ಪತ್ತೆಯಾಗದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ; ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟಿಗೆ ಅರ್ಜಿ

ಬೆಂಗಳೂರು: ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ನಾಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈ ನಡುವೆ ಬಂಧನ ಭೀತಿಯಲ್ಲಿರುವ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ವಿರೂಪಾಕ್ಷಪ್ಪ ಸಲ್ಲಿಸಿರುವ ಅರ್ಜಿಯನ್ನು ಶೀಘ್ರ ವಿಚಾರಣೆಗೆ ಪರಿಗಣಿಸಬೇಕು ಎಂದು ವಕೀಲರು ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠದ ಮುಂದೆ ಇಂದು ಬೆಳಿಗ್ಗೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ನಾಳೆಗೆ ವಿಚಾರಣೆ ಕೈಗೆತ್ತಿಗೊಳ್ಳುವುದಾಗಿ ತಿಳಿಸಿ ಮುಂದೂಡಿದೆ.

ಇದನ್ನು ಓದಿ: ಲಂಚ ಸ್ವೀಕಾರ ಪ್ರಕರಣ : ಪ್ರಶಾಂತ್‌ ಮಾಡಾಳ್‌ ಸೇರಿ ಐವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಟೆಂಡರ್‌ ಪ್ರಕ್ರಿಯೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ₹40 ಲಕ್ಷ ಲಂಚ ಪಡೆಯುತ್ತಿದ್ದಾಗ ಶಾಸಕ ವಿರೂಪಾಕ್ಷಪ್ಪ ಅವರ ಮಗ ಹಾಗೂ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್‌ ಮಾಡಾಳ್‌ ಅವರನ್ನು ಲೋಕಾಯುಕ್ತ ಪೊಲೀಸರು ಮಾರ್ಚ್‌ 2ರಂದು ಸಂಜೆ ಬಂಧಿಸಿದ್ದರು.

ಅಂದೇ ಬೆಂಗಳೂರಿಗೆ ಆಗಮಿಸಿದ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅಂದಿನಿಂದ ತಲೆಮರೆಸಿಕೊಂಡಿದ್ದಾರೆ. ಲೋಕಾಯುಕ್ತ ಪೊಲೀಸರು ಶಾಸಕರ ಪತ್ತೆಗಾಗಿ ಏಳು ಮಂದಿ ಡಿವೈಎಸ್‌ಪಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದು, ಬೆಂಗಳೂರು ಸೇರಿದಂತೆ, ದಾವಣಗೆರೆ ಜಿಲ್ಲೆಯ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಶಾಸಕರ ಜತೆ ಇದ್ದ ಅವರ ಹಿರಿಯ ಮಗ ಮಲ್ಲಿಕಾರ್ಜುನ್‌ ಕೂಡ ನಾಪತ್ತೆಯಾಗಿದ್ದಾರೆ. ವಿರೂಪಾಕ್ಷಪ್ಪ ಅವರ ಪತ್ತೆಗೆ ನಿಕಟವರ್ತಿಗಳ ಮೇಲೆ ನಿಗಾ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ: ಅಗತ್ಯ ಬಿದ್ದರೆ ಶಾಸಕ ಮಾಡಾಳ್‌ ವಿರೋಪಾಕ್ಷಪ್ಪರನ್ನು ವಿಚಾರಣೆಗೆ ಒಳಪಡಿಸಿ : ಲೋಕಾಯುಕ್ತ ಬಿ.ಎಸ್.ಪಾಟೀಲ್

ಲಂಚ ಪ್ರಕರಣದ ತನಿಖೆಯನ್ನು ಮುಂದುವರೆಸಿರುವ ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌, ಐಜಿಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್‌ ನೇತೃತ್ವದಲ್ಲಿ ಇಂದು ಸಭೆ ನಡೆಯಲಿದೆ. ಈವರೆಗೆ ಆಗಿರುವ ಪ್ರಗತಿಯನ್ನು ಪರಾಮರ್ಶಿಸಿ ಕಾರ್ಯಾಚರಣೆಯನ್ನು ಚುರುಕುಗೊಳಿಸುವ ಸಂಬಂಧ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಎಂದು ವರದಿಯಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *