ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು

ಡಾ.ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರ ರಾವ್

ಡಾ.ಶಮ್ಸುಲ್ ಇಸ್ಲಾಂ

74 ವರ್ಷಗಳ ಹಿಂದೆ ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣರಾದವರೆಂದು ಹೇಳಿದ್ದ ವಿ.ಡಿ.ಸಾವರ್ಕರ್ ರವರನ್ನು ಇಂದು ದೇಶವನ್ನು ಆಳುತ್ತಿರುವ ಮಂದಿ ಸ್ವಾತಂತ್ರ್ಯ ಸಮರದ ‘ವೀರ’ ಎನ್ನುತ್ತಿದ್ದಾರೆ. ಈ ಕುರಿತ ಮಿಥ್ಯೆಗಳನ್ನು ಹೆಣೆಯುವ, ಪಸರಿಸುವ ಪ್ರಯತ್ನಗಳು ನಡೆಯುತ್ತಿವೆ, ಸಹಜವಾಗಿ ಈ ಮಿಥ್ಯೆಗಳನ್ನು ಬಯಲಿಗೆಳೆಯುವ ಪ್ರಯತ್ನಗಳೂ ನಡೆದಿವೆ. ಡಾ.ಶಮ್ಸುಲ್ ಇಸ್ಲಾಮ್ ರವರ ‘ಸಾವರ್ಕರ್ ಅನ್‌ಮಾಸ್ಕ್ಡ್‌’ ಅಂತಹ ಒಂದು ಪ್ರಮುಖ ಕೃತಿ. ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಈ ಕೃತಿ ಹಿಂದೂ ಮಹಾಸಭಾ, ಆರೆಸ್ಸೆಸ್ ಮತ್ತು ಭಾರತ ಸರಕಾರದ ಪತ್ರಾಗಾರಗಳಲ್ಲಿ ಇರುವ ಮೂಲ ದಸ್ತಾವೇಜುಗಳು ಮತ್ತು ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಜತೆಗಿದ್ದ ಕ್ರಾಂತಿಕಾರಿಗಳ ಸ್ಮರಣೆಗಳನ್ನು ಆಧರಿಸಿದೆ. ಈ ಹಿಂದಿನ ಲೇಖನದಲ್ಲಿ ಈ ಕೃತಿಯ ಪ್ರಸ್ತಾವನೆಯಲ್ಲಿ ಸಾವರ್ಕರ್ ಅವರನ್ನು ರಾಷ್ಟ್ರೀಯ ನೇತಾರನನ್ನಾಗಿ ಬಿಂಬಿಸುವ ಯಾವುದೇ ಯೋಜನೆ 1998 ಕ್ಕೂ ಮುಂಚೆ ಹಿಂದುತ್ವ ಬ್ರಿಗೇಡಿಗೆ ಇರಲಿಲ್ಲ, ನಂತರ ಅದು ಮುನ್ನೆಲೆಗೆ ಬರುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರವೂ ಇದೆ ಎಂಬುದನ್ನು ಪರಿಶೀಲಿಸುತ್ತ ಸಾವರ್ಕರ್ ಅವರ ಹೊಗಳುಭಟರ ತಂಡದಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡದ್ದು ವಿಷಾದದ ಸಂಗತಿ, ಸಾವರ್ಕರ್ ಅವರಿಗೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿದರೆ ಜನರಿಗೆ ನಿಜವಾದ ಸಾವರ್ಕರ್ ಗೊತ್ತಾಗುತ್ತದೆ ಎಂದು ಲೇಖಕರು ಹೇಳಿರುವುದನ್ನು ಓದಿದ್ದೀರಿ… ಮುಂದೆ ಅವರು ಸಾವರ್ಕರ್‌ರವರನ್ನು ಕುರಿತ ಏಳು ಮಿಥ್ಯೆಗಳನ್ನು ಒಂದೊಂದಾಗಿ ಈ ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತಾರೆ.

ಮಿಥ್ಯೆ 1 – ‘ಸಾವರ್ಕರ್ ಒಬ್ಬ ದಂತ ಕತೆಯಾದ ಸ್ವಾತಂತ್ರ್ಯ ಹೋರಾಟಗಾರ’

ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ. ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ!

