ಕೂಳೂರು: ನದಿ ಸೇತುವೆ ಕಾಮಗಾರಿ ಪ್ರಾರಂಭವಾಗಿ ಮೂರು ವರ್ಷ ಕಳೆದರೂ ಇನ್ನೂ ಪೂರ್ಣಗೊಳಿಸಿಲ್ಲ. ಅಲ್ಲದೆ, ಈಗಾಗಲೇ ಇರುವ ಹಳೆ ಸೇತುವೆ ಅಸಮರ್ಥವಾಗಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ತಜ್ಞರು ವರದಿ ನೀಡಿ ನಾಲ್ಕು ವರ್ಷ ಕಳೆದರೂ ಏನೂ ಕ್ರಮವಹಿಸಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಂಜಿಮೊಗರು ವಲಯ ಸಮಿತಿ ವತಿಯಿಂದ ಪ್ರಭಟನೆ ನಡೆದಿದೆ.
ಇದನ್ನು ಓದಿ: ಪ್ರಧಾನಿ ಸ್ವಾಗತಕ್ಕೆ ಟಾರ್ ಹಾಕಿದ್ದ ರಸ್ತೆ 10 ದಿನದಲ್ಲಿ ಹಾಳು!
ಉಡುಪಿ, ಮಂಗಳೂರು ಸಂಪರ್ಕದ ಅತೀ ವಾಹನ ದಟ್ಟನೆ ಇರುವ ಕೂಳೂರು ಸೇತುವೆ ಕುಸಿಯುವ ಭೀತಿಯಲ್ಲಿದೆ. ಕಾಮಗಾರಿ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ನಗರ ಪಾಲಿಕೆ ಸದಸ್ಯ ದಯಾನಂದ ಶೆಟ್ಟಿ, ಕೂಳೂರು ಸೇತುವೆ ಕಾಮಗಾರಿ ಮೂರು ವರ್ಷಗಳಿಂದ ಕುಂಟುತ್ತಾ ಸಾಗಿದೆ. ಮಳೆಗಾಲ ಸಮೀಪಿಸುತ್ತಿದ್ದು ನದಿ ಸೇತುವೆ ಕಾಮಗಾರಿಗೆ ಹಾಕಿರುವ ಭಾರೀ ಮಣ್ಣಿನ ಪ್ರಮಾಣದಿಂದ ಕೂಳೂರು ನದಿ ಪಾತ್ರದ ಪ್ರದೇಶಕ್ಕೆ ಮಳೆ ನೀರು ನಗ್ಗುವ ಅಪಾಯವಿದೆ. ಮತ್ತೊಂದೆಡೆ ಹಳೆ ಸೇತುವೆ ಕುಸಿಯುವ ಭೀತಿ ಎದುರಾಗಿದೆ. ಆದುದರಿಂದ ಕಾಮಗಾರಿಯನ್ನು ಶೀಘ್ರವಾಗಿ ನಡೆಸಬೇಕು ಎಂದು ಒತ್ತಾಯಿಸಿದರು.
ಡಿವೈಎಫ್ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಕೂಳೂರು ಸೇತುವೆ ಕಾಮಗಾರಿ ಪೂರ್ಣಗೊಳಿಸಬೇಕೆಂಬ ಜರೂರು ಸ್ಥಳೀಯ ಶಾಸಕ ಭರತ್ ಶೆಟ್ಟಿಗಾಗಲಿ, ಸಂಸದರಿಗಾಗಲೀ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಈ ಕಾಮಗಾರಿಯ ಕಮಿಷನ್ ವಿಚಾರವಾಗಿ ಕಾಮಗಾರಿ ನಿಂತಿರಬಹುದೇ ಎಂದು ಸಾರ್ವಜನಿಕ ವಲಯದಲ್ಲಿ ಸುದ್ದಿ ಇದೆ. ಕೋಟಿ ಕೋಟಿ ಕಾಮಗಾರಿ ಬಗ್ಗೆ ಭಿತ್ತಿಫಲಕಗಳನ್ನು ಹಾಕುವ ಶಾಸಕರ ಕಾಮಗಾರಿ ಎಲ್ಲಿ ನಡೆಯುತ್ತಿದೆ ಎಂದು ತಿಳಿಯುತ್ತಿಲ್ಲ. ಮಾತೆತ್ತಿದ್ದರೆ ಗುರುಪುರ ಸೇತುವೆ ಬಗ್ಗೆ ಮಾತನಾಡುವ ಇವರಿಗೆ ಅಪಾಯದ ಅಂಚಿನಲ್ಲಿರುವ ಕೂಳೂರು ಸೇತುವೆ ಬಗ್ಗೆ ಆಸಕ್ತಿ ಇಲ್ಲದಿರುವುದು ವಿಪರ್ಯಾಸ ಎಂದರು.
ಇದನ್ನು ಓದಿ: ಕೂಳೂರು ನಾಗಬನ ಅಪವಿತ್ರಗೊಳಿಸಿರುವ ಘಟನೆ ಖಂಡಿಸಿ ಡಿವೈಎಫ್ಐ ಪ್ರತಿಭಟನೆ
ಡಿವೈಎಫ್ಐ ಜಿಲ್ಲಾ ಅಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ಸುರತ್ಕಲ್ ಟೋಲ್ ಬಂದ್ ಮಾಡಿ ನೂರು ದಿನಗಳು ಕಳೆದರೂ ಕೂಡ ಅಲ್ಲಿ ಟೋಲ್ ಗೂಡುಗಳು ಅಸ್ಥಿಪಂಜರದ ರೀತಿ ಉಳಿದುಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಪಂಜಿಮೊಗರು ಮುಖಂಡರಾದ ಅನಿಲ್, ಪ್ರಮೀಳಾ, ಸೌಮ್ಯ, ಬಾವು, ಶೆರೀಫ್, ಬಶೀರ್, ಸಂತೋಷ್, ಕಸ್ತೂರಿ, ಫಾತಿಮಾ ಖಲೀಲ್, ಡಿವೈಎಫ್ಐ ಸಂಘಟನೆಯ ಶ್ರೀನಾಥ್ ಕುಲಾಲ್, ಮಕ್ಸೂದ್ ಕಾನ, ದಲಿತ ಸಂಘಟನೆಯ ಕೃಷ್ಣ ತಣ್ಣೀರುಬಾವಿ ಸಾಮಾಜಿಕ ಮುಂದಾಳುಗಳಾದ ಕನಕದಾಸ್, ಹನೀಫ್ ಕೂಳೂರು ಮತ್ತಿತರರು ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