ಬೆಂಗಳೂರು : ಶಿಕ್ಷಣವನ್ನು ಕೇವಲ ಒಂದು ಪ್ರಣಾಳಿಕೆಯ ಭರವಸೆಯನ್ನಾಗಿ ಘೋಷಣೆ ಮಾಡದೆ ಅದನ್ನು ಒಂದು ಖಚಿತ ವಾಗ್ದಾನವನ್ನಾಗಿ ನೀಡುವ ಮೂಲಕ ಚುನಾವಣೆ ನಂತರದಲ್ಲಿ ಅದನ್ನು ಈಡೇರಿಸುವ ಪಕ್ಷಗಳಿಗೆ ಮಾತ್ರ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಮತ ನೀಡುವುದಾಗಿ ಹಾಗೂ ಅಂತಹ ಪಕ್ಷಗಳಗೆ ಮಾತ್ರ ಮತವನ್ನು ನೀಡುವಂತೆ ಮತದಾರರಿಗೆ ಜಾಗೃತಿ ಮೂಡಿಸುವುದಾಗಿ ಪಾಫ್ರೆಯು (ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ) ಅಭಿಯಾನ ಮಾಡುವುದಾಗಿ ತಿಳಿಸಿದೆ.
ಚುನಾವಣೆಗೆ ಸ್ಪರ್ಧೆ ಮಾಡುವ ರಾಜಕೀಯ ಪಕ್ಷಗಳು ಮಕ್ಕಳಿಗೆ ಶಿಕ್ಷಣದ ಹಕ್ಕುನ್ನು ಖಚಿತ ಪಡಿಸಬೇಕು ಎಂಬುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ. ಜೊತೆಗೆ, ಮಕ್ಕಳ ಪಾಲಕರಾಗಿರುವ ನಾವು,ನಮ್ಮ ಮಕ್ಕಳ ನ್ಯಾಯಬದ್ಧ ಮೂಲಭೂತ ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯಲು “ಈ ಬಾರಿ ನಮ್ಮ ಮತ ಗುಣಾತ್ಮಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗಾಗಿ ʼ( Vote for Quality Public Education Syaytem) ಎಂಬ ವಿಷಯದೊಂದಿಗೆ ಚುನಾವಣೆಯಲ್ಲಿ ಪಾಲ್ಗೊಂಡು ನಮ್ಮ ಮತ ಚಲಾಯಿಸಲು ನಿರ್ಧರಿಸಿರುವುದಾಗಿ ಹೇಳಿವೆ.
ಶಿಕ್ಷಣದ ಕುರಿತು ಚುನಾವಣಾ ಪ್ರಣಾಳಿಕೆಯಲ್ಲಿ ರಾಜಿಯಿಲ್ಲದ ಬದ್ಧತೆಯ ಖಾತರಿ ವಿಷಯವನ್ನಾಗಿ ಸೇರಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಚುನಾವಣೆಯ ನಂತರ ಈ ಅಂಶಗಳನ್ನು ಈಡೇರಿಸುವ ರಾಜಕೀಯ ಬದ್ಧತೆಗೂ ಸಹ ನಾವು ಒತ್ತಾಯಿಸುತ್ತೇವೆ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಪ್ರಧಾನ ಸಂಚಾಲಕರಾದ ನಿರಂಜನಾರಾಧ್ಯ ವಿ.ಪಿ ಹೇಳಿದ್ದಾರೆ.
ಇದನ್ನೂ ಓದಿ : ಶಾಲೆಗಳಲ್ಲಿ ನಿಗದಿತ ಪಠ್ಯಕ್ರಮದ ಬೋಧನೆಯಾಗುತ್ತಿಲ್ಲ – ರಾಜ್ಯ ಶಿಕ್ಷಣ ಇಲಾಖೆ ಕ್ರಮ
ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯದ ಕುರಿತು :
ಇದು ಶಿಕ್ಷಣದ ಮೂಲಭೂತ ಹಕ್ಕನ್ನು ಸಾಕಾರಗೊಳಿಸಲು ಕಾರ್ಯನಿರ್ವಹಿಸುತ್ತಿರುವ ಒಂದು ಜನಾಂದೋಲನಗಳ ಸಮನ್ವಯವಾಗಿದೆ. ಈ ಸಮನ್ವಯದ ಸದಸ್ಯರುಗಳು ,ರಾಜ್ಯವ್ಯಾಪಿ ಈ ಆಂದೋಲನದ ಭಾಗವಾಗಿ ಗರ್ಭದಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉತ್ತಮ ಆರೈಕೆಯನ್ನು ಒಳಗೊಂಡಂತೆ ಆರೋಗ್ಯ, ಪೋಷಣೆ ಹಾಗು ಚಿಕ್ಕ ಮಕ್ಕಳಲ್ಲಿ ಇಂದ್ರಿಯ ಸಂವೇದನಾ ಅಭಿವೃದ್ಧಿಯನ್ನು ಉತ್ತೇಜಿಸಲು ಬಾಲ್ಯದ ಆರಂಭಿಕ ಅವಕಾಶಗಳು ಮತ್ತು ಸುಸ್ಥಿರ ಮಾನವ ಅಭಿವೃದ್ಧಿಗೆ ಪೂರಕವಾದ ಸಮಾನ ಗುಣಮಟ್ಟದ ಸಮಾನ ಶಿಕ್ಷಣದ ವಿಷಯನ್ನು ಮುಂಬರುವ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಒಂದು ಪ್ರಮುಖ ರಾಜಕೀಯ ಕಾರ್ಯಸೂಚಿಯನ್ನಾಗಿ ಮಾರ್ಪಾಡಿ ಸಬೇಕೆಂಬ ಉದ್ದೇಶವನ್ನು ಹೊಂದಿವೆ.