ಮೈಸೂರು : ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಾಫಿ, ಟೀ ವಿಚಾರದಲ್ಲೂ ಭ್ರಷ್ಟಾಚಾರವೆಸಗಿದ ಆರೋಪ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಈ ಬಗ್ಗೆ ದಾಖಲೆ ತರಿಸಿಕೊಂಡು ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಿದ್ಧರಾಮಯ್ಯ ವಿರುದ್ಧ ಏನು ಆರೋಪಗಳಿವೆ ಎಂಬುದು ಗೊತ್ತಿಲ್ಲ. ಮೊದಲು ದಾಖಲೆ ತರಿಸಿಕೊಂಡು ನೋಡುತ್ತೇನೆ. ಆರೋಪಗಳು ಸರಿ ಇದ್ದರೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ : ಸಿಎಂ ರಾಜೀನಾಮೆಗೆ ಆಗ್ರಹಿಸಿ ಮಾರ್ಚ್ 9 ರಂದು ಕರ್ನಾಟಕ ಬಂದ್ ಗೆ ಕೈ ಕರೆ
ಎರಡು ಗಂಟೆ ಬಂದ್ ಎಲ್ಲಾದರೂ ಕೇಳಿದ್ದೀರ ? :
ಮಾರ್ಚ್ 9ರಂದು ಕಾಂಗ್ರೆಸ್ ಬಂದ್ ವಿಚಾರ ಕುರಿತು ವ್ಯಂಗ್ಯವಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಎರಡು ಗಂಟೆ ಬಂದ್ ಎಲ್ಲಾದರೂ ಕೇಳಿದ್ದೀರ ? ಅದ್ಯಾವ ಸೀಮೆಯ ಬಂದ್ ? ಎಂದು ವ್ಯಂಗ್ಯವಾಡಿದ್ದಾರೆ. ಜಗತ್ತಿನಲ್ಲಿ ಎಲ್ಲಾದರೂ ಎರಡು ಗಂಟೆ ಬಂದ್ ಕೇಳಿದ್ದೀರ ? ಯಾತಕ್ಕಾಗಿ ಬಂದ್ ಮಾಡಬೇಕು ? ಭ್ರಷ್ಟಾಚಾರದಿಂದ ಕಾಂಗ್ರೆಸ್ನವರ ಕೈ ಕೆಸರಾಗಿದೆ. ಅವರಿಗೆ ನಮ್ಮ ವಿರುದ್ಧ ಬಂದ್ ಮಾಡುವ ಯಾವ ನೈತಿಕತೆ ಇದೆಯ? ಅಂದು ಪಿಯುಸಿ ಸೇರಿದಂತೆ ಪರೀಕ್ಷೆಗಳು ಇವೆ. ಸಾರ್ವಜನಿಕರಿಗೆ ತೊಂದರೆ ಆಗುತ್ತೆ. ಸುಪ್ರೀಂಕೋರ್ಟ್ ಕೂಡ ಬಂದ್ ಮಾಡಬಾರದು ಎಂದು ಹೇಳಿದೆ. ಯಾವುದೇ ಕಾರಣಕ್ಕೂ ಬಂದ್ ಗೆ ಜನರ ಬೆಂಬಲ ಇಲ್ಲ. ಬಂದ್ ಯಶಸ್ವಿಯೂ ಆಗುವುದಿಲ್ಲ ಎಂದರು.
ಬೆಂಗಳೂರು ಮೈಸೂರು ಹೈವೇ ಕ್ರೆಡಿಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಈ ರಸ್ತೆಯ ಕ್ರೆಡಿಟ್ ಕಾಂಗ್ರೆಸ್ ಗೆ ಹೇಗೆ ಸಲ್ಲುತ್ತೆ ಹೇಳಿ. ರಸ್ತೆ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ರಸ್ತೆ ಮಾಡುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅದನ್ನ ಸಿದ್ದರಾಮಯ್ಯ ಹೇಗೆ ಮಾಡುತ್ತಾರೆ. ಕಾಂಗ್ರೆಸ್ ಮಾತು ಕೇಳಿದರೆ ಜನ ನಗುತ್ತಾರೆ. ರಸ್ತೆ ವಿಸ್ತೀರ್ಣ ಆಗಬೇಕೆಂಬ ಪ್ರಸ್ತಾವನೆ 20 ವರ್ಷಗಳ ಹಿಂದೆಯೇ ಇತ್ತು. ಸಿದ್ದರಾಮಯ್ಯ ಅವರ ಅವಧಿ ಅದೇನು ಮೊದಲ ಬಾರಿ ಪ್ರಸ್ತಾಪ ಆಗಿದ್ದಲ್ಲ. ಪ್ರಸ್ತಾಪ ಮಾಡುವುದಕ್ಕೂ ಹಣ ಬಿಡುಗಡೆ ಮಾಡಿ ಕೆಲಸ ಮಾಡಿಸುವುದಕ್ಕೂ ವ್ಯತ್ಯಾಸ ಇದೆ. ಸಿದ್ದರಾಮಯ್ಯನವರು ರಸ್ತೆ ಪರಿಶೀಲನೆ ಮಾಡಲಿ. ನಮ್ಮ ತಕರಾರು ಏನು ಇಲ್ಲ. ಸಾವಿರಾರು ಜನರು ಈಗಾಗಲೇ ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು ಎಂದರು.
