ಅಂಕಗಳಿಕೆಯೊಂದೇ ಬುದ್ದಿವಂತಿಕೆ ಅಳೆಯುವ ಮಾರ್ಗವೇ! ; ಸರ್ಕಾರವನ್ನು ಪ್ರಶ್ನಿಸಿದ ಹೈಕೋರ್ಟ್‌

ಬೆಂಗಳೂರು: ಮಕ್ಕಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಪಡೆಯುವ ಅಂಕಗಳ ಆಧಾರದಲ್ಲಿ ಬುದ್ದಿವಂತಿಕೆ ಅಳೆಯುವುದು ಸಾಧ್ಯವೇ ಎಂದು ಕರ್ನಾಟಕ ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ. 2022ರ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳ ಮೌಲ್ಯಮಾಪನ ವಿಧಾನ ಬದಲಾಯಿಸುವ ಸಂಬಂಧ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕರ್ನಾಟಕ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ (ಕುಸ್ಮಾ), ಕರ್ನಾಟಕ ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ, ಮಾನ್ಯತೆ ಪಡೆದ ಅನುದಾನ ರಹಿತ ಶಿಕ್ಷಣಗಳ ಸಂಘ(ಓಯುಆರ್‌ಎಸ್) ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದವು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರುರ ಅವರ ನೇತೃತ್ವದ ಪೀಠ ಸರ್ಕಾರವನ್ನು ಪ್ರಶ್ನಿಸಿದ್ದು, ಮಕ್ಕಳು ಪಡೆದ ಅಂಕಗಳ ಆಧಾರದ ಮೂಲಕ ಮಾತ್ರವೇ ಬುದ್ದಿವಂತಿಕೆ ಪರೀಕ್ಷೆ ನಡೆಸಲಾಗುತ್ತಿದಿಯೇ. ಜತೆಗೆ, ಮಕ್ಕಳ ಸಾಮರ್ಥ್ಯ, ವಿಶ್ವಾಸ ಮತ್ತು ಬುದ್ದಿವಂತಿಕೆ ಅವರ ಅಂಕಗಳ ಮೇಲೆ ಅಳೆಯುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಇದನ್ನು ಓದಿ: ಪರೀಕ್ಷೆಗೆ ಹಾಜರಾಗಲು ಚಂಪಾವತಿ ನದಿ ಈಜಿದ ಯುವತಿ

ಈ ವೇಳೆ ಸರ್ಕಾರದ ಪರ ಹಾಜರಿದ್ದ ವಕೀಲರು, ಕೊರೊನಾ ಸಂದರ್ಭದಲ್ಲಿ ಮಕ್ಕಳಲ್ಲಿನ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಇದನ್ನು ಹೆಚ್ಚಳ ಮಾಡುವುದಕ್ಕಾಗಿ 5 ಮತ್ತ 8ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರಿಕ್ಷೆ ನಡೆಸಲಾಗುತ್ತಿದೆ. ಆದರೆ, ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಅವರನ್ನು ಮುಂದಿನ ತರಗತಿಗೆ ತೇರ್ಗಡೆ ಮಾಡಲಾಗುವುದು. ಮಕ್ಕಳನ್ನು ಬುದ್ದಿವಂತಿಕೆ ನೋಡುವುದಕ್ಕಾಗಿ ಈ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರುರ ಅವರು ಖಾಸಗಿ ಶಾಲೆಗಳ ಕಾರ್ಯವಿಧಾನವನ್ನು ಉಲ್ಲೇಖಿಸಿ ಕೆಲವು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಒಂದುವೇಳೆ ಶೇ.90ಕ್ಕೂ ಹೆಚ್ಚು ಅಂಕಗಳು ತೆಗೆದುಕೊಳ್ಳದಿದ್ದಲ್ಲಿ ಬೇರೊಂದು ಶಾಲೆಗಳಿಗೆ ಕಳುಹಿಸಲಾಗುತ್ತಿದೆ ಎಂಬುದನ್ನು ಗಮನಿಸಲಾಗಿದೆ. ಮಕ್ಕಳ ಬುದ್ದಿವಂತಿಯನ್ನು ಅಳೆಯಲು ಈ ವಿಧಾನ ಸರಿಯಿಲ್ಲ ಎಂದು ಹೇಳಿದರು.

ಇದನ್ನು ಓದಿ: ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆ ಬರೆದ ಬಹುತೇಕರು ಪಿಹೆಚ್‌ಡಿ ಮಾಡಿದವರೇ

ಅಂಕಗಳ ಆಧಾರದಲ್ಲೇ ಬುದ್ದಿವಂತಿಕೆ ಅಳೆಯುವುದಾದದರೆ ತಮ್ಮ ವಿದ್ಯಾಭ್ಯಾಸದ ವೇಳೆ ಅತ್ಯುತ್ತಮ ಅಂಕಗಳನ್ನು ಗಳಿಸಿದ ಹಲವು ವಕೀಲರು ತಮ್ಮಲ್ಲಿ ಪ್ರಕರಣಗಳಿಲ್ಲದೇ ಕೋರ್ಟ್ ಆವರಣದಲ್ಲಿ ಓಡಾಡುತ್ತಿದ್ದಾರೆ. ಚಿನ್ನದ ಪದಕ ಪಡೆದ ಹಲವು ವೈದ್ಯರ ಬಳಿ ರೋಗಿಗಳೇ ಇಲ್ಲವಾಗಿದೆ. ಚಿನ್ನದ ಪದಕವನ್ನು ಪಡೆದ ಎಂಜಿನಿಯರ್‌ಗಳು ನಿರ್ಮಿಸುವ ಕಟ್ಟಡಗಳು ಕುಸಿಯುತ್ತಿವೆ ಎಂದು ವಿವರಿಸಿದರು.

ಅರ್ಜಿದಾರರ ಪರ ಹಾಜರಿದ್ದ ವಕೀಲರು, ಸರ್ಕಾರ ಯಾವುದೇ ಸುತ್ತೋಲೆ ಹೊರಡಿಸುವುದಕ್ಕೂ ಮುನ್ನ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಬೇಕು ಎಂದು ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ಉಲ್ಲೇಖವಾಗಿದೆ. ಹೀಗಿರುವಾಗ ಸರ್ಕಾರ ಏಕಾಏಕಿ 5 ಮತ್ತು 8ನೇ ತರಗತಿಗಳ ಮಕ್ಕಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ಜಾರಿ ಮಾಡಿದ್ದಾರೆ. ಇದು ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸರ್ಕಾರ ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕು ಎಂದು ಮನವಿ ಮಾಡಿದ್ದರು.

ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ ಅಂತಿಮ ಆದೇಶವನ್ನು ಕಾಯ್ದಿರಿಸಿ ವಿಚಾರಣೆ ಮುಂದೂಡಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *