ಬೆಂ-ಮೈ ಎಕ್ಸ್‌ಪ್ರೆಸ್‌ ವೇ  ಟೋಲ್‌ ಸಂಗ್ರಹವನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌ ; ವಿವರಣೆ ಸಲ್ಲಿಸುವಂತೆ ಖಡಕ್‌ ಆದೇಶ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೆಲ ದಿನಗಳ ಹಿಂದೆಯಷ್ಟೇ ಉದ್ಗಾಟಿಸಲ್ಪಟ್ಟ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಹೆದ್ದಾರಿಯಲ್ಲಿ ವಾಹನ ಸವಾರರಿಂದ ಟೋಲ್‌ ಸಂಗ್ರಹ ಸಂಬಂಧ ಕಳೆದೆರಡು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಯನ್ನು ಹೈಕೋರ್ಟ್‌  ಗಂಭೀರವಾಗಿ ಪರಿಗಣಿಸಿದೆ.

ಈ ಸಂಬಂಧ ಮೂರು ವಾರಗಳಲ್ಲಿ ಟೋಲ್‌ ಸಂಗ್ರಹದ ವಿವರಣೆಯನ್ನು ಸಲ್ಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಖಡಕ್‌ ಆದೇಶವನ್ನೂ ನೀಡಿ ವಕೀಲರೊಬ್ಬರನ್ನು ಕೋರ್ಟ್‌ ಕಮಿಷನರ್‌ ಆಗಿ ನೇಮಕ ಮಾಡಿದೆ.

ಬೆಂಗಳೂರು-ಕನಕಪುರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಎಸ್‌.ಪಿ ಸಂದೀಪ್‌ ರಾಜು ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಮತ್ತು ನ್ಯಾ. ಅಶೋಕ್‌ ಎಸ್‌. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ :
ಈ ವೇಳೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹ ಸಂಬಂಧ ಮಂಗಳವಾರ (ಮಾರ್ಚ್‌ 14) ನಡೆದಿದ್ದ ಧರಣಿ ಕುರಿತು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಬೇಕಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ಶುಲ್ಕ ವಿಧಿಸಲು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರ ಮತ್ತು ಸಂಗ್ರಹ ನಿರ್ಧಾರ) ನಿಯಮ- 2008ರ ನಿಯಮ 3ರ ಅಡಿ ಅವಕಾಶವಿದೆ. ಆದರೆ, ಇದಕ್ಕೂ ಮೊದಲು ಅಧಿಸೂಚನೆ ಪ್ರಕಟ ಸೇರಿ ಹಲವು ಪೂರ್ವಾಗತ್ಯಗಳನ್ನು ಪೂರೈಸಬೇಕು. ಆದರೆ, ಸವಾರರಿಂದ ಶುಲ್ಕ ಸಂಗ್ರಹ ಮಾಡಲಾಗುತ್ತಿದ್ದು, ಈ ವಿಷಯವನ್ನು ಪರಿಗಣಿಸಬೇಕಿದೆ. ಆದ್ದರಿಂದ ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿಗಳು ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕೆಂದು ನಿರ್ದೇಶನ ನೀಡಿತು.