ಇದನ್ನೂ ಓದಿ : ಕೈ ಬಂದ್ಗೆ ರಾಜ್ಯದ ಜನತೆ ಬೆಂಬಲ ಕೊಡುವುದಿಲ್ಲ : ಸಿಎಂ ಬೊಮ್ಮಾಯಿ ತಿರುಗೇಟು
ಮಾಡಾಳು ಜಾಮೀನು ವಿಚಾರ ನನ್ನ ಗಮನಕ್ಕೆ ಬಂದಿಲ್ಲ :
ಮಾಡಾಳು ವಿರೂಪಾಕ್ಷ ಅವರಿಗೆ ಹೈ ಕೋರ್ಟ್ ಜಾಮೀನು ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಇದು ನನ್ನ ಗಮನಕ್ಕೆ ಬಂದಿಲ್ಲ. ಹೈ ಕೋರ್ಟ್ ತೀರ್ಮಾನವನ್ನ ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದರು. ಲೋಕಾಯುಕ್ತ ಬಂದ್ ಮಾಡಿದ್ದರೆ ರಾಜೀನಾಮೆ ಕೊಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ. ಅವರು ಲೋಕಾಯುಕ್ತ ಬಂದ್ ಮಾಡಲಿಲ್ಲ. ಆದ್ರೆ ಲೋಕಾಯುಕ್ತದ ಎಲ್ಲಾ ಹಲ್ಲುಗಳನ್ನ ಕಿತ್ತಿದ್ದರು. ಹಲ್ಲು ಕಿತ್ತ ಮೇಲೆ ಇದ್ದರೆ ಎಷ್ಟು ಇಲ್ಲದಿದ್ದರೆ ಎಷ್ಟು. ಅವರ ಕಾಲದಲ್ಲಿ ಲೋಕಾಯುಕ್ತ ಇದ್ದಿದ್ದರೆ ಎಸಿಬಿ ಏಕೆ ಕೇಸ್ ಗಳು ವರ್ಗಾವಣೆ ಆಗುತ್ತಿತ್ತು ಎಂದು ಕಿಡಿಕಾರಿದರು.
ಬಿಜೆಪಿಯದ್ದು 40% ಸಂಕಲ್ಪ ಯಾತ್ರೆ ಎಂಬ ಸಿದ್ದರಾಮಯ್ಯ ಟೀಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರದ್ದು 100% ಗಾಗಿ ಪ್ರಜಾಧ್ವನಿ ಯಾತ್ರೆ ಎಂದು ನಾನು ಹೇಳುತ್ತೇನೆ. ಅವರಿಗೆ ಭ್ರಷ್ಟಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇಲ್ಲ. ಭ್ರಷ್ಟಚಾರದಲ್ಲಿ ಅವರ ಕೈಗಳೇ ಕಪ್ಪಾಗಿವೆ ಎಂದರು.
H2N3 ವೈರಸ್ ಕುರಿತು ರಾಜ್ಯಕ್ಕೆ ಅತೀ ಶೀಘ್ರದಲ್ಲೇ ಗೈಡ್ಲೈನ್ :
H2N3 ವೈರಸ್ ಭೀತಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಸೆಂಟ್ರಲ್ ಗವರ್ನಮೆಂಟ್ ಈ ಬಗ್ಗೆ ಎಚ್ಚರಿಕೆ ತಗೊಬೇಕು ಅಂತಾ ಹೇಳಿದೆ. ಇಡೀ ರಾಜ್ಯಕ್ಕೆ ಗೈಡ್ಲೈನ್ ಅತೀ ಶೀಘ್ರದಲ್ಲೇ ಕೊಡಲಿದ್ದಾರೆ. ಅದಕ್ಕೆ ಔಷಧಿಗಳನ್ನ ಸ್ಟಾಕ್ ಮಾಡಿ ಜಿಲ್ಲಾ ಸ್ಟೋರೆಜ್ನಲ್ಲಿ ಇಡಲಿಕ್ಕೆ ಸೂಚನೆ ಕೊಟ್ಟಿದ್ದೀನಿ. ಕರ್ನಾಟಕದಲ್ಲಿ ಅಂತಹ ಅಲಾರಮಿಂಗ್ ಏನಿಲ್ಲಾ. ಎಚ್ಚರಿಕೆ ವಹಿಸಬೇಕು. ಮಾಸ್ಕ್ ಕಡ್ಡಾಯ ಅಂತ ಏನಿಲ್ಲಾ. ಇವತ್ತು ಉನ್ನತ ಮಟ್ಟದ ಸಭೆ ನಡೆಸಿ ನಿರ್ಧಾರ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.