‘ಸಾವರ್ಕರ್‌ ರವರ ಪ್ರಾಮಾಣಿಕತೆ, ಭಾರತದ ಸ್ವಾತಂತ್ರ್ಯಕ್ಕಾಗಿನ ಅವರ ಉತ್ಕಟೇಚ್ಛೆ ಮತ್ತು ತ್ಯಾಗಪ್ರಜ್ಞೆಯೇ ಹೆಗ್ಗುರುತಾಗಿರುವ ಅವರ ಸಾರ್ವಜನಿಕ ಜೀವನಕಕ್ಕಾಗಿ’ ಅವರನ್ನು ಅತ್ಯಂತ ಗೌರವಯುತವಾಗಿ ಕಾಣಬೇಕು ಎಂದು ಸಾವರ್ಕರ್‌ ವಾದಿಗಳು ಹೇಳಿಕೊಳ್ಳುತ್ತಾರೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತದ ಪ್ರತಿರೋಧದ ಮಹಾನ್ ವ್ಯಕ್ತಿತ್ವ ಅವರದು ಎಂದು ಸಾವರ್ಕರ್ ಬಂಟರು ಮಾತ್ರ ಆಗ್ರಹಪೂರ್ವಕವಾಗಿ ಹೇಳುತ್ತಿಲ್ಲ. “ಅವರೊಬ್ಬ ದೇಶಪ್ರೇಮಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ” ಎಂದು ಕಾಂಗ್ರೆಸ್ ಪ್ರಧಾನ ಮಂತ್ರಿಗಳೊಬ್ಬರು ಘೋಷಿಸುವ ಮೂಲಕ ಸಾವರ್ಕರ್ ಬಂಟರೊಂದಿಗೆ ಸೇರುತ್ತಾರೆ ಎನ್ನುವುದನ್ನು ಈ ಹಿಂದಿನ ಆಧ್ಯಾಯದಲ್ಲಿ ನಾವು ನೋಡಿದ್ದೇವೆ. ಕಾಲಾ ಪಾನಿ ಅಥವಾ ಕರಿ ನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್ ಮಾತ್ರ ಕಠಿಣ ಕಾರಾಗೃಹವಾಸದಲ್ಲಿದ್ದರು ಎಂದು ಬಿಂಬಿಸುವ ಯೋಜಿತ ಪ್ರಯತ್ನ ನಡೆದಿದೆ. ಗೂಡಿನಂತಿರುವ ಸಣ್ಣ ಕೋಣೆಗಳಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸಲು ಬಿಜೆಪಿ ನೇತೃತ್ವದ ಸರ್ಕಾರವು ಶತಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ. 2002-2003ರ ಅವಧಿಯಲ್ಲಿ ಆ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಯಿತು; ಸಂಸತ್ತಿನ ಕೇಂದ್ರೀಯ ಸಭಾಂಗಣದಲ್ಲಿ ಸಾವರ್ಕರ್ ಅವರ ಭಾವಚಿತ್ರವನ್ನು ಅಂದಿನ ಲೋಕಸಭಾ ಅಧ್ಯಕ್ಷರಾದ ಮನೋಹರ್ ಜೋಶಿ (ಶಿವಸೇನಾ) ಯವರು ಅನಾವರಣ ಮಾಡಿದರು; ಲಾಲ್ ಕೃಷ್ಣ ಅದ್ವಾಣಿಯವರು ಪೋರ್ಟ್‌ ಬ್ಲೇರ್ ವಿಮಾನ ನಿಲ್ದಾಣವನ್ನು ವೀರ ಸಾವರ್ಕರ್ ವಿಮಾನ ನಿಲ್ದಾಣವೆಂದು ಮರುನಾಮಕರಣ ಮಾಡಿದರು; ಮತ್ತು ಅತ್ಯಂತ ಕೆಟ್ಟದ್ದೆಂದರೆ, ಅಂಡಮಾನ್ ಜೈಲಿನ ಆವರಣದಲ್ಲಿ ಸ್ಮಾರಕ ಜ್ಯೋತಿಸ್ತಂಭವನ್ನು ನಿಲ್ಲಿಸುವಾಗ ಬಿಜೆಪಿಯ ರಾಮ ನಾಯಕ್‌ ರವರು ಸಾವರ್ಕರ್ ಹೆಸರನ್ನು ಮಾತ್ರ ಉಲ್ಲೇಖಿಸಿದರು. ಅಂಡಮಾನ್ ಜೈಲಿಗೆ ಭೇಟಿ ನೀಡುವುದು ಅಸಹನೀಯ ಸನ್ನಿವೇಶವನ್ನು ಉಂಟುಮಾಡುತ್ತದೆ. ಬೆಳಕು ಮತ್ತು ಧ್ವನಿ(ಲೈಟ್ ಅಂಡ್ ಸೌಂಡ್) ಯಂತಹ  ಕಾರ್ಯಕ್ರಮಗಳ ಎಲ್ಲಾ ದೃಶ್ಯ ಚಿತ್ರಗಳು ಸಾವರ್ಕರ್ ಅವರನ್ನು ಮಾತ್ರ ತೋರಿಸುತ್ತವೆ. ಅಲ್ಲಿ ಕ್ರೌರ್ಯ ಅನುಭವಿಸಿದವ ವ್ಯಕ್ತಿ ಸಾವರ್ಕರ್ ಒಬ್ಬರೇ ಎಂಬಂತೆ ಬಿಂಬಿಸಲಾಗುತ್ತದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವರ್ಕರ್ ಅವರ ಪಾತ್ರವನ್ನು ಯಾವರೀತಿಯಲ್ಲೂ ವಿಮರ್ಶೆಗೆ ಒಳಪಡಿಸುವುದನ್ನು ತಡೆಯುವ ಸಲುವಾಗಿ, ಇಡೀ ಚರ್ಚೆಯ ದಿಕ್ಕನ್ನೇ ಬದಲಾಯಿಸಿ ಭಾವುಕ ವಿಷಯವಾಗಿ ತಿರುಗಿಸುವ ಸತತ ಯತ್ನ ಮಾಡಲಾಗುತ್ತದೆ; ‘ಭಾರತದ ಗೌರವಾನ್ವಿತ ಸ್ವಾತಂತ್ರ್ಯ ಹೋರಾಟಗಾರರ ಮಹಾಪುರುಷರ ಸಾಲಿನಲ್ಲಿ ಸಾಕಷ್ಟು ಕಾಲ ಇರುವವರನ್ನು ಕೆಸರೆರಚಾಟಕ್ಕೆ ಎಳೆಯುವುದು ಸರಿಯಲ್ಲ’ ಎಂದು ವಾದಿಸುತ್ತಾರೆ.