ರಸ್ತೆ ನಿರ್ಮಾಣ ಕೆಲಸ ಮುಗಿಯದಿದ್ದರೂ ಟೋಲ್‌ ಸಂಗ್ರಹ ಅಸಮರ್ಥನೀಯ:
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಹೆದ್ದಾರಿಯಲ್ಲಿ ರಾಮನಗರ ಸಮೀಪ ಟೋಲ್‌ ಸಂಗ್ರಹ ಮಾಡುತ್ತಿರುವುದನ್ನು ಆಕ್ಷೇಪಿಸಿ ಧರಣಿ ನಡೆಸಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಏಜೆನ್ಸಿ ಟೋಲ್‌ ಸಂಗ್ರಹಿಸಲು ಆರಂಭಿಸಿದ್ದು, ಕಾರ್‌ ಮತ್ತು ವ್ಯಾನ್‌ಗಳಿಗೆ 135-205 ರೂ.ಗಳನ್ನು, ಲಘು ವಾಣಿಜ್ಯ ವಾಹನಗಳಾದ ಮಿನಿ ಬಸ್‌ಗೆ 220-330 ರೂಪಾಯಿ ವಿಧಿಸಲಾಗುತ್ತಿದೆ. ಟ್ರಕ್‌, ಬಸ್‌ಗಳಿಗೆ 460-690 ರೂಪಾಯಿ, ಭಾರಿ ವಾಣಿಜ್ಯ ವಾಹನಗಳಿಗೆ 500-750 ರೂ. ಬೃಹತ್‌ ನಿರ್ಮಾಣ ಸಂಬಂಧಿತ ವಾಹನಗಳಿಗೆ 720-1,080 ರೂ. ಅತಿ ಬೃಹತ್‌ ವಾಹನಗಳಿಗೆ 880-1,315 ರೂಪಾಯಿ ವಿಧಿಸಲಾಗುತ್ತಿದೆ ಎಂದು ಮಾಧ್ಯಮಗಳ ವರದಿಯಲ್ಲಿ ಉಲ್ಲೇಖೀಸಲಾಗಿದೆ. ರಸ್ತೆ ನಿರ್ಮಾಣ ಕೆಲಸ ಮುಗಿಯದಿದ್ದರೂ ಟೋಲ್‌ ಸಂಗ್ರಹಣೆಯು ಅಸಮರ್ಥನೀಯವಾಗಿದ್ದು, ದೊಡ್ಡ ತಾಂತ್ರಿಕ ಸಮಸ್ಯೆಗಳಿಂದಾಗಿ ವಾಹನಗಳಿಗೆ ಡ್ಯಾಮೇಜ್‌ ಆಗುತ್ತಿದೆ ಎಂದು ಮಾಧ್ಯಮ ವರದಿಯಲ್ಲಿ ವಿವರಿಸಲಾಗಿದೆ ಎಂಬ ಅಂಶವನ್ನು ನ್ಯಾಯಪೀಠವು ತನ್ನ ಆದೇಶದಲ್ಲಿ ದಾಖಲಿಸಿತು.

ಇದನ್ನೂ ಓದಿ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಬಸ್ ಪ್ರಯಾಣ ದರ ಮತ್ತಷ್ಟು ದುಪ್ಪಟ್ಟು

ಕೋರ್ಟ್‌ ಕಮಿಷನರ್‌ ನೇಮಕ : 
ಬೆಂಗಳೂರು-ಕನಕಪುರ ರಸ್ತೆ ಅಗಲೀಕರಣ ಕೆಲಸದ ನಿರ್ಮಾಣ, ನಿಗಾ ಮತ್ತು ಮೇಲ್ವಿಚಾರಣೆ ನಡೆಸಲು ವಕೀಲ ಶಿವಪ್ರಸಾದ್‌ ಶಾಂತನಗೌಡರ್‌ ಅವರನ್ನು “ಕೋರ್ಟ್‌ ಕಮಿಷನರ್‌’ ಆಗಿ ಹೈಕೋರ್ಟ್‌ ನೇಮಕ ಮಾಡಿತು. ನಿರ್ಮಾಣ ಒಪ್ಪಂದಕ್ಕೆ ಸಂಬಂಧಿಸಿದ ಕೆಲಸದ ಸೂಕ್ತ ನಿಗಾ ಮತ್ತು ಮೇಲ್ವಿಚಾರಣೆಯನ್ನು ಸ್ವತಂತ್ರ ಇಂಜಿನಿಯರ್‌ ನಡೆಸಬೇಕು. ನ್ಯಾಯಾಲಯ ನೇಮಿಸಿದ ಆಯುಕ್ತರು ಅಗತ್ಯವಾದ ಸಹಾಯ ಪಡೆದುಕೊಳ್ಳಬಹುದು. ನ್ಯಾಯಾಲಯ ನೇಮಿಸಿದ ಆಯುಕ್ತರಿಗೆ ನೆರವಾಗಲು ಸಹಾಯಕ ಇಂಜಿನಿಯರ್‌ ಅವರನ್ನು ತಾಂತ್ರಿಕ ವಿಚಾರದಲ್ಲಿ ನೆರವಾಗಲು ನೇಮಿಸುವಂತೆ ಲೋಕೋಪಯೋಗಿ ಇಲಾಖೆಯ ರಾಮನಗರ ವಿಭಾಗದ ಕಾರ್ಯಾಕಾರಿ ಎಂಜಿನಿಯರ್‌ಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *