5‌ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್‌ ಪರೀಕ್ಷೆ ರದ್ದು : ಹೈಕೋರ್ಟ್‌

ಬೆಂಗಳೂರು :  ಇದೇ ತಿಂಗಳ 13ನೇ ತಾರೀಖಿನಿಂದ ಆರಂಭವಾಗಬೇಕಿದ್ದ  5 ಮತ್ತು 8ನೇ ತರಗತಿಯ ಮಂಡಳಿ ಪರೀಕ್ಷೆಗಳನ್ನು  ರದ್ದು ಮಾಡಿರುವ ಹೈಕೋರ್ಟ್‌ ಎಂದಿನಂತೆ ಸಾಮಾನ್ಯ ವಾರ್ಷಿಕ ಪರೀಕ್ಷೆ ನಡೆಸುವ ಮೂಲಕ ಶಾಲಾ ಹಂತದಲ್ಲಿಯೇ ಮೌಲ್ಯಮಾಪನ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ತೀರ್ಪು ಹೇಳಿದೆ.

ಹೈಕೋರ್ಟ್‌ ನ್ಯಾ. ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ಈ ಆದೇಶ ಹೊರಡಿಸಿದೆ. ನಿಯಮಗಳಿಗನುಸಾರ ಮುಂದಿನ ಶೈಕ್ಷಣಿಕ ವರ್ಷದಿಂದ ಬೋರ್ಡ್‌ ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಈ ವರ್ಷದಿಂದಲೇ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆ ನಡೆಸುವ ರಾಜ್ಯ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಆದೇಶ ಈ ವರ್ಷಕ್ಕೆ ಮಾತ್ರ ಅನ್ವಯ. ಈ ವರ್ಷ ಮಾತ್ರ ಬೋರ್ಡ್ ಎಕ್ಸಾಂ ರದ್ದುಪಡಿಸಲಾಗಿದೆ. ಮುಂದಿನ ವರ್ಷ ಎಲ್ಲಾ ನಿಯಮಗಳನ್ನ ಪಾಲಿಸಿ. ಪೋಷಕರ ಅಭಿಪ್ರಾಯವನ್ನು ಪಡೆದು, ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮವಾಗಿ ನಿರ್ಧರಿಸಿ ಎಂದು ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.
2022-23ನೇ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಂಘವು ತಕರಾರು ಅರ್ಜಿ ಸಲ್ಲಿಸಿತ್ತು. 5, 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸದಂತೆ ಕ್ರಮವಹಿಸಲು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷರು ಮೇಲ್ಮನವಿ ಸಲ್ಲಿಸಿದ್ದರು.
ಫೆ.23 ರಂದು ವಿಚಾರಣೆ ನಡೆಸಿದ್ದ ಪೀಠವು ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ವಿಭಾಗೀಯ ಪೀಠಕ್ಕೆ ರುಪ್ಸಾ ಮೇಲ್ಮನವಿ ಸಲ್ಲಿಸಿತ್ತು.

ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮೌಲ್ಯಮಾಪನ ಬದಲಾವಣೆಗೆ ಸರ್ಕಾರ ಕೈಗೊಂಡಿರುವ ನಿರ್ಣಯವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಂಘವು ಮೇಲ್ಮನವಿಯಲ್ಲಿ ತಿಳಿಸಿತ್ತು. ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸಿದ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್.ಕಿಣಗಿ ಅವರಿದ್ದ ವಿಭಾಗೀಯ ಪೀಠವು ತುರ್ತಾಗಿ ಅರ್ಜಿ ಇತ್ಯರ್ಥಪಡಿಸಿ ಎಂದು ಸೂಚಿಸಿತ್ತು. ಅದರಂತೆ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ.

Donate Janashakthi Media

Leave a Reply

Your email address will not be published. Required fields are marked *