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ವಾಸ್ತವಾಂಶಗಳು

ಆದರೆ, ಸತ್ಯಸಂಗತಿಗಳು ಅಷ್ಟು ಸರಳವಾಗಿಲ್ಲ, ಅವು ಬೇರೆ – ಗಾಬರಿ ಹುಟ್ಟಿಸುವ – ಕತೆಯನ್ನೇ ಹೇಳುತ್ತವೆ. ಆ ಸೆಲ್ಯುಲರ್ ಜೈಲಿನ ಕೆಲವು ಮಹತ್ವಪೂರ್ಣ ನೈಸರ್ಗಿಕ ಹಾಗೂ ಚಾರಿತ್ರಿಕ ವಿವರಗಳನ್ನು ಆರಂಭದಲ್ಲೇ ತಿಳಿಸುವುದು ಬಹಳ ಮುಖ್ಯವಾಗುತ್ತದೆ. ಅಲ್ಲಿ ಬ್ಯಾರಾಕುಗಳಿರಲಿಲ್ಲ, ಖೈದಿಗಳನ್ನು ಯಾವಾಗಲೂ ಸೆಲ್‌ಗಳಲ್ಲೇ ಒಂಟಿಯಾಗಿ ಬಂಧಿಸಿಡುತ್ತಿದ್ದರು ಎನ್ನುವುದಕ್ಕಾಗಿಯೇ ಅದಕ್ಕೆ ಆ ಹೆಸರು ಬಂದಿದ್ದು. ಆ ಜೈಲು ಒಟ್ಟು 700 ಸೆಲ್‌ಗಳನ್ನು 7 ವಿಭಾಗಗಳಲ್ಲಿ ಹೊಂದಿದೆ. ಏಕಕಾಲದಲ್ಲಿ ಕೇವಲ 700 ಖೈದಿಗಳನ್ನು ಮಾತ್ರ ಅಲ್ಲಿಡಬಹುದು. ಎಲ್ಲಾ ಖೈದಿಗಳು ರಾಜಕೀಯದವರಲ್ಲ ಮತ್ತು 10 ಕ್ಕೂ ಹೆಚ್ಚು ಮಹಿಳೆಯರು ಜೈಲಿನಲ್ಲಿ ಇರುತ್ತಿದ್ದರು.

ಆ ಜೈಲಿನ ಬಗ್ಗೆ ಆರ್.ಸಿ.ಮಜುಮ್‌ದಾರ್ ಶ್ರಮವಹಿಸಿ ಬರೆದ ಕೃತಿಯ ಪ್ರಕಾರ, ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆಯ ವಿರುದ್ಧದ 1857ರ ಬಂಡಾಯದಲ್ಲಿ ರಾಜಕೀಯ ಖೈದಿಗಳ ಮೊದಲ ತಂಡವನ್ನು ಸೆಲ್‌ ಗಳ ಆ ಜೈಲಿಗೆ ಕರೆತಂದರು. ಅವರ ಪ್ರಕಾರ,

