ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ ಕಾಣಿಸಿಕೊಂಡ ಬೆಂಕಿ ಹೊತ್ತಿ ಉರಿದ ಪರಿಣಾಮ, ಬಸ್ ನಲ್ಲಿ ಮಲಗಿದ್ದ ನಿರ್ವಾಹಕ (ಕಂಡಕ್ಟರ್) ಸಜೀವ ದಹನವಾಗಿರುವ ಘಟನೆ ಬೆಂಗಳೂರಿನ ಲಿಂಗಧೀರನಹಳ್ಳಿ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮುತ್ತಯ್ಯಸ್ವಾಮಿ ಮೃತ ವ್ಯಕ್ತಿಯಾಗಿದ್ದಾನೆ. ಬಿಎಂಟಿಸಿ ಬಸ್ ಡಿಪೋ 31ಕ್ಕೆ ಸೇರಿದ್ದಾಗಿದ್ದು, ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ನಿಂತಿದೆ. ನಿಂತಿದ್ದ ಬಸ್ನಲ್ಲಿ ಚಾಲಕ ಮತ್ತು ನಿರ್ವಾಹಕರಿಬ್ಬರು ಮಲಗಿದ್ದರು. ಆದರೆ ಚಾಲಕ ಬೆಳಗ್ಗೆ ಎದ್ದು ಶೌಚಾಲಯಕ್ಕೆ ಹೋದಾಗ ಈ ಘಟನೆ ಸಂಭವಿಸಿದೆ. ಏಕಾಏಕಿ ಬಸ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ನಲ್ಲಿ ಮಲಗಿದ್ದ ನಿರ್ವಾಹಕ ಮಲಗಿದ್ದಲ್ಲೇ ಶವವಾಗಿದ್ದಾನೆ.
ಬ್ಯಾಡರಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
ಬಸ್ ಗಳನ್ನು ದಿನಂಪ್ರತಿ ಪರಿಶೀಲನೆ ಮಾಡಲಾಗುತ್ತಿದೆ. ಆದಾಗ್ಯೂ ಈ ಘಟನೆ ಸಂಭವಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಸ್ ಬಿಟ್ಟು ಬೇರೆಡೆ ಮಲಗಬಾರದು ಎಂಬ ನಿಯಮವಿರುವ ಕಾರಣ ಸಾಮಾನ್ಯವಾಗಿ ಚಾಲಕ, ನಿರ್ವಾಹಕರು ಬಸ್ ಗಳಲ್ಲೆ ಮಲಗುತ್ತಾರೆ. ಸರಿಯಾದ ಸೌಲಭ್ಯ, ತಪಸಾಣೆ ಇಲ್ಲದೆ ಹೋದಲ್ಲಿ ಇಂತಹ ಅನಾಹುತಗಳು ಸಂಭವಿಸುತ್ತವೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.