ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಅಸ್ಪೃಶ್ಯಾಚರಣೆಯ ಅಮಾನವೀಯ ಘಟನೆಯೊಂದು ನಡೆದಿದ್ದು, ದೇವಸ್ಥಾನ ಪ್ರವೇಶ ಮಾಡಿದ್ದಾರೆ ಎಂದು ದಲಿತ ವರ್ಗದ ತಾಯಿ-ಮಗನ ಮನೆ ಮೇಲೆ ಸವರ್ಣೀಯರು ದಾಳಿ ಮಾಡಿ ಮಾಡಿದ್ದಾರೆ. ಈ ಸಂಬಂಧ 30 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಂದಿಹಳ್ಳಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬಸವೇಶ್ವರ ದೇವಾಲಯಕ್ಕೆ ಕಳೆದ ಎರಡು ದಿನಗಳ ಹಿಂದೆ ತಾಯಿ ಮತ್ತು ಮಗ ಪೂಜೆಗೆಂದು ಹೋಗಿದ್ದರು. ಆಗ ಸವರ್ಣೀಯರು ತಮ್ಮನ್ನು ದೇವಸ್ಥಾನದ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಗುಡಿ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ ಘಟನೆ ನಡೆಯಿತು ಎಂದು ತಾಯಿ ಹೆಮ್ಮವ್ವ ಮಲ್ಲಾಡದ ಹಾಗೂ ಅವರ ಮಗ ರಮೇಶ್ ಮಲ್ಲಾಡದ ತಿಳಿಸಿದ್ದಾರೆ.
ಇದನ್ನು ಓದಿ: ʻಒಳ ಮೀಸಲಾತಿʼ ಮತ್ತು ದಲಿತರು: ಸಾಧಕ ಬಾಧಕಗಳು
ಘಟನೆಯ ಬಳಿಕ ಮೇಲ್ವರ್ಗದ ಸಮುದಾಯ ಜನರೆಲ್ಲಾ ಸೇರಿ ದೇವಸ್ಥಾನ ಪ್ರವೇಶ ಮಾಡಿದ್ದ ದಲಿತರ ಮನೆಗೆ ಹೊಕ್ಕು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗುಂಪು, ಗುಂಪಾಗಿ ಬಂದ ಮೇಲ್ವರ್ಗದ ಜನರು ದಲಿತರ ನಿವಾಸಕ್ಕೆ ನುಗ್ಗಿದ್ದಾರೆ. ಮನೆಯ ಮೇಲಿನ ಹೆಂಚುಗಳನ್ನು ಮತ್ತು ಬೈಕ್ ಅನ್ನು ಜಖಂಗೊಳಿಸಿ ದೌರ್ಜನ್ಯ ವೆಸಗಿದ್ದಾರೆ.
ಈ ವೇಳೆ ಹೆಮ್ಮವ್ವ ಮಲ್ಲಾಡದ ಹಾಗೂ ರಮೇಶ್ ಮಲ್ಲಾಡದ ಹಲ್ಲೆಗೊಳಗಾಗಿದ್ದಾರೆ. ಈ ಕುರಿತು ಸುಮಾರು 30 ಮೇಲ್ವರ್ಗದ ಜನರ ಮೇಲೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲು ಮಾಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