ಬಹಳ ದೊಡ್ಡ ಸಂಖ್ಯೆಯಲ್ಲಿ ಬಂಡಾಯಗಾರರನ್ನು ಅಂಡಮಾನಿಗೆ ರವಾನಿಸಿದ್ದರೂ, ಅವರ ಒಟ್ಟು ಸಂಖ್ಯೆ ಗೊತ್ತಿಲ್ಲ ಮತ್ತು ಪ್ರತಿಯೊಬ್ಬ ಖೈದಿಯ ವಿಶ್ವಾಸಾರ್ಹ ವೈಯಕ್ತಿಕ ದಾಖಲೆಗಳು ಲಭ್ಯವಿಲ್ಲ. ಆದರೆ ಆ ಬಂಡಾಯದ ಇಬ್ಬರು ಪ್ರಮುಖ ಮುಖಂಡರು – ತಮ್ಮ ನೈತಿಕ ಚಾರಿತ್ರ್ಯ ಹಾಗೂ ಉನ್ನತ ತಿಳುವಳಿಕೆಯಿಂದಾಗಿ ಚಿರಪರಿಚಿತವಾಗಿದ್ದವರು – ಅಲ್ಲಿ ಜೀವಿಸಿದ್ದರು ಹಾಗೂ ಖೈದಿಗಳಾಗಿ ಅಂಡಮಾನಿನಲ್ಲೇ ಪ್ರಾಣತೆತ್ತರು ಎಂದು ತಿಳಿದಿದೆ. ಅವರು ಅಲ್ಲಮ ಫಜಲಿ ಹಕ್ ಖೈರಾಬಾದಿ ಮತ್ತು ಮೌಲಾನಾ ಲಿಯಾಕತ್ ಅಲಿ ಆಗಿದ್ದರು. ಮತ್ತೊಬ್ಬ ಬಂಡಾಯಗಾರ ಮಿರ್ ಜಫರ್ ಅಲಿ ಥಾನೇಶ್ವರಿಯವರು ಅಂಡಮಾನಿನಲ್ಲಿ 20 ವರ್ಷಗಳ ಕಠಿಣ ಸಜಾವನ್ನು ಕಳೆದರು.

ಮೌಲ್ವಿ ಫಜಲ್-ಎ-ಹಕ್ ಖೈರಾಬಾದಿ

ಅವರು ಪ್ರಸಿದ್ಧ ನ್ಯಾಯಶಾಸ್ತ್ರ ಪರಿಣಿತರು, ಲೇಖಕರು, ಕವಿಯಾಗಿದ್ದರು; ಅವರು ಸಂಯುಕ್ತ ಪ್ರಾಂತ್ಯಗಳ ಖೈರಾಬಾದಿನಲ್ಲಿ (ಈಗಿನ ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆ) ಹುಟ್ಟಿದರು. ಬ್ರಿಟಿಷರ ಆಳ್ವಿಕೆಯ ದೆಹಲಿಯಲ್ಲಿ ಮುಖ್ಯ ನ್ಯಾಯಾಧೀಶ (ಸರಿಶ್ತದಾರ್) ರಾಗಿದ್ದರು. ಮೇ 1857 ರಲ್ಲಿ ದೆಹಲಿಯು ಬ್ರಿಟಿಷರ ಆಳ್ವಿಕೆಯಿಂದ ಮುಕ್ತವಾದ ನಂತರ ಅವರು ವಿಮೋಚನಾ ಚಳುವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ಕ್ರಾಂತಿಕಾರಿ ಸಮರ ಮಂಡಳಿ (ರೆವಲ್ಯೂಷನರಿ ವಾರ್ ಕೌನ್ಸಿಲ್) ಯ ಪ್ರಮುಖ ಸದಸ್ಯರಾಗಿದ್ದರು ಮತ್ತು ದೆಹಲಿಯ ಮರುಸ್ಥಾಪಿತ ಮುಘಲ್ ಸರ್ಕಾರದ ಸಂವಿಧಾನವನ್ನು ಅವರು ಸಿದ್ಧಪಡಿಸಿದರು. ಭಾರತದ ವಿಮೋಚನೆಗಾಗಿ ಜನರನ್ನು ಹುರಿದುಂಬಿಸುವಲ್ಲಿ ಅವರು ಧೀರೋದಾತ್ತ ಪಾತ್ರ ವಹಿಸಿದ್ದರು.

ಷಹಜಹಾನ್‌ಪುರ, ಲಕ್ನೋ ಮತ್ತು ಬರೇಲಿಯ ಬ್ರಿಟಿಷ್ ಮಿಲಿಟರಿ – ವಿರೋಧಿ ಹೋರಾಟದಲ್ಲಿ ಅವರು ಭಾಗವಹಿಸಿದರು. ಕ್ರಾಂತಿಕಾರಿ ಶಕ್ತಿಗಳ ಸೋಲಿನ ನಂತರ ಅವರು ತಮ್ಮ ಸ್ವಂತ ಊರಾದ ಖೈರಾಬಾದಿಗೆ ಹೋದರು; ಅಲ್ಲಿ ಬ್ರಿಟಿಷರು ಅವರನ್ನು ಬಂಧಿಸಿದರು ಮತ್ತು ದೇಶದ್ರೋಹಕ್ಕಾಗಿ ವಿಚಾರಣೆ ನಡೆಸಿದರು. ಬ್ರಿಟಿಷರ ಟ್ರಿಬ್ಯುನಲ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಅಕ್ಟೋಬರ್ 8, 1859 ರಂದು ಅಂಡಮಾನಿನ ಸೆಲ್ಯುಲರ್ ಜೈಲಿಗೆ ಕಳಿಸಿತು. ಅಲ್ಲಿ ಅವರು ಆಗಸ್ಟ್ 21, 1861ರಲ್ಲಿ ನಿಧನರಾದರು.

