ಕಾಶ್ಮೀರದ ಗುಲ್ಮಾರ್ಗ್, ದೂಧಪತ್ರಿ ಮುಂತಾದ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿದ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಪ್ರಸಿದ್ಧ ಲಾಲ್ಚೌಕ್ ಮತ್ತು ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿಯ ಚಿತ್ರಗಳನ್ನು ಹಂಚಿಕೊಂಡಿದ್ದಾನೆ. ಇದೇ ವೇಳೆ ಪೊಲೀಸ್ ಮತ್ತು ಸಿಆರ್ಪಿಎಫ್ನಿಂದ ವಿಶೇಷ ಭದ್ರತೆ ನೀಡಿರುವುದು ಕಂಡುಬಂದಿದೆ.
ಕಿರಣ್ ಪಟೇಲ್ ಪ್ರಧಾನಿ ಕಾರ್ಯಾಲಯದಲ್ಲಿ ಕಾರ್ಯತಂತ್ರ ಮತ್ತು ಪ್ರಚಾರಕ್ಕಾಗಿ ಹೆಚ್ಚುವರಿ ನಿರ್ದೇಶಕರಂತೆ ನಾಟಕ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಜಮ್ಮು ಕಾಶ್ಮೀರದ ವಿವಿಧೆಡೆ ಭದ್ರತಾ ಪಡೆ ಹಾಗೂ ಪೊಲೀಸರ ಬೆಂಗಾವಲಿನಲ್ಲಿ ಸಂಚಾರ ನಡೆಸಿದ್ದಾನೆ. ಇಬ್ಬರು ಉಪ ಕಮಿಷನರ್ಗಳನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದಾನೆ ಎನ್ನಲಾಗಿದೆ.
ಇದನ್ನು ಓದಿ: ಜಮ್ಮು ಕಾಶ್ಮೀರ ಜನತೆ ಮೇಲಿನ ಕ್ರೌರ್ಯ ನ್ಯಾಯಾಂಗ ಗಮನಿಸುತ್ತಿಲ್ಲ: ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
ಮುಂದಿನ ಬೆಳವಣಿಗೆಯಲ್ಲಿ ಪೊಲೀಸರಿಗೆ ಅನುಮಾನಗಳು ಮೂಡಿದೆ. ಅಲ್ಲದೇ ಗುಪ್ತಚರ ಸಂಸ್ಥೆಯು ಜೆಕೆ ಪೊಲೀಸರಿಗೆ ಎಚ್ಚರಿಕೆಯೂ ನೀಡಲಾಗಿದೆ. ಗುಜರಾತ್ ಪೊಲೀಸರ ತಂಡವೂ ತನಿಖೆಗೆ ಸಹಾಯ ಮಾಡುತ್ತಿದೆ ಎಂದು ಶ್ರೀನಗರ ಪೊಲೀಸರು ತಿಳಿಸಿದ್ದಾರೆ.
ಟ್ವಿಟರ್ ಖಾತೆ ಹೊಂದಿರುವ ಕಿರಣ್ ಪಟೇಲ್ ಬಿಜೆಪಿ ಗುಜರಾತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ಸಿನ್ಹ್ ವಘೇಲಾ ಫಾಲೋ ಮಾಡುತ್ತಿದ್ದಾರೆ!. ಆರೋಪಿ ತನ್ನ ಟ್ವಿಟ್ಟರ್ ವಿವರಗಳಲ್ಲಿ ವರ್ಜೀನಿಯಾದ ಕಾಮನ್ವೆಲ್ತ್ ವಿಶ್ವವಿದ್ಯಾಲಯದಿಂದ ಪಿಎಚ್ಡಿ, ಐಐಎಂ ತಿರುಚ್ಚಿಯಲ್ಲಿ ಎಂಬಿಎ, ಹಾಗೆಯೇ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಟೆಕ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ನಲ್ಲಿ ಬಿಇ ಪಡೆದಿರುವುದಾಗಿ ಹೇಳಿಕೊಂಡಿದ್ದಾನೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Super