ಅವರು ಇಸ್ಲಾಮಿನ ಅಧ್ಯಯನ ಮತ್ತು ಮತಧರ್ಮಶಾಸ್ತ್ರದ ವಿದ್ವಾಂಸರು ಮಾತ್ರವಲ್ಲದೇ, ಉರ್ದು, ಅರೇಬಿಕ್ ಹಾಗೂ ಪರ್ಶಿಯನ್ ಸಾಹಿತ್ಯದ ಲೇಖಕರೂ ಆಗಿದ್ದರು. ಅರೇಬಿಕ್‌ನಲ್ಲಿ ಬಹಳ ದ್ವಿಪದಿಗಳು ಅವರ ಹೆಸರಿನಲ್ಲಿವೆ. ಅವರು ಮಿರ್ಜಾ ಘಾಲಿಬರ ಕೋರಿಕೆಯ ಮೇರೆಗೆ ಅವರ ಮೊದಲ ದಿವಾನ್ ನ್ನು ಸಂಪಾದಿಸಿದರು. ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ತಮ್ಮ ಬದುಕಿನ ಕತೆಯನ್ನು ಅರಾಬಿಕ್‌ನಲ್ಲಿ ರಿಸಾಲ-ಅಲ್-ಸೂರತ್ ಅಲ್-ಹಿಂದಿಯಾ ಬರೆದರು. ಕಠಿಣ ಕಣ್ಗಾವಲಿದ್ದ ಕಾರಣ, ಬಟ್ಟೆ ಚೂರುಗಳು ಹಾಗೂ ಕಾಗದದ ಚೂರುಗಳ ಮೇಲೆ ಕಲ್ಲಿದ್ದಲಿನಿಂದ ಅವರು ಬರೆದರು ಮತ್ತು ಶಿಕ್ಷೆಯ ಅವಧಿ ಮುಗಿದಿದ್ದರಿಂದ 1860 ರಲ್ಲಿ ಬಿಡುಗಡೆಯಾದ ಅವರ ಸಹ ಖೈದಿ ಮುಫ್ತಿ ಇನಾಯತ್ ಅಹಮದ್ ಕಕೋರ್ವಿಯವರ ಮೂಲಕ ಹೊರಗೆ ಸಾಗಿಸಿದರು. ಅದನ್ನು 1920 ರಲ್ಲಷ್ಟೇ ಬಾಘಿ-ಎ-ಹಿಂದೂಸ್ತಾನ್ (ಭಾರತದ ಬಂಡಾಯಗಾರ) ಎಂದು ಉರ್ದುವಿಗೆ ಅನುವಾದ ಮಾಡಲು ಸಾಧ್ಯವಾಯಿತು. ಸೆಲ್ಯುಲರ್ ಜೈಲಿನಲ್ಲಿ ಫಜಲ್ ಹಕ್ ಬರೆದ ಅವರ ಈ ಆತ್ಮಕಥನವು ಸೆರೆಯಾಳುಗಳ ಬದುಕು ಎಷ್ಟು ಘೋರವಾಗಿತ್ತು ಎಂಬುದರ ಅತ್ಯಂತ ಪ್ರಮಾಣಪೂರ್ವಕ ಕಥನಗಳು ಮಾತ್ರವಾಗಿರದೆ ಭಾರತವನ್ನು ದಾಸ್ಯಕ್ಕೊಳಪಡಿಸುವ ಬ್ರಿಟಿಷರ ಯೋಜನೆ ಹಾಗೂ ಅದರ ವಿರುದ್ಧ ನಡೆದ ಬಂಡಾಯ ಮತ್ತು ಅದು ಹೇಗೆ ವಿಫಲವಾಯಿತು ಎಂಬುದರ ಬಗೆಗಿನ ಶಾಸ್ತ್ರಗ್ರಂಥ ಕೂಡ ಆಗಿತ್ತು. ಫಜಲ್ ಹಕ್ ಖೈರಾಬಾದಿಯವರು ನಮ್ಮ ದೇಶದ ಈಗಿನ ಪ್ರಸಿದ್ಧ ಕವಿ ಜಾವೆದ್ ಅಖ್ತರ್ ಅವರ ಅಜ್ಜಿಯ ತಂದೆಯಾಗಿದ್ದರು ಎನ್ನುವುದು ಆಸಕ್ತಿದಾಯಕ ಸಂಗತಿಯಾಗಿದೆ.

ಮೌಲ್ವಿ ಲಿಯಾಕತ್ ಅಲಿ ಅಲಹಾಬಾದಿ

ಮೌಲ್ವಿ ಲಿಯಾಕತ್ ಅಲಿ ಅಲಹಾಬಾದಿ ಒಬ್ಬ ಪ್ರಖ್ಯಾತ ಆಡಳಿತಗಾರ, ಯುನಾನಿ ವೈದ್ಯರು ಮತ್ತು ಮಿಲಿಟರಿ ಸಮರತಂತ್ರ ಪ್ರವೀಣರಾಗಿದ್ದರು. ಅಲಹಾಬಾದಿನಲ್ಲಿ ಬೀಡುಬಿಟ್ಟಿದ್ದ ಮೊಘಲ್ ಸೇನೆಯ ದಳಪತಿ (ಕಮಾಂಡರ್) ಆಗಿದ್ದರು. 1857ರ ವಿಮೋಚನಾ ಸಮರದಲ್ಲಿ ಅಲಹಾಬಾದಿನ ಸುತ್ತಮುತ್ತಲು ಬ್ರಿಟಿಷ್ ಸೇನೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಅಧಿಪತ್ಯದಲ್ಲಿನ ಸೇನೆಯಿಂದಾಗಿ ಕ್ರಾಂತಿಕಾರಿಗಳು ಅಲಹಾಬಾದಿನ ಬಹುಪಾಲು ಪ್ರದೇಶವನ್ನು ಮುಕ್ತಗೊಳಿಸಿದ್ದರು. ಅವರನ್ನು ಬಿಡುಗಡೆ ಹೊಂದಿದ ಪ್ರದೇಶಗಳ ರಾಜ್ಯಪಾಲನನ್ನಾಗಿ ದೆಹಲಿಯ ಮೊಘಲ್ ದರ್ಬಾರು ನೇಮಿಸಿತ್ತು. ಬ್ರಿಟಿಷ್ ಸೇನೆಯ ವಿರುದ್ಧ ಕಾನ್ಪುರದಲ್ಲಿ ನಡೆದ ಕದನದಲ್ಲಿ ಅವರು ನಾನಾರೊಂದಿಗೆ ಭಾಗವಹಿಸಿದ್ದರು. ಆದರೆ ಜುಲೈ 12, 1857 ರಂದು ಅವರ ಅಧಿಪತ್ಯದ ಸೇನೆಯನ್ನು ಬ್ರಿಟಿಷರು ಭಾರತೀಯ ಹಸ್ತಕರ ಸಹಾಯದಿಂದ ಸೋಲಿಸಿದರು.

ಇದರಿಂದ ಎದೆಗುಂದದ ಮೌಲ್ವಿ ಲಿಯಾಕತ್ ಅಲಿಯವರು ಮೌಲ್ವಿ ಅಬ್ದುಲ್ ಕರೀಂ ಎಂಬ ಹೆಸರಿನಲ್ಲಿ ಭಾರತದಾದ್ಯಂತ ಪ್ರವಾಸ ಮಾಡಿ ಉಪನ್ಯಾಸಗಳನ್ನು ಮಾಡಿದರು ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡಿದರು. ಅವರು ಸಚಿನ್ನಿನ (ಈಗಿನ ಗುಜರಾತಿನ ಸೂರತ್‌ನ ಭಾಗ) ನವಾಬನಲ್ಲಿ ಆಶ್ರಯ ಪಡೆದರು. ಸುನ್ನಿ ಮುಸ್ಲಿಂ ದೊರೆಯ (ಎರಡನೇ ನವಾಬ್ ಇಬ್ರಾಹಿಂ ಮೊಹಮ್ಮದ್ ಯಾಕುತ್ ಖಾನ್) ಆತಿಥ್ಯದಲ್ಲಿರುವಾಗ ಅವರಿಂದ ಮೋಸಕ್ಕೊಳಗಾಗಿ, ಸಚಿನ್ನಿನಿಂದ ಕುಟುಂಬ ಸಹಿತ ಹೇಗೋ ತಪ್ಪಿಸಿಕೊಂಡು 1871ರ ವರೆಗೆ ಭೂಗತರಾಗಿದ್ದ ಲಿಯಾಕತ್ ಅಲಿಯವರನ್ನು ಬೊಂಬಾಯಿಯಲ್ಲಿ ಬಂಧಿಸಿದರು. ಬ್ರಿಟಿಷ್ ಸರ್ಕಾರವು ಅವರಿಗೆ ಜೀವಾವಧಿ ಶಿಕ್ಷೆ ನೀಡಿ ಅಂಡಮಾನ್ ದ್ವೀಪಕ್ಕೆ ರವಾನೆ ಮಾಡಿತು, ಅಕ್ಟೋಬರ್ 1872 ರಂದು ಅಲ್ಲಿಯ ಗೂಡು ಕೋಣೆಯಂತಹ ಜೈಲಿನಲ್ಲಿದ್ದರು, ಇಪ್ಪತ್ತು ವರ್ಷಗಳ ಕಾಲ ಅಲ್ಲಿ ಶಿಕ್ಷೆ ಅನುಭವಿಸಿದ ಲಿಯಾಕತ್ ಅಲಿ ಅವರು ಮೇ 17, 1892 ರಂದು ಮರಣ ಹೊಂದಿದರು. ಅವರು ಎಂದಿಗೂ ಬ್ರಿಟಿಷರಿಂದ ದಯಾಭಿಕ್ಷೆ ಬೇಡಲಿಲ್ಲ.

ಮೌಲ್ವಿ ಮೊಹಮ್ಮದ್ ಜಾಫರ್ ಥಾನೆಸ್ರಿ

ಮೊಹಮ್ಮದ್ ಜಾಫರ್ ಅವರು (ಈಗಿನ ಹರಿಯಾಣದ) ಅಂಬಾಲಾದ ಬಳಿ ಇರುವ ಥಾನೇಸರ್‌ನ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದರು. ಅವರು ಪ್ರಸಿದ್ಧ ವಹಾಬಿ ಮುಖಂಡರಾಗಿದ್ದರು. ಅವರನ್ನು ಬಂಧಿಸಲು ಸರ್ಕಾರವು ರೂ.10,000 ಬಹುಮಾನ ಘೋಷಿಸಿತ್ತು. ಅಲಿಘರ್‌ನಲ್ಲಿ ಬಂಧಿಸಿದ ನಂತರ ಮರಣ ಶಿಕ್ಷೆ ವಿಧಿಸಲಾಯಿತು, ನಂತರ ಅದನ್ನು ಅಂಡಮಾನಿನಲ್ಲಿ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಲಾಯಿತು. ಜನವರಿ 11, 1866 ರಂದು ಅವರು ಇತರ ವಹಾಬಿ ಮುಖಂಡರೊಂದಿಗೆ ಜಮ್ನಾ ಹಡಗಿನಲ್ಲಿ ಅಂಡಮಾನಿಗೆ ಬಂದಿಳಿದಾಗ ಅವರ ವಯಸ್ಸು 27 ವರ್ಷವಾಗಿತ್ತು. 18 ವರ್ಷಗಳ ಕಾಲ ಅಲ್ಲಿದ್ದ ಅವರು ನವಂಬರ್ 9, 1883 ರಂದು ಬಿಡುಗಡೆಯಾದರು.

ಪರ್ಶಿಯನ್, ಉರ್ದು, ಹಿಂದಿ ಭಾಷೆಯಲ್ಲಿ ನಿಪುಣರಾಗಿದ್ದ ಅವರು ಜೈಲಿನಲ್ಲಿ ಸಹಖೈದಿಯಾಗಿದ್ದ ರಾಮ್ ಸರೂಪ್ ಅವರಿಂದ ಇಂಗ್ಲಿಷ್ ಭಾಷೆಯನ್ನು ಕಲಿತರು. ಅಂಡಮಾನಿನಲ್ಲಿ ಖೈದಿಯಾಗಿದ್ದವರಲ್ಲಿ ಬೇರಾರೂ ಬರೆಯದ ಅತ್ಯಂತ ಉತ್ತಮ ವಿಶ್ವಾಸಾರ್ಹ ಕಥನಗಳನ್ನು “ತ್ವಾರೀಕ್-ಎ-ಅಜೀಬ್ ಯಾನೀ ಕಾಲಾ ಪಾನಿ” (ವಿಚಿತ್ರ ನಾಡಿನ ಚರಿತ್ರೆ: ಕರಿ ನೀರು) ಅವರು ಬರೆದರು. ಅದನ್ನು ಅವರ ಗೆಳೆಯರೊಬ್ಬರು ಗುಟ್ಟಾಗಿ ಹೊರಗೆ ಸಾಗಿಸಿದರು. ಅದನ್ನು 1920 ರ ಅಂತ್ಯದಲ್ಲಿಯಷ್ಟೆ ಮುದ್ರಿಸಲು ಸಾಧ್ಯವಾಯಿತು. ವಿಷಾದದ ಸಂಗತಿಯೆಂದರೆ ಉರ್ದುವಿನಲ್ಲಿ ಬರೆಯಲ್ಪಟ್ಟಿದ್ದ ಅದು ಅಜ್ಞಾತವಾಗಿಯೇ ಉಳಿಯಿತು.

ಆ ಕಾಲದ ಅಂಡಮಾನಿನ ಸಾಮಾಜಿಕ (ಮೂಲನಿವಾಸಿಗಳ), ಆಡಳಿತಾತ್ಮಕ, ಧಾರ್ಮಿಕ, ಹವಾಮಾನ ಹಾಗೂ ರಾಜಕೀಯ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಈ ಪುಸ್ತಕವನ್ನು ಓದಲೇಬೇಕು. ಭಾರತದ ಆಗಿನ ಗೌರ್ನರ್ ಜನರಲ್ ಆಗಿದ್ದ ಲಾರ್ಡ್ ಮೇಯೋರವರನ್ನು ಹೇಗೆ ಒಬ್ಬ ಪಠಾಣ, ಶೇರ್ ಅಲಿ ಹತ್ಯೆ ಮಾಡಿದ ಮತ್ತು ಜೈಲಿನ ಅಧಿಕಾರಿಗಳು ಹಿಂದೂ ಮತ್ತು ಮುಸ್ಲಿಂ ಖೈದಿಗಳ ನಡುವೆ ಹೇಗೆ ಒಡಕು ಉಂಟುಮಾಡಿದರು ಎನ್ನುವುದನ್ನೂ ಅವರು ಅದರಲ್ಲಿ ವಿವರಿಸಿದ್ದರು. ವಿಲಿಯಂ ವಿಂಟರ್ ಹಂಟರ್ ಅವರು ಬರೆದ ನಮ್ಮ ಭಾರತೀಯ ಮುಸ್ಲಿಮರು (ಅವರ್ ಇಂಡಿಯನ್ ಮುಸ್ಲಿಮ್ಸ್) ಎಂಬ ಪುಸ್ತಕದ ವಿಮರ್ಶೆಯನ್ನೂ ಕೂಡ ಈ ಪುಸ್ತಕದಲ್ಲಿ ಮಾಡಲಾಗಿದೆ.

ಆ ನಂತರದಲ್ಲಿ ಅಂಡಮಾನಿಗೆ ಕಳಿಸಿದ ಬಹು ಮುಖ್ಯ ರಾಜಕೀಯ ಖೈದಿಗಳು ಮುಸ್ಲಿಂ ವಹಾಬಿ ಕ್ರಾಂತಿಕಾರಿಗಳಾಗಿದ್ದರು. (ಬ್ರಿಟಿಷ್ ಆಳ್ವಿಕೆಯ ವಿರುದ್ಧ ವಹಾಬಿ ದಂಗೆಗೆ ಮೌಲ್ವಿಗಳು ಮುಂದಾಳುತ್ವ ವಹಿಸಿದ್ದರು ಮತ್ತು ಅದನ್ನು ವಸಾಹತುಶಾಹಿಯ ವಿರುದ್ಧದ ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲು ಎಂದು ಪರಿಗಣಿಸಲಾಗಿತ್ತು.) ಅವರು 1857ರ ಬಂಡಾಯದಲ್ಲೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವಿಷಾದವೆಂದರೆ, ಅಲ್ಲಿ ಜೈಲಿನಲ್ಲಿದ್ದ ವಹಾಬಿ ಚಳುವಳಿಗೆ ಸೇರಿದ್ದ ಖೈದಿಗಳ ವ್ಯಕ್ತಿಗತ ವಿವರಗಳು ಲಭ್ಯವಿಲ್ಲ. ಆದರೆ, ಅಂಡಮಾನಿನಲ್ಲಿ ವಹಾಬಿ ಖೈದಿಯಾಗಿದ್ದ ಶೇರ್ ಅಲಿ ಅಫ್ರಿದಿಯವರು ಆಗಿನ ಭಾರತದ ವೈಸ್‌ರಾಯಿಯಾಗಿ ಆ ದ್ವೀಪಕ್ಕೆ ಭೇಟಿ ನೀಡಿದ್ದ ಲಾರ್ಡ್ ಮೇಯೋರವರನ್ನು ಹತ್ಯೆ ಮಾಡಿದ್ದರ ಘಟನೆಯನ್ನು ಬ್ರಿಟಿಷ್ ಭಾರತೀಯ ಸಾರ್ವಜನಿಕ ಪತ್ರಾಗಾರದಲ್ಲಿ (ಬ್ರಿಟಿಷ್ ಇಂಡಿಯನ್ ಆರ್ಕೈವ್ಸ್), ದಾಖಲಿಸಲಾಗಿದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ 20ನೇ ಶತಮಾನದ ಆರಂಭದಲ್ಲಿ ಕ್ರಾಂತಿಕಾರಿ ಪ್ರತಿರೋಧಗಳು ಹೆಚ್ಚಾದಂತೆಲ್ಲಾ ಸೆಲ್ಯುಲರ್ ಜೈಲಿಗೆ ಕ್ರಾಂತಿಕಾರಿಗಳ ಹರಿವು ಏರತೊಡಗಿತು. ಅಂಥವರ ಮೊದಲ ತಂಡ 1908 ರ ಅಲಿಪುರ್ ಬಾಂಬ್ ಪ್ರಕರಣದಲ್ಲಿ ಬಂಧಿಸಲ್ಪಟ್ಟವರಾಗಿದ್ದರು.

(ಮುಂದುವರೆಯುವುದು)

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *